ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್


ಅಮ್ಮ ನಿನ್ನೆದೆಯಾಳದಲ್ಲಿ ಗಾಳಕ್ಕೆ
ಸಿಕ್ಕ ಮೀನು.
ನಿನ್ನ ರಕ್ಷೆಗೂಡಲ್ಲು ಬೆಚ್ಚಗೆ ಅಡಗಲಿ ಎಷ್ಟು ದಿನ
ದೂಡು ಹೊರಗೆ ನನ್ನ. ಓಟ ಕಲಿವೆ, ಓಳನೋಟ ಅರಿವೆ..
ಯಾಕೋ ಈ ಹಾಡು ನನ್ನ ಬಾರಿ ಕಾಡಿಸಿತು. ಹೌದಲ್ವ? ಅಮ್ಮ ನೀನು ಚಿಕ್ಕವಳಾಗಿದ್ದಾಗ ಜೋಕಾಲಿ ಆಡ್ತಾಯಿದ್ದೆ, ಲೀಲು ದೊಡ್ಡಮ್ಮ ನೀನು ಸೇರಿ ಕದ್ದು ಸೈಕಲ್ ಹೊಡೆದಿದ್ರಿ ಅಂತೀ, ಅದೇ ಇವತ್ತು ನನಗೆ ಅದು ಬೇಡ ಇದು ಬೇಡ ಅನ್ನೋ ಅಮ್ಮ ಆಗಿದೀಯ!ಚಿಕ್ಕಂದಿನಲ್ಲಿ ನನಗಿನ್ನು ನೆನಪಿದೆ ಅಮ್ಮಾ, ನನ್ನ ಪ್ರತಿಯೊಂದು ಪುಟ್ಟ ನಗುವು ನಿನಗೆ ಎಷ್ಟೊಂದು ಖುಷಿಕೊಡ್ತಾಯಿತ್ತು ಅಂತ. ಅದೇ ನನಗಾಗುವ ಚಿಕ್ಕ ಗಾಯ ನಿನ್ನನ್ನು ಅದೆಷ್ಟು ಧೃತಿಗೆಡಸ್ತಾಯಿತ್ತು. ಅಮ್ಮ, ಮನೆಯ ಬಳಿ ಬಿಸಿಲೇರ ತೊಡಗಿದಾಗ ಬಣ್ಣ ಬಣ್ಣವಾಗಿ ಅರಳಿ ನಿಂತ ಜೀನೀಯ ಹೂಗಳ ಮೇಲೆ ಕುಳಿತಿದ್ದ ಚಿಟ್ಟೆಗಳತ್ತ ಹೆಜ್ಜೆ ಹಾಕ್ತಾ ನಾನು ಹೋಗಿ ಹೂವ ಹಿಡಿದು ಎಳೆಯುವಾಗ, ಬೇಡ ಪುಟ್ಟ ಅವು ಊಟ ಮಾಡ್ತಿವೆ, ಬಾ ನಿನಗೂ ಊಟ ಕೊಡ್ತಿನಿ ಚಿಟ್ಟೆನೂ ಊಟಕ್ಕೆ ಕರೆಯೋಣ ಅನ್ತಿದ್ದೆ... ಅಮ್ಮ ನೀನು ಕಲಿಸಿದ ಚಿಟ್ಟೆ ಭಾಷೆಯಿಂದಾನೊ ಏನೋ ಮಾರನೆಯ ದಿನ ನೋಡಿದಾಗ ನೀಲಿ ಬಣ್ಣದ ಮೇಲೆ ಗುಲಾಬಿ ಗುಳ್ಳೆಯಿದ್ದ ಚಿಟ್ಟೆ ನನ್ನ ನೋಡಿ ಪುಟ್ಟಿ ಈಗ ಎದ್ಯಾ? ಎಂದಿದ್ದು.

ನೀನು ಗರಿ ಗರಿ ಕಾಟನ್ ಸೀರೆ ಉಟ್ಟು, ನಿನ್ನ ಉದ್ದವಾದ ಕೂದಲನ್ನು ಹೇಗೇಗೋ ಜಡೆ ಹಾಕಿ. ಮಧ್ಯ ಬೆರಳಲ್ಲಿ ಕುಂಕುಮ ಅದ್ದಿ ಹುಬ್ಬುಗಳ ಮದ್ಯೆ ಇಟ್ಟುಕೊಂಡು ಅಡುಗೆ ಮಾಡ್ತಾಯಿದ್ರೆ ಅಮ್ಮ ನಾನು ನೀನಾಗಬೇಕು ಅನ್ನಿಸ್ತಾಯಿತ್ತು. ಮತ್ತೆ ಮುಂದೆ ನಡೆಯುವುದೆಲ್ಲಾ ಅದೇ ಸರ್ಕಸ್ ಆಗಿರ್ತಾಯಿತ್ತು.

