ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಪ್ರಕೃತಿ ವಿಕೋಪ ಎದುರಿಸಲು ಭಾರತ ಎಷ್ಟು ಸನ್ನದ್ಧ ?

ಮೊನ್ನೆ ಮೊನ್ನೆಯಷ್ಟೇ ಸರಣಿ ಭೂಕಂಪ ಹಾಗೂ ರಕ್ಕಸ ಸುನಾಮಿ ಅಲೆಗಳಿಗೆ ಜಪಾನ್ ತತ್ತರಿಸಿ ಹೋಯಿತು. ತಂತ್ರಜ್ಞಾನದಲ್ಲಿ, ಆರ್ಥಿಕತೆಯಲ್ಲಿ ವಿಶ್ವದ ದಿಗ್ಗಜನಾಗಹೊರಟಿರುವ ಜಪಾನಿನಲ್ಲಿ ಈ ಪ್ರಕೃತಿ ವಿಕೋಪಕ್ಕೆ ಏನಿಲ್ಲವೆಂದರೂ 10 ಸಾವಿರ ಮಂದಿ ಬಲಿಯಾದರು. ಆದರೆ ಅದೇ ಘಟನೆ ಭಾರತದಲ್ಲಿ ಸಂಭವಿಸುತ್ತಿದ್ದರೆ ಏನಾಗುತ್ತಿತ್ತು? ಪರಿಣಾಮ ಊಹಿಸಲೂ ಅಸಾಧ್ಯ. ಜಪಾನಿಗರು ಮಹತ್ವಾಕಾಂಕ್ಷಿಗಳು. ಇದಕ್ಕೆ ಅವರ ಇತಿಹಾಸವೇ ಸಾಕ್ಷಿ. ಅಮೆರಿಕಾದ ಅಣುಬಾಂಬು ದಾಳಿಯಿಂದ ತತ್ತರಿಸಿದ ರಾಷ್ಟ್ರ ಮತ್ತೆ ಎದ್ದು ಬಂದು ಜಗತ್ತಿನ ಅಭಿವೃದ್ಧಿಯುತ ರಾಷ್ಟ್ರಗಳೊಂದಿಗೆ ಪೈಪೋಟಿಗಿಳಿದಿದೆ ಎಂದರೆ ಅವಘಢಗಳನ್ನು ನಿರ್ವಹಿಸುವಲ್ಲಿನ ಅದರ ಸಾಮರ್ಥ್ಯ ಎಷ್ಟಿರಬಹುದೆಂದು ಇಲ್ಲೇ ತಿಳಿಯುತ್ತದೆ.


ಅಲ್ಲಿನವರ ಗಟ್ಟಿ ಮನಸ್ಸು, ರಾಷ್ಟ್ರಾಭಿಮಾನ, ಮಹತ್ವಾಕಾಂಕ್ಷೆ ಪ್ರಶಂಸನೀಯ. ಆದರೆ ಈ ಬಾರಿಯ ಪ್ರಕೃತಿ ವಿಕೋಪಕ್ಕೆ ಜಪಾನ್ ಸಂಪೂರ್ಣ ತತ್ತರಿಸಿದೆ. ಅದರ ಮೇಲೆ ಅಣು ವಿಕಿರಣ ಸೋರಿಕೆಯ ಭಯಾನಕ ಹೊಡೆತ. ಇಂತಹ ಭಯಾನಕ ಸ್ಥಿತಿಯಲ್ಲೂ ಜಪಾನ್ ಪ್ರಧಾನಿ ಅಲ್ಲಿನ ಪ್ರಜೆಗಳಿಗೆ ಈ ಗಂಭೀರ ಸ್ಥಿತಿಯಿಂದ ಆದಷ್ಟು ಬೇಗ ಹೊರಬರುವುದಾಗಿ ನೀಡಿದ ಆಶ್ವಾಸನೆಯನ್ನು ಕೇಳಿದರೆ ಹೃದಯ ತುಂಬಿ ಬರುತ್ತದೆ.

