ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಗುಂಪು ಎಂಬ ಒಂದು ಸಾಮಾಜಿಕ ಅಥವಾ ಸಾಂಸ್ಥಿಕ ವ್ಯವಸ್ಥೆಯೊಂದರಲ್ಲಿ ಅಭಿಪ್ರಾಯ ಬೇಧಗಳು ಬರುವುದು ಸಾಮಾನ್ಯ. ವಿರೋಧವೆಂಬ ವಾದಸರಣಿ ಇದ್ದರೆ ಮಾತ್ರ ವಿಚಾರಧಾರೆಗಳ ವಿಮರ್ಶಾತ್ಮಕ ಅವಲೋಕನ ಸಾಧ್ಯವಾಗುತ್ತದೆ. ಇದೇ ಕಾರಣಕ್ಕಾಗಿ ಆಡಳಿತ ಪಕ್ಷಗಳ ಕಾರ್ಯವೈಖರಿಯ ಮೇಲೆ ಕಣ್ಣಿಡುವುದರ ಜೊತೆ ಸಲಹೆ ಸೂಚನೆಗಳನ್ನೂ ಕಾಲಕಾಲಕ್ಕೆ ನೀಡುತ್ತಾ ನಾಡಿನ ಅಭಿವೃದ್ಧಿಗೆ ಶ್ರಮಿಸಲು ವಿರೋಧ ಪಕ್ಷಗಳ ಕಲ್ಪನೆ ಸಂವಿಧಾನದಲ್ಲಿ ಜನ್ಮತಾಳಿತು. ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಆಡಳಿತ ಪಕ್ಷಗಳು ಏನೇ ಮಾಡಿದರೂ ಅದಕ್ಕೆ ವಿರೋಧವನ್ನು ವ್ಯಕ್ತಪಡಿಸುವುದೇ ತಮ್ಮ ಜನ್ಮಸಿದ್ಧ ಹಕ್ಕೆನ್ನುವಂತೆ ವಿರೋಧಪಕ್ಷಗಳ ವರ್ತನೆ ಕಾಣಬರುತ್ತಿರುವುದು ಸಾಮಾನ್ಯವಾಗಿದೆ. ನಮ್ಮ ರಾಜ್ಯ ರಾಜಕಾರಣ ಆಡಳಿತ ಪಕ್ಷ, ವಿರೋಧ ಪಕ್ಷವೆಂಬ ಭೇದವಿಲ್ಲದೆ ಭಿನ್ನಮತ, ಪಕ್ಷಪಾತ ಇತ್ಯಾದಿ ಇತ್ಯಾದಿಗಳ ಕಲಸುಮೇಲೋಗರವಾಗಿ ಹಾಸ್ಯಾಸ್ಪದವಾಗಿ ಬದಲಾಗಿರುವುದು ನಾಚಿಕೆಗೇಡಿನ ವಿಷಯ.ಕರ್ನಾಟಕದ ಪ್ರಸ್ತುತ ರಾಜಕಾರಣದ ಬಗ್ಗೆ ಹೇಳುವುದಾದರೆ ಅಭಿಪ್ರಾಯಭೇದಗಳು ಭಿನ್ನಮತದ ರೂಪತಾಳಿರುವುದು ಗುಟ್ಟಿನ ವಿಚಾರವಾಗೇನೂ ಉಳಿದಿಲ್ಲ. ವಿಪರ್ಯಾಸವೆಂದರೆ ಈ ರಾಜ್ಯದ ಆಡಳಿತ ಪಕ್ಷದ ವಿಚಾರದಲ್ಲಿ ಭಿನ್ನಮತವೆಂಬುದು ಎಷ್ಟರ ಮಟ್ಟಿಗೆ ಸಾಮಾನ್ಯವಾಗಿದೆಯೆಂದರೆ ಜನರಿಗೂ ಕೇಳಿ ಕೇಳಿ ಸಾಕಾಗಿದೆ. ಪಾಕಿಸ್ತಾನದ ಗಲ್ಲಿ ಗಲ್ಲಿಗಳಲ್ಲಿ ಬಾಂಬ್ ಸ್ಪೋಟವಾದ ಸುದ್ದಿಯಂತೆ, ಆಗಾಗ ಮಾಧ್ಯಮದ ಮುಂದೆ ಏನೇನೋ ಕಪಿ ಚೇಷ್ಟೆ ಮಾಡುತ್ತಾ ಸುದ್ದಿಯಾಗುವ ರೂಪದರ್ಶಿ ರಾಖಿ ಸಾವಂತಳಂತೆ, ರಸ್ತೆ ಅಪಘಾತಗಳಂತೆ ಬಿಜೆಪಿಯ ಭಿನ್ನಮತ ರಾಜ್ಯದ ಜನತೆಗೆ ಅದ್ಹ್ಯಾಗೋ ಒಗ್ಗಿಕೊಂಡು ಬಿಟ್ಟಿದೆ. ಇಂದು ಕೆಲವು ಶಾಸಕರು ರೆಸಾರ್ಟ್ಟಗೆ ತೆರಳಿ ಸುದ್ದಿಯಾದರೆ ಮರುದಿನ ಮುಖ್ಯಮಂತ್ರಿಗಳೋ, ಪಕ್ಷದ ರಾಜ್ಯಾಧ್ಯಕ್ಷರೋ ಅದೊಂದು "ಹಾಗೆ ಸುಮ್ಮನೆ" ಚಹಾಕೂಟವಾಗಿತ್ತು ಮತ್ತು ಪಕ್ಷದ ಮುಂದಿನ ಕಾರ್ಯಸೂಚಿಗಳ ಬಗ್ಗೆ ಚರ್ಚೆಯಾಯಿತು ಎಂದು ಜನತೆ ಕುರಿಗಳೆಂಬಂತೆ ವಿವರಣೆ ನೀಡುತ್ತಾರೆ. ಅಲ್ಲೋ ಇಲ್ಲೋ ಒಬ್ಬಿಬ್ಬರು ಮಂತ್ರಿಗಳು ಪಕ್ಷವೆಂದರೆ ಅಭಿಪ್ರಾಯಭೇದಗಳು ಉಂಟಾಗುವುದು ಸಾಮಾನ್ಯ, ಆದರೆ ಪಕ್ಷದೊಳಗಡೆ ನಾಯಕತ್ವ ಬದಲಾವಣೆಯ ಬೇಡಿಕೆಯಾಗಲೀ ಇತರ ಭಿನ್ನಮತವಾಗಲೀ ಇರುವುದು ಶುದ್ಧಸುಳ್ಳು ಎಂದು ಅತ್ತ ಹಾವೂ ಸಾಯದಂತೆ ಇತ್ತ ಕೋಲೂ ಮುರಿಯದಂತೆ ಹೇಳಿಕೆ ಕೊಡುತ್ತಾರೆ.

ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಜಾಣತನದಿಂದ ಹೇಳುವ ಪರಿಯಿದು. ಕೆಲವು ಖಾಸಗಿ ಚಾನೆಲ್ ಗಳು ಆಗಾಗ ರಸ್ತೆ, ನೀರು ಮುಂತಾದ ಮೂಲಭೂತ ಸೌಕರ್ಯವಿಲ್ಲದ ರಾಜ್ಯದ ಕುಗ್ರಾಮಗಳ ಪರಿಚಯ ಮಾಡಿಕೊಟ್ಟು ಸರಕಾರದ ಗಮನ ಸೆಳೆಯುತ್ತಾ ತಮ್ಮ ಜವಾಬ್ದಾರಿಯನ್ನು ತಮ್ಮ ಪರಿಧಿಯಲ್ಲೇ ನಿಭಾಯಿಸಿಕೊಂಡು ಬರುತ್ತಿವೆ. ಆದರೆ ನಮ್ಮ ಚುನಾಯಿತ ರಾಜಕಾರಣಿಗಳು ರೆಸಾರ್ಟ್ಗಳಲ್ಲಿ, ಬಿಜೆಪಿ ರಾಷ್ಟ್ರನಾಯಕರುಗಳ ನಿವಾಸಗಳಲ್ಲಿ ದೂರುಗಳೊಂದಿಗೆ ಜೂಜಾಡುತ್ತಾ ತಮ್ಮ ತಮ್ಮ ಅಭಿವೃದ್ಧಿಗಳ ಚಿಂತೆಯಲ್ಲೇ ಮುಳುಗಿಹೋಗಿರುವಾಗ ರಾಜ್ಯದ ಬಗ್ಗೆ ಚಿಂತಿಸಲು ಅವರಿಗೆ ಸಮಯವಾದರೂ ಎಲ್ಲಿ.

