ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ವಿಶೇಷ ವರದಿ

ಕಟ್ಟಿದ ಆಣೆಕಟ್ಟು ಎರಡು..! ಆದರೂ ರೈತರ ಬಾಳೆಲ್ಲಾ ಬರೇ ಬರಡು.

ಉಡುಪಿ : ಅಂಗೈಹುಣ್ಣಿಗೆ ಕನ್ನಡಿ ಬೇಕಾ? ಇಂಥಹದ್ದೊಂದು ಪ್ರಶ್ನೆ ಹುಟ್ಟುಹಾಕಿದೆ ಎರಡು ಕಿಂಡಿ ಆಣೆಕಟ್ಟು! ಅಂಗೈಯಲ್ಲಿ ಆಕಾಶ ತೋರಿಸಿ ರೈತರಲ್ಲಿ ಆಸೆ ಹುಟ್ಟಿಸಿ ನಿರಾಸೆ ಮೂಡಿಸಿದೆ ಕಿಂಡಿಆಣೆಕಟ್ಟು.
ರೈತರ ಹೊಲದಲ್ಲಿ ಇನ್ನು ಬಂಗಾರ ಬೆಳೆಯಬಹುದು, ನೂರಾರು ಎಕ್ರೆ ಕೃಷಿ `ಭೂಮಿಗೆ ಸಮೃದ್ಧ ನೀರು ಸಿಗುತ್ತೆ, ಅಂತರ್ ಜಲ ವೃದ್ದಿ ಮುಂತಾದ ಸಂಗತಿಗಳ ಹಿನ್ನೆಲೆಯಲ್ಲಿ ಕಟ್ಟಿದ ಕಿಂಡಿ ಆಣೆಕಟ್ಟು ರೈತರ ಬಾಳೆಲ್ಲಾ ಬರಡು ಮಾಡಿದೆ.


ಪ್ರಸಕ್ತ ಪರಿಸ್ಥಿತಿ ಹೇಗಿದೆ ಎಂದರೆ ಕಿಂಡಿ ಆಣೆಕಟ್ಟಿ ಅವಾಂತರದಿಂದ ನಮ್ಮನ್ನು ಪಾರು ಮಾಡಿ ಅಂತ ರೈತರು ಬೀದಿಗೆ ಇಳಿದಿದ್ದಾರೆ. ಆಣೆಕಟ್ಟು ಕಟ್ಟುವಾಗ ಇದ್ದ ಉತ್ಸಾಹ ಉದ್ಭವಿಸಿದ ತೊಂದರೆ ಪರಿಹರಿಸುವ ನಿಟ್ಟಿನಲ್ಲಿ ಕಾಣುತ್ತಿಲ್ಲ ಅನ್ನೋದು ವಾಸ್ತವ.

ಒಂದೆಲ್ಲಾ ಎರೆಡಲ್ಲಾ ಅಜಮಾಸು ಹದಿನೆಂಟು ಕೋಟಿ ರೂ. ಸುರಿದು ನಿರ್ಮಿಸಿದ ಕಿಂಡಿ ಆಣೆಕಟ್ಟು ಉಪಕಾರ ಮಾಡಿದ್ದಕ್ಕಿಂತ ಅಪಕಾರ ಮಾಡಿದ್ದೇ ಹೆಚ್ಚು. ಎರಡೂ ಕಿಂಡಿ ಆಣೆಕಟ್ಟು ಸರಕಾರದ ಬೊಕ್ಕಸಕ್ಕೆ ಕನ್ನ ಹಾಕಿದ್ದು ಬಿಟ್ಟರೆ ಪ್ರತಿಫಲ ಶೂನ್ಯ. ಆದರೆ ಕಿಂಡಿ ಆಣೆಕಟ್ಟು ಗುತ್ತಿಗೆದಾರರ ತೆಲೆ ಮೇಲೆ ಪೇಟಯಿಟ್ಟು ``ಭೇಷ್'ಎಂದಿದ್ದು ಬಿಟ್ಟರೆ ರೈತರ ಮತ್ತು ಪರಿಸರ ನಿವಾಸಿಗಳ ಪಾಡು ನಾಯಿಪಾಡು. ನೂರಾರು ಎಕ್ರೆ ಕೃಷಿ `ಭೂಮಿ, ಸುಂದರಿ ಸಸ್ಯ ಮತ್ತು ಸಾಂಪ್ರದಾಯಕ ಮೀನುಗಾರಿಕೆ ಹಾಗೂ ಕಪ್ಪೆಚಿಪ್ಪು (ಮಳಿ) ಆಯುವ ಮಹಿಳೆಯರ ಬದುಕನ್ನು ಬಿಡದೆ ಕಿಂಡಿ ಆಣೆಕಟ್ಟು ಕಿತ್ತುಕೊಂಡಿದೆ. ಹಾಗಾಗಿ ಕರಾವಳಿ ಮಂದಿ ಆಣೆಕಟ್ಟು ಅಂದರೆ ಬೆಚ್ಚಿ ಬೀಳುತ್ತಾರೆ. ಕನಸಲ್ಲೂ ಕನವರಿಸುತ್ತಾರೆ.

