ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಸುಳ್ಯ: ದಕ್ಷಿಣ ಕನ್ನಡ ಅದರಲ್ಲೂ ಸುಳ್ಯ ತಾಲೂಕಿನ ರಬ್ಬರ್ ಬೆಳೆಗಾರರು ಈಗ ಫುಲ್ ಖುಷ್ ಮೂಡಿನಲ್ಲಿದ್ದಾರೆ. ಕಾರಣ ರಬ್ಬರ್ ಬೆಲೆ ಏರುಹಾದಿಯಲ್ಲಿದೆ. ಇಲ್ಲಂತೂ ರಬ್ಬರ್ ಈಗ ಚಿನ್ನದ ಬೆಳೆಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಅಂದು ರಾಜ್ಯದ ರಬ್ಬರ್ ನಾಡು. ಈಗ ಅದು ವಿಸ್ತರಣೆಯಾಗುತ್ತಾ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಪಸರಿಸಿದೆ.ಬೆಲೆಯೂ ಹಾಗೇ ಏರುಹಾದಿಯಲ್ಲಿದೆ. ರಾಜ್ಯದಲ್ಲಿ ದಕ್ಷಿಣ ಕ್ನನಡ ಜಿಲ್ಲೆಯೇ ಈಗ ರಬ್ಬರ್ ಬೆಳೆಯ ಪ್ರಮುಖ ಜಿಲ್ಲೆ. ಹಾಗಾಗಿ ಇಂದು ರಬ್ಬರ್ ಬೆಲೆಯೂ ಕೂಡಾ ಜಿಲ್ಲೆಯ ವಹಿವಾಟಿನ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಇತ್ತೀಚೆಗೆಗಂತೂ ರಬ್ಬರ್ ಕೃಷಿ ವೇಗ ಪಡೆದುಕೊಂಡಿದೆ.ವರ್ಷದಿಂದ ವರ್ಷಕ್ಕೆ ಹೆಕ್ಟೇರ್ಗಟ್ಟಲೆ ಹೆಚ್ಚುತ್ತಲೇ ಇದೆ.ಕಾರಣ, ರಬ್ಬರ್ ಬೆಲೆ ಏರು ಹಾದಿಯಲ್ಲಿದೆ.ಸದ್ಯಕ್ಕಂತೂ ಇಳಿಕೆಯ ಲಕ್ಷಣವೂ ಇಲ್ಲ.ಮೊನ್ನೆ ಮೊನ್ನೆ 188 ರೂಪಾಯಿಗೆ ತಲಪಿದ್ದ ಬೆಲೆ , ಇಂದು 240 ರೂಪಾಯಿಗೆ ಬಂದು ತಲಪಿದೆ. ಇಲ್ಲಿಗೇ ಈ ಬೆಲೆ ನಿಲ್ಲೋದಿಲ್ಲ. ಮುಂದಕ್ಕೆ ಮುಂದಕ್ಕೆ ಸಾಗುತ್ತಲೇ ಇದೆ. ಇದಕ್ಕೆ ಕಾರಣಗಳು ಒಂದೆರಡಲ್ಲ...