ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಹೌದು, ಪ್ರತೀ ವರ್ಷವೂ ಯುಗಾದಿ ನಮ್ಮ ಜೀವನದಲ್ಲಿ ಬರುತ್ತಲೇ ಇದೆ. ನಾವೂ ಆಚರಿಸುತ್ತಲೇ ಇದ್ದೇವೆ. ಆದರೆ ಯುಗಾದಿಯ ಮಹತ್ವವನ್ನು ಅರಿಯಲು ಯಾರೂ ಪ್ರಯತ್ನ ಮಾಡದೇ ಇರುವುದು ಒಂದು ವಿಷಾದನೀಯ ಸಂಗತಿ.
ಹಿಂದೂ ಧರ್ಮದ ಪ್ರಕಾರ ಯುಗಾದಿ ಹಬ್ಬ ಭಾರತೀಯರಿಗೆ ಹೊಸ ವರ್ಷದ ಮೊದಲ ದಿನ, ಚೈತ್ರ ಮಾಸದ ಪ್ರಾರಂಭ. ಯುಗಾದಿ ಎಂದರೆ "ಬೇವು ಬೆಲ್ಲ" ಹಂಚುವುದು ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದರ ಪ್ರತೀತಿ ಎನೆಂದರೆ, ಜೀವನ ಎಂಬುದು ಸಿಹಿ ಮತ್ತು ಕಹಿ ಎರಡರ ಮಿಶ್ರಣ. ಬೆಲ್ಲ ತಿಂದಾಗ ಹೊಟ್ಟೆ ನೋವು ಬಂದರೆ, ಬೇವು ಅದನ್ನು ನಿವಾರಿಸುತ್ತದೆ ಎಂಬುದು ಇದರ ಮುಖ್ಯ ಆಶಯ.


ಬೇವು ಬೆಲ್ಲವನ್ನು ತಿನ್ನವಾಗ ಈ ಶ್ಲೋಕವನ್ನು ಹೇಳುತ್ತಾರೆ. "ಶತಾಯು: ವಜ್ರದೇಹಾಯ ಸರ್ವಸಂತ್ಯರಾಯಚ| ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ" ಅಂದರೆ ನೂರು ವರ್ಷಗಳ ಕಾಲ ಬಾಳಿ ಸಕಲ ಆಯುಷ್ಯ, ಆರೋಗ್ಯ, ಐಶ್ವರ್ಯದೊಂದಿಗೆ ಬಾಳಿ, ಎಲ್ಲ ಅನಿಷ್ಟಗಳು ನಿವಾರಣೆಯಾಗಲಿ ಎಂದು ಈ ಬೇವು ಬೆಲ್ಲವನ್ನು ಸ್ವೀಕರಿಸುತ್ತಿದ್ದೇನೆ ಎಂಬುದಾಗಿದೆ.

ಕರ್ನಾಟಕದಲ್ಲಿ ಚಂದ್ರಮಾನ ಯುಗಾದಿಯನ್ನು ಪ್ರಸ್ತುತ ಆಚರಿಸಲಾಗುತ್ತಿದೆ. ಪುರಾಣದ ಪ್ರಕಾರ ಈ ದಿನದಂದು ಶ್ರೀರಾಮ ರಾವಣನನ್ನು ಜಯಿಸಿ ಮರಳಿ ಅಯೋಧ್ಯೆಗೆ ಬಂದು ರಾಜ್ಯಭಾರ ಮಾಡಿದ್ದಾನೆ ಎಂಬುದು ಪ್ರತೀತಿ. ಅಂತೆಯೇ ವಿಷ್ಣುವು ಮತ್ಸ್ಯಾವತಾರವನ್ನು ತಳೆದಿದ್ದನೆಂದೂ, ಶಾಲಿವಾಹನ ವಿಕ್ರಮಾದಿತ್ಯನನ್ನು ಜಯಿಸಿ ಶಾಲಿವಾಹನ ಶಕೆ ಎಂದೂ ನವವಭಾರತವನ್ನು ನಿರ್ಮಿಸಿದ್ದಾರೆ ಎಂದು ಪುರಾಣಗಳು ಹೇಳುತ್ತವೆ. ಹಿಂದುಗಳ ಹೊಸ ಕ್ಯಾಲೆಂಡರ್ ಅಂದರೆ ಪಂಚಾಂಗ ಯುಗಾದಿ ದಿನದಿಂದ ಪ್ರಾರಂಭವಾಗುತ್ತದೆ. ಈ ಪಂಚಾಂಗ. ಆ ವರ್ಷದ ಮಳೆಬೆಳೆ, ರಾಶೀಫಲ, ಮದುವೆ ಮುಂಜಿ, ಗ್ರಹಣ, ದೋಷಗಳು ಹೀಗೆ ಅನೇಕ ವಿಷಯಗಳನ್ನು ಒಳಗೊಂಡಿದೆ.

