ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:11 AM

ಅಸ್ಪೃಶ್ಯರು

Posted by ekanasu

ವೈದೇಹಿ ಕಾದಂಬರಿ...

ರತ್ನ ಅಮ್ಮಾ ಎಂದು ಗಟ್ಟಿಯಾಗಿ ಒಮ್ಮೆ ಕಿರುಚಿದಳು... ಸ್ವಲ್ಪ ಹೊತ್ತಿನಲ್ಲಿಯೇ ಮಗು ಅಳುವ ದನಿ. ಕೂಡಲೇ ಹಾರಿ ಕುಳಿತಳು ಶಾಮಿ...'ಮಗು'!
`ಹೂ . ಗಂಡು ಮಗುವೇ' - ಎಂದ ಶಿವ
`ಅಲ್ಲ ಹೆಣ್ಣು'
`ಪಂಥ?'
`ಪಂಥ; ಎಂತ ಪಂಥ?'
`ನಾ ಗೆದ್ದರೆ ನಿನಗೆ ಗುದ್ದು.'
`ಹೂಂ. ನಾ ಗೆದ್ದರೆ ನಿನಗೆ...\
`ನೀನು ಗೆಲ್ಲುವುದಿಲ್ಲ ಬಿಡು' - ಎಂದ ಶಿವ.


ಅರರೆ ಎಂದು ಶಾಮಿ ಬಾಯೆತ್ತಿ ಜಗಳ ಮುಂದುವರಿಸುವುದರೊಳಗೆ ಪಾರ್ತಕ್ಕ `ಮಣಿ, ಹರಿವಾಣ ಹೊತ್ತು ಹಾಕಲೂ ಹೇಳಬೇಕಾ?' - ಎಂದು ಹೆರಿಗೆ ಮನೆಯಿಂದ ಕೂಗಿದರು.
ಶಿವ ಧಡಕ್ಕನೆ ಎದ್ದು ಹರಿವಾಣ ಹೊತ್ತು ಹಾಕಿದ.
ಚಾವಡಿಯಲ್ಲಿ ಜಾಗರವಿದ್ದ ವಾಸುದೇವರಾಯರು ಒಳಗೆ ಬಂದರು. `ಎಂತ ಮಗು?'
`ಹೆಣ್ಣು'
`ಮಗು ಬಾಣಂತಿ ಹುಶಾರಿದ್ದಾರಲ್ಲ?'
`ಹೂಂ'
`ಗಂಟೆ ನೋಡಿದ್ದೀರಾ?'
`ಹೂಂ. ಹನ್ನೆರಡು ಗಂಟೆ ಮೂವತ್ತೊಂದು ನಿಮಿಷ. ಆದರೆ ಮಿಡ್ ಬಾಯಿಯ ವಾಚಲ್ಲಿ ಹನ್ನೆರಡು ಗಂಟೆ ಮೂವತ್ತೈದು ನಿಮಿಷವಂತೆ.
`ನಮ್ಮ ಗಂಟೆಯೇ ಸರಿ.'
ವಾಸುದೇವರಾಯರು ಮಕ್ಕಳತ್ತ ತಿರುಗಿದರು. `ಇದೇನು ಮಲಗಿಕೊಳ್ಳಿ ಹೋಗಿ. ಮಕ್ಕಳು ರಾತ್ರಿ ನಿದ್ದೆಗೆಡಬಾರದು.'
ಹೇಳಿದ್ದು ಎರಡೇ ವಾಕ್ಯ. ಆದರೆ ಅದರ ತೂಕ?
ಹೂಂ...ಎಂದರು ಇಬ್ಬರೂ. `ಏಯ್ , ನಾನೇ ಗೆದ್ದದ್ದು. ಹೆಣ್ಣು ಮಗು. ನೀನು...'ಅಂತ ಶಾಮಿ ಶಿಕ್ಷೆ ವಿಧಿಸುವುದರೊಳಗೆ , ಶಿವ ಎದ್ದು `ಅಪ್ಪಯ್ಯ ಏನು ಹೇಳಿದರೀಗ? ಮಲಗಬೇಕು ನಾನು. ಮತ್ತೆ ಬಾಯಿತೆರೆದರೆ ಅಪ್ಪಯ್ಯನಿಗೆ ಹೇಳುತ್ತೇನೆ'- ಎಂದ. ಅವರು ಮಲಗಲು ಹೋದಾಗ ಗೌರಮ್ಮ `ನಾನೆಷ್ಟುಸಲ ಹೇಳಿದರೂ ಹೋದವಾ ಅವು? ಅವರು ಹೇಳಿದ ಕೋಡಲೇ ಹೇಗೆ ಬಾಲ ಮಡಚಿಕೊಂಡು ನೆಡೆದವು ಕಾಣಿ. ಶಂಖದಿಂದ ಇಳಿದರೇ ತೀರ್ಥ' - ಎಂದರು.
ಅದಕ್ಕುತ್ತರವಾಗಿ ಪಾರ್ತಕ್ಕ `ಅಂತೂ ಅಮಾಸೆ, ಅಮಾಸೆಬೂದಿ ಎರಡಕ್ಕೂ ಮುಂಚೆಯೇ ಹೆರಿಗೆಯಾಯಿತಲ್ಲ. ಆನೇಗುಡ್ಡೆ ಗಣಪತಿಗೆ ಹರಕೆ ಹೇಳಿಕೊಂಡಿದ್ದೆ' - ಎಂದರು.
`ನಾನೂ ' - ಎಂದರು ಗೌರಮ್ಮ.
`ಹಾಗಾದರೆ ಗಣಪತಿಗೆ ಒಳ್ಳೆಯ ಪಾಡಾವು' ಎನ್ನುತ್ತ ಶಿವ `ಏಯ್ ಸರೋಜಕ್ಕ , ಸರೋಜಕ್ಕ , ರತ್ನಕ್ಕ ಹೆತ್ತಳು. ಹೆಣ್ಣು ಮಗು. ಏಳನ, ಏಯ್. ಮತ್ತೆ ಎಬ್ಬಿಸು ಅಂತ ಹೇಳಿದ್ದು ಯಾಕೆ? ಈಗ ಅಲ್ಲಾಡಿಸಿದರೂ ಏಳಲಿಕ್ಕಾಗುವುದಿಲ್ಲ ನಿಂಗೆ'- ಎಂದು ಎಷ್ಟು ಪಿಸುಗುಟ್ಟಿದರೂ ಸರೋಜ ಏಳಲಿಲ್ಲ. ಮುಂಚಿನಿಂದಲೂ ಮಲಗಿದರೆ ಇತ್ತಿನ ಧಾತಿ ನಿದ್ದೆ ಅವಳದು. ಪುಟ್ಟ ಜಯ ಎಲ್ಲ ಗಾಢ ನಿದ್ದೆಯಲ್ಲಿದ್ದರು.
ಶಾಮಿಗೆ ಮಲಗಿದರೆ ನಿದ್ದೆ ಬರಲೊಲ್ಲದು.. ಎದ್ದು ಬಂದು ಅಮ್ಮಾ, ನಾ ಮಗುವನ್ನು ಕಾಣಬೇಕು ' - ಎಂದಳು.

- ವೈದೇಹಿ.

0 comments:

Post a Comment