ಭಾರತ ಮಾತ್ರವಲ್ಲ ಎಲ್ಲಾ ದೇಶಗಳಿಗೂ ಈಗ ರಬ್ಬರ್ ಬೇಕೇ ಬೇಕು. ಇದರಲ್ಲಿ ಹೆಚ್ಚಿನ ಪಾಲು ಅಟೋ ಮೊಬೈಲ್ ಕ್ಷೇತ್ರವು ಬಳಸಿಕೊಳ್ಳುತ್ತಿದೆ. ಈಗಂತೂ ಗ್ಲೋಬಲ್ ಮಾರುಕಟ್ಟೆಯಲ್ಲಿ ವಾಹನಗಳ ಮಾರಾಟ ನೋಡಿದರೆ ದಿಗಿಲು ಹುಟ್ಟುತ್ತದೆ , ಅದು ವರ್ಷದಿಂದ ವರ್ಷಕ್ಕೆ ಏರು ಹಾದಿಯಲ್ಲೇ ಸಾಗುತ್ತದೆ. ಇದಕ್ಕೆಲ್ಲಾ ರಬ್ಬರ್ ಪೂರೈಕೆ ಸಾಕಾಗುತ್ತಲೇ ಇಲ್ಲ. ಈಗ ವಾಹನ ತಯಾರಿಕೆಯಲ್ಲಿ ರಷ್ಯಾ ಮುಂದಿದೆ. ಅಲ್ಲಿ ವಾಹನ ಮಾರಾಟ ಕಳೆದ ವರ್ಷಕ್ಕಿಂತ ಶೇಕಡಾ 80 ರಷ್ಟು ಏರಿಕೆ ಕಂಡಿದೆ. ಇನ್ನು ಯುಎಸ್ನಲ್ಲಿ ಜನರಲ್ ಮೋಟಾರ್ಸ್ನವರು ಸುಮಾರು 2,06,621 ವಾಹನಗಳನ್ನು ಮಾರಾಟ ಮಾಡಿದ್ದರೆ , ಅಲ್ಲೇ ಇನ್ನೊಂದು ಕಂಪನಿ ಫೋರ್ಡ್ಡ2,12,277 ವಾಹನಗಳನ್ನು ಮಾರಾಟ ಮಾಡಿದೆ.

ಇಂತಹ ಕಂಪನಿಗಳಿಗೆಲ್ಲಾ ಸಾಕಷ್ಠು ರಬ್ಬರ್ ಬೇಡಿಕೆ ಇದ್ದೇ ಇದೆ. ಆದರೆ ಇತ್ತೀಚೆಗೆ ನಡೆದ ಜಪಾನ್ ಭೂಕಂಪ ಮತ್ತು ಸುನಾಮಿಯ ಪರಿಣಾಮವಾಗಿ ಕಳೆದ ತಿಂಗಳು ರಬ್ಬರ್ ಮಾರುಕಟ್ಟೆಯ ಮೇಲೆ ಕೊಂಚ ಪರಿಣಾಮ ಬೀರಿದ್ದು ಸುಳ್ಳಲ್ಲ. ಆದರೆ ಆ ಪರಿಣಾಮಕ್ಕಿಂತ ಹೆಚ್ಚು ಮಾರುಕಟ್ಟೆ ವಲಯಕ್ಕೆ ಹೆದರಿಕೆಯಾಗಿತ್ತು. ಜಪಾನ್ ಭಾಗದಲ್ಲಿ ಹೆಚ್ಚು ರಬ್ಬರ್ ಕಂಪನಿಗಳು ಕಾರ್ಯಾಚರಿಸುತ್ತಿರುವುದರಿಂದ ಆತಂಕಕ್ಕೆ ಒಳಗಾಗಿದ್ದು ರಬ್ಬರ್ ಮಾರುಕಟ್ಟೆ. ಈ ಹೆದರಿಕೆಯಿಂದ ಮಾರುಕಟ್ಟೆ ನಿರೀಕ್ಷೆಗಿಂತ ಕೆಳಗೆ ಕುಸಿತ ಕಂಡಿತು. ನಿಜಕ್ಕೂ ವಿಶ್ವದಲ್ಲೇ ಜರ್ಮನಿಯ ನಂತರ ಜಪಾನ್ ಹೆಚ್ಚು ರಬ್ಬರ್ ತಯಾರಿಕಾ ಕಂಪನಿಗಳನ್ನು ಹೊಂದಿದೆ.