ಒಂದೊಮ್ಮೆ ಇಂತಹ ಘಟನೆ ಭಾರತದಲ್ಲಿ ಸಂಭವಿಸಿದರೆ ಏನು ಗತಿ ? ಎಂಬ ಚರ್ಚೆಗಳು ಮಾಧ್ಯಮಗಳಲ್ಲಿ ಸಾಕಷ್ಟು ಕೇಳಿ ಬರುತ್ತಿವೆ. ನಮ್ಮಲ್ಲಿರುವ ಅಣು ಸ್ಥಾವರಗಳ ಬಗ್ಗೆ ದಿನಪತ್ರಿಕೆಗಳಲ್ಲಿ ನಿತ್ಯ ಚರ್ಚೆಗಳಾಗುತ್ತಿದೆ. ನಮ್ಮ ಸರಕಾರ ಇಂತಹ ಘಟನೆಗಳನ್ನು ಎದುರಿಸಲು ಎಷ್ಟು ಸನ್ನದ್ಧವಾಗಿದೆ? ಎಂಬುದು ಈಗಿರುವ ದೊಡ್ಡ ಪ್ರಶ್ನೆ.

ಇನ್ನು ಸದಾ ಕಚ್ಚಾಟದಲ್ಲಿ ನಿರತರಾಗಿರುವ ನಮ್ಮ ರಾಜಕೀಯ ನಾಯಕರು ಪ್ರಕೃತಿ ವಿಕೋಪವಾದಾಗಲೂ "ಇದರಲ್ಲಿ ವಿರೋಧ ಪಕ್ಷದವರ ಕೈವಾಡ ಇದೆ" ಯೆಂಬ ಹೇಳಿಕೆ ನೀಡಿ ಕೈ ತೊಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ಹಾಸ್ಯವಾದರೂ ಇದು ವಾಸ್ತವ.
ಜಪಾನಿನಲ್ಲಿ ಇಷ್ಟೊಂದು ಭೀಕರ ಸ್ವರೂಪದ ಪ್ರಕೃತಿ ವಿಕೋಪ ಸಂಭವಿಸಿದರೂ ಅಲ್ಲಿನ ಸರಕಾರದ ಸ್ಪಂದನ, ತೀವ್ರಗತಿಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆ, ಅವರ ಬದ್ಧತೆ, ಶಿಸ್ತು, ಮಹತ್ವಾಕಾಂಕ್ಷೆ ವಿಶ್ವಕ್ಕೇ ಮಾದರಿ. 2004ರಲ್ಲಿ ಬಂದ ಸುನಾಮಿ ಇಡೀ ಭಾರತವನ್ನು ಬೆಚ್ಚಿ ಬೀಳಿಸಿತ್ತು. ಲಕ್ಷಾಂತರ ಮಂದಿಯ ಪ್ರಾಣಬಲಿ ತೆಗೆದುಕೊಂಡಿತ್ತು. ಆದರೆ ಸೂರು ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ಇನ್ನು ಕುಂಟುತ್ತಲೇ ಸಾಗುತ್ತಿದೆ. ರಾಜಕೀಯ ಹಿತಾಸಕ್ತಿಗಳ ದೊಂಬರಾಟದ ನಡುವೆ ಕಾರ್ಯಾಚರಣೆ ಇಂದಿಗೂ ಸಾಧ್ಯವಾಗುತ್ತಿಲ್ಲ.

