ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಅದೊಂದು ಸಂಜೆ ಏಕಾ-ಏಕಿ ನಾಯಿಗಳು ಜೋರಾಗಿ ಬೊಗಳಲಾರಂಭಿಸಿದವು.ವೈಟಿಯಂತು ಯಾರೋ ಅದರ ಆಜನ್ಮ ವೈರಿಯನ್ನು ಕಂಡಂತೆ ಎತ್ತರ-ಎತ್ತರಕ್ಕೆ ಹಾರಿ ಬೊಗಳಲಾರಂಭಿಸಿತು.ಅಮ್ಮನಂತು ಮೂರನೇ ಕಣ್ಣಿರುವಂತೆ, ಹಾಳಾದ್ದು ಹಾವು ಬಂದಿರಬೇಕು, ವೈಟಿ ಸುಮ್ನಿರೊ ಎಂದರು. ನನಗೆ ಯಾವಗಲು ಕೂತುಹಲ ಹುಟ್ಟುವುದೆ ಮಲೆನಾಡುಗಳಲ್ಲಿ ಪ್ರತಿಯೊಂದು ಪ್ರಾಣಿ ಮಾಡುವ ಸದ್ದಿಗು, ಕಾರಣವನ್ನು ಇಲ್ಲಿನ ಜನರು ತಲೆಯ ಮೇಲೆ ಹೊಡೆದಂತೆ ಊಹಿಸಿಕೊಳ್ಳುವುದು, ಇದು ಹೇಗೆ ಸಾದ್ಯ ಎಂದು?. ಅದಕ್ಕೆ ಕಾರಣ ನಮ್ಮ ಮೋಟಜ್ಜಿಯಂತಹ ಕೂತುಹಲಭರಿತ ವ್ಯಕ್ತಿಗಳಾಗಿರಬಹುದು. ಮೋಟಜ್ಜಿ ಎಂದು ಮನದಲ್ಲಿ ಅಂದುಕೊಳ್ಳುವಷ್ಟರಲ್ಲಿ ಓಯ್! ಅಮ್ಮ ಎಂದು ಅಡುಗೆಮನೆಯ ಕಿಟಕಿಯ ಬಳಿ ಮೋಟಜ್ಜಿಯ ಆಗಮನವಾಗಿಯೆ ಹೋಯಿತು.ಅಲ್ಲ ಈ ಹಾಳು ನಾಯಿಗಳಿಗೆ ಇವಕ್ಕೆ ಏನಾಗಿದೆ ಅಂಥಾ?ಆ ಪೆರರ್ ಮನೆ ಬಿಳಿನಾಯಿಗೆ ಹೆಂಗೆ ಕಚ್ಚಿವೆ ಒಂದುಸಾರಿ ನೋಡಿ ಇಲ್ಲಿ ಅಂಥಾ ರಕ್ತಸಿಕ್ತವಾದ ಅದರ ಕಿವಿಯನ್ನು ಎತ್ತಿ ತೋರಿಸಿದಳು, ಅಮ್ಮ, ಇದಕ್ಕೇನು ಬಂತೆ ಅಂಥಾ ರೋಗ? ಆ ವೈಟಿದು ಯಾಕೋ ಜಾಸ್ತಿಯಾಯ್ತು, ಕಳೆದಸಾರಿ ಅದನ್ನ ರಂಗ ಹುಚ್ಚಂಗಿ ರಸ್ತೆಗೆ ಬಿಟ್ಟು ಬಂದಿದ್ದ ಹಾಳಾದ್ದು! ರಂಗ ಮನೆಗೆ ಬಂದು 2 ಗಂಟೆಯಾಗಿರಲಿಲ್ಲ,ಆಗಲೇ ಬಂದು ಅಂಗಳದಲ್ಲಿ ನಿಂತಿತ್ತು. ಅಂಥಾ ವೈಟಿಪುರಾಣ ತೆಗೆದೆ ಬಿಟ್ಟರು. ಅಮ್ಮನ ಮಾತಿಗೆ ಕಿವಿಗೊಡುತ್ತ ಹಾಗೆ ಅಲ್ಲೇ ತೋಟದಲ್ಲಿದ್ದ ಯಾವ್ಯಾವುದೊ ಬಳ್ಳಿಯ ಚಿಗುರು ಚಿವುಟಿ, ಅದನ್ನ ಅಂಗೈಯಲ್ಲಿ ಹೊಸಕಿ ಅದರ ರಸವನ್ನ ನಾಯಿಯ ಗಾಯಕ್ಕೆ ಹಿಂಡುತ್ತಿದ್ದಳು.ಪಾಪ ನೋವಾಗ್ತ ಇರಬೇಕು ಅಂಥಾ ಅವಳೆ ಅಂದುಕೊಂಡಳು.


ಮೋಟಜ್ಜಿಯೇ ಹಾಗೆ. ಹಂಚಿಕಡ್ಡಿಯಂತಹ ಸಣಕಲು ಶರೀರ, ತುಸು ಕಪ್ಪೇ ಎನ್ನುವಂತಹ ಬಣ್ಣ, ಎಲೆಅಡಿಕೆ, ಹೊಗೆಸೊಪ್ಪು ಜಗಿದು ಬಣ್ಣ ಹಿಡಿದಿರುವ ಹಲ್ಲುಗಳು, ಪ್ರತಿಬಾರಿ ಅಮ್ಮ ಗೌರಿಹಬ್ಬಕ್ಕೆ ಮಾಳಹಬ್ಬದಲ್ಲಿ ಕೊಡುವ ಸೀರೆಗಳೆ ಅವಳ ಆಸ್ತಿ. ಅದನ್ನು ದೌಟಿಗೆ ಕಟ್ಟಿಮೊಣಕಾಲವರೆಗು ಬರುವಂತೆ ಮಾಡುತ್ತಿದ್ದಳು. ಇನ್ನು ಕಾಲಿಗಿಂತ ಅವಳು ಧರಿಸುವ ಚಪ್ಪಲಿಯ ಬಗ್ಗೆ ಹೆಚ್ಚು ಅಸ್ಥೆ ವಹಿಸುತ್ತಿದ್ದಳು.ನೋಡಿ ಅಮ್ಮ ಮೆಟ್ಟು ದಾಟುವಾಗ ಇದರ ಅಂಚು ಕಿತ್ತೆ ಹೋಯ್ತು ಅಂಥಾ ಅದನ್ನ ತಿರುಗಿಸಿ ಮುರುಗಿಸಿ ನೋಡುತ್ತಿದ್ದಳು.ಅದೇ ಕಾಲಿಗೆ ಕಿತ್ತಳೆ ಮುಳ್ಳು ಚುಚ್ಚಿ, ಜಿಗಣೆ ಕಚ್ಚಿದರು ಅಷ್ಟಾಗಿ ತಲೆಗೆ ಹಾಕಿಕೊಳ್ಳುತ್ತ ಇರಲಿಲ್ಲ.ನನಗು ಅಕ್ಕನಿಗು ಅವಳು ಮುಂದಿರುವ ಒಂದು ಅದ್ಭುತವೆ ಸರಿ! ಏಕೆಂದರೆ ಮೋಟಜ್ಜಿ ಜೊತೆ ತೋಟಕ್ಕೆ ಹೋದರೆ, ಅದೆಷ್ಟು ವಿಸ್ಮಯ, ವಿಚಿತ್ರಗಳನ್ನು ಪರಿಚಯಿಸುತ್ತಿದ್ದಳು. ಕಿತ್ತಳೆ ಹಣ್ಣಿಗೆ ದುದ್ದಗೆ ಹೊಡೆದು ಬೀಳಿಸುತ್ತಿದ್ದಳು, ಈಚಲು ಬಳ್ಳಿ ಕಿತ್ತು ತುದಿಯನ್ನು ತಿನ್ನಲು ಕೊಡುತ್ತಿದ್ದಳು. ಕೆಂಬೂತವನ್ನು ಕಂಡರೆ ಜೋರಾಗಿ ಕೇರೆ ಹಾವು ಬಂತು ಮರೆಯಾಗು ಅಂಥಾ ಕೂಗಿ ಹೇಳಿ ಎನ್ನುತ್ತಿದ್ದಳು .