ಅದೂ ಕೂಡಾ ಸುನಾಮಿ ಅಪ್ಪಳಿಸಿದ ಉತ್ತರ ಜಪಾನ್ನಲ್ಲೇ ಹೆಚ್ಚು ಕಂಪನಿಗಳಿದ್ದವು. ಆದರೆ ರಬ್ಬರ್ ಮಾರುಕಟ್ಟೆ ನಿರೀಕ್ಷಿಸಿದಂತೆ ಆಗಲಿಲ್ಲ. ಈ ವೇಳೆ ಚೈನಾ ಹಾಗೂ ಇತರ ಏಷಿಯಾ ದೇಶಗಳು ಆ ಕಂಪನಿಗಳ ಜಾಗವನ್ನು ಆಕ್ರಮಿಸಿಕೊಂಡಿತು. ಹೆಚ್ಚು ರಬ್ಬರ್ ತಮ್ಮ ದೇಶಕ್ಕೆ ಆಮದು ಮಾಡಿಕೊಂಡವು. ಅಲ್ಲಿನ ಕಂಪೆನಿಗಳು ಕೆಲಸ ಶುರು ಮಾಡಿದವು.ಹಾಗಾಗಿ ಮತ್ತೆ ರಬ್ಬರ್ ಬೆಲೆ ಏರು ಹಾದಿಯಲ್ಲಿ ಸಾಗಿತು.ಆದರೆ ಜಪಾನ್ ಕಳೆದ ವರ್ಷ ಇಂಡೋನೇಶ್ಯಾ ಒಂದರಿಂದಲೇ 31,930 ಟನ್ ರಬ್ಬರ್ ಆಮದು ಮಾಡಿದ್ದರೆ ಈ ವರ್ಷ ಫೆಬ್ರವರಿಯವರೆಗೆ 28,650 ಟನ್ ಆಮದು ಮಾಡಿಕೊಂಡಿದೆ.

ಈ ಹಿಂದಿನ ಇಂತಹ ಅನೇಕ ಪ್ರಾಕೃತಿಕ ಘಟನೆಗಳನ್ನು ತೆಗೆದುಕೊಂಡಾಗಲೂ ಕೂಡಾ ರಬ್ಬರ್ ಬೆಲೆ ಇಳಿಮುಖವಾಗಲೇ ಇಲ್ಲ. ಕಳೆದ ವರ್ಷ ಜನವರಿ ತಿಂಗಳಲ್ಲಿ ಹೆಚ್ಚು ರಬ್ಬರ್ ಬೇಡಿಕೆ ಪ್ರದೇಶಗಳಾದ ಚೈನಾ ,ಹೈಟಿ ,ನಾಗಾಲ್ಯಾಂಡ್ ,ಚಿಲಿ ಇತ್ತೀಚೆಗೆ ಜಪಾನ್ನಲ್ಲೂ ಪ್ರಾಕೃತಿಕ ವಿಕೋಪ ಸಂಭವಿಸಿದಾಗಲೂ ಕೂಡಾ ರಬ್ಬರ್ ಬೆಲೆ ಮೇಲೆ ಗಂಭೀರ ಪರಿಣಾಮ ಬೀರಿಲ್ಲ ಎನ್ನುವುದು ಗಮನಾರ್ಹ ಸಂಗತಿ. ಆತಂಕದಿಂದಾಗಿ ಮಾರುಕಟ್ಟೆ ಹೆಚ್ಚು ಕುಸಿತ ಕಂಡಿತ್ತು. ಇದರ ಜೊತೆಗೆ ಈಗ ರಬ್ಬರ್ ಹೆಚ್ಚು ಬೆಳೆಯುವಂತಹ ಥೈಲ್ಯಾಡ್ , ಮಲೇಶ್ಯಾದಂತಹ ಪ್ರದೇಶಗಳಲ್ಲಿ ಅಪ್ಪಳಿಸಿದ ಮಳೆ , ಪ್ರವಾಹದ ಕಾರಣದಿಂದಾಗಿ ಸಾವಿರಾರು ಎಕ್ರೆ ರಬ್ಬರ್ ಪ್ಲಾಂಟೇಶನ್ಗಳಿಗೆ ಹಾನಿಯಾಗಿದೆ. ಇದೆಲ್ಲಾ ಸಂಗತಿಗಳು ಇಂದು ರಬ್ಬರ್ ಏರು ಹಾದಿಯಲ್ಲಿ ಸಾಗಲು ಕಾರಣವಾಗಿವೆ.ಭಾರತದ ರಬ್ಬರ್ಗೂ ಬೇಡಿಕೆ ಬಂದಿದೆ.