ಇವೆಲ್ಲದರ ಮಧ್ಯೆ ಕರ್ನಾಟಕ ತನ್ನ ಇತಿಹಾಸದಲ್ಲೇ ಕಂಡ ಅತ್ಯಂತ ದುರ್ಬಲ ಹಾಗೂ ಪ್ರಮುಖ ವಿರೋಧಪಕ್ಷವಾದ ಕಾಂಗ್ರೆಸ್ ಕೂಡ ಭಿನ್ನಮತದ ಭೂತದಿಂದ ಹೊರತಾಗಿಯೇನೂ ಇಲ್ಲ. ರಾಜ್ಯದಲ್ಲಿ ವಿರೋಧ ಪಕ್ಷದ ಅಸ್ತಿತ್ವವೇ ಇಲ್ಲವೇನೋ ಎಂಬಂಥ ಶೋಚನೀಯ ಸ್ಥಿತಿಗೆ ಕಾಂಗ್ರೆಸ್ ತಲುಪಿದಾಗ ನೆರೆಯಲ್ಲಿ ಕೊಚ್ಚಿ ಹೋಗುತ್ತಿರುವಾಗ ಆಸರೆಯಾಗಿ ಕಡ್ಡಿಯಂತೆ ದೊರಕಿದ ಪಾದಯಾತ್ರೆಯ ಗಿಮಿಕ್ ಕಾಂಗ್ರೆಸ್ ಗೆ ತಕ್ಕಮಟ್ಟಿನ ಶಕ್ತಿಯನ್ನು ನೀಡಿತು. ಆದರೆ ಈಗ ಪುನಃ ಪದಾಧಿಕಾರಿಗಳ ಆಯ್ಕೆಯ ವಿಷಯದಲ್ಲಿ ಬಿಜೆಪಿಯಂತೆ ಕಾಂಗ್ರೆಸ್ ನಲ್ಲೂ ಅಸಮಧಾನ ಹೊಗೆಯಾಡುತ್ತಿದೆ. ವಿರೋಧಿ ಪಕ್ಷದ ಪ್ರಭಾವಿ ಮುಖಂಡರಲ್ಲೊಬ್ಬರಾದ ಡಿಕೆಶಿ ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯನವರು ಪದಾಧಿಕಾರಿಗಳ ಆಯ್ಕೆಗೆ ನಡೆದ ಪಕ್ಷದ ಕಾರ್ಯಕಾರಿ ಸಭೆಗೆ ಗೈರುಹಾಜರಾಗಿ ಇದರ ಸುಳಿವನ್ನು ಬಹಿರಂಗವಾಗಿಯೇ ನೀಡಿದರು.

ಹಾಗೆ ನೋಡಿದರೆ ಡಾ. ಪರಮೇಶ್ವರ್ರವರ ಹೊಸ ನಾಯಕತ್ವ ಪಕ್ಷಕ್ಕೆ ಹೊಸ ಇಮೇಜನ್ನೇನೂ ಇಲ್ಲಿಯವರೆಗೆ ತಂದು ಕೊಡಲಿಲ್ಲ ಮತ್ತು ಮುಂದಿನ ದಿನಗಳಲ್ಲೂ ಹೊಸ ಇಮೇಜನ್ನು ತಂದು ಕೊಡುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ದೇಶಪಾಂಡೆಯವರ ಕಾಲದಿಂದಲೂ ನಿಂತ ನೀರಾದ ಕಾಂಗ್ರೆಸ್ ಬಿಬಿಎಂಪಿ, ಉಪಕ್ಷೇತ್ರಗಳೆಂಬ ಭೇದವಿಲ್ಲದೆ ಒಂದರಮೇಲೊಂದರಂತೆ ಎಲ್ಲಾ ಚುನಾವಣೆಗಲ್ಲೂ ನೀರಸ ಪ್ರದರ್ಶನವನ್ನು ನೀಡುತ್ತಾ ಆಡಳಿತ ಪಕ್ಷಕ್ಕೆ ಯಾವುದೇ ರೀತಿಯಲ್ಲಿ ಪೈಪೋಟಿಯನ್ನು ಕೊಡದೆ ನೆಲಕಚ್ಚಿ ಹೋಗಿದೆ. ಈಗಿನ ಈ ಹೊಸ ಪಕ್ಷದ ನಾಯಕರೊಳಗಿನ ಅಸಮಧಾನದ ಹೊಸ ವಿವಾದ ಕೂಡ ಗಾಯದ ಮೇಲೆ ಬರೆಯೆಳೆದಿದೆ. ಕೆಲವೇ ದಿನಗಳ ಹಿಂದೆ ನಡೆದ ಕಾಂಗ್ರೆಸ್ ಯುವನಾಯಕ ಮತ್ತು ಮುಂದಿನ ಪ್ರಧಾನಿಯೆಂದೇ ಬಿಂಬಿತವಾಗುತ್ತಿರುವ ರಾಹುಲ್ ಗಾಂಧಿಯವರ ರಾಜ್ಯ ಕರಾವಳಿಯ ಭೇಟಿಯಲ್ಲೂ ಕೂಡ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದರೂ ಕೂಡ ಹಿರಿಯ ಅನುಭವಿ ರಾಜ್ಯ ಕಾಂಗ್ರೆಸ್ ನಾಯಕರು ಯುವವರ್ಚಸ್ಸಿನ ಮಧ್ಯದಲ್ಲಿ ತಮ್ಮ ಇರುವಿಕೆಯನ್ನೇನೂ ತೋರಿಸಿಕೊಡಲಾರದೆ ಮಂಕಾಗಿ ಹೋದರು. ಬಿಜೆಪಿಯು ಜೆಡಿಎಸ್ ನ ಹೊರತಾಗಿ ಪ್ರಧಾನ ವಿರೋಧ ಪಕ್ಷದ ದೌರ್ಬಲ್ಯದ ಸಂಪೂರ್ಣ ಲಾಭವನ್ನು ಪಡೆಯುತ್ತಿರುವುದಂತೂ ಕಾಂಗ್ರೆಸ್ಸಿನವರೂ ಕೂಡ ಒಪ್ಪಿಕೊಳ್ಳಲೇಬೇಕಾದ ಸತ್ಯ.

ರಾಜ್ಯದ ಎರಡನೇ ಮುಖ್ಯ ವಿರೋಧಪಕ್ಷವಾದ ಜೆಡಿಎಸ್ ಹೇಳಿಕೊಳ್ಳುವಂಥದ್ದೇನೂ ಮಾಡಲಿಲ್ಲವಾದರೂ ಮುಖ್ಯಮಂತ್ರಿಗಳ ಹಗರಣಗಳ ಸರಮಾಲೆಯನ್ನು ಒಂದರ ಹಿಂದೆ ಮಾಧ್ಯಮಗಳ ಮುಂದಿರಿಸಿ ಬಿಜೆಪಿಯ ರಾಷ್ಟ್ರನಾಯಕರೂ ಬೆಚ್ಚಿಬೀಳುವಂತೆ ಮಾಡಿದ್ದು ಖಂಡಿತವಾಗಿಯೂ ಶ್ಲಾಘನೀಯ. ಇದಕ್ಕೆ ಹಲವು ಬಾರಿ ಸಂಕಷ್ಟಕ್ಕೀಡಾದ ಮುಖ್ಯಮಂತ್ರಿಯವರ ಕುರ್ಚಿಯೇ ಸಾಕ್ಷಿ. ಇವತ್ತು ಯಡಿಯೂರಪ್ಪನವರ ಹಗರಣಗಳು ಲೋಕಾಯುಕ್ತ ಇಲಾಖೆಯ ಅಲ್ಪ ಶಕ್ತಿಯ ನಡುವೆ ಕಾನೂನಿನ ಚೌಕಟ್ಟಿಗೆ ಬಂದು ಭೂಹಗರಣಗಳಲ್ಲದೆ ಅಕ್ರಮ ಗಣಿಗಾರಿಕೆಯೂ ಸೇರಿದಂತೆ ಸರ್ವೋಚ್ಚ ನ್ಯಾಯಾಲಯದವರೆಗೂ ಹೋಗಬೇಕಿದ್ದರೆ ಅದರಲ್ಲಿ ಜೆಡಿಎಸ್ ಪಾತ್ರ ಬಹಳಷ್ಟಿದೆ. ಮುಳ್ಳನ್ನು ಮುಳ್ಳಿಂದಲೇ ತೆಗೆಯುವಂತೆ ಬಿಜೆಪಿಯ ಆಪರೇಷನ್ ಕಮಲವನ್ನೇ ಜೆಡಿಎಸ್ ಬಳಸಿಕೊಂಡು ಬಿಜೆಪಿಯ ಭಿನ್ನಮತದ ಶಾಸಕರನ್ನು ತನ್ನೆಡೆಗೆ ಸೆಳೆಯಿತು. ಯಡಿಯೂರಪ್ಪನವರ ವಿಷಯ ಸಂಸತ್ತಿನಲ್ಲೂ ಕೋಲಾಹಲವುಂಟಾಗುವ ಮಟ್ಟಿಗೆ ಹೋಯಿತೆಂದರೆ ಅದರ ಸಂಪೂರ್ಣ ಕ್ರೆಡಿಟ್ ಜೆಡಿಎಸ್ ಗೆ ಸಲ್ಲಬೇಕು. ಆದರೆ ಎ.ರಾಜಾರ ಟೆಲಿಕಾಂ ಹಗರಣದ ಭ್ರಷ್ಟಾಚಾರದ ನೆಪವೊಡ್ಡಿ ಹಲವು ದಿನಗಳವರೆಗೆ ಸಂಸತ್ ಸದನವನ್ನು ಮುಂದುವರಿಯಲೇ ಬಿಡದೆ ಪಟ್ಟುಹಿಡಿದು ಸರಕಾರವನ್ನು ಬೀಳಿಸುವಷ್ಟರ ಮಟ್ಟಿಗೆ ಹೊರಟ ದೆಹಲಿ ಮಟ್ಟದ ಬಿಜೆಪಿಗೆ ರಾಜ್ಯದ ಬೆಳವಣಿಗೆಗಳಿಂದಾಗಿ ತೀವ್ರ ಹಿನ್ನಡೆಯಾಯಿತು. ಆಡ್ವಾಣಿಯವರಿಗೆ ಈ ಅವಧಿಯಲ್ಲಿ ಮುಖಭಂಗವಾಗಿದ್ದು ಸ್ಪಷ್ಟವಾಗಿತ್ತು. ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸುವ ವಿಷಯದಲ್ಲಿ ಅವರಿಗೆ ತೀವ್ರ ಅಸಮಧಾನವಾಗಿತ್ತು. ಅವರ ಮಾತುಗಳಿಗೆ ಸೊಪ್ಪು ಹಾಕಲು ಪಕ್ಷದ ಮೇಲೆ ಮೊದಲಿನಂತಹ ಹಿಡಿತದ ಕೊರತೆ ಒಂದು ಕಾರಣವಾದರೆ ಕರ್ನಾಟಕದಲ್ಲಿ ಚುನಾವಣೆಗಳ ವೇಳಾಪಟ್ಟಿ ಯಡಿಯೂರಪ್ಪನವರಿಗೆ ವರದಾನವಾಯಿತು.