ಕತೆ ಹೇಳುತ್ತದೆ ಕಿಂಡಿ ಆಣೆಕಟ್ಟು
ನಾಲ್ಕು ವರ್ಷದ ಹಿಂದೆ ಸೌಪರ್ಣಕಾ ಮತ್ತು ಚಕ್ರಾ ನದಿಗೆ ಕಿಂಡಿ ಆಣೆಕಟ್ಟು ಕಟ್ಟಲಾಗಿದೆ. ಬಂಟ್ವಾಡಿ ಸಮೀಪ ಆರು ಕೋಟಿ ರೂ. ಮತ್ತು ತೊಪ್ಲು ಸಮೀಪ ಹನ್ನೆರಡು ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಆಣೆಕಟ್ಟು ಅಡ್ಡಡ್ಡ ನಿಂತಿದೆ. ಕಿಂಡಿ ಆಣೆಕಟ್ಟಿನ ಹಲಗೆಗಾಗಿ ಖರ್ಚುಮಾಡಿದ ದುಡ್ಡು 55 ಲಕ್ಷ ರೂ. ಬಾರೀ ವೊತ್ತದ ಹಣ ಸುರಿದರೂ ಆಣೆಕಟ್ಟಿನ ಹಲಗೆ ಇಡೋಕೆ ವ್ಯವಸ್ಥೆಯಿಲ್ಲದೆ ಅಬ್ಬೇಪಾರಿ. ಈಗಾಗಲೇ ನೂರಾರು ಹಲಗೆ ಕಿಂಡಿ ಆಣೆಕಟ್ಟಿನ ತಳದಿಂದೆದ್ದು ನಾಪತ್ತೆ! ಕೆಲ ಹಲಗೆಗಳು ಇನ್ನೂ ನದಿ ದಂಡೆಯಲ್ಲಿ ಹೆಬ್ಬಾವಿನಂತೆ ಬಿದ್ದುಕೊಂಡಿದೆ. ನಾಲ್ಕು ವರ್ಷದಿಂದ ಒಂದೇ ಒಂದು ಬಾರಿಯೂ ಕಿಂಡಿ ಆಣೆಕಟ್ಟಿಗೆ ಸರಿಯಾಗಿ ಹಲಗೆ ಹಾಕಲು ಆಗಲಿಲ್ಲ ಅಂದ ಮೇಲೆ ಕಿಂಡಿ ಆಣೆಕಟ್ಟಿನ ಹಣೆಬರಹ ಅರಿಯೋದು ಓದುಗರಿಗೆ ಬಿಟ್ಟ ಸಂಗತಿ.
ತೊಪ್ಲು ಕಿಂಡಿ ಆಣೆಕಟ್ಟ ಆಗಬೇಕಾಗಿದ್ದು ಕಟ್ಬೇಲ್ತೂರು ಸಮೀಪ. ರಾಜಕೀಯ ಲಾಭ ಪಡೆಯುವ ನಿಟ್ಟಿನಲ್ಲಿ ತೊಪ್ಲು ಪ್ರದೇಶಕ್ಕೆ ಆಣೆಕಟ್ಟು ಶಿಫ್ಟ್ ಆಯಿತು. ಇಂದಿಗೂ ಬೋರ್ಡ್ ನಲ್ಲಿ ಕಿಂಡಿ ಆಣೆಕಟ್ಟು ಇರೋದು ಕಟ್ಬೇಲ್ತೂರಿನಲ್ಲಿ.