ಇನ್ನು ನೈಸರ್ಗಿಕ ರಬ್ಬರ್ ಉತ್ಪಾದನೆ ಹಾಗೂ ಬಳಕೆಯನ್ನು ನೋಡಿದರೆ ರಬ್ಬರ್ ಉತ್ಪಾದನೆ ಸಾಕಾಗದೆ ಸಿಂಥಟಿಕ್ ರಬ್ಬರ್ ಬಳಕೆ ಇಂದು ಅನಿವಾರ್ಯವಾಗಿದೆ. ಕಳೆದ ವರ್ಷ ವಿವಿದ ದೇಶಗಳು ರಬ್ಬರ್ ಆಮದು ಸುಂಕವನ್ನು ಕಡಿತಗೊಳಿಸಿದರೂ ರಬ್ಬರ್ ಸಾಕಷ್ಟು ಆಮದು ಆಗಿಲ್ಲ. ಕಾರಣ ಉತ್ಪಾದನೆಯ ಕೊರತೆ. ಕಳೆದ ವರ್ಷ ಸರಕಾರವು 40 ಸಾವಿರ ಟನ್ ರಬ್ಬರ್ ಆಮದಿಗೆ ಅನುಮತಿ ನೀಡಿದ್ದರೂ ಕೂಡಾ 10 ಸಾವಿರ ಟನ್ಗಿಂತ ಹೆಚ್ಚು ಆಮದು ಮಾಡಿಕೊಳ್ಳಲು ದೇಶಗಳಿಗೆ ಸಾಧ್ಯವಾಗಿಲ್ಲ.ಈ ಮಾರ್ಚ್ ತಿಂಗಳಿನಿಂದ ರಬ್ಬರ್ ಆಮದಿಗೆ ಹೊಸ ನೀತಿ ಕೂಡಾ ಜಾರಿಯಾಗಿದೆ. ಇದರ ಪ್ರಕಾರ ಆಮದು ಹಾಗೂ ರಫ್ತು ಸುಂಕ ಕಡಿಮೆಯಾಗಿದೆ. ಆದರೂ ರಬ್ಬರ್ ಎಲ್ಲಿದೆ?. ಈ ತೆರಿಗೆ ಇಳಿಕೆಯು ಟಯರ್ ಕಂಪನಿಗಳು ಕೊಂಚ ಲಾಭ ಹೆಚ್ಚಿಸಬಹುದಾಗಿದೆ. ಹೀಗಾಗಿ ಇಂದು ನೈಸರ್ಗಿಕ ರಬ್ಬರ್ ಕೊರತೆಯಿಂದಾಗಿ ಕೆಲ ಕಂಪನಿಗಳು ಸಿಂಥಟಿಕ್ ರಬ್ಬರ್ ಮೊರೆ ಹೋಗಬೇಕಾಗಿತ್ತು.ಇಡೀ ವಿಶ್ವದಲ್ಲಿ ರಬ್ಬರ್ ಉತ್ಪಾದನೆಯಲ್ಲಿ ಥೈಲ್ಯಾಂಡ್ ಮೊದಲ ಸ್ಥಾನದಲ್ಲಿದ್ದರೆ, ಇಂಡೋನೇಶ್ಯಾ ಎರಡನೇ ಸ್ಥಾನದಲ್ಲಿದೆ. ಭಾರತ 4 ನೇ ಸ್ಥಾನದಲ್ಲಿದೆ.ಅದರಲ್ಲೂ ಕೇರಳ , ತಮಿಳುನಾಡು ಪ್ರದೇಶಗಳಿಗೆ ಹೋಲಿಸಿದರೆ ಕರ್ನಾಟಕದ ರಬ್ಬರ್ ಬೆಳೆ ಏನೇನೂ ಇಲ್ಲ. ಇಂಡೋನೇಶ್ಯಾವು 2010 ರಲ್ಲಿ 2.8 ಮಿಲಿಯನ್ ಟನ್ ರಬ್ಬರ್ ಉತ್ಪಾದಿಸಿದೆ.