ಅದು ಯಾಕೆ ಮೋಟಜ್ಜಿ ಅಂದರೆ ಅವಳು ಕೊಡುತ್ತಿದ್ದ ಉತ್ತರವು ಅಷ್ಟೇ ಸ್ವಾರಸ್ಯಕರವಾಗಿರುತಿತ್ತು. ನನಗು ಗೊತ್ತಿಲ್ಲ ಕಣಿ ನಮ್ಮ ಅವ್ವ ನಮಗೆ ಹೇಳ್ತಾಯಿದ್ದಳು ಅಂಥಾ ಹೇಳಹೋಗಿ ಸಣ್ಣಮಕ್ಕಳು ಅದನ್ನೆಲ್ಲ ಕೇಳಬಾರದು ಅಂಥಾ ನಿಷ್ಟುರವಾಗಿ ಹೇಳಿ ಸುಮ್ಮನಾಗುತ್ತಿದ್ದಳು.ಅಮ್ಮನಿಗಂತು ಮೋಟಜ್ಜಿ ಒಬ್ಬಳು ಅದ್ಭುತ ಸ್ನೇಹಿತೆ! ನಮ್ಮ ಮನೆಯಲ್ಲಿ ಮೋಟಜ್ಜಿ ಹೇಗೆಂದರೆ, ಬೆಳಗು, ರಾತ್ರಿ ಇವೆಲ್ಲ ಎಷ್ಟು ಸಹಜವೊ ಹಾಗೇ ಮೊಟಜ್ಜಿಯ ಇರುವಿಕೆ ಇರಬೇಕಾಗಿತ್ತು. ಕೊಟ್ಟಿಗೆಯಲ್ಲಿ ಇರುವ ದನಗಳು ಏನೆನು? ಅವಗಳ ಸ್ವಭಾವವೇನು? ಅವೆಲ್ಲವು ಅವಳ ನಾಲಿಗೆಯ ತುದಿಯಲ್ಲಿರುತ್ತಿದ್ದವು. ಅದಕ್ಕೆ ಸರಿಯಾಗಿ ಅವುಗಳಿಗೆ ಹೆಸರು ಜೋಡಿಸಿರುತ್ತಿದ್ದಳು. ಆ ಕಲ್ಲಾರೆ ಎಮ್ಮೆ ಭಾರಿ ತುಡುವೆ ಅಮ್ಮ, ಆ ಹುಂಡಿ ನನಗೆ ಬಾಲದಲ್ಲಿ ಬಡಚಿಬಿಡ್ತು ಅದಕ್ಕೆ ಹುಲ್ಲು ನೀರು ಏನು ಹಾಕಬಾರದು ಅಂಥಾ ಪಾಠ ಕಲಿಸುವ ಧಾಟಿಯಲ್ಲಿ ಮಾತನಾಡುತ್ತಿದ್ದಳು. ಮೋಟಜ್ಜಿಗೆ ಕೊಟ್ಟಿಗೆಯಲ್ಲಿರುವ ಹಸು, ಎಮ್ಮೆ ಗಬ್ಬವಾದರಂತು ಅವಳು ಶುಶ್ರೂಷಕಿಯೇ ಆಗಿಹೋಗುತ್ತಿದ್ದಳು. ಅದಕ್ಕೆ ವಿಶೇಷ ಆರೈಕೆ ಮಾಡುವುದು, ತೋಟದ ನೆರಳಿನ್ನಲ್ಲಿ ಮೇಯಿಸುವುದು, ಹಸುವಿಗೆ ಅಲ್ಲಿಗೆ ನೀರು ಕೊಡುವುದು, ಮೈ ತೊಳೆಯುವುದು. ಒಮ್ಮೆ ಮೋಟಜ್ಜಿ ಶಿರಹ ತೋಟಕ್ಕೆ ಕಾಚುಪುಳಿ ಕಾಯಿಹೆರಕಲು ಹೋಗಿದ್ದಳು, ಅವಳು ಬರುವುದರೊಳಗೆ ಚೌಡ್ಲು ಎಮ್ಮೆ ಆಗಾ ತುಂಬು ಗರ್ಭಿಣಿಯಾಗಿತ್ತು.ಅದನ್ನ ರಂಗಜ್ಜ ಎಲ್ಲಾ ದನಗಳೊಟ್ಟಿಗೆ ಬಿಟ್ಟುಬಿಟ್ಟಿದ್ದ ಸುಮಾರು ಸಂಜೆಯ ಹೊತ್ತಿಗೆ ಮೋಟಜ್ಜಿ ಬರುವುದಕ್ಕು, ರಂಗಜ್ಜ ಅಮ್ಮ ಎಂಥಾ ಕೆಲಸ ಆಯ್ತು ಎಮ್ಮೆ ದಡಾರ್ ಗುಂಡಿಗೆ ಬಿದ್ದು ಅಲ್ಲೇ ಕರು ಹಾಕಿದೆ ಅಂಥಾ ವಿಷಯ ತಂದ, ಮೋಟಜ್ಜಿ ಹುಳಿ ಚೀಲವನ್ನು ಅಲ್ಲೇ ಒಗೆದು ಅಯ್ಯೋ ದೇವರೆ ಅಂಥಾ ಹೊರಟೆ ಹೋದಳು ,ಕೊನೆಗೆ ಎಲ್ಲರು ಹರಸಾಹಸ ಮಾಡಿ ಎಮ್ಮೆಯನ್ನು ಮೇಲಕ್ಕೆ ಎತ್ತಿದ್ದರು.

ಮೋಟಜ್ಜಿಗೆ ರಂಗಜ್ಜನ ಮೇಲೆ ಕೆಟ್ಟ ಕೋಪ ಬೇರೆ ಇತ್ತಕಡೆ ತನ್ನ ಪ್ರೀತಿಯ ಎಮ್ಮೆ ಹಡೆದದ್ದಕ್ಕೆ ಸಂತಸ ಬೇರೆ ಅದರ ಬಾಣಂತನ ಶುರುವಿಟ್ಟುಕೊಂಡಳು.ಅದಕ್ಕೆ ಸ್ನಾನ ಮಾಡಿಸುವುದು. ಒಣಹುಲ್ಲು ಹಾಕಿ ಮಲಗಿಸುವುದು, ಬಲ ಸಾಲ್ತಾಯಿಲ್ಲ ಎಳೆಗರು ಎಂದು ಹೇಳಿ ಎತ್ತಿ ನಿಲ್ಲಿಸುವುದು. ಅಮ್ಮನಿಗೆ ಮೊಸರುಬಾನ ಮಾಡಲು ಹಾಲು ಸಂಗ್ರಹಿಸಿಕೊಡುವುದು. ಹೀಗೆ ಮನೆಯಲ್ಲಿ ಯಾವ ಸಾರು ಎಂಬುದನ್ನು ಮೋಟಜ್ಜಿ ಸಂಗ್ರಹಿಸಿ ತರುತ್ತಿದ್ದ ಕಾಯಿಪಲ್ಲೆ, ಸೊಪ್ಪುಗಳು ನಿರ್ಧರಿಸುತ್ತಿದ್ದವು. ಕೆಸುವಿನ ಎಲೆಗಳನ್ನು ಹೆಕ್ಕಿ ಕೊಯ್ದು ಅದನ್ನು ಗಂಟು ಕಟ್ಟುತ್ತ ಅವರಿವರ ಮನೆ ವಿಚಾರಗಳ ಗಂಟು ಬಿಚ್ಚುವುದರಲ್ಲಿ ಮೋಟಜ್ಜಿ ನಿಸ್ಸೀಮಳು.