ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಮಲೆನಾಡು ಎಂದರೇ ಹಾಗೇ ಕೌತುಕಮಯ ಜಗತ್ತು, ಬೆಳಗಾಗುತ್ತಲೇ ಎಲ್ಲಾ ಹೂ-ಗಿಡಗಂಟಿಗಳ ಮೇಲೆ ಮುತ್ತಿಕ್ಕುತ್ತಿರುವ ಮಂಜಿನ ಹನಿಗಳು,ನೆಲದ ಮೇಲೆ ಕಾಲಿಟ್ಟರೆ ಕಾಲನ್ನು ಚುಂಬಿಸುವ ಇಬ್ಬನಿ, ಎಳೆ ಬಿಸಿಲು ಬಂದರಂತು ಹೂವುಗಳ ಮೇಲೆ ಸವಾರಿ ಮಾಡುತ್ತಿರುವ ಮಂಜಿನ ಹನಿಗಳು ನಾಟ್ಯ ಶುರುವಿಟ್ಟುಕೊಂಡುಬಿಡುತ್ತವೆ, ಮಿಂಚುತ್ತ,ಬಳುಕುತ್ತ ಹೂವುಗಳನ್ನು ಮತ್ತಷ್ಟು ನಾಚುವಂತೆ ಮಾಡುವ ಈ ಹನಿಗಳು ಹೂವುಗಳ ಸೌಂದರ್ಯವನ್ನು ನೋಡುಗನ ಕಣ್ಣಿಗೆ ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತವೆ.
ಕೆಸು ಹಾಗೂ ತಾವರೆ ಎಲೆಗಳ ಮೇಲೆ ಇವುಗಳಾಡುವ ಲಾಸ್ಯ ಹೇಳತೀರದು, ಅತ್ತ-ಇತ್ತ ಸರಿದಾಡುತ್ತ ವಜ್ರದ ಹರಳುಗಳಂತೆ ಇವುಗಳು ಸರಿದಾಡಿದಾಗ ಎಲೆ ಕೂಡಾ ಕಚಗುಳಿಗೆ ಒಳಗಾದಂತೆ ನಲಿಯುತ್ತದೆ. ರಾತ್ರಿ ಇಡಿ ಸುರಿದ ಇಬ್ಬನಿ, ಅದರಲ್ಲಿ ಮುಳುಗೇಳುವ ಹೂವು, ಎಲೆಗಳು ಸೂರ್ಯ ಬರುವುದು ತಡಮಾಡಿದಷ್ಟು ಹೊತ್ತು ಮಂಜು-ಮುಸುಕಿನ ಆಟ ಕಣ್ಣಿಗೆ ಹಬ್ಬವೆ ಸರಿ!. ನಂತರ ಬರುವ ಸೂರ್ಯನಿಗು ಇವುಗಳನ್ನು ನೋಡಿ ಹೊಟ್ಟೆಕಿಚ್ಚಾಗುತ್ತದೊ ಏನೋ ತಾನು ಬಂದ ಅರೆಕ್ಷಣದಲ್ಲಿ ಹನಿಗಳನ್ನು ಇನ್ನಿಲ್ಲದಂತೆ ಮಾಡಿಬಿಡುತ್ತಾನೆ.ಚಿಕ್ಕವರಿದ್ದಾಗ ಮುತ್ತು ಪೋಣಿಸಿದಂತಿರುವ ಈ ಹನಿಗಳನ್ನು ಬೀಳಿಸುವುದೆಂದರೆ ಏನೋ ಖುಶಿ! ಹಾಗೇ ತೋಟದಲ್ಲಿರುವ ಸಣ್ಣ ಮರದ ಕೆಳಗೆ ಹೋಗಿ ಅದರ ರೆಂಬೆಗಳನ್ನು ಹಿಡಿದು ಜೋರಾಗಿ ಅಲುಗಾಡಿಸುವುದು , ಆಗಾ ಪಟ-ಪಟನೆ ತಣ್ಣಗೆ ಕೊರೆಯುವ ಮಂಜಿನ ಹನಿಗಳು ಮೈ ಮೇಲೆ ಬಿದ್ದಾಗ ಆಗುತ್ತಿದ್ದ ಅನುಭವ ಮರೆಯಲಾಗದ್ದು!.ಆದರೆ ಬ್ರ್ಯಾಂಡೆಡ್ ಚಪ್ಪಲಿಯೊಳಗೆ ಕಾಲು ತೂರಿಸಿ ವೈಭವೋಪೇತ ಫ್ಲಾಟ್ ಒಳಗೆ ವಾಸಿಸುವ ಕಾಂಕ್ರೀಟ್ ಕಾಡಿನ ನಾಗರೀಕರಿಗೆ, ಮಂಜು ಮಿಶ್ರಿತ ಗರಿಕೆ ಹುಲ್ಲು ಕಾಲಿಗೆ ತಾಕುವುದಾದರು ಎಲ್ಲಿಂದ?. ನಡೆದು ಹೋಗುವಾಗ ಮರದ ರೆಂಬೆ ಕೆನ್ನೆ ಸವರಿ ನಮಗೆ ಗೊತ್ತಿಲ್ಲದೇ ಕಳ್ಳ! ಮಂಜುಹನಿಯೊಂದು ನಮ್ಮ ಕೆನ್ನೆಗೆ ಮುತ್ತಿಡುವುದಾದರು ಎಲ್ಲಿಂದ?. ಬಾಯಿಂದ ಬರುವ ಹೊಗೆ, ಚಳಿಗೆ ಮರಗಟ್ಟಿದ ಕೈ-ಕಾಲುಗಳು, ಮಾತನಾಡಲು ಹೊರಳದ ನಾಲಿಗೆ, ಹಬೆಯಾಡುವ ಕಾಫಿ, ಬೆಚ್ಚಗೆ ಮಾಡುವ ಒಲೆ,ಕಿವಿಗಿಂಪೆನಿಸುವ ಮಲೆನಾಡಿಗರ ಮಾತುಗಳೊಳಗೆ ಮಿಂದೇಳಬೇಕೆಂದರೆ ಮಲೆನಾಡಿಗೆ ಬನ್ನಿ.ತಡಮಾಡಬೇಡಿ...


- ಉಷಾ ಜಿ.ಎಸ್
ಪತ್ರಿಕೋದ್ಯಮ ಎಂ.ಎ ,ದ್ವಿತೀಯ ವರ್ಷ
ಮಾನಸ ಗಂಗೋತ್ರಿ,ಮೈಸೂರು.
ಛಾಯಚಿತ್ರಗಳು: ಉಷಾ ಜಿ.ಎಸ್

0 comments:

Post a Comment