ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:07 AM

ಅಸ್ಪೃಶ್ಯರು

Posted by ekanasu

ವೈದೇಹಿ ಕಾದಂಬರಿ...

ಕಳೆದ ಸಂಚಿಕೆಯಿಂದ...

`ನರಪಟೆ ಬಂತು..., ನರಪಟೆ ಬಂತು ನರಪಟೆ ನರಪಟೆ ನರಪಟೆ'-ಎನ್ನುತ್ತಾ ಪುಟ್ಟ ಓಡಿ ಬರುತ್ತಾನೆ. ನರಪಟೆಗೆ `ಚಣ್ಣ ವಡ್ತ್ರ'ವನ್ನು ಕಂಡು ನಗು. ಎಲ್ಲದಕ್ಕೂ ಅವಳಿಗೆ ನಗೆ ಮುಂದೆ. ಕೈಯಲ್ಲೊಂದು ಬಿದಿರಿನ ಬುಟ್ಟಿ, ತಲೆಯ ಮೇಲೆ ಹಾಳೆಯ ಟೊಪ್ಪಿ, ಸೊಂಟದಲ್ಲಿ ಐದೋ ಆರೋ ಕುಕ್ಕೆ ಅಥವಾ ಸಿಬ್ಬಲ. ಒಂದರ ಮೇಲೊಂದು. ಒಂದೊಂದು ಸಲ ಚೌಕಾಸಿ ಮಾಡುತ್ತಾ ಗೌರಮ್ಮ ಕೊಳ್ಳುವುದೂ ಉಂಟು.ಇಂತಿಷ್ಟು ಅಕ್ಕಿಗೆಂದೋ, ಚಕ್ರಕ್ಕೆಂದೋ(ನಾಲ್ಕಾಣೆ)ವ್ಯಾಪಾರ ಕುದುರುವುದುಂಟು. ಕೊಂಡಾದ ಮೇಲೆ ಬಾವಿಯಿಂದ ನೀರೆತ್ತಿ ಅವುಗಳ ಮೇಲೆ ಹೊಯ್ದು ಶುದ್ಧಮಾಡಿ ಒಳಗೆ ತಂದಿಡುತ್ತಾಳೆ.ಅಷ್ಟರವರೆಗೆ ಅವುಗಳನ್ನು ಮುಟ್ಟುವಂತಿಲ್ಲ.
ನರಪಟೆಗೆ ಬಾಕುಡ ಇಲ್ಲವಂತೆ. ಯಾಕೆ ಎಂದರೆ ಜಿಟಿಜಿಟಿ ನಗೆ. `ಅದರ ಎದೆ ತಾಂಟು ಬಡಿದು ಹೋಗಿದೆ. ಯಾರು ಅದನ್ನು ಮದುವೆಯಾಗುವವರು?' - ಎಂದು ಚಂದು ಕೇಳುತ್ತಾನೆ. ಒಮ್ಮೊಮ್ಮೆ ಸುಮ್ಮನೆ `ಅದು ಹೆಣ್ಣ, ಗಂಡ? - ಎಂದು ಚಂದುವೇ ತಲೆಬಿಸಿ ಮಾಡಿಕೊಂಡಂತೆ ಎಲ್ಲರನ್ನೂ ನಗಿಸುವುದಿದೆ.ನರಪಟೆ ಬಂದರೆ ಒಂದು ಗೆರಟೆಯಲ್ಲಿ ಒಂದಿಷ್ಟು ಎಣ್ಣೆ ಸುರಿದು ಎಲ್ಲರ ತಲೆಗೆ ಸುಳಿದು, ಹೆಚ್ಚು ಗ್ರಹಚಾರ ಇದ್ದವರನ್ನು ಕರೆದು ಅದರಲ್ಲಿ ತಮ್ಮ ಬಿಂಬ ನೋಡಲು ಹೇಳಿ ಅದನ್ನು ಅವಳಿಗೆ ಕೊಟ್ಟರಾಯಿತು. ಗ್ರಹಚಾರ ಓಡಿಹೋದಂತೆಯೇ. ಹಾಗೆ ಎಲ್ಲರ ಗ್ರಹಚಾರ ಹೀರಿ ಹೀರಿಯೇ ನರಪಟೆ ಬುಡದವಕ್ಕೆ ಆ ನಮೂನೆ ದರಿದ್ರ ಇರುವುದು ಎಂದು ಪಾರ್ತಕ್ಕ ಮಕ್ಕಳ ಹತ್ತಿರ ಹೇಳುತ್ತಾರೆ.

ಪುಟ್ಟ `ನರಪಟೆ' ಎಂದು ಕೂಗಿದ್ದೇ ಬಾಣಂತಿ ಕೋಣೆಯ ಕಿಟಿಕಿ ಬಾಗಿಲು ಅರ್ಧ ಸಾಂಚಿ ಇದ್ದದ್ದನ್ನು ಪೂರ್ತಿ ಹಾಕಿದರು ಪಾರ್ತಕ್ಕ. ಆದರೂ ಅವಳು `ಚಣ್ಣಮ್ಮ ಹೆತ್ತಿದ್ದಾರಂತೇ... ಹೆಣ್ಣು ಮಗುವಂತೆ... ಹಾಂಗಾರೆ ನಮಗೊಂದು ಪಾಯಸ ಉಂಟು ' -ಎನ್ನುತ್ತ ಗೆಲುವಿಗೆ ಗೆಲುವಾಗಿ ನಿಂತಿದ್ದಳು.

- ವೈದೇಹಿ.

0 comments:

Post a Comment