ಜಪಾನಿಗರು ಏನಿಲ್ಲವೆಂದರೂ 195 ಸುನಾಮಿಗಳನ್ನು ಕಂಡಿದ್ದಾರಂತೆ. ಇದು ಅವರ ಬದುಕುವ ಛಲವನ್ನು ತೋರಿಸುತ್ತದೆ. ಭೂಕಂಪ, ಸುನಾಮಿಗಳು ಜಪಾನೀಯರಿಗೆ ಹೊಸತಲ್ಲ. ಆದರೂ ದೇಶವನ್ನು ಬಿಡದೇ ಅಲ್ಲಿದ್ದೇ ಬದುಕುವ ಅವರ ಗಟ್ಟಿತನವನ್ನು ಮೆಚ್ಚಲೇಬೇಕು. ಮೊನ್ನೆ 'ಸೂಪರ್ ಮೂನ್' ಸಂಭವಿಸಿದಾಗ ಸುನಾಮಿ ಭಯಕ್ಕೆ ಹೊಟ್ಟೆಪಾಡಿಗಾಗಿ ಕರಾವಳಿಯಲ್ಲಿ ದುಡಿಯುತ್ತಿರುವ ಎಷ್ಟೋ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ತಮ್ಮ ಊರಿಗೇ ಮರಳಿದರು. ಇವರೊಮ್ಮೆ ಜಪಾನೀಯರ ಬದುಕುವ ಛಲವನ್ನು ನೋಡಬೇಕು. ಜಪಾನ್ನಲ್ಲಿ ಸುನಾಮಿ ಸಂಭವಿಸಿದಾಗ ಭಾರತದವರು ಹೆದರಿದರು. ನಮ್ಮಲ್ಲಿ ಆದರೆ ಏನು ಗತಿ ಎಂದು ಮರುಗಿದರು. ನಮ್ಮಲ್ಲಿನ ಅಣುಸ್ಥಾವರಗಳ ಸುರಕ್ಷಿತ ಎಂದು ವಿಜ್ಞಾನಿಗಳು ಹೇಳಿದರು. ಭಾರತಕ್ಕೆ ಸುನಾಮಿಯ ಅಪಾಯವಿಲ್ಲ ಎಂದರು. ಇದೆಲ್ಲ ಯಾರ ಸಮಾಧಾನಕ್ಕಾಗಿ ? ಅಗಾಧವಾದ ಕರಾವಳಿ ಪ್ರದೇಶವನ್ನು ಹೊಂದಿರುವ ಭಾರತದಲ್ಲಿ ಸುನಾಮಿ ಬಂದರೆ ಪರಿಣಾಮ ಊಹಿಸಲು ಅಸಾಧ್ಯ. ಜಪಾನಿನಂತೆ ನಮ್ಮ ಸರಕಾರವನ್ನಾಗಲೀ ರಾಜಕೀಯ ನಾಯಕರನ್ನಾಗಲೀ ನಂಬಿ ಕೂತರೆ ಅದೇ ನಮ್ಮ ಜೀವನದ ಕೊನೆಯಾದೀತು!

ಜಪಾನೀಯರ ದೃಢತೆ, ಮಹತ್ವಾಕಾಂಕ್ಷೆ ಯನ್ನು ಭಾರತೀಯರೂ ಕಲಿಯಬೇಕು. ಅವರಲ್ಲಿರುವ ತ್ಯಾಗದ ಭಾವನೆ ನಮ್ಮಲ್ಲೂ ಬೆಳೆದಾಗ ಮಾತ್ರ ಭಾರತ ಜಪಾನನ್ನಷ್ಟೇ ಮುಂದುವರಿದ ರಾಷ್ಟ್ರವಾಗುತ್ತದೆ, ದೇಶದ ಪ್ರಗತಿ ಪಥದೆಡೆ ಸಾಗಿಸುವುದು ಅದರ ಆರ್ಥಿಕ ಸಂಪತ್ತಲ್ಲ ಬದಲಾಗಿ ಅದರಲ್ಲಿ ವಾಸಿಸುತ್ತಿರುವ ಪ್ರಜೆಗಳ ಹೃದಯ ವೈಶಾಲ್ಯತೆ. ಇನ್ನಾದರೂ ನಾವೂ ಅವರಂತಾಗಲು ಕಲಿಯೋಣ. ನಮ್ಮ ದೇಶವನ್ನು ಪ್ರೀತಿಸೋಣ.

ಶ್ವೇತ, ಪ್ರಥಮ ಬಿ.ಎ.
ಪ್ರಥಮ ಪತ್ರಿಕೋದ್ಯಮ,ಗೋವಿಂದ ದಾಸ ಕಾಲೇಜು, ಸುರತ್ಕಲ್.

1 comments:

ವಿಜಯ್ ಜೋಶಿ said...

This is a good piece. This student writes well, i feel.

Post a Comment