ಯುಗಾದಿ ಹಬ್ಬವನ್ನು ರಾಜ್ಯದ ನಾನಾ ಭಾಗಗಳಲ್ಲಿ ನಾನಾ ರೀತಿಯಲ್ಲಿ ಆಚರಿಸಲಾಗುತ್ತದೆ.

ಶಿವಮೊಗ್ಗ ಪರಿಸರದಲ್ಲಿ ಹೀಗಿದೆ ಯುಗಾದಿ...ಈ ಪ್ರಾಂತ್ಯದ ಜನರಿಗೆ ಯುಗಾದಿ ಹಬ್ಬ ನಿಜವಾಗಿಯೂ ಹೊಸ ವರುಷವೇ ಸರಿ. ಹಿಂದಿನ ದಿನವೇ ಮನೆ, ಅಂಗಳವನ್ನೆಲ್ಲಾ ಸಾರಿಸಿ ಸ್ವಚ್ಚಗೊಳಿಸಲಾಗಿರುತ್ತದೆ. ಮನೆಮಂದಿಗೆ ಹೊಸ ಹೊಸ ಬಟ್ಟೆಗಳನ್ನು ಹೊಲಿಸಿರುತ್ತಾರೆ. ಅಂದು ಬೆಳಗ್ಗೆ ಪುರುಷರು ಎತ್ತುಗಳನನ್ನು ಸಿಂಗರಿಸಿ ನೇಗಿಲು ಕಟ್ಟಿಕೊಂಡು ಹೊಲಕ್ಕೆ ಹೋಗಿ ಸಾಂಪ್ರದಾಯಿಕವಾಗಿ ಉಳುಮೆ ಮಾಡುವುದು ಇಲ್ಲಿನ ವಿಷೇಶ. ಮಹಿಳೆಯರು ಹೊಸ ಹೊಸ ಉಡುಗೆಗಳನ್ನು ತೊಟ್ಟು ಬೇವು ಬೆಲ್ಲವನ್ನು ಮನೆ ಮನೆಗೆ ಹೋಗಿ ಬೀರಿಸಿ ಬರುತ್ತಾರೆ. ಸಂಜೆ ಈ ಭಾಗದಲ್ಲಿ ಜನರು ಚಂದ್ರನ ದರ್ಶನ ಮಾಡಿ ಹಿರಿಯರ ಪಾದಗಳಿಗೆ ನಮಸ್ಕರಿಸುವುದು ರೂಢಿಯಲ್ಲಿದೆ. ಒಂದು ವಾರಗಳ ಕಾಲ ಇಲಿ "ಜೋಕಾಲಿ" ಗಳನ್ನು ಮರಕ್ಕೆ ಅಥವಾ ಮನೆಯ ಬಾಗಿಲಿಗೆ ಕಟ್ಟಿಕೊಂಡು ಆಟ ಆಡುವದು ವಿಶೇಷ.

ಉತ್ತರ ಕನ್ನಡದಲ್ಲಿ ಗಿಡನೆಡುವ ಪದ್ಧತಿ

ಈ ಭಾಗದಲ್ಲಿ ಯುಗಾದಿ ಹಬ್ಬ ನೇಮ ನಿತ್ಯಗಳ ಸಂಕೇತ. ಇಲ್ಲಿನ ಜನ ಹಬ್ಬವನ್ನು ಬೇರೆ ರೀತಿಯಲ್ಲಿಯೇ ಆಚರಿಸುತ್ತಾರೆ. ಆ ದಿನ ಹೊಲಕ್ಕೆ ಹೋಗಿ ಗಿಡವನ್ನು ನೆಡುವುದು ಇಲ್ಲಿನ ಪದ್ದತಿ. ಹಬ್ಬದ ದಿನದಂದು ಅವರು ಭುಮಿಯನ್ನು ಅಗೆಯುವುದಿಲ್ಲ ಆದ್ದರಿಂದ ಗಿಡ ನೆಡಲು ಗುಂಡಿಯನ್ನು ಹಿಂದಿನ ದಿನವೇ ಅಗೆದಿರುತ್ತಾರೆ. ಅಂದು ಹೊಸ ಪಂಚಾಂಗವನ್ನು ಕೊಳ್ಳುವ ಪದ್ಧತಿ ಇಲ್ಲಿ ಕಂಡು ಬರುತ್ತದೆ. ಬೇವು ಬೆಲ್ಲವನ್ನು ಇಲ್ಲಿ ಸಂಜೆ ಚಂದ್ರ ಮತ್ತು ದೇವರಿಗೆ ನೈವೇದ್ಯ ಮಾಡಿದ ನಂತರವೇ ಸೇವಿಸುತ್ತಾರೆ.

