ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಸ್ಪೆಷಲ್ ಸ್ಟೋರಿ

ಕರಾವಳಿ ಜಿಲ್ಲೆಯ ಅತ್ಯಂತ ಸುಂದರ ತಾಣಗಳಲ್ಲೊಂದು ಪೊಸಡಿಗುಂಪೆ. ಇಲ್ಲಿನ ದೃಶ್ಯ ವೈಭವ ನೋಡುತ್ತಿದ್ದಂತೆಯೇ ಮನಸ್ಸು ಪುಳಕಿತಗೊಳ್ಳುತ್ತದೆ. ಸಂಜೆಯ ಆಹ್ಲಾದಕರ ಗಾಳಿಯ ನಡುವೆ ಮನಸ್ಸು ಪ್ರಕೃತಿಯಲ್ಲಿ ಲೀನವಾಗಿ ಬಿಡುತ್ತದೆ.ಸಮಯ ಕಳೆದದ್ದೇ ತಿಳಿಯುವುದಿಲ್ಲ ಅಂತಹ ಅದ್ಭುತ ಸ್ಪಾಟ್ ಇದು.. ಆದರೆ ಪ್ರವಾಸೋದ್ಯಮ ದೃಷ್ಠಿಯಿಂದ ಇದು ಅಭಿವೃದ್ಧಿ ಹೊಂದಿಲ್ಲ. ಪ್ರವಾಸೋದ್ಯಮವಾಗಿ ಪೊಸಡಿಗುಂಪೆ ಬೆಳೆದಿಲ್ಲ...ಒಂದಷ್ಟು ಚಾರಣಿಗರಿಗೆ, ಪರಿಸರಾಸಕ್ತರಿಗೆ, ನಿಸರ್ಗ ಪ್ರಿಯರಿಗೆ, ಸಿನೆಮಾ ಚಿತ್ರೀಕರಣಕ್ಕೆ ಪೊಸಡಿಗುಂಪೆ ಒಂದು ವೇದಿಕೆಯೊದಗಿಸಿ ಬಿಟ್ಟರೆ ಹೊರಜಗತ್ತಿಗೆ ಪ್ರವಾಸೋದ್ಯಮ ರೀತಿಯಲ್ಲಿ ಪೊಸಡಿಗುಂಪೆ ತೆರೆದುಕೊಂಡಿಲ್ಲ...ಓ ಪ್ರವಾಸೋದ್ಯಮ ಇಲಾಖೆಯೇ ಕೊಂಚ ನಿದ್ದೆ ಕೊಡವಿ ಹೊರಜಗತ್ತಿನತ್ತ ದೃಷ್ಠಿ ಹರಿಸಿ...


ಇದು ಗಡಿನಾಡು ಜಿಲ್ಲೆ , ಕರಾವಳಿ ತೀರದ ಕಾಸರಗೋಡಿನ ಬಾಯಾರು ಬಳಿ ವಿಶಾಲವಾಗಿ ಹರಡಿರುವ ಪೊಸಡಿಗುಂಪೆ. ಈ ಗುಂಪೆ ಗುಡ್ಡೆ ಎಂತಹವರ ಮನಸ್ಸಿಗೂ ಒಂದು ಶಕ್ತಿ ಕೊಡಬಲ್ಲ ಹಿಮಾಚ್ಚಾದಿತ ಸ್ವರ್ಗ. ಹಾಗಾಗಿಯೇ ಕವಿ ಕಯ್ಯಾರ ಕಿಞ್ಞಣ್ಣ ರೈಯವರು ಪೊಸಡಿಗುಂಪೆಯನ್ನು ಹೇಳಿದ್ದು ಇದೊಂದು ಧೀರಮೂರ್ತಿ , ಹೊಸತು ಕಣ್ಣುಗಳಿಗೆ ಇದೊಂದು ಹಬ್ಬ ನೀಡುವ ಶಿಖರ , ಮಾತ್ರವಲ್ಲ ಬದುಕಿಗೆ ಸ್ಫೂರ್ತಿ ನೀಡುವ , ಶಕ್ತಿ ನೀಡುವ ತಾಣ ಎಂದು. ಮಳೆಗಾಲದ ಈ ಸಮಯದಲ್ಲಿ ಈ ಪ್ರದೇಶವು ಇನ್ನಷ್ಟು ನಯನಮನೋಹರವಾಗಿ ಕಾಣಿಸುತ್ತಿದೆ.ಬೆಟ್ಟದ ತುದಿಯಿಂದ ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣುವ ಊರುಗಳು , ಇನ್ನೊಂದು ಕಡೆ ನೋಡಿದರೆ ಸಮುದ್ರದ ಅಬ್ಬರ . ಇನ್ನೊಮ್ಮೆ ಹಿಮಾಚ್ಚಾದಿತ ಬೆಟ್ಟ . . ಹೀಗೇ ಇಲ್ಲಿ ಎಲ್ಲವೂ ಕಾಣಸಿಗುತ್ತದೆ.


ಮಂಗಳೂರಿನಿಂದ ಸುಮಾರು 50 ಕಿಲೋ ಮೀಟರ್ ಅಂತರದಲ್ಲಿರುವ ಈ ಪೊಸಡಿಗುಂಪೆ ಬಾಯಾರಿನಿಂದ ಅನತಿ ದೂರದಲ್ಲಿ ವಿಶಾಲವಾಗಿ ಹರಡಿಕೊಂಡಿದೆ. ಈ ಬೆಟ್ಟದ ಬಳಿಗೆ ತಲಪುತ್ತಿದ್ದಂತೆಯೇ ಮೊದಲಿಗೆ ನಮಗೆ ಕಾಣುವುದು ಮುರಕಲ್ಲಿನಿಂದ ಆವೃತವಾದ ಒಂದು ಗುಹೆ.ನೋಡುವುದಕ್ಕೆ ಇದೊಂದು ಕೇವಲ ಗುಹೆ.ಆದ್ರೆ ಅದೊಂದು ವಿಸ್ಮಯದ ಗುಹೆಯೂ ಹೌದು.ಮಳೆ ಜೋರಾಗಿ ಸುರಿಯುತ್ತಿದ್ದಂತೆ ಇಲ್ಲಿ ಹರಿಯುವ ನೀರು ಅಂಕುಡೊಂಕಾಗಿ ಹರಿದು ಬಂದು ಜಲಪಾತವನ್ನು ಸೃಷ್ಠಿಸಿ ಗುಹೆಯೊಳಗೆ ಸೇರಿಬಿಡುತ್ತದೆ.ಆ ನಂತರ ಮಾಯವಾಗುವ ಈ ನೀರ ಸೊಬಗು ನೋಡುವುದೇ ಒಂದು ಖುಷಿ.ಹಾಗೆ ಗುಹೆಯೊಳಗೆ ಹರಿಯುವ ನೀರು ಮತ್ತೆ ಒಂದಷ್ಟು ದೂರ ಹಾಗೇ ಗುಪ್ತಗಾಮಿನಿಯಾಗಿ ಅನತಿ ದೂರದಲ್ಲಿ ಹೊರಬರುವಾಗ ಇನ್ನೊಂದು ಜಲಪಾತ ಸೃಷ್ಠಿಸುತ್ತೆ.ಇಲ್ಲೂ ವಿಧವಿಧವಾಗಿ ಧುಮುಕಿ ಹರಿಯುವ ನೀರ ಸೊಬಗು ನೋಡಿ ಮೈಮರೆವ ನಮಗೆ ಅಲ್ಲೇ ಹಸಿರು ಹಸಿರಾದ ಪ್ರದೇಶವು ಕಾಣುತ್ತದೆ.ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣುವ ಊರುಗಳು . . ಅಬ್ಬಾ . . . !. . .
ಇಲ್ಲಿಗೇ ಮುಗಿದಿಲ್ಲಾ ರೀ . . . , ಇನ್ನು ಆರಂಭವಾಗ್ಬೇಕಿದೆ ಪೊಸಡಿಗುಂಪೆಯ ದೃಶ್ಯಕಾವ್ಯ.