ಈಗ ಇವರೇ ಅಲ್ಲದೆ ಪಕ್ಷದಲ್ಲಿ ಪ್ರಸ್ತುತ ಇರುವ ಅವಕಾಶವಂಚಿತ ಹಿರಿಯ ಬಿಜೆಪಿ ಮುಖಂಡರೂ, ಅತೃಪ್ತ ಶಾಸಕರೂ ಹಗರಣಗಳನ್ನು ಹಿಡಿದು ನಾಯಕತ್ವ ಬದಲಾವಣೆಗೆ ಅಹೋರಾತ್ರಿ ಕಸರತ್ತು ನಡೆಸುತ್ತಿದ್ದಾರೆ. ಇಂದು ಭಿನ್ನಮತದ ಜಪ ಮಾಡುತ್ತಾ ಬಾಯಿಗೆ ಬಂದಂತೆ ಬೈದರೆ ನಾಳೆ ಅದೇ ಮುಖಂಡರುಗಳು ಮುಖ್ಯಮಂತ್ರಿಗಳಿಗೆ "ನೀನೇ ದೈವ, ಪಾಹಿಮಾಂ ಪಾಹಿಮಾಂ" ಎಂದು ಅಗಾಗ ಯೂ-ಟರ್ನ್ ಹೇಳಿಕೆಗಳನ್ನು ಕೊಡುತ್ತಾ ತಾವು ಗಾಳಿ ಬಂದ ಕಡೆ ವಾಲುವ ಜಾತಿಗಳು ಎಂದು ಜನತೆಗೆ ಆಗಾಗ ನೆನಪಿಸುತ್ತಿದ್ದಾರೆ. ಇಲ್ಲಿಯವರೆಗೇನೋ ಯಡಿಯೂರಪ್ಪನವರು ರೇಣುಕಾಚಾರ್ಯ, ವರ್ತೂರು ಪ್ರಕಾಶರಂತಹ ಪದಾಕಾಂಕ್ಷಿಗಳನ್ನು ಮತ್ತು ಸರಕಾರಕ್ಕೆ ಅನಿವಾರ್ಯವೆನಿಸಿದ ರೆಡ್ಡಿ ಸಹೋದರರನ್ನೂ ಹಲವು ಪ್ರಯತ್ನಗಳಿಂದ ತಣ್ಣಗಿರಿಸಿ ತಮ್ಮ ಕುರ್ಚಿ ಉಳಿಸಿಕೊಳ್ಳುವುದರಲ್ಲಿ ಸಫಲರಾಗಿದ್ದಾರೆ. ದೆಹಲಿಯ ಬಿಜೆಪಿ ಪಾಳಯದಲ್ಲೂ ಮೊದಲ ದರ್ಜೆ , ಎರಡನೇ ದರ್ಜೆ ನಾಯಕರೆಂದು ಒಬ್ಬರನ್ನೊಬ್ಬರನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾ ಅರಾಜಕತೆಯ ಸೃಷ್ಟಿಯಾಗಿದೆ. ಅಟಲ್ ಬಿಹಾರಿ ವಾಜಪೇಯಿಯವರು ಅನಾರೋಗ್ಯದಿಂದ ತೆರೆಮರೆಗೆ ಸರಿದ ಮೇಲೆ ಉಕ್ಕಿನ ಮನೋಭಾವದ ನಾಯಕನೆಂದೇ ಗುರುತಿಕೊಳ್ಳುವ ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿಯವರ ಮಾತುಗಳಿಗೆ ಬೆಲೆಯೇ ಇಲ್ಲದಂತಾಗಿದೆ. ತಾನು ಪ್ರಧಾನಿಯಾಗುವ ಎಲ್ಲಾ ಲಕ್ಷಣಗಳು ಕೊನೆಯ ಮಹಾಚುನಾವಣೆಯಲ್ಲಿ ಮಣ್ಣುಪಾಲಾದ ಬಳಿಕ ಆಡ್ವಾಣಿಯವರು ರಾಷ್ಟ್ರರಾಜಕಾರಣದಲ್ಲಿ ಆಸಕ್ತಿಯನ್ನು ಕಳೆದುಕೊಂಡವರಂಥಾಗಿದ್ದಾರೆ. ಮುಂದಿನ ಬಿಜೆಪಿ ನಾಯಕತ್ವಕ್ಕೆ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ಅರುಣ್ ಜೇಟ್ಲಿಯವರಂತಹ ಪ್ರಭಾವಿ ನಾಯಕರು ತೆರೆಮರೆಯಲ್ಲಿ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಯಡಿಯೂರಪ್ಪನವರು ಸಮರ್ಥವಾಗಿ ಬಳಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿಯೇ ಈಗಲೋ ಮತ್ತೋ ಕುರ್ಚಿ ಬೀಳುತ್ತದೆ ಎಂಬಂಥ ಸಂಕೀರ್ಣ ಪರಿಸ್ಥಿತಿಗಳಲ್ಲೂ ಹಲವು ಬಾರಿ ದೆಹಲಿಯವರೆಗೆ ಹೋಗಿ ಯಡಿಯೂರಪ್ಪನವರು ವಿಜಯಿಯಾಗಿ ಮರಳಿದ್ದಾರೆ. ಮುಖ್ಯಮಂತ್ರಿಯವರ ಇಂತಹ ಅದೃಷ್ಟದ ಅವಧಿ ಇನ್ನು ಎಷ್ಟು ದಿನಗಳವರೆಗೆ ಮುಂದುವರಿಯುತ್ತದೆ ಎನ್ನುವುದು ಕುತೂಹಲಕಾರಿ ಪ್ರಶ್ನೆ. ಅದರ ನಡುವೆ ಭಿನ್ನಮತದ ಇನ್ನಷ್ಟು ಬಾಂಬುಗಳು ಬಿದ್ದರೂ ಆಶ್ಚರ್ಯವಿಲ್ಲ.