ನನಗೆ ತಲೆ ಬಾಚಿ ನಾನು ಹಟ ಮಾಡಿ ಕೇಳಿದ ಬಟ್ಟೆ ಕೊಡದೆ ಬೇಡ ಚಿನ್ನಿ, ಹೊಸ ಬಟ್ಟೆ ದಿನಾ ಹಾಕ್ತಾರ? ಹಬ್ಬಕ್ಕೆ ಹಾಕುವಿಯಂತೆ ಅಂತ ನಯವಾಗಿ ನೀನು ತೋರಿಸೋ ಆಸೆಗೆ ಬಲಿಯಾಗಿ ನಿನ್ನ ಹಿಂದಿಂದೆ ಬರ್ತಾಯಿದ್ದೆ. ಎಲ್ಲಾ ಕಡೆಯೂ ಹಾಗೇ ನಿನ್ನದು ವಿಪರೀತ ಶಿಸ್ತು, ಅಚ್ಚುಕಟ್ಟು ತನ. ನಿನ್ನ ಕೈಯಲ್ಲಿರುತ್ತಿದ್ದ ಕಂದು ಬಣ್ಣದ ಪರ್ಸ್, ಕಾಯಿ ಪಲ್ಲೆಗೆ ಬೆಲೆ ಜಾಸ್ತಿ ಅಂತ ನೀನು ತೋಟದಲ್ಲಿ ಎಷ್ಟು ಮುತುವರ್ಜಿಯಿಂದ ಅವುಗಳನ್ನು ಬೆಳೆಸಿದ್ದೆ.

ಅದಕ್ಕೆ ನೆಂಟರೆಲ್ಲಾ ನಬಿನ್ನ ವಿಷಯ ಬಂದಾಗ, ಇದ್ರೆ ನಿನ್ನ ಹಾಗೇ ಇರಬೇಕು ಎಷ್ಟು ಚೆನ್ನಾಗಿ ಸಂಸಾರ ಸಾಗಿಸ್ತಳೆ ಅನ್ತಿದ್ರು, ನನಗೆ ಮಾತ್ರ ಏನು ಅರ್ಥವಾಗದೇ ಕಣ್ಣು ಪಿಳಿ ಪಿಳಿ ಬಿಟ್ಟಿದ್ದೆ. ಅಮ್ಮ ಎಂತ ಗೊತ್ತ? ನೀನು ಮಧ್ಯಹ್ನಾನದ ಸಮಯದಲ್ಲಿ ನಿನ್ನ ಪ್ರೀತಿಯ ಗಾರ್ಡನ್ ನಲ್ಲಿ ಕೆಲಸ ಮುಗಿಸಿ ಬಂದಾದ ಮೇಲೆ ಆ ಬಿಸಿಲಿಗೆ ನಿನ್ನ ಮುಖ ತುಸು ಬಾಡಿರುತಿತ್ತು. ಆದರೂ ವಿಶ್ರಾಂತಿಗೆ ಮೈಯೊಡ್ಡದ ನೀನು ಪುಸ್ತಕ ಹಿಡಿದು ಹಾಗೇ ಹಾಸಿಗೆಗೆ ಒರಗುತ್ತಿದ್ದೆ, ಅದೇನೋ ಗೀಚುತ್ತಿದ್ದೆ. ನಂಗೂ ಕಥೆ ಹೇಳಮ್ಮ ಅಂತ ನಿನಗೆ ಗಂಟು ಬೀಳ್ತಾಯಿದ್ದಿದ್ದು.

ಅಮ್ಮ, ಆಗ ಮೆಟ್ಟಿಲು ಇಳಿಯಬೇಕಾದ್ರೆ ಹೆಜ್ಜೆ ಹಾಕೋಕೆ ಬರಲ್ಲ ಅಂತ ಬಾಚಿ ತಬ್ಬಿಕೊಳ್ಳೊದಕ್ಕೆ ಪಕ್ಕದಲ್ಲೆ ಇರ್ತಿದ್ದಿ ಅದೇ ತರ ನಾನು ಮೊನ್ನೆ ಮೊನ್ನೆ ಮೈಸೂರಿಗೆ ಹೊರಟು ನಿಂತಾಗ ಜೋಪಾನ ಪುಟ್ಟ ಅಂತೀಯ ಅದೇ ಧ್ವನಿ!
ಇಷ್ಟು ವರ್ಷದಲ್ಲಿ ಅದರಲ್ಲಿ ಒಂದಿನಿತು ವ್ಯತ್ಯಾಸ ಇಲ್ಲ, ನಿನ್ನ ಕಣ್ಣು ನೋಡಿದ್ರೆ ಅದೇ ನೀರು. ಅದ್ಹೇಗಮ್ಮ ಅದೇ ಭಾವನೇನಾ ಹಾಗೆ ಜೋಪಾನ ಮಾಡಿದೀಯ? ಅಮ್ಮ ನನಗೊತ್ತು ನಿನ್ನ ಪ್ರೀತಿ ಬದುಕಿನ ಪೂರ್ತಿ ನನ್ನ ಬಗ್ಗೆ ನಿನಗೆ ಇರೋ ಕಾಳಜಿ ತುಂಬಾ ಬೇಕು ಅನ್ನಿಸುತ್ತೆ ಅಮ್ಮ.