ಈ ಗುಂಪೆಗುಡ್ಡೆ ತಳಭಾಗದವರೆಗೆ ವಾಹನಗಳು ಬರುತ್ತೆ.ವಾಹನ ಇಳಿದು ಒಂದೆರಡು ಕಿಲೋ ಮೀಟರ್ ದೂರ ಗುಡ್ಡ ಹತ್ತಲೇ ಬೇಕು.ವಾಹನ ಇಳಿದಾಗ ಈ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣುತ್ತೆ.ಆದ್ರೆ ಹೆಜ್ಜೆ ಹಾಕುತ್ತಾ ಸಾಗಿದಾಗ ಬೆಟ್ಟದ ಶಕ್ತಿ ತಿಳಿಯುತ್ತೆ ಬಿಡಿ.. .!!. ಹೂಂ . .; ಅದಿರ್ಲಿ , ನಾವು ಬೆಟ್ಟ ಹತ್ತೋದಿಕ್ಕೆ ಆರಂಭಿಸಿದಾಗಲೇ ಅದೊಂದು ದೃಶ್ಯ ವೈಭವ ಸಕತ್ ಆಗಿದೆ.ಮುರಕಲ್ಲಿನಿಂದಲೇ ಆವೃತವಾದ ಗುಡ್ಡ , ಬೆಟ್ಟವೇ ನಿರ್ಮಿಸಿಕೊಂಡ ಹಸಿರ ಹೊದಿಕೆ. . ದೂರದಿಂದಲೆ ಕಾಣೋ ಹಳ್ಳಿಗಳು. . ಹೀಗೇ ದೃಶ್ಯ ಸವಿಯುತ್ತಾ ಹೋದಾಗ ಒಮ್ಮೆಲೇ ಮಂಜು. . .!! ಶೂ. . . ಕೊನೆ ಕೊನೆಗೇ ನಮ್ಮವರನ್ನೆ ಕಾಣದಾಗುವಷ್ಟು ಮಂಜು. . , ಹೌದು , ಈ ಮಂಜು ಯಾವಾಗ್ಲೂ ನಮ್ಗೆ ಸಿಗಲ್ಲ. ಮಳೆಗಾಲದ ಸಮಯದಲ್ಲಿ ಮಾತ್ರಾ ಹಿಮಪರ್ವತ ಇಲ್ಲಿರುತ್ತೆ.ಬೆಟ್ಟದ ತುದಿಗೆ ತಲಪಿದಾಗ ಎಲ್ಲವೂ ಹಿಮ ಮಯ . . ಹೀಗಾಗಿ ಫೋಟೊಗ್ರಾಫರ್ಗಂತೂ ಸಕತ್ ಖುಷಿ. . ಪ್ರವಾಸಿಗರೂ ಹಾಗೇ ಫುಲ್ ಖುಷ್. . !!.ಆಮೇಲೆಲ್ಲಾದ್ರೂ ನಿಮ್ಗೆ ರೆಸ್ಟ್ ಬೇಕಂದ್ರೆ, ತೆರೆದ ಹಿಮದ ಮನೆಯೇ ಇಲ್ಲಿ ರೆಸಾರ್ಟ್.ಬೇಸಗೆ ಕಾಲದಲ್ಲಾದ್ರೆ ತೆರೆದ ಆಗಸವೇ ರೆಸಾರ್ಟ್. . . ಬೇಸಗೆ ಕಾಲದಲ್ಲಿ ಈ ಪೊಸಡಿಗುಂಪೆಯ ದೃಶ್ಯ ಸವಿಯಲು ಅದೆಷ್ಟೋ ಜನ ಬರ್ತಾರೆ.ಮಳೆಗಾಲದಲ್ಲಿ ಕೊಂಚ ಕಡಿಮೆ.