ಭಿನ್ನಮತವೆಂಬುದು ಪಕ್ಷಭೇದವಿಲ್ಲದೆ ರಾಜ್ಯರಾಜಕಾರಣದಲ್ಲಿ ಬೆರೆತುಹೋಗಿರುವುದು ಅಂಗೈ ಮೇಲಿನ ಹುಣ್ಣಿನಷ್ಟೇ ಸ್ಪಷ್ಟ. ಭಿನ್ನರದ್ದೇ ಒಂದು ಪಕ್ಷ ಮುಂದಿನ ದಿನಗಳಲ್ಲಿ ಮೂಡಿಬಂದರೂ ಪಕ್ಷಾಂತರಿಗಳಿಂದ ಮತ್ತು ಅಧಿಕಾರದ ಆಮಿಷಗಳಿಂದ ಹೆಚ್ಚು ಕಾಲ ನಡೆಯದಿರುವ ಸಾಧ್ಯತೆಗಳೂ ಅಧಿಕ. ರಾಜಕಾರಣಗಳ ಮನೋಸ್ಥಿತಿ ಬದಲಾಗಬೇಕಾಗಿರುವುದೇ ಒಂದು ಅನಿವಾರ್ಯ ಪರಿಹಾರ. ಚುನಾವಣೆಯ ಪ್ರಚಾರಕ್ಕೆ ಬೀದಿಗಿಳಿದಾಗ ಹೇಗೆ ಇದ್ದೆವೋ ಹಾಗೆಯೇ ಅಧಿಕಾರ ಒಲಿದು ಬಂದ ಮೇಲೂ ಜನರ ಜೊತೆ ತಾನೂ ಜನಸಾಮಾನ್ಯನಾಗಬೇಕು ಎಂಬ ಭಾವನೆ ಮೂಡಬೇಕಾಗಿದೆ. ಹಾಗೆಯೇ ಜನರೂ ಚಾಕಲೇಟಿನ ಹಿಂದೆ ಓಡುವ ಮಕ್ಕಳಂತೆ ಸಾರಾಯಿ, ಸೀರೆ, ಕೋಳಿಗಳ ಆಮಿಷಕ್ಕೆ ಬಲಿಬೀಳದೆ ಅರ್ಹ ಜನನಾಯಕನನ್ನು ಚುನಾಯಿತನನ್ನಾಗಿ ಮಾಡುವ ಅವಶ್ಯಕತೆಯೂ ಅಷ್ಟೇ ಇದೆ. ಇಲ್ಲದಿದ್ದರೆ ವಿಧಾನಸೌಧದ ಗೋಡೆಯ ಮೇಲ್ಭಾಗದಲ್ಲಿ ಕೆತ್ತಿಸಿದ "ಜನಸೇವೆಯೇ ಜನಾರ್ಧನ ಸೇವೆ" ಕಲ್ಲಾಗಿಯೇ ಉಳಿಯುತ್ತದೆ. ಮತ್ತು ಅದರ ದುಷ್ಪರಿಣಾಮಗಳಿಗೆ ಸಾಮಾನ್ಯ ಪ್ರಜೆಯೂ, ರಾಜಕಾರಣಿಯೂ ಸಮಾನ ಪಾಲುದಾರನಾಗುತ್ತಾನೆ.

- ಪ್ರಸಾದ್
ಬಿ.ಟೆಕ್ ಫೈನಲ್, ಎನ್.ಐ.ಟಿ.ಕೆ.ಸುರತ್ಕಲ್

0 comments:

Post a Comment