ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಮೈಕಲ್ ಜಾಕ್ಸನ್: ಬಣ್ಣದ ಬದುಕಿನ ವಿವರ್ಣ ಅಂತರಂಗ

ಆತ ಮುಖವಾಡ ಧರಿಸಿ ಬೀದಿಗಳಲ್ಲಿ ತಿರುಗಾಡುತ್ತಾನೆ. ತನ್ನ ಚಹರೆಯನ್ನು ಆಗಾಗ್ಗೆ ಬದಲಿಸಿಕೊಳ್ಳುತ್ತಾನೆ. ಮನೆಯಲ್ಲೂ ಮೇಕಪ್ ಹಾಕಿ ಕುಳಿತುಕೊಳ್ಳುತ್ತಾನೆ. ಪ್ರಾಯ ನಲವತ್ತಾದರೂ ಮಕ್ಕಳು ಆಡುವ ಮೋಟಾರು ಕಾರುಗಳಲ್ಲಿ ಆಡುತ್ತಾನೆ. ಶಾಪಿಂಗ್ ಹೋದರೆ ಬಿಲಿಯನ್ಗಟ್ಟಲೆ ಮೌಲ್ಯದ ಆಟಿಕೆಗಳನ್ನೇ ತರುತ್ತಾನೆ. ವೇದಿಕೆಗೆ ಬಂದರೆ ತನ್ನ ಅದ್ಭುತ ಪ್ರತಿಭೆಯಿಂದ ಜನರನ್ನು ಹುಚ್ಚೆಬ್ಬಿಸುವಂತೆ ಮಾಡುತ್ತಾನೆ. ಕೋಟಿಗಟ್ಟಲೆ ಜನರೆದುರು ನರ್ತಿಸುವ ಇವನು ಜುಜುಬಿ ಸಂದರ್ಶನಗಳಲ್ಲಿ ಕ್ಯಾಮೆರಾ ಬೆಳಕಿನೆದುರು ತಡವರಿಸುತ್ತಾನೆ. ರಾಷ್ಟ್ರಪತಿಗಳಂತಹ ಗಣ್ಯರೊಡನೆ ಊಟ ಮಾಡುತ್ತಾನೆ. ಮನನೋಯಿತೆಂದರೆ ಹೆಣ್ಣಿನಂತೆ ಗಳಗಳನೆ ಅಳುತ್ತಾನೆ. ಸಾಲ ಬೆಟ್ಟದಷ್ಟಿದ್ದರೂ ರಾತ್ರಿ ಹಗಲೆನ್ನದೆ ತುಪ್ಪದೂಟವನ್ನೇ ಮಾಡುತ್ತಾನೆ. ಕೊನೆಯ ಬಾರಿ ವೇದಿಕೆಗೆ ಬರಲಿದ್ದೇನೆ ಎಂದು ಒಂದು ದಿನ ಒಮ್ಮೆಲೇ ಹೊರಬಂದು ಎಂದಿನಂತೆ ತಡವರಿಸಿಯೇ ವಕ್ಕರಿಸುತ್ತಾನೆ. ಕೊನೆಗೆ ಎಲ್ಲರೂ ನೋಡುತ್ತಿದ್ದಂತೆಯೇ ಪ್ರಾಯವಲ್ಲದ ಪ್ರಾಯದಲ್ಲಿ ಇಹಲೋಕ ತ್ಯಜಿಸಿ ಹಲವು ನಿಗೂಢ ಸತ್ಯಗಳನ್ನೂ ಮರೆಮಾಚಿ ತನ್ನೊಂದಿಗೆ ಒಯ್ದು ಇತಿಹಾಸವಾಗುತ್ತಾನೆ.


ಪಾಪ್ ದೊರೆ ಮೈಕಲ್ ಜಾಕ್ಸನ್ ಬಗ್ಗೆ ಹೇಳಲು ಹೊರಟರೆ ಇಂತಹ ವಿಶೇಷ ಪೀಠಿಕೆಯೇನೂ ಬೇಕಾಗಿಲ್ಲ. ಆದರೆ ಯಾವ ದೃಷ್ಟಿಕೋನದೊಂದಿಗೆ ಹೇಳಲು ಹೊರಟಬಯಸಿದ್ದೇನೆ ಎಂದು ನೀವು ಕೇಳಬಯಸಿದರೆ ಮೈಕಲ್ನಂತೆ ಸದ್ಯದ ಮಟ್ಟಿಗೆ ನಿರ್ಲಿಪ್ತಭಾವದಲ್ಲೇ ಎಂದು ಹೇಳಿದರೆ ಒಳಿತು. ಬಹುಶಃ ಅದೇ ಅವನ ಬದುಕಿಗೆ ಬರಹದ ರೂಪದಲ್ಲಿ ಕಿಂಚಿತ್ ನ್ಯಾಯವನ್ನು ದೊರಕಿಸಬಹುದು ಅನ್ನಿಸುತ್ತದೆ.

29 ಆಗಸ್ಟ್ 1958 ರಲ್ಲಿ ಜೋಸೆಫ್ ಮತ್ತು ಕ್ಯಾಥರೀನ್ ದಂಪತಿಗೆ ಜನಿಸಿದ ಮೈಕಲ್ ಜೀವನದುದ್ದಕ್ಕೂ ಇಟ್ಟ ಮೈಲುಗಲ್ಲುಗಳಿಗೆ ಲೆಕ್ಕವೇ ಇಲ್ಲ ಎನ್ನಬಹುದು. ಸಹೋದರರೊಂದಿಗೆ ಒಂಭತ್ತನೆಯ ವಯಸ್ಸಿನಲ್ಲೇ 'ಜಾಕ್ಸನ್ ಫೈವ್' ಮ್ಯೂಸಿಕಲ್ ಬ್ಯಾಂಡ್ನಿಂದ ಸ್ಟಾರ್ಗಿರಿಯನ್ನು ಪಡೆದು 'ದ ಕಿಂಗ್ ಆಫ್ ಪಾಪ್' ಎಂದು ಕರೆಸಿಕೊಳ್ಳುವವರೆಗೆ ಮೈಕಲ್ ಹಿಂತಿರುಗಿ ನೋಡಿದ್ದೇ ಇಲ್ಲ. ನಾಲ್ವರು ಸಹೋದರರು 'ಜಾಕ್ಸನ್ ಫೈವ್' ಬ್ಯಾಂಡ್ನ ಭಾಗವಾಗಿದ್ದರೂ ಕೂಡ ಮೈಕಲ್ನ ವರ್ಚಸ್ಸಿನಿಂದ ತೆರೆಮರೆಗೆ ಸರಿದರು. ಮುದ್ದು ಮುಖದ ಹತ್ತರ ಪೋರನ ಅಮೋಘ ಕಂಠಸಿರಿಯ ಜೊತೆ ಮೈಯಲ್ಲಿ ಎಲುಬೇ ಇಲ್ಲವೆನ್ನುವಂತಹ ಮಟ್ಟಿಗೆ ಸರಾಗವಾಗಿ ನರ್ತಿಸುತ್ತಿದ್ದ ಆಗಲೇ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ತಾನು ಬಲವಾಗಿ ಕಾಲೂರುವ ಸೂಚನೆಯನ್ನು ನೀಡಿತ್ತು. ಇಪ್ಪತ್ತರ ಸುಮಾರಿನಲ್ಲಿ ಬ್ಯಾಂಡ್ನ ಹಂಗನ್ನು ಬಿಟ್ಟು ಸ್ವಂತವಾಗಿ ಮ್ಯೂಸಿಕ್ ಆಲ್ಬಮ್ ಗಳನ್ನು ಹೊರತೆಗೆಸಿಲು ಆರಂಭಿಸಿದ ನಂತರವಂತೂ ಜಗತ್ತಿನೆಲ್ಲೆಡೆ ಒಂದು ಕೈಗೆ ಕೈಗವಸು ಹಾಕಿಕೊಂಡ ಈ ಹುಡುಗನದ್ದೇ ಕಾರುಬಾರು. ಸಂಗೀತ ಲೋಕದ ಇತಿಹಾಸದಲ್ಲೇ ಕಂಡು ಕೇಳರಿಯದ ದಾಖಲೆಗಳನ್ನು ಮಾಡಿದ 'ಥ್ರಿಲ್ಲರ್' ಆಲ್ಬಮ್, ಬೆನ್ನು ಹುಡುಕಿಕೊಂಡು ಬಂದ ಗ್ರಾಮಿ, ಎಂಟಿವಿ ಅವಾಡ್ರ್ಸನಂತಹ ರಾಶಿಗಟ್ಟಲೆ ಪುರಸ್ಕಾರಗಳು, ಜಗತ್ತಿನಲ್ಲೆಲ್ಲಾ ಸಂಚಲನ ಮೂಡಿಸಿದ ಪಬ್ಲಿಸಿಟಿ ಗಿಮಿಕ್ಗಳು ಹೀಗೆ ಮುಂದೆ ನಡೆದ ಯಶೋಗಾಥೆಗಳೆಲ್ಲಾ ಇಂದು ಇತಿಹಾಸ. ಇವೆಲ್ಲದರ ನಡುವೆ ಅಲ್ಲೊಂದು ಬೇರೆಯೇ ಜಗತ್ತಿತ್ತು. 'ಮೈಕಲ್ ನ ಜಗತ್ತು', ಕ್ಯಾಮೆರಾಗಳಿಂದ, ಅಭಿಮಾನಿಗಳಿಂದ ತನ್ನನ್ನು ದೂರವಿರಿಸಿಕೊಂಡ ಒಂದು ಜಗತ್ತು. ಮೇಕಪ್ ರೂಮಿನ ಹಿಂದಿರುವ ಜಗತ್ತು. ಭಯಾನಕ ನಂಬಲಸಾಧ್ಯ ಸತ್ಯಗಳನ್ನು ತನ್ನೊಳಗೆ ಹುದುಗಿಸಿಕೊಂಡ ನಿಗೂಢ ಜಗತ್ತು.


ಸಾಮಾನ್ಯವಾಗಿ ಕೌತುಕಗಳ ಆಗರವಾಗಿರುವ ಬಣ್ಣದ ಜಗತ್ತಿನ ಅಂತರಂಗ ಬೇರೆಯೇ ಮುಖವನ್ನು ಹೊಂದಿರುವುದು ಮಾತ್ರ ವಿಚಿತ್ರ ಮತ್ತು ವಿಪರ್ಯಾಸ. ಜಗತ್ತಿನಾದ್ಯಂತ ಕೋಟಿ ಕೋಟಿ ಅಭಿಮಾನಿ ಬಳಗವನ್ನು ಹೊಂದಿದ್ದ, ವೇದಿಕೆಗೆ ಬಂದರೆ ತನ್ನ ಅದ್ಭುತ ನಟನಾ ಸಾಮರ್ಥ್ಯದಿಂದ ಅಭಿಮಾನಿಬಳಗವನ್ನು ಹುಚ್ಚೆಬ್ಬಿಸುವಂತೆ ಮಾಡುತ್ತಿದ್ದ ಪಾಪ್ ದೊರೆ ಮೈಕಲ್ ಜಾಕ್ಸನ್ ಅಸಲಿಗೆ ಏಕಾಂಗಿಯಾಗಿದ್ದ. ತನ್ನ ಒಂಭತ್ತನೇ ಪ್ರಾಯಕ್ಕೇ ವಿಶ್ವಪ್ರಸಿದ್ಧನಾದರೂ ಕೊನೆಯವರೆಗೂ ಕರಾಳ ಏಕಾಂಗಿತನ ಅವನನ್ನು ಆವರಿಸಿಕೊಂಡಿತ್ತು. ನಾಚಿಕೆಯೇ ಮೂರ್ತಿವೆತ್ತಂತಿದ್ದ ಆತ ರಾತ್ರಿಯ ಹೊತ್ತಿನಲ್ಲಿ ಗ್ಯಾರಿ ಇಂಡಿಯಾನಾ ನಗರದ ಓಣಿಗಳಲ್ಲಿ ಏಕಾಂಗಿಯಾಗಿ ನಡೆದು ಹೋಗುತ್ತಿದ್ದನಂತೆ ಯಾರಾದರೂ ಮಾತನಾಡಲು ಸಿಗುತ್ತಾರೇನೋ ಎಂಬ ಹುಡುಕಾಟದಲ್ಲಿ. (ಅವನಂತೆಯೇ 'ಜಾಕ್ಸನ್ ಫೈವ್' ಬ್ಯಾಂಡ್ನಿಂದ ಪ್ರಖ್ಯಾತರಾಗಿದ್ದ ಆತನ ಸಹೋದರರು ಮತ್ತು ತಂದೆ ಆ ಹೊತ್ತಿಗೆ ಅಭಿಮಾನಿ ಹೆಂಗೆಳೆಯರ ಜೊತೆ ರೆಸಾರ್ಟ್ ಗಳಲ್ಲಿ ಚಕ್ಕಂದ ಹೊಡೆಯುತ್ತಿದ್ದರೆ, ಯೆಹೋವನ ಆರಾಧಕಳಾಗಿದ್ದ ಅವನ ತಾಯಿ ಮನೆಯಲ್ಲಿಯೇ ಇದ್ಯಾವುದರ ಅರಿವಿಲ್ಲದೆಯೇ ನಾಮಸ್ಮರಣೆ ಮಾಡುತ್ತಿದ್ದಳು). ಇನ್ನು ತಂದೆಯ ಬಗ್ಗೆ ಹೇಳುವುದಾದರೆ ಬಾಲ್ಯದಲ್ಲಿ ತನ್ನನ್ನು ಕಟುವಾಗಿ ನಡೆಸಿಕೊಂಡ ಅತಿಯಾದ ನೋವಿನ ಜೊತೆ ವಯಸ್ಕನಾಗುತ್ತಿದ್ದಂತೆ ತನ್ನ ಪ್ರಸಿದ್ದಿಯನ್ನು ಸ್ವಂತಲಾಭಕ್ಕೆಂದು ಬಳಸಿಕೊಂಡಿದ್ದರ ಬಗ್ಗೆ ಅವನಿಗೆ ತೀವ್ರ ಅಸಮಧಾನವಿತ್ತು. ಓಪ್ರಾ ವಿನ್ಫ್ರೇ ನಡೆಸಿಕೊಡುವ ವಿಶ್ವವಿಖ್ಯಾತ ಟಾಕ್ ಶೋನಲ್ಲಿ ಒಮ್ಮೆಯಂತೂ, 'ಆ ಬಾಲ್ಯದ ದಿನಗಳಲ್ಲಿ ತಂದೆ ಜೋಸೆಫ್ ಎದುರಿಗೆ ಬಂದರೂ ನನಗೆ ತಲೆಸುತ್ತು ಮತ್ತು ವಾಂತಿ ಬರುತ್ತಿದ್ದವು' ಎಂದು ಆತ ಹೇಳುತ್ತಾ ಬಿಕ್ಕುತ್ತಾನೆ.

ಹರೆಯದ ದಿನಗಳಲ್ಲಿ ಮುಖತುಂಬಾ ಹರಡಿಕೊಂಡಿದ್ದ ಮೊಡವೆಗಳು ಅವನನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿದ್ದವು. ಯಾವಾಗಲೂ ಕನ್ನಡಿಯ ಮುಂದೆ ದಿನಗಳನ್ನು ಕಳೆಯುತ್ತಿದ್ದ ಕೃಷ್ಣವರ್ಣ ಎಮ್.ಜೆ ತನ್ನ ಸೌಂದರ್ಯದ ಬಗ್ಗೆ ಯಾವತ್ತೂ ಮಾನಸಿಕವಾಗಿ ಸಂತುಷ್ಟನಾಗಲಿಲ್ಲ. ಹಾಗಾಗಿಯೇ ವಿಟಿಲಿಗೊ ಎಂಬ ಚರ್ಮದೋಷವಿದ್ದರೂ ಸಾಕಷ್ಟು ಪ್ಲಾಸ್ಟಿಕ್ ಸರ್ಜರಿಗಳನ್ನು ಮೂಗಿನಿಂದ ಆರಂಭಿಸಿ, ಕೃತಕ ಗಲ್ಲದ ಕುಳಿಯವರೆಗೂ ಮಾಡಿಸಿದ. ಮುಖವಾಡಗಳನ್ನು ಧರಿಸಿ ಹೊರಗೆ ಓಡಾಡತೊಡಗಿದ ಮತ್ತು ವಿಟಿಲಿಗೊದ ತೊಂದರೆ ಮುಂದುವರಿದಂತೆ ಕೊಡೆ ಅವನ ಶಾಶ್ವತ ಸಂಗಾತಿಯಾಯಿತು.
ಆದರೆ ಇವೆಲ್ಲದರ ಮಧ್ಯವೂ ಪ್ಲಾಸ್ಟಿಕ್ ಸರ್ಜರಿಗಳು ನಿಲ್ಲಲಿಲ್ಲ. ಈ ಹೊತ್ತಿಗಾಗಲೇ ಒಂದು ಕೈಗೆ ಮಾತ್ರ ಗ್ಲೌಸು ಧರಿಸುವ ಅವನ ಶೈಲಿ ಎಲ್ಲೆಡೆ ಜನಪ್ರಿಯವಾಗಿದ್ದವು. ಸೂಪರ್ ಹಿಟ್ ಆಲ್ಬಮ್ 'ಥ್ರಿಲ್ಲರ್' ಅವನ ಖ್ಯಾತಿಯನ್ನೂ, ಆರ್ಥಿಕ ಸ್ಥಿತಿಯನ್ನೂ ಉತ್ತುಂಗಕ್ಕೇರಿಸಿದ್ದವು. ಹಣ ಕಸದಂತೆ ಮೈಕಲ್ನ ಕೈಗಳಲ್ಲಿ ಹರಿದಾಡುತ್ತಿದ್ದವು. ಇವೆಲ್ಲದಕ್ಕೂ ಮೈಕಲ್ನ ಪ್ರತಿಭೆಯ ಜೊತೆ ಅವನ ಖಾಸಗಿ ವಕೀಲ ಜಾನ್ ಬ್ರಾಂಕಾನ ಅಸಾಮಾನ್ಯ ಬುದ್ಧಿಮತ್ತೆಯೂ ಸೇರಿತ್ತು. ಸತತವಾಗಿ ಹದಿನೈದು ವರ್ಷಗಳಿಗೂ ಹೆಚ್ಚು ಮೈಕಲ್ ಜೊತೆ ಕೆಲಸ ಮಾಡಿ ಬಿಲಿಯನ್ಗಟ್ಟಲೆ ವ್ಯವಹಾರ ಕುದುರಿಸಿ ಮುಂದೊಂದು ದಿನ ಅವನು ಮೈಕಲ್ನಿಂದ ಕಾರಣವೇ ಇಲ್ಲದೆ ಹೊರದಬ್ಬಿಸಿಕೊಳ್ಳುತ್ತಾನೆ. ಆದರೆ ಅದೇ ಮೈಕಲ್ ಜಾಕ್ಸನ್ ಭವಿಷ್ಯದಲ್ಲಿ ಈ ಅಸಾಮಾನ್ಯ ಅಟಾರ್ನಿಯನ್ನು ಪುನಃ ತನ್ನೊಂದಿಗೆ ಸೇರಿಸಿಕೊಳ್ಳುತ್ತಾನೆ. ಪ್ರಪಂಚದಲ್ಲಿ ಕೇವಲ ಎಂದರೆ ಕೇವಲ ಜಾನ್ನನ್ನು ನಂಬಿ ಬದುಕಿದ್ದ ದಿನಗಳೂ ಅವನಿಗೆ ಬಂದಿದ್ದವು. ಈ ಆರಂಭದ ದಿನಗಳಲ್ಲಿ ಪೆಪ್ಸಿ ಕಂಪೆನಿಯೊಂದಿಗೆ ಜಾಹೀರಾತು ಶೂಟ್ ಮಾಡುತ್ತಿದ್ದ ಸಂದರ್ಭದಲ್ಲಿ ಬೆಂಕಿ ಅನಾಹುತವೊಂದಕ್ಕೆ ಸಿಕ್ಕಿಹಾಕಿಕೊಂಡು ಭಾರಿ ಪ್ರಚಾರವನ್ನು ಪಡೆಯುತ್ತಾನೆ. ನೆತ್ತಿಯ ಮೇಲ್ಲ್ಭಾಗ ಸ್ವಲ್ಪ ಸುಟ್ಟುಹೋಗಿ ಆದ ಗಾಯ ಅವನನ್ನು ಜೀವನದುದ್ದಕ್ಕೂ ಹಿಂಬಾಲಿಸುತ್ತದೆ. ಇವೆಲ್ಲದರ ನಡುವೆ ಪೆಪ್ಸಿ ಕಂಪೆನಿಯ ವಿರುದ್ಧ ಕೇಸು ಹೂಡಿ ಜಯಗಳಿಸಿ ಆ ಕಾಲದಲ್ಲೇ ಬಿಲಿಯನ್ ಮೊತ್ತದಲ್ಲಿ ಅವನು ಪರಿಹಾರ ಪಡೆಯುತ್ತಾನೆ. ಪೆಪ್ಸಿ ಕಂಪೆನಿಯ ಅಂದಿನ ಮುಖ್ಯಸ್ಥರೊಬ್ಬರು ಲೋಕಲ್ ಟವಿ ಸಂದರ್ಶನವೊಂದರಲ್ಲಿ "ಪೆಪ್ಸಿ ಕಂಪೆನಿಯಿಂದ ಮೈಕಲ್ ಜಾಕ್ಸನ್ ಇಷ್ಟು ತೊಂದರೆ ಅನುಭವಿಸಿದ ಎಂಬ ಸುದ್ದಿ ಈ ರೀತಿ ಜಗಜ್ಜಾಹೀರಾಗುತ್ತಾ ಬಂದರೆ, ಮುಂದೆ ಭೂಮಿಯಲ್ಲಿ ನಮ್ಮ ತಂಪು ಪಾನೀಯವನ್ನು ಯಾರೂ ಮುಟ್ಟಲೂ ಬರದೇ ಇರುವ ಸಾಧ್ಯತೆಯಿತ್ತು" ಎಂದು ಹೇಳುತ್ತಾರೆ. ಅರವತ್ತು ಮತ್ತು ಎಪ್ಪತ್ತರ ದಶಕದ ಮಧ್ಯದಲ್ಲಿ ಅಷ್ಟೊಂದು ಮಟ್ಟಿಗೆ ಜಾಕ್ಸನ್ ಮೇನಿಯಾ ವಿಶ್ವದಾದ್ಯಂತ ಹಬ್ಬಿಕೊಂಟಿತ್ತು.

ಇವೆಲ್ಲದರ ಮಧ್ಯೆ ಎಮ್.ಜೆ ತನ್ನ ವಿಚಿತ್ರ ಜೀವನಶೈಲಿಯಿಂದ ಪ್ರಸಿದ್ಧಿಯನ್ನು ಉಳಿಸಿಕೊಂಡು ಬರುವ ಜೊತೆ, ಅನಗತ್ಯ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡ. ಹಲವು ಬಾರಿ ತನ್ನ ಪ್ರಚಾರಕ್ಕೆಂದೇ ಸೃಷ್ಟಿಸಿಕೊಂಡಿದ್ದ ಗಿಮಿಕ್ಗಳು ಅವನ ಕುತ್ತಿಗೆಯವರೆಗೂ ಬಂದಿದ್ದವು. ಆಗಿನ ಕಾಲದ ಪ್ರಖ್ಯಾತ ಗಾಯಕಿ ಡಯಾನಾ ರಾಸ್ ವಯಸ್ಸಿನಲ್ಲಿ ದೊಡ್ಡ ಅಂತರವಿದ್ದರೂ ಮೈಕೆಲ್ನ ಮಾರ್ಗದರ್ಶಿಯೂ, ಸ್ನೇಹಿತೆಯೂ ಆಗಿದ್ದರು. ಗ್ರ್ಯಾಮಿ ಅವಾರ್ಡ್ನಂತಹ ಪ್ರತಿಷ್ಠೆಯ ಸಮಾರಂಭಗಳಲ್ಲಿ ಆತ ತನ್ನ ಸುತ್ತಮುತ್ತರಿದ್ದ ಹಾಲಿವುಡ್ ತಾರೆಯರ ಜೊತೆ ತಾನು ಸರ್ಜರಿ ಮಾಡಿಸಿಕೊಂಡು ಡಯಾನಾಳಂತೆ ಕಾಣುತ್ತೇನೆಯೇ ಹೇಗೆ ಎಂದು ಕೇಳುತ್ತಾ ಮಾಧ್ಯಮಗಳಿಗೆ ಆಹಾರವಾಗುವುದರೊಂದಿಗೆ ಡಯಾನಾರಿಗೂ ಇರಿಸುಮುರಿಸಾಗುವಂತೆ ಮಾಡಿದ್ದ. ಆ ನಂತರ ಈ ಸರ್ಜರಿ ಕಸರತ್ತುಗಳೆಲ್ಲವೂ ಡಯಾನಾರಂತೆ ಕಾಣಿಸಲು ಎಂದು ಪತ್ರಿಕೆಗಳು ವಿಶ್ವದಾದ್ಯಂತ ಬರೆದವು. ಆದರೆ ನಿಜವಾದ ಸತ್ಯ ಬೇರೆಯದೇ ಆಗಿತ್ತು. ಎಮ್.ಜೆ ತನ್ನ ಮುಖದಿಂದ ತನ್ನನ್ನು ದ್ವೇಷಿಸುವಂತೆ ಕಾಣುವ ತಂದೆಯ ಆನುವಂಶಿಕ ಛಾಯೆಯನ್ನು ಸಂಪೂರ್ಣವಾಗಿ ತೆಗೆಯಲು ದಿನರಾತ್ರಿ ಹವಣಿಸುತ್ತಿದ್ದ. ತನ್ನ ಸಹೋದರರಂತೆ ಆನುವಂಶಿಕವಾಗಿ ಬಂದ ತಂದೆಯ ಮುಖ ಅವನಿಗೆ ಬೇಕಿರಲಿಲ್ಲ. ಅವನ ಚರ್ಮತಜ್ಞರು ಹೇಳುವ ಪ್ರಕಾರ ಮೈಕಲ್ ಮಾಡಿಸಿಕೊಂಡ ಸರ್ಜರಿಗಳು ಏಳಕ್ಕೂ ಹೆಚ್ಚು. "ಅವನಿಗೆ ಸರ್ಜರಿ ಮಾಡಿದಷ್ಟು ಸಂತೋಷವಿರಲಿಲ್ಲ, ಪದೇ ಪದೇ ಮೂಗು ನೀಳವಾಗಬೇಕು, ಕೆನ್ನೆ ತೆಳುವಾಗವಾಗಬೇಕು ಹೀಗೆ ಬೇಡಿಕೆಗಳ ಪಟ್ಟಿ ಮುಗಿಯುತ್ತಲೇ ಇರಲಿಲ್ಲ. ವಿಚಿತ್ರವೆಂದರೆ ಅವನು ಬೇಕಿದ್ದನ್ನು ಮಾಡಿಯೇ ತೀರುತ್ತಿದ್ದ ಮತ್ತು ಯಾರೇ ಅದಕ್ಕೆ ಅಪಸ್ವರವೆತ್ತಿದರೂ ಎಷ್ಟೇ ಆಪ್ತನಾಗಿದ್ದರೂ ಸರಿಯೇ ಕೆಲಸದಿಂದ ಕಿತ್ತೊಗೆಯುತ್ತಿದ್ದ" ಎಂದು ಹೇಳಿಳುತ್ತಾರೆ. ಆದರೆ ಸಂದರ್ಶನಗಳಲ್ಲಿ ಈ ಒಂದು ಸರ್ಜರಿಗಳ ಸಂಖ್ಯೆಯ ವಿಷಯದಲ್ಲಿ ಮೈಕಲ್ ಸುಳ್ಳನ್ನೇ ಕೊನೆಯವರೆಗೂ ಹೇಳುತ್ತಲೇ ಬಂದ. ತನ್ನ ಕೊನೆಯ ಸ್ಟೇಜ್ ಷೋ 'ದಿಸ್ ಈಸ್ ಇಟ್' ನ ಪ್ರಚಾರಕ್ಕೆಂದು ಬಂದ ದಿನಗಳಲ್ಲಂತೂ ಅವನ ಚರ್ಮ ಸಾಕಷ್ಟು ನಿರ್ಜೀವಗೊಂಡಿತ್ತು.
ಮೈಕಲ್ನ ಮೊದಲ ಪತ್ನಿ ಲೀಸಾ ಪ್ರೆಸ್ಲೀ ಹೇಳುವ ಪ್ರಕಾರ ಮೈಕಲ್ ತನ್ನ ಮನೆಯಲ್ಲೂ ಮೇಕಪ್ನಲ್ಲೇ ಇರುತ್ತಿದ್ದ. ಮದುವೆಯಾಗಿ ಬಹು ತಿಂಗಳುಗಳವರೆಗೂ ಅವನು ಮುಖಕ್ಕೆ ಮೇಕಪ್ ಹಾಕಿಕೊಂಡೇ ಅವಳೊಡನೆ ರಾತ್ರಿಯನ್ನು ಕಳೆಯುತ್ತಿದ್ದ. ಮುಂಜಾವಿನಲ್ಲಿ ಲೀಸಾ ಎದ್ದೇಳುವ ಮುನ್ನವೇ ಎದ್ದು ಬೆಳಗಿನ ಮೇಕಪ್ ಹಾಕಿ ಅವಳನ್ನು ಎದುರುಗೊಳ್ಳುತ್ತಿದ್ದ. ಲೀಸಾ ಬೇಕೆಂದಲೇ ಬೇಗನೇ ಎದ್ದು ಅವನನ್ನು ನೋಡಿ ಮುಗುಳ್ನಕ್ಕರೆ ಅವನು ಗಟ್ಟಿಯಾಗಿ ಚೀರುತ್ತಾ ತಲೆದಿಂಬಿನಿಂದ ಮುಖವನ್ನು ಮುಚ್ಚಿ ಸ್ನಾನಗೃಹಕ್ಕೆ ಓಡುತ್ತಿದ್ದ. ಈ ಲೀಸಾ ಇನ್ನಾರೂ ಅಲ್ಲ, ಆಕೆ ಪ್ರಖ್ಯಾತ ರಾಕ್-ಆಂಡ್-ರೋಲ್ ಗಾಯಕ, 'ದ ಕಿಂಗ್' ಎಂದೇ ಖ್ಯಾತಿವೆತ್ತ ಎಲ್ವಿಸ್ ಪ್ರಿಸ್ಲಿಯ ಮಗಳು. ಮುಂದೆ ಈ ವಿವಾಹ ಮೈಕಲ್ ಮತ್ತು ಡೆಬೀ ರೋವ್ ಎಂಬ ಯುವತಿಯ ಗುಟ್ಟಿನ ಸಂಬಂಧಗಳಿಂದಾಗಿ ವಿಚ್ಛೇದನದಲ್ಲಿ ಅಂತ್ಯವಾಯಿತು. ಆದರೆ ಸಾಯುವವರೆಗೂ ತನ್ನ ತಾಯಿಯನ್ನು ಬಿಟ್ಟರೆ ಮೈಕಲ್ ಪ್ರೀತಿಸಿದ್ದು ಲೀಸಾಳನ್ನು ಮಾತ್ರ. ಇನ್ನೇನು ಇವನು ಸತ್ತೇ ಹೋಗಿಬಿಟ್ಟ ಎನ್ನುವಷ್ಟು ಮಾದಕ ದ್ರವ್ಯಗಳ ದಾಸನಾಗಿ ಬಿಟ್ಟಿದ್ದ ಮೈಕಲ್ಗೆ ಆಸರೆಯಾಗಿದ್ದು ಇದೇ ಲೀಸಾ. ಈ ವಿವಾಹ ನಡೆಯವಾಗ ಎಲ್ವಿಸ್ ಪ್ರಿಸ್ಲೀ ಜೀವಂತವಿರಲಿಲ್ಲ ಮತ್ತು ಲೀಸಾಳ ತಾಯಿ ಪ್ರೆಸಿಲ್ಲಾ ಪ್ರಿಸ್ಲೀಗೆ ಇದು ಎಳ್ಳಷ್ಟೂ ಒಪ್ಪಿಗೆಯಿರಲಿಲ್ಲ. ಯಾಕೆಂದರೆ ಮೈಕೆಲ್ ಆಗ ವಿಶ್ವದಾದ್ಯಂತ "ವಾಕೋ-ಜಾಕೋ" (ವಿಚಿತ್ರ ಜಾಕ್ಸನ್) ಎಂದು ಮಾಧ್ಯಮಗಳಿಂದ ತನ್ನ ವಿಚಿತ್ರ ನಡವಳಿಕೆಯಿಂದ ಕರೆಯಲ್ಪಡುತ್ತಿದ್ದ. ವಿಪರ್ಯಾಸವೆಂದರೆ ವಿಚ್ಛೇದನದ ನಂತರ ಆಕೆ ಖಿನ್ನತೆ ಮತ್ತು ಒಂಟಿತನದಲ್ಲಿ ಬಹಳಷ್ಟು ಕೊರಗಿಹೋಗುತ್ತಾಳೆ.
ಇನ್ನು ಈ ಡೆಬೀ ಎಂಬ ಯುವತಿ ನರ್ಸ್ ಆಗಿ ಮಾದಕದ್ರವ್ಯಗಳ ಚಟ ಬಿಡಿಸುವ ತರಬೇತಿ ಕೇಂದ್ರದಲ್ಲಿ ಅವನಿಗೆ ಪರಿಚಯವಾದವಳು. ಬಹಳಷ್ಟು ಮೂಲಗಳು ಹೇಳುವಂತೆ ಡೆಬೀಯ ದಾಖಲೆಗಳು ಅವಳ ವೈವಾಹಿಕ ಜೀವನದಲ್ಲೂ, ಔದ್ಯೋಗಿಕ ಜೀವನದಲ್ಲೂ ಉತ್ತಮವಿರಲಿಲ್ಲ. ಮಗುವಿನಂತೆ ಮಾತನಾಡುವ ಮೈಕಲ್ಗೆ ಈಕೆ ಆಸ್ಪತ್ರೆಯಲ್ಲಿ ಬಹಳಷ್ಟು ಹತ್ತಿರವಾಗುತ್ತಾಳೆ. ಇವರ ಈ ಸಂಬಂಧ ಎಷ್ಟು ನಿಗೂಢವಾಗಿತ್ತೆಂದರೆ ವರ್ಷಗಳ ಕಾಲ ಮಾಧ್ಯಮದವರಿಗೂ ಇದರ ವಾಸನೆಯ ಜಾಡು ಹತ್ತಲಿಲ್ಲ. ಮೈಕಲ್ ಚೇತರಿಸಿಕೊಳ್ಳುತ್ತಿದ್ದಂತೆ ಮನೆಗೊಂದು ಮಗು ಬರುವ ವಿಷಯದಲ್ಲಿ ಲೀಸಾ ಜೊತೆ ಗಂಭೀರ ಮನಸ್ತಾಪ ಉಂಟಾಗುತ್ತದೆ ಮತ್ತು ಇಂತಹ ಕ್ಲೀಷೆಯ ನಡುವಿನಲ್ಲೇ ಡೆಬೀ ತಾನು ಮೈಕಲ್ನ ಮಗುವಿನ ಜನನಕ್ಕೆ ಬಾಡಿಗೆ ತಾಯಿಯಾಗಲು ಅವನಿಗೆ ಜೊತೆಯಾಗುತ್ತಾಳೆ. ಹೀಗೆ ಮುಂದೆ ಪ್ರಿನ್ಸ್ ಮೈಕಲ್ 1, ಪ್ರಿನ್ಸ್ ಮೈಕಲ್ 2 ಮತ್ತು ಪ್ಯಾರಿಸ್ ಎಂಬ ಮಕ್ಕಳು ಮೈಕಲ್ ಜೀವನಕ್ಕೆ ಆಸರೆಯಾಗುತ್ತವೆ. ಆದರೆ ಪ್ಯಾರಿಸ್ ಮತ್ತು ಪ್ರಿನ್ಸ್ ಮೈಕಲ್ 2 ರ ತಾಯಿ ಯಾರೆಂಬುದನ್ನು ಮೈಕಲ್ ಮತ್ತು ಅವನ ಕುಟುಂಬ ಬಾಡಿಗೆ ತಾಯಿತನದ ಒಪ್ಪಂದದ ಪ್ರಕಾರ ನಿಗೂಢವಾಗಿರಿಸಿದೆ. ಪ್ರಿನ್ಸ್ ಮೈಕಲ್ 2 ನ್ನು ಬ್ಲ್ಯಾಂಕೆಟ್ ಎಂಬು ಮೈಕಲ್ ಕರೆಯುತ್ತಿದ್ದ ಮತ್ತು ಈಗಲೂ ಅವನನ್ನು ಹಾಗೆಯೇ ಕರೆಯಲಾಗುತ್ತದೆ. "ಬ್ಲ್ಯಾಂಕೆಟ್" ಎಂದರೆ ಮೈಕಲ್ ಪ್ರಕಾರ ಆಶೀರ್ವಾದವಂತೆ.

ಮೈಕಲ್ ಮಗುವಿನಂತಿದ್ದ ಮನುಷ್ಯ. ಯಾವಾಗಲೂ ದೊಡ್ಡವನೇ ಆಗದ ಕಾಲ್ಪನಿಕ ಮಕ್ಕಳ ಕಾರ್ಟೂನ್ ಹೀರೋ ಪಾತ್ರ "ಪೀಟರ್ ಪಾನ್" ಅವನಿಗೆ ಕೊನೆಯವರೆಗೂ ಪ್ರಿಯವಾಗಿತ್ತು. ಎರಡು ಸಾವಿರದ ಏಳುನೂರು ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಮೈಕಲ್ನ ಭವ್ಯ ಬಂಗಲೆ "ನೆವರ್ಲ್ಯಾಂಡ್" ಈ ಪೀಟರ್ ಪಾನ್ ಮತ್ತು ಅಮೆರಿಕಾದ ಡಿಸ್ನಿಲ್ಯಾಂಡ್ನ ಸ್ಪೂರ್ತಿ. ಇಲ್ಲಿ ಬೃಹತ್ ವಾಟರ್ ಪಾರ್ಕ್, ಮೂವೀ ಥಿಯೇಟರ್ಗಳು, ಮೃಗಾಲಯಗಳು, ಮ್ಯಾಜಿಕ್ ಷೋ ನಡೆಸುವ ತಂಡಗಳು, ಅಮ್ಯೂಸ್ಮೆಂಟ್ ಪಾರ್ಕ್ , ಬೆಲೆಬಾಳುವ ಆಟಿಕೆಗಳ ಸಂಗ್ರಹಗಳು, ಸಿಹಿತಿನಿಸುಗಳ ಮಳಿಗೆಗಳು, ಮ್ಯೂಸಿಯಂಗಳು... ಹೀಗೆ ಎಲ್ಲವೂ ಇದ್ದವು. ಮಕ್ಕಳಿಗೆ ಇನ್ನೇನು ಬೇಕು! ಇವೆಲ್ಲವೂ ಮೈಕಲ್ಗಾಗಿ, ಅವನ ಮೂರು ಮಕ್ಕಳಿಗಾಗಿ, ಅವನ ಅಭಿಮಾನಿ ಬಳಗದ ಮಕ್ಕಳಿಗಾಗಿ. ಮೈಕಲ್ ತನ್ನ ಸ್ಟೇಜ್ ಷೋಗಳು ಇರದ ಹೊತ್ತಿನಲ್ಲಿ ಹೆಚ್ಚಿನ ಸಮಯವನ್ನು ಇಲ್ಲಿ ಕಳೆಯುತ್ತಿದ್ದ. ವಯಸ್ಸು ನಲವತ್ತಾದರೂ ಮಕ್ಕಳಂತೆ ತಾಸುಗಟ್ಟಲೇ ಆಟಿಕೆಗಳೊಂದಿಗೆ ಆಡುತ್ತಿದ್ದ. ಲಾಸ್ ವೇಗಾಸ್ ನಂತಹ ಅದ್ದೂರಿ ಪ್ರವಾಸಕ್ಕೆ ಆಗಾಗ ಹೋಗುತ್ತಾ ಕೇವಲ ಆಟಿಕೆಗಳನ್ನೇ ಬಿಲಿಯನ್ ಮೊತ್ತದಲ್ಲಿ ಶಾಪಿಂಗ್ ಮಾಡುತ್ತಿದ್ದ. ತನ್ನ ಬಂಗಲೆಯ ಆವರಣದಲ್ಲಿ ತನ್ನ ಸ್ವಂತದ ಮಕ್ಕಳ ಜೊತೆಗಲ್ಲದೆ ಇತರರ ಮಕ್ಕಳೊಂದಿಗೂ ನೆಲದ ಮೇಲೆ ಹೊರಳಾಡುತ್ತಾ ಗಂಟೆಗಟ್ಟಲೆ ಮಗುವಿನಂತೆ ಜಗವನ್ನೇ ಮರೆತು ಆಟವಾಡುತ್ತಿದ್ದ. ಅವನು ಮಲಗುವ ಕೋಣೆಯ ಬಾಗಿಲಿನ ಇಬ್ಬದಿಗಳಲ್ಲಿ ಆಳೆತ್ತರದ ಕಾರ್ಟೂನ್ ಪಾತ್ರಧಾರಿ ಗೊಂಬೆಗಳಿದ್ದವು. ಇವೆಲ್ಲದರ ಅರ್ಥವಾದರೂ ಏನು? ಮೊದಲೇ "ವ್ಯಾಕೋ ಜಾಕೋ" ಎಂದು ಹೆಸರಾಗಿದ್ದ ಇವನು ಈ ಎಲ್ಲಾ ಕಾರಣಗಳಿಂದ ಅಭಿಮಾನಿಗಳಿಗಲ್ಲದೆ ತನ್ನ ಆಪ್ತರಿಗೂ ಬಹಳ ಸಂಕೀರ್ಣವಾಗಿದ್ದ. ನೆವರ್ಲ್ಯಾಂಡ್ನಲ್ಲಿ ಸೆಲೆಬ್ರಿಟಿಯೆಂಬ ಖಾಸಗಿತನದ ಅವಶ್ಯಕತೆಯೆಯೇ ಇಲ್ಲವೇನೋ ಎಂಬಂತೆ ಅವನು ಮಕ್ಕಳೊಂದಿಗೆ ಆಡುತ್ತಿದ್ದ. ತನ್ನ ಹೆತ್ತವರು, ನೌಕರರು, ಬೀದಿಯ ಜನ, ಮಾಧ್ಯಮ ಹೀಗೆ ಎಲ್ಲರೂ ಗಮನಿಸುತ್ತಿದ್ದಾರೆ ಎಂಬ ಅರಿವೇ ಇಲ್ಲದ ಮೂಢನಂತಿದ್ದ ಅವನು.

"ನನಗೆ ಬಾಲ್ಯವೆಂಬುದೇ ಇರಲಿಲ್ಲ. ದಿನವೂ ಮೊಟೌನ್ ಸ್ಟುಡಿಯೋಗೆ ಹೋಗಿ ಮ್ಯೂಸಿಕ್ ಅಭ್ಯಾಸ ಮಾಡಬೇಕಿತ್ತು. ತಪ್ಪಿದರೆ ಜೋಸೆಫನ ರಕ್ಕಸ ಏಟುಗಳು ಮೈಯನ್ನು ಊದಿಸುತ್ತಿದ್ದವು. ಹಾಗಾಗಿ ನಾನು ಈಗ ಮಕ್ಕಳನ್ನು ಪ್ರೀತಿಸುತ್ತೇನೆ, ಅವರೊಂದಿಗೆ ಆಡುತ್ತೇನೆ" ಎಂದು ಬಹಳ ಸಲ ಮೈಕಲ್ ಸಂದರ್ಶನಗಳಲ್ಲಿ ಹೇಳಿದ್ದಾನೆ. ಅನುಕಂಪಕ್ಕೆ ಎಡೆ ಮಾಡಿಕೊಟ್ಟಿದ್ದ ಈ ಸಮಜಾಯಿಷಿ 1993 ರ ಹೊತ್ತಿಗೆ ಮೈಕಲ್ನ ಕುಂಟುನೆಪವಾಗಿ ಪರಿವರ್ತಿತವಾಗಿತ್ತು. 1993 ರಲ್ಲಿ ಮೈಕಲ್ ಜಾಕ್ಸನ್ ಎಂಬ ಸೆಲೆಬ್ರಿಟಿ ಜಾರ್ಡ್ಡ ಚಾಂಡ್ಲೆಯರ್ ಎಂಬ ಹದಿನಾಲ್ಕರ ಬಾಲಕನಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪದಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿ ಕುಳಿತಿದ್ದ. ಆದರೆ ಮಾಧ್ಯಮಗಳು ಆಗಲೇ ಅವನಿಗೆ ಪೀಡೋಫೈಲ್ (ಮಕ್ಕಳೆಡೆಗೆ ಮಾತ್ರ ಇರುವ ಲೈಂಗಿಕ ಆಕರ್ಷಣೆಯ ವ್ಯಕ್ತಿತ್ವ) ಪಟ್ಟ ಕಟ್ಟಿದ್ದವು.

ಪಾರ್ಟಿಯೊಂದರಲ್ಲಿ ಪರಿಚಯವಾಗಿದ್ದ ಜಾರ್ಡ್ಡ ಮತ್ತವನ ವಿಚ್ಛೇದಿತೆ ತಾಯಿ ಮೈಕಲ್ಗೆ ಸ್ವಲ್ಪ ಹೆಚ್ಚೇ ಎಂಬಂತೆ ಹತ್ತಿರವಾಗಿದ್ದರು. ಇದು ಯಾವ ಮಟ್ಟಕ್ಕೆ ಹೋಯಿತೆಂದರೆ ಮೈಕಲ್ ಮತ್ತು ಜಾರ್ಡ್ ಪ್ರೇಮಿಗಳಂತೆ ಗುಸುಗುಸು ಸಂಭಾಷಣೆ ನಡೆಸುತ್ತಿದ್ದರು. ಇಬ್ಬರೂ ಒಂದೇ ಕೋಣೆಯಲ್ಲಿ ಮಲಗುತ್ತಿದ್ದರು. ಜಾರ್ಡ್ ತಾಯಿಗಿಂತ ಮೈಕಲ್ ಜೊತೆಯಲ್ಲೇ ಹೆಚ್ಚು ಸಮಯ ಕಳೆಯತೊಡಗಿಸಲಾರಂಭಿಸಿದಂತೆಯೇ ಮೈಕಲ್ ಜಾರ್ಡ್ ದುಬಾರಿ ಕೊಡುಗೆಗಳನ್ನು ತಂದುಕೊಡುವುದು, ಜೊತೆಯಾಗಿ ಪ್ರತಿಷ್ಠಿತ ಔತಣಕೂಟಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಯಿತು. ಮೈಕಲ್ನ ಆಲ್ಬಂಗಳ ಪ್ರಚಾರದ ವಿಶ್ವಪರ್ಯಟನೆಗಳಲ್ಲೂ ಮೈಕಲ್ನೊಂದಿಗೆ ಬಾಲಕ ಕಾಣಿಸಿಕೊಳ್ಳುತ್ತಿರುವುದರೊಂದರ ಜೊತೆ ಮತ್ತು ಜಾರ್ಡ್ ಹಲವು ಬಾರಿ ತಾಯಿ ಮತ್ತು ತಂದೆಯ ಜೊತೆ ಮೈಕಲ್ನ ವಿರಕ್ತ ಧಾಟಿಯಲ್ಲಿ ಮಾತನಾಡುವುದರೊಂದಿಗೆ ಬಾಲಕನ ಕುಟುಂಬದಲ್ಲೂ, ಮಾಧ್ಯಮದಲ್ಲೂ ತಲ್ಲಣಗಳು ಕಾಣಿಸಿಕೊಂಡವು.

ಜಾರ್ಡ್ ತಾಯಿ ಮೈಕಲ್ನಲ್ಲಿ ಇದರ ಬಗ್ಗೆ ಮಾತಾಡಿಕೊಂಡಿದ್ದಾಗ ಅವನು ಗಳಗಳನೆ ಅತ್ತು ಅಂಥದ್ದೇನೂ ಇಲ್ಲ ಎಂದು ಪರಿಪರಿಯಾಗಿ ಹೇಳಿ ಅವರನ್ನು ತನ್ನ ನಿವಾಸದಲ್ಲೇ ಇರಿಸಿಕೊಂಡಿದ್ದ. ಆದರೆ ಜಾರ್ಡ್ ತಂದೆ ಇವಾನ್ಗೆ ಇದೊಂದು ಕಳವಳಕಾರಿ ಅಂಶವಾಗಿತ್ತು. ವಿಚ್ಛೇದಿತೆ ಪತ್ನಿಯ ಸಮರ್ಥನೆಯ ಮಾತುಗಳೂ ಅವನಿಗೆ ರುಚಿಸಲಿಲ್ಲ. ಖಂಡಿತವಾಗಿಯೂ ಒಬ್ಬ ನಲವತ್ತರ ಗಂಡಸು ಯಾವ ಸಂಬಂಧವೂ ಇಲ್ಲದ ಹದಿನಾಲ್ಕರ ಬಾಲಕನ ಜೊತೆ ನಿತ್ಯವೂ ಒಂದೇ ಕೋಣೆಯಲ್ಲಿ ಹಾಸಿಗೆ ಹಂಚಿಕೊಳ್ಳುತ್ತಿರುವುದು ಒಬ್ಬ ಜವಾಬ್ದಾರಿಯುತ ತಂದೆಯನ್ನು ಚಿಂತೆಗೀಡುಮಾಡಿದ್ದವು. ಇವಾನ್ ಮೈಕಲ್ ವಿರುದ್ಧ ಕಾನೂನು ಸಮರವನ್ನೇ ಸಾರಿದ್ದ. ತನ್ನ ಮ್ಯೂಸಿಕ್ ಆಲ್ಬಂ "ಥ್ರಿಲ್ಲರ್" ಅಭೂತಪೂರ್ವ ಐತಿಹಾಸಿಕ ಯಶಸ್ಸನ್ನು ಕಂಡ ನಂತರ ಮೈಕಲ್ಗೆ ಗೆಲುವಿನ ರುಚಿಯ ಪರಿಪಾಠವಾಗಿ ಪ್ರತಿಯೊಂದು ಸೋಲೂ ಕೂಡ ದುಃಸ್ವಪ್ನವಾಗಿ ಕಾಣತೊಡಗಿದ್ದವು. ಈ ಬಾಲಕನ ಪ್ರಕರಣದಿಂದಾಗಿ ಮೈಕಲ್ನ ಇಮೇಜ್, ಅವನ ಹೊಸ ಆಲ್ಬಂಗಳ ಜನಪ್ರಿಯತೆಯೆಲ್ಲವೂ ಗಾಳಿಗೋಪುರದಂತೆ ಕುಸಿಯಡಗಿದ್ದವು. ಪ್ರಕರಣ ಸಂಪೂರ್ಣವಾಗಿ ಮೈಕಲ್ನ ವಿರುದ್ಧವಿಲ್ಲದಿದ್ದರೂ ಕೂಡ ತನ್ನ ಆಲ್ಬಂಗಳ ಕಡೆಗೆ ಹೆಚ್ಚಿನ ಸಮಯವನ್ನು ಮೀಸಲಿಡಲು ಕೋರ್ಟ್ ಕಚೇರಿಗಳ ಗದ್ದಲವಿಲ್ಲದೆಯೇ ಮೈಕಲ್ ದೊಡ್ಡಮೊತ್ತದ ಪರಿಹಾರಧನವನ್ನು ಇವಾನ್ಗೆ ಕೊಟ್ಟು ಕೈ ತೊಳೆದುಕೊಂಡ. ಇವೆಲ್ಲವೂ ತೆರೆಮರೆಯಲ್ಲೇ ನಡೆಯಿತು ಎಂಬುದೊಂದು ಬಿಡಿಸಲಾರದ ಒಗಟು. ಅದರ ನಂತರ ಮೈಕಲ್ ಮತ್ತು ಜಾರ್ಡ್ ಎಂದಿಗೂ ಭೇಟಿಯಾಗಲಿಲ್ಲ.

ಸರಿಯಾಗಿ ಹತ್ತು ವರ್ಷಗಳ ಬಳಿಕ ಇದೇ ವಿಷಯ ಗೆವಿನ್ ಎಂಬ ಕ್ಯಾನ್ಸರ್ ಗುಣಮುಖ ಬಾಲಕನ ರೀತಿಯಲ್ಲಿ ಮೈಕಲ್ ಎದುರು ಬಂದು ನಿಂತಿತು. ಮೈಕಲ್ನ ಆಪ್ತರು ಆತ್ಮಕಥೆಯಲ್ಲಿ ಹೇಳಿರುವ ಪ್ರಕಾರ ಜಾರ್ಡ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಕಲ್ ಪಾಠವನ್ನೇನೂ ಕಲಿಯಲಿಲ್ಲ. ಅವನು ಮಕ್ಕಳೊಂದಿಗಿನ ತನ್ನ ಬಾಂಧವ್ಯವನ್ನು ಮನೆ, ಪಾರ್ಟಿ ಎಂಬ ಭೇದವಿಲ್ಲದೆ ತನಗಿಷ್ಟ ಬಂದಂತೆಯೇ ಮುಂದುವರೆಸಿದ. ಅವನಿಗೆ ತಿಳಿಹೇಳಬಯಸಿದ ಕೆಲವು ಮ್ಯಾನೇಜರ್ಗಳೂ ಕೆಲಸ ಕಳೆದುಕೊಂಡರು. ಕ್ಯಾನ್ಸರ್ ಪೀಡಿತರ ಶಿಬಿರವೊಂದರಲ್ಲಿ ಮೈಕಲ್ಗೆ ಪರಿಚಯವಾದ ಗೆವಿನ್, ಆತನ ಸಹೋದರ ಮತ್ತು ಸಹೋದರಿ ಅವರ ಹೆತ್ತವರ ಒಪ್ಪಿಗೆಯೊಂದಿಗೆ ಹಲವು ತಿಂಗಳುಗಳಿಂದ ಮೈಕಲ್ನ ನೆವರ್ಲ್ಯಾಂಡ್ನಲ್ಲೇ ವಾಸಿಸತೊಡಗಿದ್ದರು. ಗೆವಿನ್ನ ಸಹೋದರ ಮತ್ತು ಸಹೋದರಿಯರ ಪ್ರಕಾರ ವೈದ್ಯಕೀಯ ಕ್ಷೇತ್ರ ಕೈ ಚೆಲ್ಲಿ ಕುಳಿತಾಗ ಮೈಕಲ್ನ ಪ್ರೀತಿ ಗೆವಿನ್ನನ್ನು ಕ್ಯಾನ್ಸರ್ನಿಂದ ಪೂರ್ಣಗುಣಮುಖಗೊಳಿಸಿತು. ಆದರೆ ಅದು ಅಲ್ಲೇ ಸುಖಾಂತ್ಯ ಕಂಡಿದ್ದರೆ ಎಲ್ಲರಿಗೂ ಸಮಾಧಾನವಿರುತ್ತಿತ್ತು. ಆದರೆ ಹಾಗಾಗಲಿಲ್ಲ. ಜಾರ್ಡ್ ಪ್ರಕರಣದಲ್ಲಾದಂತೆ ಬಾಲ ಲೈಂಗಿಕತೆಯ ಭೂತ ಇನ್ನೊಮ್ಮೆ ಸದ್ದುಮಾಡತೊಡಗಿತ್ತು. ಅದಕ್ಕೆ ಪೂರಕವೆಂಬಂತೆ ಮೈಕಲ್ ಇನ್ನೊಂದು ದೊಡ್ಡ ತಪ್ಪನ್ನು ಮಾಡಿದ್ದ. ಮಾರ್ಟಿನ್ ಬಷೀರ್ ಎಂಬ ಡಾಕ್ಯುಮೆಂಟರಿ ನಿರ್ದೇಶಕ ಮೈಕಲ್ನನ್ನು ಅವನ ಜೀವನದ ಬಗ್ಗೆ ಸಾಕ್ಷ್ಯಚಿತ್ರ ತೆಗೆಯಲು ಕೇಳಿಕೊಂಡಾಗ ಪಬ್ಲಿಸಿಟಿ ಸಿಗುತ್ತದೆ ಎಂಬ ಒಂದೇ ಒಂದು ಸ್ವಾರ್ಥದಲ್ಲಿ ಒಪ್ಪಿಬಿಟ್ಟಿದ್ದ.

ಹಲವು ತಿಂಗಳುಗಳ ಕಾಲ ಮೈಕಲ್ನ ಜೊತೆಗಿದ್ದು ಅವನ ಜೀವನ ಶೈಲಿ, ಬಂಗಲೆ, ಸ್ಟೇಜ್ ಷೋ, ಕುಟುಂಬ, ಸಂದರ್ಶನ ಹೀಗೆ ಎಲ್ಲವನ್ನೂ ಆವರಿಸಿದ ಈ ಡಾಕ್ಯುಮೆಂಟರಿ ವಿಶ್ವಾದ್ಯಂತ ಬಿಡುಗಡೆಯಾದ ನಂತರ ಕೋಲಾಹಲವನ್ನೇ ಎಬ್ಬಿಸಿತ್ತು. ಯಾಕೆಂದರೆ ತೊಂಭತ್ತು ನಿಮಿಷಗಳ ಈ "ಲೀವಿಂಗ್ ವಿದ್ ಮೈಕಲ್ ಜ್ಯಾಕ್ಕ್ಸನ್" (ಮೈಕಲ್ ಜ್ಯಾಕ್ಸನ್ನೊಂದಿಗಿನ ಜೀವನ) ಎಂಬ ಹೆಸರಿನ ಸಾಕ್ಷ್ಯಚಿತ್ರದಲ್ಲಿ ನಿಜವಾದ ಮೈಕಲ್ ಜಾಕ್ಸನ್ನನ್ನು ನಾವು ಕಾಣಬಹುದು. ಅವನ ಮಗುವಿನಂತಹ ವರ್ತನೆ, ಅವನ ಮರಹತ್ತುವಿಕೆಯಿಂದ ಹಿಡಿದು ಮೋಟಾರುಕಾರಿನವರೆಗಿನ ಬಾಲಿಶ ಆಟಗಳು, ವಿಚಿತ್ರವೆನಿಸುವ ವರ್ತನೆಗಳು, ಬೇಕಾಬಿಟ್ಟಿ ಶಾಪಿಂಗ್ ನಡೆಸುವ ಪರಿ ಹೀಗೆ ಎಲ್ಲವನ್ನೂ ನೈಜವಾಗಿ ಸೆರೆಹಿಡಿಯಲಾಗಿದೆ. ಗೆವಿನ್ ಮತ್ತು ಅವನ ಸಹೋದರ, ಸಹೋದರಿಯರ ಸಂದರ್ಶನವನ್ನೂ ಮೈಕಲ್ನ ಸಮ್ಮುಖದಲ್ಲೇ ಮಾಡಿ ಇಲ್ಲಿ ತೋರಿಸಲಾಗಿದೆ. ಇಲ್ಲಿ ಕಂಡುಬರುವ ಮೈಕಲ್ ಮತ್ತು ಗೆವಿನ್ನಿಂದ ಹೇಳಲ್ಪಟ್ಟ ಕೆಲವು ಹೇಳಿಕೆಗಳು ಮೈಕಲ್ನ ಇಮೇಜ್ಗೆ ಭಾರೀ ಧಕ್ಕೆಯನ್ನು ಕೊಟ್ಟವು. ಜಗತ್ತಿನಾದ್ಯಂತ ಮಾಧ್ಯಮಗಳು, ವೈದ್ಯರು, ಮಾನಸಿಕ ತಜ್ಞರು, ಮಕ್ಕಳ ಹಕ್ಕು ಕಾಯಿದೆಯಡಿ ಹೋರಾಡುವ ಎಲ್ಲಾ ಸಂಘಟನೆಗಳು ಹೀಗೆ ಮೂರು ಮಕ್ಕಳನ್ನು ಕಾರಣವಿಲ್ಲದೆ ತನ್ನೊಂದಿಗೆ ಇರಿಸಿಕೊಂಡ ಮೈಕಲ್ನ ಆಷಾಢಭೂತಿತನವನ್ನು ದೊಡ್ಡದನಿಯಲ್ಲೇ ಖಂಡಿಸಿದವು. ಆದರೆ ಮೈಕಲ್ನ ಹೇಳಿಕೆಗಳು ನಿಜವೇ ಎಂಬಂತೆ ಯಾವ ವೈದ್ಯಕೀಯ ತನಿಖೆಗಳಾಗಲೀ, ಮೈಕಲ್-ಗೆವಿನ್-ಅವನ ತಾಯಿ-ಸಹೋದರ-ಸಹೋದರಿ ಹೀಗೆ ಎಲ್ಲರನ್ನು ಹಂತಹಂತವಾಗಿ ಗೌಪ್ಯವಾಗಿ ತನಿಖೆಗೊಳಪಡಿಸಿದಾಗಲೂ ಆರೋಪದಲ್ಲಿ ಹುರುಳಿರುವುದು ಕಾಣಲಿಲ್ಲ. ಪುರಾವೆಗಳ ಕೊರತೆಯಿಂದಾಗಿ ಕೇಸು ಈ ಬಾರಿ ಮೈಕಲ್ ಪರವಾಗಿ ಹೊರಬಿದ್ದಿತ್ತು. ಅವನ ಅಭಿಮಾನಿಗಳ ಹರ್ಷೋದ್ಗಾರ ವಿಶ್ವಾದ್ಯಂತ ಮುಗಿಲು ಮುಟ್ಟಿತ್ತು. ಆದರೆ 2005 ರಲ್ಲಿ ವಿಜಯಿಯಾಗಿ ಕೋರ್ಟ್ ನಿಂದ ಹೊರಬಂದ ಮೈಕಲ್ ಮುಗುಳ್ನಗೆ ಬೀರಿ ಕಾರಿನೊಳಗೆ ಸರಿದನಷ್ಟೇ ಹೊರತು ಅಲ್ಲಿ ಸಡಗರವಿರಲಿಲ್ಲ. ಮೈಕಲ್ ಈ ಎಲ್ಲಾ ಬೆಳವಣಿಗೆಗಳಿಂಬ ಕುಗ್ಗಿಹೋಗಿದ್ದು ಸ್ಪಷ್ಟವಾಗಿತ್ತು. ಅವನೇ ಸ್ವತಃ ಒಮ್ಮೆ "ಅದು ತುಂಬಾ ಅಸಹ್ಯಕರವಾಗಿತ್ತು. ತನಿಖಾ ಇಲಾಖೆಯವರು ನನ್ನನ್ನು ಸಂಪೂರ್ಣ ನಗ್ನವಾಗಿ ನಿಲ್ಲಿಸಿ ಮಾಡಿದ ದೈಹಿಕ ಪರೀಕ್ಷೆಯನ್ನು ಎನಿಸಿಕೊಂಡಾಗಲೆಲ್ಲಾ ನನ್ನ ಮೈ ಉರಿಯುತ್ತದೆ" ಎಂದು ಆತ್ಮಕಥೆಗಾಗಿ ಜಾರ್ಡ್ ಪ್ರಕರಣದ ತನಿಖೆಯ ಭಾಗದ ಬಗ್ಗೆ ಉಲ್ಲೇಖಿಸಿದ್ದಾನೆ.

ಹೀಗೆ ಮೈಕಲ್ ಮುಂದೆಯೂ ವಿವಾದಗಳಲ್ಲೇ ಮುಳುಗೇಳುತ್ತಾ ಜೀವನ ನಡೆಸಿದ. ಮಾರ್ಟಿನ್ ಬಷೀರ್ ನ ಈ ಅದ್ಭುತ ಸಾಕ್ಷ್ಯಚಿತ್ರದಲ್ಲಿ ಮೈಕಲ್ ತನ್ನ ಮಕ್ಕಳನ್ನು ಹೊರಗೆ ವಿಹಾರಕ್ಕೆಂದು ಕರೆದುಕೊಂಡು ಹೋಗುವಾಗ ಆ ಪುಟಾಣಿ ಮಕ್ಕಳಿಗೂ ಮುಖವಾಡ ಧರಿಸುವುದನ್ನು ಕಾಣಬಹುದು. ಮೊಲೆಹಾಲು ಕುಡಿಯುವ ಕೊನೆಯ ಕುಡಿ "ಬ್ಲ್ಯಾಂಕೆಟ್"ಗೂ ಕೂಡ ಅವನು ಮಗುವಿನ ಮುಖಕ್ಕೆ ಬಟ್ಟೆ ಸುತ್ತಿ ಬಾಟಲಿ ಹಾಲು ಕುಡಿಸುತ್ತಾನೆ. ತನ್ನ ಮಕ್ಕಳ ಗುರುತು ಹೊರಗಿನ ಸ್ವಾರ್ಥ ಜಗತ್ತಿಗೆ ಸಿಗುವು ಅವನಿಗೆ ಬೇಡವಿತ್ತು. ಅಭಿಮಾನಿಗಳು ಅಪಾರ್ಟ್ ಮೆಂಟ್ ಕೆಳಗಡೆ ಮೈಕಲ್ನ ಹೆಸರು ಹೇಳಿ ಅವನ ಮಗುವನ್ನು ಕಾಣಲು ಕೇಕೆ ಹಾಕುತ್ತಿರುವಾಗ ಮೈಕಲ್ ಬಾಲ್ಕನಿಯಿಂದ ಹೊರಬಂದು ಮಗುವನ್ನು ಬಾಲ್ಕನಿಯ ಹೊರಭಾಗಕ್ಕೆ ಅಭಿಮಾನಿಗಳತ್ತ ಎಸೆಯಲು ಹೋಗುವಂತೆ ತೋರಿಸುತ್ತಾನೆ. ಹಾಗೆಯೇ ಕ್ಷಣಮಾತ್ರದಲ್ಲಿ ತೆಳುವಾದ ಬಟ್ಟೆಯಿಂದ ಮರೆಮಾಚಿದ ಮುಖವನ್ನು ಹೊಂದಿದ ತನ್ನ ಮಗುವನ್ನು ಹಿಡಿದು ಬಾಲ್ಕನಿಯಿಂದ ಹಿಮ್ಮುಖವಾಗಿರುವ ಕೋಣೆಯತ್ತ ಓಡಿ ಮರೆಯಾಗುತ್ತಾನೆ. ಇದರ ವೀಡಿಯೋ ತುಣುಕನ್ನು ನೋಡಿದಾಗ ನಿಜವಾಗಿಯೂ ಅವನು ಮಗುವನ್ನೇದರೂ ಕೊಲ್ಲಲು ಹೊರಟಿದ್ದನೇ ಎಂದು ಭಾಸವಾಗುತ್ತದೆ. ಐವತ್ತು ದಾಟಿದ ನಂತರ ಮತ್ತೊಮ್ಮೆ ಅವನು ಮ್ಯೂಸಿಕ್ ಜಗತ್ತಿಗೆ "ದಿಸ್ ಈಸ್ ಇಟ್" ಎಂಬ ಕಿರುಚಿತ್ರದೊಂದಿಗೆ ವಾಪಸಾಗುತ್ತಾನೆ. ಇದರ ಪ್ರಚಾರಕ್ಕಾಗಿ ಮಾಧ್ಯಮದ ಮುಂದೆ ಬರುವಾಗ ಮೈಕಲ್ ಅದೇ ತನ್ನ ಗಲಿಬಿಲಿಯ ತೆಳ್ಳಗಿನ ದನಿಯಲ್ಲಿ "ಅಭಿಮಾನಿಗಳೇ, ಇದು ನಿಮಗೆ ನನ್ನ ಕೊನೆಯ ಕೊಡುಗೆ, "ದಿಸ್ ಈಸ್ ಇಟ್", ಇದೇ ಕೊನೆ, ಇದೇ ಕೊನೆ" ಎನ್ನುತ್ತಾ ಕೈಬೀಸುತ್ತಾನೆ. ಈ ಚಿತ್ರದ ಪ್ರಚಾರದ ಸಲುವಾಗಿ ಮೈಕಲ್ ಬರೋಬ್ಬರಿ ಐವತ್ತು ಸ್ಟೇಜ್ ಶೋ ಗಳನ್ನು ಕೊಡುವ ಕಾರ್ಯಕ್ರಮ ಹಾಕಲಾಗಿತ್ತು. ಎಲ್ಲೂ ಕಂಡು ಕೇಳರಿಯದ ರೀತಿಯಲ್ಲಿ ನಡೆದಿದ್ದ ಸಿದ್ಧತೆಗಳ ಜೊತೆ, ಪ್ರದರ್ಶನದ ಟಿಕೆಟ್ಗಳೂ ಕೂಡ ಬಹು ಮುಂಚಿತವಾಗಿಯೇ ಬಿಸಿ ಬಿಸಿ ದೋಸೆಗಳಂತೆ ಮಾರಾಟವಾಗಿದ್ದವು. ಸಾಲದ ಕೂಪದಲ್ಲಿ ಮುಳುಗಿಹೋಗಿದ್ದ ಮೈಕಲ್ಗೆ ಈ ಪ್ರದರ್ಶನಗಳಿಂದ ಎಲ್ಲಾ ಬಾಕಿ ಚುಕ್ತಾ ಮಾಡಬೇಕಿತ್ತು. ಈ ಎಲ್ಲಾ ಒತ್ತಡಗಳು ಹೆಚ್ಚಿದ್ದರೂ ಸಹ ಮೈಕಲ್ ತನ್ನ ಐಷಾರಾಮಿ ಜೀವನ ಶೈಲಿ ಮತ್ತು ನೃತ್ಯ ತಂಡದ ತರಬೇತಿಗೆ ಕಠಿಣ ಪರಿಶ್ರಮವನ್ನು ಬಿಡಲಿಲ್ಲ. ಜನರಿಗೆ ಮೈಕಲ್ ಜಾಕ್ಸನ್ ಬೇಕಿತ್ತೆಂಬುದು ಪ್ರದರ್ಶನದ ಟಿಕೆಟ್ ಗಳಿಕೆಯಲ್ಲೇ ದಿಟವಾಗಿತ್ತು ಹಾಗಾಗಿ ಯಶಸ್ವಿ ಪ್ರದರ್ಶನದ ಬಗ್ಗೆ ಯಾರಿಗೂ ಯಾವ ಸಂದೇಹವೂ ಇರಲಿಲ್ಲ. ಆದರೆ ಮೈಕಲ್ ಜಾಕ್ಸನ್ ಮಾಧ್ಯಮದೆದುರು ಹೇಳಿಕೆ ಕೊಟ್ಟ ಕೆಲವು ವಾರಗಳಲ್ಲೇ ಹೃದಯಾಘಾತದಿಂದ ಇಹಲೋಕವನ್ನು ತ್ಯಜಿಸಿದ್ದ. ಅವನ ಆಪ್ತಮೂಲಗಳು ಹೇಳುವ ಪ್ರಕಾರ ಕೊನೆಯ ದಿನಗಳಲ್ಲಿ ಯಶಸ್ವಿ ಪ್ರದರ್ಶನಕ್ಕಾಗಿ ಅವನ ಮೇಲೆ ಒತ್ತಡಗಳು ಹೆಚ್ಚಾಗಿ ಉಸಿರಾಟದಲ್ಲಿ ಏರುಪೇರಾಗಿ ಲಕ್ವದಂತಹ ಆಘಾತಗಳು ಆಗಾಗ ಅವನನ್ನು ಪೀಡಿಸುತ್ತಿದ್ದವು. "ದಿಸ್ ಈಸ್ ಇಟ್" ಈ ಎಲ್ಲಾ ಪ್ರದರ್ಶನಗಳ ತರಬೇತಿ-ಅಭ್ಯಾಸಗಳ ಚಿತ್ರೀಕರಿಸಿ ಮಾಡಿ ತುಣುಕನ್ನು ಜನರ ಮುಂದಿರಿಸಿದ ಒಂದು ಸಾಕ್ಷ್ಯಚಿತ್ರ. ಎಲ್ಲಾ ಪ್ರದರ್ಶನಗಳೂ ರದ್ದಾಗಿ ಟಿಕೆಟ್ ಹಣವನ್ನು ಸಂಯೋಜಕರು ಜನರಿಗೆ ಹಿಂತಿರುಗಿಸಬೇಕಾಯಿತು. ಸಂಗೀತ ಪ್ರಿಯರ ದೈವವೇ ಇಲ್ಲದ ಮೇಲೆ ಇನ್ನೆಲ್ಲಿಯ ಸ್ಟೇಜ್ ಷೋ, ಇನ್ನೆಂಥಾ ಕುಣಿತ!

ಇವತ್ತು ಮೈಕಲ್ ಜಾಕ್ಸನ್ ಎಂಬ ಅದ್ಭುತ ನಮ್ಮೊಂದಿಗಿಲ್ಲ. ಇರುವುದು ಸಾವಿರ ನೆನೆಪುಗಳು ಮಾತ್ರ. ಆತ ದೇಶ-ಕಾಲ-ಭಾಷೆವೆನ್ನದೆ ಬಿಟ್ಟುಹೋದ ಆ ಹೆಜ್ಜೆಗುರುತುಗಳು. ನೆವರ್ಲ್ಯಾಂಡ್ ನಲ್ಲಿ ಈಗಲೂ ಮೈಕಲ್ ಖರೀದಿಸಿದ ಕಲಾಕೃತಿಗಳ ಬೃಹತ್ ಸಂಗ್ರಹವಿದೆ. ಮೈಕಲ್ ಜಾಕ್ಸನ್ ನನ್ನು ಶಬ್ದಗಳಲ್ಲಂತೂ ಹಿಡಿದಿಡಲು ಸಾಧ್ಯವಿಲ್ಲ. ಮೊದಲೇ ಹೇಳಿದಂತೆ ನಿರ್ಲಿಪ್ತ ಭಾವದಿಂದ ಯೋಚಿಸಿದರೆ ಮಾತ್ರ ಮೈಕಲ್ ನನ್ನು ಅಲ್ಪವಾದರೂ ಅರಿಯಬಹುದು. ಇಲ್ಲದಿದ್ದರೆ ಗಾಸಿಪ್ಗಳ ಮಧ್ಯದಲ್ಲಿ ಹಲವು ಸತ್ಯಗಳು ಕಳೆದುಹೋಗುವ ಸಂಭವವಿದೆ. ಮೈಕಲ್ನನ್ನು ಸಂಪೂರ್ಣವಾಗಿ ಯಾರೂ ಜೀವಿತಾವಧಿಯಲ್ಲಿ ಅರಿಯಲಾಗಲಿಲ್ಲ. ಈ ಮಾತು ಆತನ ತೀರಾ ಆಪ್ತರಾದ ತಾಯಿ ಕ್ಯಾಥರೀನ್, ಮೊದಲ ಪತ್ನಿ ಲೀಸಾ ಪ್ರಿಸ್ಲೀ ಮತ್ತು ದಿವಂಗತ ಹಾಲಿವುಡ್ ತಾರೆ ಐವತ್ತರ ದಶಕದ ಸೌಂದರ್ಯದ ಖಣಿ ಎಲಿಝಬೆತ್ ಟೇಲರ್ಗೂ ಅನ್ವಯಿಸುತ್ತದೆ. ಅಲ್ಲೊಬ್ಬ ಮ್ಯೂಸಿಕಲ್ ಜೀನಿಯಸ್ ಇಲ್ಲಿ ಒಬ್ಬ ಜೀವನವೆಂಬ ಸಂಗೀತದ ಅನನುಭವಿ, ಆ ದಡ ಐವತ್ತರ ಪೇಲವ ಶರೀರವಾದರೆ ಇನ್ನೊಂದು ದಡವಾಗಿ ಮಗುವಿನ ಹೃದಯ, ಅಲೊಬ್ಬ ಬಿಲಿಯನೇರ್ ಆದರೆ ಇಲ್ಲಿ ಹಣವನ್ನು ಹೇಗೆ ವ್ಯಯಿಸಬೇಕೆಂದು ಗೊತ್ತಿಲ್ಲದ ಬಡವ, ಅದೊಂದು ಮಿಶ್ರ ಸಂಯೋಜನೆಯಾಗಿತ್ತು. ಮೈಕಲ್ನ ಬಾಲ್ಯದಿಂದ ಕೊನೆಯವರೆಗೂ ಸ್ನೇಹಿತನಾಗಿದ್ದುದರ ಜೊತೆ ಆತನನ್ನು ಮತ್ತು ಆತನ ಕುಟುಂಬವನ್ನು ಸರಿಸುಮಾರು 4 ದಶಕಗಳಿಂದ ಬಲ್ಲವರಾಗಿದ್ದು ಮೈಕಲ್ನ ಅದ್ಭುತ ಆತ್ಮಕತೆಯನ್ನು ನೇರವಾಗಿಯೂ, ವಿಮರ್ಶಾತ್ಮಕವಾಗಿಯೂ ಬರೆದ ಅನುಭವಿ ಲೇಖಕರೂ, ಸಿಬಿಎಸ್ ನ್ಯೂಸ್ ಚಾನೆಲ್ನ ಸಂಯೋಜಕರೂ ಆದ ಜೆ. ರಾಂಡಿ ಟಾರಬೊರೆಲಿ ಕೂಡ ಈ ಮಾತನ್ನು ಪುಷ್ಟೀಕರಿಸುತ್ತಾರೆ. ಮೈಕಲ್ ಬಷೀರ್ ನ ಸಾಕ್ಷ್ಯಚಿತ್ರದ ಕೊನೆಯ ಭಾಗದಲ್ಲಿ ಹೀಗೆ ಹೇಳುತ್ತಾನೆ, "ಒಂದು ಪಕ್ಷ ಯಾರಾದರೂ ಬಂದು ಜಗತ್ತಿನ ಎಲ್ಲಾ ಮಕ್ಕಳೂ ಅದೃಶ್ಯರಾದರು ಅಥವಾ ಇನ್ನು ಮಕ್ಕಳೆಂಬುದೇ ಇಲ್ಲವೆಂದಾದರೆ ಅದೇ ಕ್ಷಣ ನಾನು ಬಾಲ್ಕನಿಯಿಂದ ಹಾರಿ ಪ್ರಾಣಕಳೆದುಕೊಳ್ಳುತ್ತೇನೆ". ಇದೊಂದು ವಿವಾದ ಕೇಂದ್ರಬಿಂದುವಾದ ಹೇಳಿಕೆ. ಮೈಕಲ್ ಮುಗ್ಧತೆಯಲ್ಲೇ ಸುಖವನ್ನು ಹುಡುಕಹೊರಟ ಒಬ್ಬ ಜೋಗಿ. ಯಾರು ಏನೇ ಅಂದರೂ ಅವನೊಬ್ಬ ಪ್ರಪಂಚ ಕಂಡ ಶ್ರೇಷ್ಠ ಕಲಾವಿದ ಎಂಬುದರಲ್ಲಿ ಎರಡುಮಾತಿಲ್ಲ.


- ಪ್ರಸಾದ್
ಅಂತಿಮ ಬಿ.ಟೆಕ್, ಎನ್.ಐ.ಟಿ.ಕೆ.ಸುರತ್ಕಲ್.

2 comments:

SHAN said...

"ಸಾಮಾನ್ಯವಾಗಿ ಕೌತುಕಗಳ ಆಗರವಾಗಿರುವ ಬಣ್ಣದ ಜಗತ್ತಿನ ಅಂತರಂಗ ಬೇರೆಯೇ ಮುಖವನ್ನು ಹೊಂದಿರುವುದು ಮಾತ್ರ ವಿಚಿತ್ರ ಮತ್ತು ವಿಪರ್ಯಾಸ"
ನಿಜವಾಗಿಯೂ ಅಕ್ಷರಶಃ ಸತ್ಯ
ಮೈಕಲ್ ಜಾಕ್ಸನ್ ನ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದೀರ ತುಂಬಾ ಥ್ಯಾಂಕ್ಸ್

prasad said...

Thank you for the feedback...
Regards,
Prasad
WAPCOS Ltd.
(Govt. of India undertaking)
Gurgaon,Haryana

Post a Comment