ಗ್ಲೋಬಲ್ ಆಗಿ ಗಮನಿಸಿದರೆ ಸಿಂಥಟಿಕ್ ಹಾಗೂ ನೈಸರ್ಗಿಕ ರಬ್ಬರ್ಗಳು ಒಟ್ಟಾರೆ 24.4 ಮಿಲಿಯನ್ ಟನ್ ರಬ್ಬರ್ 2010 ರಲ್ಲಿ ಬೇಡಿಕೆ ಇತ್ತು ಇದು 2009 ಕ್ಕಿಂತ ಇದು 14.9 ಶೇಕಡಾ ಹೆಚ್ಚಾದಂತಾಗಿತ್ತು , ಪ್ರಸಕ್ತ ವರ್ಷದಲ್ಲಿ ಈ ಬೇಡಿಕೆ 26.1 ಮಿಲಿಯನ್ ಟನ್ಗೆ ಏರುವ ನಿರೀಕ್ಷೆ ಇದೆ. 2012 ರ ವೇಳೆಗೆ ಇದು 27.5 ಮಿಲಿಯನ್ ಟನ್ಗೆ ಏರುವ ನಿರೀಕ್ಷೆ ಇದೆ.ಆದರೆ ನೈಸರ್ಗಿಕ ರಬ್ಬರ್ ಉತ್ಪಾದನೆಯು 20 ರಿಂದ 23 ಮಿಲಿಯನ್ ಟನ್ ಮೀರಿಲ್ಲ. ಇಂಡೋನೇಶ್ಯಾವು ಈ ಹಿಂದೆ ಜಪಾನಿನ ಕೆಲ ಕಂಪನಿಗಳೊಂದಿಗೆ ಮಾತುಕತೆ ನಡೆಸಿ ವರ್ಷದಲ್ಲಿ ನಿಗದಿತ ಪ್ರಮಾಣದಲ್ಲಿ ರಬ್ಬರ್ ಪೂರೈಸುವುದಾಗಿ ಒಪ್ಪಿಕೊಂಡಿತ್ತು.ಜಪಾನ್ನಲ್ಲಿ ಯಕೋಮಾದಂತಹ ಕೆಲ ಟಯರ್ ಕಂಪನಿಗಳು ನೈಸರ್ಗಿಕ ರಬ್ಬರ್ ಕೊರತೆಯಿಂದ ಕೆಲ ಕಾಲ ಟಯರ್ ನಿರ್ಮಾಣವನ್ನೇ ಸ್ಥಗಿತಗೊಳಿಸಿತ್ತು. ಇತ್ತೀಚೆಗೆ ಪೆಟ್ರೋಲಿಯಂ ಉತ್ಪನ್ನಗಳು ದುಬಾರಿಯಾದ ಕಾರಣ ನೈಸರ್ಗಿಕ ರಬ್ಬರಿಗೆ ಹೆಚ್ಚು ಬೇಡಿಕೆ ಕಂಡುಬರುತ್ತಿದೆ.