ನನಗೆ ಚಿಕ್ಕಂದಿನಲ್ಲಿ ಮೋಡ ಗುಡುಗಿದಾಗ, ನೀನು ನನ್ನನ್ನು ಪಕ್ಕಕ್ಕೆ ಎಳೆದು ತಬ್ಬಿಕೊಂಡಾಗ ಅಬ್ಬಾ! ಅಮ್ಮ ಗುಡುಗಿಂತ ಜೋರು , ಈಗ ಭಯನೇ ಆಗ್ತಿಲ್ವಲ್ಲ ಅನ್ನಿಸ್ತಾಯಿತ್ತು. ನೀನು ನನ್ನ ಹಾಗೇ ತೊದಲು ಮಾತು, ಪುಟ್ಟ ಫ್ರಾಕ್, ನಿನ್ನ ಅಮ್ಮನ ಜೊತೆ ನಿನಗೂ ಏಟು ಬಿದ್ದಿರತ್ತೆ. ಆದರೆ ನಿನ್ನ ಪಾತ್ರ ಬದಲಾಗಿ ಅಮ್ಮ ಆಗಿದ್ದೀಯ, ನಿನ್ನ ಪುಟ್ಟ ಇವತ್ತು ದೊಡ್ಡವಳಾಗಿದ್ದೀನಿ. ನಿನ್ನನ್ನೆ ನೋಡಿ ನೋಡಿ ನನ್ನೊಳಗೂ ನಿನ್ನ ಥರನೇ ಒಬ್ಬಳು ಗುಮ್ಮನ ಗುಸುಕನ ಹಾಗೇ ಕದ್ದು ಕೂತಿರಬೇಕು ಅಲ್ವ?

ಅವಳು ಯಾವಾಗ ಮುಂಜಾನೆ ನಾಲ್ಕಕ್ಕೆ ಎದ್ದು ನಿನ್ನ ಹಾಗೇ ಕೆಲ್ಸ ಶುರು ಮಾಡೋದು. ಏಳು ಚಿನ್ನಿ, ಎದ್ದೇಳಮ್ಮ ಬಂಗಾರಿ.. ಏ ಚಿನ್ನಿ ಬರ್ತಿನಿ ತಾಳು..
ಅಮ್ಮ ಅದ್ರೆ ಒಂದು ಸಮಸ್ಯೆ ನೋಡು ನನಗೆ ನಿನ್ನ ಹಾಗೇ ಇಲ್ಲಿ ಮಗುಗೇ ಚಿಟ್ಟೇ, ಪಕ್ಷಿ ತೋರಿಸೋದ್ದಕ್ಕೆ ಆಗುತ್ತೋ ಇಲ್ವೋ? ನಾನು ಕೆಲ್ಸ ಮಾಡೊದ್ದಿಕ್ಕೆ ಹೋದ್ರೆ ಮೆಟ್ಟಿಲ ಬಳಿ ಯಾರಮ್ಮ ಆ ಪಾಪುನ ಕಾಯೋದು? ರಾತ್ರಿ ಕೆಲಸ ಮುಗಿಸಿ ಬಂದಾಗ ಪುಟ್ಟಿ ಚೆಂದವಾಗಿ ಮಲಗಿರುತ್ತಾಳೆನೋ ನಾನು ಹೇಗೆ ಕಥೆ ಹೇಳಲಿ ಹೇಳು? ಅಮ್ಮ ನಿನ್ನ ತರನೇ ಆಗ್ಬೇಕು ಅನ್ನೋದು ನನ್ನ ಹಪಾಹಪಿ ಈ ಬಿಡುವಿಲ್ಲದ ಜೀವನ ನನ್ನ ಪುಟ್ಟಾಗೆ ಅಮ್ಮನ ಪಾತ್ರ ನಿಭಾಯಿಸೋದು ಹೇಗೆ ಕಲಿಸುತ್ತೆ ಅಂತ? ಯಾಕಂದ್ರೆ ನಾನು ಯಾವಗಲೂ ಹೊರಗೆ ಇರಬೇಕಾಗುತ್ತೆ. ಅಮ್ಮ, ದಯವಿಟ್ಟು ನನಗೆ ಈಗ್ಲೆ ಇದೆಲ್ಲಾ ಬೇಡಮ್ಮ ನನಗೊತ್ತು ನನಗೆ ಗೊತ್ತಿಲ್ಲದೆ ಈ ಪರಿಸ್ಥಿತಿನ ನಿಭಾಯಿಸೋದನ್ನು ನನಗೆ ಕಲಿಸಿರುತ್ತೀಯ ಮಿಸ್ ಯು ಅಮ್ಮಾ


ಉಷಾ ಜಿ ಎಸ್
ಅಂತಿಮ ಪತ್ರಿಕೋದ್ಯಮ,ಮಾನಸಗಂಗೋತ್ರಿ,ಮೈಸೂರು

0 comments:

Post a Comment