ಕಾಮಗಾರಿ ಹೇಗಿದೆ ಎಂದರೆ ಕಿಂಡಿ ಆಣೆಕಟ್ಟಿನ ಕೈಪಿಡಿ ಉದುರಿಕೊಳ್ಳುತ್ತಿದೆ. ಹಲಗೆ ಹಾಕುವ ಸಿಮೆಂಟ್ ಗುಂದದ ಕಬ್ಬಿಣ ನಾನಿದ್ದೇನೆ ಎಂದು ತೋರಿಸಿಕೊಳ್ಳುತ್ತಿದೆ. ಹಲಗೆ ಜೋಡಿಸುವ ಗುಂದದ ಚಡಿ ದೇವರಿಗೆ ಪ್ರೀತಿ. ಮಾಹಿತಿ ಹೇಳುವ ಶಿಲಾಫಲಕ ಉದುರಿಹೋಗಿ ಕಾಲವಾಯಿತು. ತೊಪ್ಲು ಕಿಂಡಿ ಆಣೆಕಟ್ಟು ನಿರ್ವಹಿಸಿದವರೇ ಸೌಪರ್ಣಿಕಾ ನದಿಗೆ ಅಣೆಕಟ್ಟು ಕಟ್ಟುವ ಗುತ್ತಿಗೆದಾರರು!

ತೊಪ್ಲು ಕಿಂಡಿ ಆಣೆಕಟ್ಟು ಯಳೂರು, ತೊಪ್ಲು, ಬೇಲ್ತೂರು, ಹೆಮ್ಮಾಡಿ, ಕಟ್ಬೇಲ್ತೂರು, ಕಟ್ಟು, ಬಟ್ಟೆಕುದ್ರು, ವಂಡ್ಸೆ ವರಿಗಿನ ಕೃಷಿ ಪ್ರದೇಶಕ್ಕೆ ನೀರುಣಿಸುತ್ತದೆ ಎಂದು ನಂಬಿಸುವ ಜೊತೆಗೆ ರೈತರು ಎರಡು, ಮೂರು ಬೆಳೆ ಬೆಳೆಯಬಹುದು ಎಂದು ಹೇಳಲಾಗಿತ್ತು. ಸದ್ಯ ಒಂದು ಬೆಳೆ ಬೆಳೆಯಲೂ ರೈತರು ಒದ್ದಾಡುತ್ತಾರೆ. ಫಲವತ್ತಾದ ಕೃಷಿ ಭೂಮಿ ಹಿನ್ನಿರಿನ ಪ್ರವಾಹಕ್ಕೆ `ನಂಜೇರಿ' ನಿಸ್ಪ್ರಯೋಜನವಾಗುತ್ತಿದೆ. ಉಪ್ಪುನೀರು ಸೇರಿ ಪರಿಸರ ಬಾವಿ ನೀರು ಕುಡಿಯಲು ಆಯೋಗ್ಯವಾಗಿದೆ. ದ್ವಿದಳ ಧಾನ್ಯ ಬೆಳೆ ರೈತರು ಕೈಬಿಟ್ಟಾಗಿದೆ. ತೆಂಗು, ಅಡಿಕೆ ತಲೆ ಕಳಚಿಕೊಳ್ಳುತ್ತಿದೆ. ಕಿಂಡಿ ಆಣೆಕಟ್ಟು ಊರನ್ನೇ ಮುಳಿಗಿಸುತ್ತದೆ. ಕೆಲವರು ಊರು ಬಿಟ್ಟಾಗಿದೆ. ಮತ್ತೆ ಕೆಲವರು ಜಾಗಬಿಟ್ಟು ಕದಲುವ ಮನಸ್ಸು ಮಾಡುತ್ತಿದ್ದಾರೆ. ಕೊಳ್ಳೋರು ಬರುತ್ತಿಲ್ಲ. ರಾತ್ರಿ ಕಂಡ ಬಾವಿಗೆ ಹಗಲು ಹಾರಲು ಯಾರು ತಯಾರಿರುತ್ತಾರೆ ಹೇಳಿ.

ಇದು ತುಪ್ಲು ಆಣೆಕಟ್ಟು ಸೃಷ್ಠಿಸಿದ ಅವಾಂತರವಾದರೆ ಬಂಡ್ವಾಡಿ ಕಿಂಡಿ ಆಣೆಕಟ್ಟು ಕೂಡಾ ಇಂಥಹದ್ದೇ ತೊಂರೆಯನ್ನು ನಾಗರಿಕರಿಗೆ ನೀಡುತ್ತಿದೆ. ಪಡುಕೋಣೆ, ಮರವಂತೆ, ನಾವುಂದ, ಹಡವು, ಬಡಾಕೆರೆ, ಆನಗೋಡು, ಮೋವಾಡಿ ಪರಸರದಲ್ಲಿ ಕಿಂಡಿ ಆಣೆಕಟ್ಟು ವಿಷಯ ಪ್ರಸ್ತಾಪಿಸಿದರೆ ರೈತರು ಶಪಿಸುತ್ತಾರೆ. ಕಿಂಡಿ ಆಣೆಕಟ್ಟು ಸೃಷ್ಟಿಸಿದ ಅಡಾವುಡಿಗೆ ಹೋರಾಟ ಸಮಿತಿ ಕೂಡಾ ಹುಟ್ಟಿಕೊಂಡಿದೆ. ಹೋರಾಟಗಾರರು ಹೋರಾಟಕ್ಕೆ ಕಿಮ್ಮತ್ತು ಸಿಗುತ್ತಿಲ್ಲ. ಹಾಗಾಗಿ ಮುಂದಿನ ಸಾಲಿನ ಹಲಗೆ ಜೋಡಣೆಗೆ ಹೋರಾಟ ಮೀಸಲು!

ಎರಡೂ ಆಣೆಕಟ್ಟ ಅಡ್ಡಡ್ಡ ಮಲಗಲಿದೆ

ಸೌಪರ್ಣಿಕಾ ನದಿಗೆ ಗುಂಡೂರು ಸಮೀಪ ಕಟ್ಟುವ ಆಣೆಕಟ್ಟು ಮತ್ತು ಚೆಕ್ ಡ್ಯಾಮ್ ಬಂಟ್ವಾಡಿ ಮತ್ತು ತೊಪ್ಲು ಕಿಂಡಿ ಆಣೆಕಟ್ಟನ್ನು ಅಡ್ಡಡ್ಡ ಮಲಗಿಸಲಿದೆ. 18 ಕೋಟಿ ರೂ.ಕಿಂಡಿ ಆಣೆಕಟ್ಟು ನಾಯಿಮೊಲೆ ಹಾಲು.
ಕಳೆದ ಬಾರಿ ಸೌಪರ್ಣಿಕಾಕಾ ನದಿಯ ಕಿಂಡಿ ಆಣೆಕಟ್ಟು ಹಿನ್ನೀರಿನ ಪ್ರವಾಹದಲ್ಲಿ ಜಲಚರಗಳ ಮಾರಣ ಹೋಮಕ್ಕೆ ಕಾರಣವಾಗಿತ್ತು. ಅರೆಹೊಳೆ ಸಮೀಪದ ಹಿನ್ನೀರಿನಲ್ಲಿ ಕೂರ್ಮಗಳು ಸತ್ತು ತೀಲುತ್ತಿರುವ ಚಿತ್ರ ಮಾಮೂಲಿಯಾಗಿತ್ತು. ಮೀನು ಮತ್ತು ಕೂರ್ಮಗಳ ಸಾವಿಗೆ ಕಿಂಡಿಣೆಕಟ್ಟಿನ ಹಿನ್ನೀರು ಮಲೀನವಾಗಿರೋದೇ ಕಾರಣ ಎಂದು ವಿಜ್ಞಾನ ಹೇಳಿತ್ತು. ಹಿನ್ನೀರಿನ ಒತ್ತಡ ಜಾಸ್ತಿಯಾಗಿ ಮೇಲ್ನೀರಿನ ಒತ್ತಡ ಕಡಿಮೆಯಾಗಿ ಇಂಥಹದ್ದೊಂದು ಅನಾಹುತ ಸೃಷ್ಟಿಗೆ ಕಾರಣವಾಗಿತ್ತು. ಹಾಗೆ ನದಿಗೆ ಮಾನವ ತ್ಯಾಜ್ಯ ಮತ್ತು ಕಸಕಡ್ಡಿಗಳನ್ನ ಎಸೆಯೋದ್ರಿಂದ ನೀರು ಮಲೀನವಾಗುತ್ತದೆ ಎಂಬ ಸಂಗತಿ ಜಗಜ್ಜನಿತವಾಗಿತ್ತು. ಕಡು ಬೀಸಿಗೆ ಸಮಯದಲ್ಲೇ ನದಿ ಹಿನ್ನೀರಿನಲ್ಲಿ ಅಪಸೌವ್ಯಗಳು ನಡೆಯುತ್ತಿದ್ದು,ಸೌಪರ್ಣಿಕಾ ಹರಿವು ಕಡಿಮೆಯಾಗಿರೋದೆ ಇದ್ದಕ್ಕೆ ಕಾರಣ ಎಂದು ಕಂಡುಕೊಳ್ಳಲಾಗಿತ್ತು. ನದಿಗೆ ಅಣೆಕಟ್ಟು ಇಲ್ಲದೇನೇ ನೀರಿನ ಹರಿವು ಕಡಿಮೆಯಾಗಿ ಅನಾಹುತ ಸೃಷ್ಟಿಯಾಯಿತು ಅಂತಾದ ಮೇಲೆ ಆಣೆಕಟ್ಟು ಎದ್ದರೆ ಏನಾಗಬಹುದು ಎಂಬುದನ್ನು ಊಹಿಸಲೂ ಅಸಾಧ್ಯ.