ಇಂತಹ ಭೂಲೋಕದ ಸ್ವರ್ಗ ಈಗಾಗ್ಲೇ ಪ್ರವಾಸಿಗರ ಆಕರ್ಷಣೆಗೆ ಕೇಂದ್ರವಾಗಿರುವಂತೆಯೇ ಸಿನಿಮಾ ಚಿತ್ರೀಕರಣಕ್ಕೂ ಇದೊಂದು ಸೂಪರ್ ಲೊಕೇಶನ್. ಜನ ಹೆಚ್ಚಾಗಿ ಬರೋದು ನೋಡಿ ಮಲಯಾಳೀ ಚಲನಚಿತ್ರ ನಿರ್ದೇಶಕರ ಚಿತ್ತ ಕೂಡಾ ಇಲ್ಲಿಗೆ ಬಿದ್ದಿತ್ತು. ಕೆಲ ವರ್ಷಗಳ ಹಿಂದೆ ಪೊಸಡಿಗುಂಪೆಯ ತಪ್ಪಲಿನ ಪ್ರದೇಶದಲ್ಲಿ ಮಲೆಯಾಳದ ವಾರ್ ಎಂಡ್ ಲವ್ ಅನ್ನೋ ಫಿಲಂನ 75 ಪರ್ಸೆಂಟ್ಸ ಇಲ್ಲೇ ಚಿತ್ರೀಕರಣವಾಗಿದೆ. ಯಾಕೆಂದ್ರೆ ಸ್ಟಂಟ್ಗೆ , ಕಾರ್ಗಲ್ ನಂತಹ ದೃಶ್ಯಕ್ಕೆ ಇಲ್ಲಿ ಒಳ್ಳೇ ಲೊಕೇಶನ್ ಇದೆ.ಹಾಗಾಗಿ ವಾರ್ ಎಂಡ್ ಲವ್ ಸಿನಿಮಾ ಇಲ್ಲೇ ಸುಮಾರು 20 ದಿನಗಳ ಕಾಲ ಶೂಟಿಂಗ್ ನಡೆದಿದೆಯಂತೆ.ಅದಾದ ಬಳಿಕ ಇನ್ನೂ ಕೆಲವು ಮಲೆಯಾಳೀ ಫಿಲಂನ ಟೈಟಲ್ ಸಾಂಗ್ ದೃಶ್ಯವೂ ಇಲ್ಲೇ ಚಿತ್ರೀಕರಣವಾಗಿದೆಯಂತೆ. ಹಾಗಾಗಿ ಕೇರಳದಲ್ಲಿ ಮಲೆಯಾಳ ಸಿನಿಮಾಗಳ ಶೂಟಿಂಗ್ಗೆ ಪೊಸಡಿಗುಂಪೆ ಒಂದೊಳ್ಳೆ ಲೊಕೇಶನ್.

ಮಲೆಯಾಳಿ ಚಿತ್ರಗಳ ಮೂಲಕ ಹೊರಬಂದ ಇಂತಹ ಅದ್ಭುತ ಸ್ಪಾಟ್ ಮುಂದೆ ಹಿಂದಿ,ತಮಿಳು , ತೆಲುಗು ಚಿತ್ರಗಳಿಗೂ ಒಂದೊಳ್ಳೆಯ ಸ್ಪಾಟ್ ಆದ್ರೂ ಆಗ್ಬಹುದು. ಹೀಗೇ ಕನ್ನಡದ ಚಿತ್ರಗಳ ಶೂಟಿಂಗ್ಗೂ ಇದೊಂದು ಒಳ್ಳೇ ಲೊಕೇಶನ್ ಎಂಬುದಂತೂ ಸತ್ಯ.ಚಿತ್ರಗಳಿಗೆಲ್ಲಾ ವಿದೇಶವೇ ಆಗ್ಬೇಕು ಎಂಬ ಅಹಂನ ಹಿಮದ ಪರದೆಯಿಂದ ಹೊರಬಂದು ಪೊಸಡಿಗುಂಪೆಯಂತಹ ನೈಜ ತಾಣಗಳತ್ತ ನೋಡಿದ್ರೆ ನಮ್ಮ ನಾಡೋಳಗೇ ಇರೋ ಸೂಪರ್ ಲೊಕೇಶನ್ ಎಲ್ರಿಗೂ ಪರಿಚಯವಾದಂತಾಗುತ್ತದೆ..ಇಂತಹ ಸುಂದರ ಲೊಕೇಶನ್ಗೆ ಹೋಗೋದಿಕ್ಕೆ ಒಂದು ಪ್ಲಾನ್ ಮಾಡಿದ್ರೆ ಹೇಗೆ ಅಂತಿರಾ ?...

- ಮಹೇಶ್ ಪುಚ್ಚಪ್ಪಾಡಿ.

0 comments:

Post a Comment