ಭಾರತದ ರಬ್ಬರ್ ಮಾರುಕಟ್ಟೆಯನ್ನು ಗಮನಿಸಿದರೆ, ಇಲ್ಲಿ 2008 -09 ರ ಸಾಲಿನಲ್ಲಿ 865 ಮಿಲಿಯನ್ ಕೆಜಿ ರಬ್ಬರ್ ಉತ್ಪಾದನೆಯಾಗಿದ್ದರೆ 872 ಮಿಲಿಯನ್ ಕೆಜಿ ರಬ್ಬರ್ ಬಳಕೆಯಾಗಿದೆ , ಇನ್ನು 2009-10 ರಲ್ಲಿ 832 ಮಿಲಿಯನ್ ಕೆಜಿ ರಬ್ಬರ್ ಉತ್ಪಾದನೆಯಾಗಿ 931 ಮಿಲಿಯನ್ ಕೆಜಿ ರಬ್ಬರ್ ಬಳಕೆಯಾಗಿದೆ. ಈ ವರ್ಷ ಇದುವರೆಗೆ 804 ಮಿಲಿಯನ್ ಕೆಜಿ ರಬ್ಬರ್ ಉತ್ಪಾದನೆಯಾಗಿದೆ ಆದರೆ ಈಗಲೇ 861 ಮಿಲಿಯನ್ ಕೆಜಿ ರಬ್ಬರ್ ಬಳಕೆಯಾಗಿದೆ. ಇದರ ಜೊತೆಗೆ 28 ಮಿಲಿಯನ್ ಕೆಜಿ ರಬ್ಬರ್ ರಫ್ತು ಮಾಡಲಾಗಿದ್ದರೆ , ಇದುವರೆಗೆ 177 ಮಿಲಿಯನ್ ಕೆಜಿ ರಬ್ಬರ್ ಆಮದು ಮಾಡಲಾಗಿದೆ.ಒಟ್ಟಾರೆಯಾಗಿ ದೇಶದಲ್ಲಿ 6,86,515 ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ಬೆಳೆಯಲಾಗಿದೆ ,ಇದರಲ್ಲಿ ಹೆಕ್ಟೇರ್ಗೆ 1775 ಕೆಜಿ ರಬ್ಬರ್ ಉತ್ಪಾದನಾ ಸಾಮರ್ಥ್ಯ ಭಾರತದಲ್ಲಿದೆ. ಇತರ ದೇಶಗಳೀಗೆ ಹೋಲಿಸಿದರೆ ಭಾರತದ ಉತ್ಪಾದನಾ ಸಾಮರ್ಥ್ಯ ಕಡಿಮೆ ಇದೆ. ಈ ಸಾಮರ್ಥ್ಯ ಏರಿಕೆಯಾದರೆ ಬೆಳೆಗಾರರಿಗೂ ರಬ್ಬರ್ ಮಾರುಕಟ್ಟೆಗೂ ಹೆಚ್ಚಿನ ಅನುಕೂಲವಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ದೇಶದಲ್ಲಿ 4,45,000 ಕಾರ್ಮಿಕರು ರಬ್ಬರ್ ನಂಬಿ ಬದುಕುತ್ತಿದ್ದರೆ , ಈ ದೇಶವು ರಬ್ಬರ್ ಬಳಕೆಯಲ್ಲಿ 2 ನೇ ಸ್ಥಾನದಲ್ಲಿದೆ, ಆಮದು ಮಾಡುವುದರಲ್ಲಿ 9 ನೇ ಸ್ಥಾನ , ರಪ್ತು ಮಾಡುವುದರಲ್ಲಿ 6 ನೇ ಸ್ಥಾನ ಹಾಗೂ ಉತ್ಪಾದನೆಯಲ್ಲಿ 4 ನೇ ಸ್ಥಾನದಲ್ಲಿದೆ.

ಒಟ್ಟಿನಲ್ಲಿ ರಬ್ಬರ್ ಬೆಲೆ ಈಗ ಎಲ್ಲಾ ಬೆಳೆಗಾರರಿಗೂ ನೆಮ್ಮದಿ ತಂದುಕೊಟ್ಟಿದೆ. ಈ ಖುಷಿ ಇನ್ನೂ ಕೆಲವು ವರ್ಷಗಳು ಮುಂದುವರಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಸಧ್ಯಕ್ಕಂತೂ ನೈಸರ್ಗಿಕ ರಬ್ಬರ್ಗೆ ಭಾರೀ ಬೇಡಿಕೆ ಇದೆ. ಬೇಡಿಕೆಗೆ ತಕ್ಕ ಉತ್ಪಾದನೆಯಾಗುತ್ತಿಲ್ಲ. ಇದು ದಕ್ಷಿಣ ಕನ್ನಡ ಜಿಲ್ಲೆಯ ರಬ್ಬರ್ ಬೆಳೆಗಾರರಿಗೆ ಮಾತ್ರವಲ್ಲ ದೇಶದ ರಬ್ಬರ್ ಬೆಳೆಗಾರರಿಗೆ ವರದಾನವಾಗಿ ಪರಿಣಮಿಸಿದೆ.

- ಮಹೇಶ್ ಪುಚ್ಚಪ್ಪಾಡಿ

0 comments:

Post a Comment