ಅಲ್ಲೆ ಅಡುಗೆ ಮನೆಯ ಪಕ್ಕ ಇಬ್ಬರು ಕೂತು ಹರಟುವುದು ಅವರ ದೈನಂದಿನ ಜೀವನದ ಭಾಗವೆ ಆಗಿ ಹೋಗಿತ್ತು. ಈ ವಾರ ಸಂತೆಗೆ ಹೋಗಬೇಕು ಅಮ್ಮಾ ಮನೆಯಲ್ಲಿ ಎಲ್ಲಾ ಸಾಮಾನು ಖಾಲಿಯಾಗಿವೆ ,ನಿಮ್ಮ ಕುಕ್ಕನಿಗೆ ಕುಡಿಯೊದು ಬೀಡಿ ಸೇದೊದು ಇವೆರಡು ಇದ್ದರೆ ಆಯ್ತಲ್ಲ ಮನೆ ನಡೆಯೊದು ಹೇಗೆ ಹೇಳಿ ಅಂಥಾನೆ ಅದೆಷ್ಟುವರ್ಷ ಗಳನ್ನು ಕಳೆದಿಲ್ಲ ಅವಳು?.

ಅಮ್ಮ ಯಾವಗಲು ಹೇಳ್ತಾ ಇರ್ತಾರೆ ಅವಳು ತುಂಬಾ ಗಟ್ಟಿಗಿತ್ತಿ ,ಅವಳು ಆಗಿದ್ದಕ್ಕೆ ಕೂಲಿ-ನಾಲಿ ಮಾಡಿ ಸಂಸಾರ ನಡೆಸಿದ್ದಾಳೆ ಆ ಮೂರು ಹೆಣ್ಣು ಮಕ್ಕಳನ್ನು ದಡ ಸೇರಿಸೊದರಲ್ಲಿ ಅವಳು ಜೀವನ ಕಂಡಿದ್ದಾಳೆ ಅಂಥಾ, ಆದರು ಅವಳು ವಿಪರೀತ ಸ್ವಾಬಿಮಾನಿ ಯಾರ ಬಳಿಯು ಕೆಟ್ಟದ್ದು ಅನ್ನಿಸಿಕೊಂಡವಳಲ್ಲ, ಅವಳು ಉಳುಕು ತೆಗೆಯುವುದರಿಂದ ಹಿಡಿದು ಇಸುಬಿಗೆ ಮದ್ದು ನೀಡುವುದು ಇದರಲೆಲ್ಲ ಸಿಧ್ದ ಹಸ್ತಳು, ಅದನ್ನ ಮಾತಿನ ಮದ್ಯೆ ಮೋಟಜ್ಜಿ ಹೇಳುವುದು ಇದೆ ನಾನು ಮದ್ದು ಮಾಡಿಯೆ ಚಂಬೆ ಸಾಹುಕಾರರ ಕಾಲು ಸರಿ ಹೋಗಿದ್ದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತಿರುತ್ತಾಳೆ.
ಒಮ್ಮೆ ಮೋಟಜ್ಜಿಯ ಮನೆಯ ಕಡೆ ಹಾಗೆ ಸುತ್ತಾಡುತ್ತ ಹೋದಾಗ ಪುಟ್ಟದೊಂದು ತುಳಸಿಕಟ್ಟೆ ಎದುರಾಯಿತು.ಅದರಲ್ಲಿ ಅರ್ಧ ಉರಿದು ಗಾಳಿಗೆ ನಂದಿ ಹೋಗಿದ್ದ ಅಗರಬತ್ತಿಯೊಂದಿತ್ತು.ಮೋಟಜ್ಜಿಯ ಸುಳಿವು ಕಾಣಲೆ ಇಲ್ಲ, ನಾನೇ ಬಾಗಿಲು ತಳ್ಳಿ ಒಳಗೆ ಇಣುಕಿದರೆ,ಮನೆಯೆಲ್ಲಾ ಹೊಗೆ ಹಾಕಿಕೊಂಡು ಕೊಳವೆಯಿಂದ ಓಲೆ ಊದುತ್ತಿದ್ದಳು.ಏನು ಅಡುಗೆ ಜೋರಾ? ಎಂದರೆ ಮಧುಬಾನ ಮಾಡುತ್ತಿದ್ದೇನೆ ಬನ್ನಿ ತಿನ್ನುವಿರಂತೆ ಎಂದಳು.ಎಷ್ಟು ಬೇಡಾ ಎಂದರು ಬಲವಂತ ಮಾಡಿ ತಿನ್ನಿಸಿದಳು. ಬೆಲ್ಲದ ಘಮ ಘಮ ಸವಿಯಲು ಮೋಟಜ್ಜಿಯಷ್ಟೆ ಚೆಂದವಾಗಿತ್ತು.ಇನ್ನು ಹೊರಡುತ್ತೇನೆ ಎಂದಾಗ ಇರಿ ಒಬ್ಬರೆ ಹೋಗಬೇಡಿ ನಾನು ಬರ್ತೀನಿ ಎಂದು ಬಾಗಿಲೆಳೆದುಕೊಂಡು ಬಂದೇ ಬಿಟ್ಟಳು. ಮೋಟಜ್ಜಿಯ ಪ್ರೀತಿಯೇ ಹಾಗೇ ತೀರ ಮನದಾಳಕ್ಕೆ ಇಳಿಯುವಂತದ್ದು, ಅಲ್ಲೆ ಉಳಿಯುವಂತಾದ್ದು.

ಆ ಮನೆಯ ಕಾಲು ದಾರಿ ಯಾವತ್ತಿಗೂ ಮೋಟಜ್ಜಿಗೆ ಮೀಸಲಾದಂತೆ ಆ ಮನೆಯ ಸುತ್ತ ತೋಟದ ಒಳಗೆ, ಕೆರೆಯ ಬಳಿ, ಎಲ್ಲಿ ನೋಡಿದರಲ್ಲಿ ಅವಳೆ ಕಾಣಸಿಗುತ್ತಾಳೆ. ಅವಳಿಗಾಗೆ ಅವೆಲ್ಲ ನಿರ್ಮಿತವಾದಂತೆ, ಮೋಟಜ್ಜಿಯ....ಗೈರುಹಾಜರಿಯಲ್ಲಿ ಸುರಿವ ಮಳೆಯು ಚೆನ್ನ ಎನ್ನಿಸುವುದಿಲ್ಲ, ಬಿರುಬಿಸಿಲು ಕೂಡಾ...ಯಾಕೆಂದರೆ ಪ್ರತಿಯೊಂದಕ್ಕು ಹಿನ್ನುಡಿ..ಮುನ್ನುಡಿ ಹೇಳದಿದ್ದರೆ ಮಲೆನಾಡು ಬರಿ ಮಳೆಯಷ್ಟೆ!

ಉಷಾ ಜಿ.ಎಸ್
ಪತ್ರಿಕೋದ್ಯಮ ಎಂ.ಎ, ದ್ವಿತೀಯ ವರ್ಷ,ಮಾನಸ ಗಂಗೋತ್ರಿ
ಮೈಸೂರು.


0 comments:

Post a Comment