ಸೌಪರ್ಣಿಕಾ ನದಿಗೆ ಒಡ್ಡು ಮತ್ತು ಚೆಕ್ ಡ್ಯಾಮ್ ಕಟ್ಟೋದ್ರಿಂದ ಒಡ್ಡಿನ ಕೆಳ ಭಾಗದಲ್ಲಿ ಹನಿ ಹನಿ ನೀರಿಗೂ ತತ್ವಾರ ಬರುತ್ತದೆ. ಕಿಂಡಿ ಆಣೆಕಟ್ಟಿನಲ್ಲಿ ಸಿಹಿ ನೀರಿನ ಸ್ಟಾಕ್ ಕಡಿಮೆಯಾಗುತ್ತದೆ. ಸೌಪರ್ಣಿಕಾ ನದಿಯ ನೀರನ್ನು ನಂಬಿದ ರೈತರ ಪಾಲಿಗೆ ಸೌಪರ್ಣಿಕಾ ನೀರು ಕೊಡಲಾರಳು. ನದಿಯ ಕೆಳ ಭಾಗದಲ್ಲಿ ನೀರಿನ ಪಸೆ ಆರಲಿದ್ದು, ಅಂತರ್ಜಲ ಮಟ್ಟ ಕುಸಿಯಲಿದೆ. ಮುಂದೆ ಒಡ್ಡಿನ ಕೆಳ ಭಾಗದ ಜನರು ಉಪ್ಪು ನೀರನ್ನು ಸಿಹಿನೀರಾಗಿ ಬದಲಾಯಿಸಿ ಕುಡಿಯುವ ಸ್ಥಿತಿ ಬಂದರೂ ಅಚ್ಚರಿಯಲ್ಲ. ಒಟ್ಟಾರೆ ಅಭಿವೃದ್ಧಿಗಾಗಿ ಕಾಮಗಾರಿಯೋ ಕಾಮಗಾರಿಗಾಗಿ ಅಭಿವೃದ್ಧಿಯೋ ಅನ್ನೋದು ತಿಳಿಯದ ಸಂಗತಿ. ಜನಹಿತ ಬಲಿ ಕೊಟ್ಟು ಮಾಡೋ ಉದ್ದಾರ ಯಾರಿಗೆ ಬೇಕಾಗಿದೆ. ಅಭಿವೃದ್ಧಿ ಹೆಸರಲ್ಲಿ ಪ್ರಕೃತಿ ಮೇಲೆ ಸವಾರಿ ಮಾಡಿದರೆ ಮುಂದಿನ ಜನಾಂಗ ಬದುಕೋದು ಎಲ್ಲಿ?

- ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment