ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಭೂಗತ ಜಗತ್ತು ಇವತ್ತು ನಮ್ಮ ನಿರ್ದೇಶಕ, ನಿರ್ಮಾಪಕರನ್ನು ಅತಿಯಾಗಿ ಆಕರ್ಷಿಸುತ್ತಿರುವ ವಿಷಯ. ಭೂಗತ ಜಗತ್ತಿನ ಆಗು-ಹೋಗುಗಳು, ಕ್ರೌರ್ಯ, ಹಿಂಸೆ, ಭೂಗತ ದೊರೆಗಳ ಪಿತೂರಿ ಇವೆಲ್ಲಾ ಸಿನಿಮಾ ಮಂದಿಯನ್ನು ನಿದ್ದೆಗೆಡಿಸುತ್ತಿರುವ ವರ್ತಮಾನಗಳು. ಭೂಗತ ಜಗತ್ತಿನ ಕಥೆಯನ್ನಿಟ್ಟುಕೊಂಡು ಹಲವಾರು ಚಿತ್ರಗಳು ಈಗಾಗಲೇ ಬಾಲಿವುಡ್ನಲ್ಲಿ ಬಂದಿವೆ. ಆದರೂ ಅದರ ಬಗ್ಗೆ ಇನ್ನಷ್ಟು ಚಿತ್ರಗಳನ್ನು ಹೊರತರುವ ಹಂಬಲ ನಮ್ಮ ನಿರ್ದೇಶಕರದ್ದು.


ಭಾರತದಲ್ಲಿ ಯಾವಾಗ ಸಿನೆಮಾ ಒಂದು ಉದ್ಯಮವಾಗಿ, ಲಾಭ ತರುವ ಕ್ಷೇತ್ರವಾಗಿ ಬೆಳೆಯಿತೋ ಅಂದಿನಿಂದ ಸಿನೆಮಾಗಳ ನೈಜತೆ ಬದಲಾಯಿತು. ಅಲ್ಲಿವರೆಗೂ ಪೌರಾಣಿಕ ಹಾಗೂ ಸಾಮಾಜಿಕ ವಿಷಯಗಳು ಚಿತ್ರಗಳ ಮುಖ್ಯ ಕಥಾವಸ್ತುವಾಗಿತ್ತು. 1975ರಲ್ಲಿ ಬಿಡುಗಡೆಯಾದ "ಶೋಲೆ" ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಕ್ರೌರ್ಯ, ಹಿಂಸೆ, ಮೋಸದ ದೃಶ್ಯಗಳನ್ನೊಳಗೊಂಡ "ಶೋಲೆ" ಚಿತ್ರ ಸೂಪರ್ ಹಿಟ್ ಚಿತ್ರವಾಯಿತು.

ಅಲ್ಲಿಂದೀಚೆಗೆ ಚಿತ್ರರಂಗದ ಗತಿ ಬದಲಾಯಿತು. "ಶೋಲೆ" ಚಿತ್ರದ ಯಶಸ್ಸಿನ ನಂತರ ಹಿಂಸೆ, ಕ್ರೌರ್ಯಗಳನ್ನೊಳಗೊಂಡ ಅನೇಕ ಸಿನಿಮಾಗಳು ಒಂದರ ಹಿಂದೊಂದರೆ ಬಂದವು. ಇಂತಹ ಚಿತ್ರಗಳಿಗೆ ಅದರದೇ ಆದ ಪ್ರೇಕ್ಷಕ ವರ್ಗ ಹುಟ್ಟಿಕೊಂಡಿತು. ಅಮಿತಾಬ್ ಬಚ್ಚನ್ ಅವರ "ಡಾನ್" ಚಿತ್ರವು ಕೂಡಾ ಭೂಗತ ಜಗತ್ತಿನ ಕಥಾ ಹಂದರವನ್ನು ಒಳಗೊಂಡ ಚಿತ್ರ. ಸಮಾಜವನ್ನು ಹಿಡಿತದಲ್ಲಿಟ್ಟುಕೊಂಡು ಭೂಗತ ಜಗತ್ತಿನ ದೊರೆಯಾಗಿ ಮರೆಯುತ್ತಿದ್ದವನೊಬ್ಬ ಪೋಲೀಸರಿಂದ ತಪ್ಪಿಸಿಕೊಳ್ಳುವ ಸಾಹಸ, ಮೋಸ, ಕ್ರೌರ್ಯ ಇವೆಲ್ಲ "ಡಾನ್" ಚಿತ್ರದ ಮುಖ್ಯ ಕಥಾವಸ್ತು.

ಇಲ್ಲಿವರೆಗೂ ಭೂಗತ ಜಗತ್ತಿನ ಕಥೆಯನ್ನೊಳಗೊಂಡ ಅನೇಕ ಚಿತ್ರಗಳು ಬಂದಿವೆ. ಸಮಾಜದಲ್ಲಿ ಅರಿವನ್ನು ಮೂಡಿಸಿ, ಶಿಕ್ಷಣ ನೀಡಿ, ಜಾಗೃತಿಯನ್ನು ಹರಡಬೇಕಿದ್ದ ಸಿನಿಮಾಗಳಲ್ಲಿ ಇವತ್ತು ಹಿಂಸೆ, ಕ್ರೌರ್ಯ, ಅಶ್ಲೀಲತೆ ಮೆರೆದಾಡುತ್ತಿದೆ. ವಿಪರ್ಯಾಸವೆಂದರೆ ನಮ್ಮ ಜನರೂ ಇದನ್ನು ಇಷ್ಟಪಡುತ್ತಾರೆ. ಇದಕ್ಕೆ ಒಗ್ಗಿಕೊಂಡಿದ್ದಾರೆ. ಇಂತಹ ಚಿತ್ರಗಳು ಯುವಜನತೆಯನ್ನು ಆಕರ್ಷಿಸುವುದರಿಂದ ನಿರ್ಮಾಪಕರು ಅದನ್ನು ತಯಾರಿಸುವುದರಲ್ಲಿ ಉತ್ಸಾಹ ತೋರುತ್ತಾರೆ. ಇಂತಹ ಸಿನೆಮಾಗಳಿಂದ ಯುವಕರಿಗೆ ಯಾವ ನೀತಿ, ಪಾಠ ದೊರಕುತ್ತದೋ ? ದೇವರಿಗೇ ಗೊತ್ತು. ಇಂತಹ ಸಿನಿಮಾಗಳಿಂದ ಪ್ರಭಾವಿತರಾದ ಯುವಕರು ಇಂದು ಅಡ್ಡ ದಾರಿ ಹಿಡಿಯುತ್ತಾರೆ.

ಕನ್ನಡ ಚಿತ್ರಗಳಲ್ಲೂ ತೊಂಭತ್ತರ ದಶಕದಲ್ಲಿ ಭೂಗತ ಪಾತಕಿಗಳ ಹಿಂಸೆ, ಕ್ರೌರ್ಯ ಚಿತ್ರಗಳಲ್ಲಿ ಮೂಡಿ ಬರಲು ಆರಂಭವಾಯಿತು. ಉಪೇಂದ್ರ ನಿರ್ದೇಶನದ "ಓಂ" ಚಿತ್ರ ಇದಕ್ಕೆ ಸಾಕ್ಷಿ. ಬೆಂಗಳೂರಿನ ಭೂಗತ ಜಗತ್ತಿನ ಹಿಂಸೆ, ಕ್ರೌರ್ಯವನ್ನು ಬಯಲು ಮಾಡುವಲ್ಲಿ ಈ ಚಿತ್ರ ಸಾಕಷ್ಟು ಯಶಸ್ವಿಯಾಯಿತು. ಇಂದು ಬಾಲಿವುಡ್ನಲ್ಲಿ ಹಲವು ಸಿನಿಮಾಗಳಿಗೆ ಭೂಗತ ದೊರೆಗಳು ಹಣ ಹೂಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತವೆ. ಬಾಲಿವುಡ್ನ ಕೆಲವು ಮಂದಿ ಭೂಗತ ಜಗತ್ತಿನೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ವಿವಾದಗಳು ಮಾಧ್ಯಮಗಳಲ್ಲಿ ಸಾಮಾನ್ಯ ಸುದ್ದಿಯಾಗಿದೆ. ಸಿನೆಮಾದಲ್ಲಿ ಮಾತ್ರವಲ್ಲದೆ ಸಿನೆಮಾದ ಹೊರಗೂ ಭೂಗತ ಜಗತ್ತಿನ ನಂಟು ಸಿನಿಮಾ ಮಂದಿಗಿದೆ.

ಭೂಗತ ಜಗತ್ತಿನ ಕಥಾ ಹಂದರಗಳನ್ನೊಳಗೊಂಡ ಅನೇಕ ಚಿತ್ರಗಳು ಹಿಂದಿ ಸೇರಿದಂತೆ ಕನ್ನಡ, ತಮಿಳು, ಮಲೆಯಾಳ ಭಾಷೆಗಳಲ್ಲಿ ಬಂದಿವೆ. ಭೂಗತ ಜಗತ್ತಿನ ಹಿಂಸೆ, ಕ್ರೌರ್ಯ, ರೌಡಿಗಳ ಕೆಟ್ಟ ಜೀವನ, ಅಶ್ಲೀಲತೆ ಇವೆಲ್ಲ ಸಿನೆಮಾಗಳಲ್ಲಿ ವೈಭವೀಕೃತಗೊಂಡಿವೆ. ಇನ್ನು ಭೂಗತ ಜಗತ್ತಿನವರಿಗೂ ಭಾವನೆಗಳಿವೆ. ರೌಡಿಗಳಿಗೂ ಪ್ರೀತಿಸುವ ಹೃದಯ ಇದೆ ಎಂದು ಮನೋಜ್ಞವಾಗಿ ತೋರಿಸಿಕೊಟ್ಟ ಚಿತ್ರ ಹಿಂದಿಯ "ಗ್ಯಾಂಗ್ ಸ್ಟಾರ್". ನಂತರದ ದಿನಗಳಲ್ಲಿ ಇಂತಹ ಕಥೆಯನ್ನಾಧರಿಸಿಯೇ ಅನೇಕ ಚಿತ್ರಗಳು ಬಂದಿವೆ.

ಭೂಗತ ಜಗತ್ತಿನ ಕಥಾವಸ್ತುವುಳ್ಳ ಚಿತ್ರಗಳು ಸಹಜವಾಗಿ ಸೆನ್ಸಾರ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಲವಾರು ಬಾರಿ ಇಂತಹ ಚಿತ್ರಗಳಿಗೆ ಸರ್ಟಿಫಿಕೇಟ್ ನೀಡುವಲ್ಲಿ ಸೆನ್ಸಾರದ ಮಂಡಳಿ ಗೊಂದಲಕ್ಕೀಡಾಗಿದೆ. ದೃಶ್ಯಗಳಿಗೆ ಕತ್ತರಿ ಹಾಕಿದ ಸೆನ್ಸಾರ್ ಸದಸ್ಯರ ತಲೆ ಹೋದ ಘಟನೆಗಳು ಹಲವಾರು. ಎಷ್ಟೆಂದರೂ ಭೂಗತ ಲೋಕದ ಜನರಲ್ಲವೇ? ಇರಲಿ...ಅದೇನೇ ಇದ್ದರೂ, ಬಹಳ ಹಳೆಯ ಕಥಾವಸ್ತುವಾದರೂ ಭೂಗತ ಜಗತ್ತಿನ ಚಿತ್ರಗಳು ಇನ್ನೂ ಬಾಲಿವುಡ್ನಲ್ಲಿ ಬರುತ್ತಲೇ ಇವೆ. ನಮ್ಮ ನಿರ್ದೇಶಕರು ಹೊಸತನದೊಂದಿಗೆ ಅದನ್ನು ಬೆಳ್ಳಿತೆರೆಯ ಮೇಲಿಡುವ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ.

- ಶ್ವೇತಾ, ಪ್ರಥಮ ಬಿ.ಎ.
ಪತ್ರಿಕೋದ್ಯಮ ವಿಭಾಗ,ಗೋವಿಂದ ದಾಸ ಕಾಲೇಜು, ಸುರತ್ಕಲ್.

1 comments:

Anonymous said...

Nice write, nice narration.

Post a Comment