ಮೈಸೂರು, ಬೆಂಗಳೂರು ಸುತ್ತಲಿನ ಪ್ರಾಂತ್ಯದಲ್ಲಿ

ಈ ನಗರಗಳು ಆಧುನಿಕವಾಗಿ ಮುಂದುವರೆದಿದ್ದರೂ ಕೂಡಾ ಹಬ್ಬ ಹರಿದಿನಗಳನ್ನು ಆಚರಿಸುತ್ತಾ ಬರಲಾಗುತ್ತಿದೆ. ಇಲ್ಲಿ ಜನ ತೀರಿ ಹೋದ ತಮ್ಮ ಹಿರಿಯರ ಸಮಾಧಿಗಳಿಗೆ ಹೋಗಿ ಹಾಲು, ತುಪ್ಪವನ್ನು ಬಿಟ್ಟು ಪೂಜಿಸಿ ಆಚರಿಸುತ್ತಾರೆ. ಆದ್ದರಿಂದ ಇಲ್ಲಿ ಯುಗಾದಿ ಹಬ್ಬ "ಹಿರಿಯರ ಹಬ್ಬ" ಎಂದೇ ಕರೆಯಲ್ಪಡುತ್ತದೆ. ಬೇವು ಬೆಲ್ಲ ಹಂಚಿ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಹಬ್ಬವನ್ನು ಆಚರಿಸಲಾಗುತ್ತದೆ.

ಉತ್ತರ ಕರ್ನಾಟಕ ಪ್ರಾಂತ್ಯದಲ್ಲಿ

ಈ ಪ್ರಾಂತ್ಯದಲ್ಲಿ ಯುಗಾದಿಯ ಹಬ್ಬವನ್ನು ಹಿರಿಯನ್ನು ಗೌರವದಿಂದ ಕಂಡು ನಮ್ಕರಿಸುವುದು ಮುಖ್ಯವಾಗಿ ಕಂಡು ಬರುತ್ತದೆ. ಹೊಸದಾಗಿ ಆಗ ತಾನೆ ಚಿಗುರಿರುವಂತಹ ಮಾವಿನ ಹಾಗೂ ಬೇವಿನ ಸೊಪ್ಪುಗಳಿಂದ ವಿಶೇಷವಾದ ತೋರಣ ರಚಿಸಿ ಮನೆಗೆ ಮತ್ತು ಊರ ಬಾಗಿಗೆ ಕಟ್ಟಲಾಗುತ್ತದೆ. ಬೇವು ಬೆಲ್ಲ ತಿಂದು ಒಳ್ಳೆ ಮಾತಗಳನ್ನಾಡಿ ಎಂಬುದು ಇಲ್ಲಿನ ಜನರ ಪ್ರಮುಖ ಮಾತುಗಳಾಗಿವೆ.

ದಕ್ಷಿಣ ಕನ್ನಡ ಸುತ್ತಲಿನ ಪ್ರಾಂತ್ಯಗಳಲ್ಲಿ

ಇಲ್ಲಿ ಯುಗಾದಿ ಹಬ್ಬದ ಆಚರಣೆ ಅಷ್ಟಾಗಿ ಕಂಡುಬಾರದಿದ್ದರೂ ಕೂಡ ಕೆಲವು ಸಾಂಪ್ರದಾಯಕ ಕುಟುಂಬಗಳು ಶಾಸ್ತ್ರೋಕ್ತವಾಗಿ ಆಚರಿಸುತ್ತಾರೆ. ಎಣ್ಣೆ ಸ್ನಾನ ಮಾಡುವುದು, ಬೇವು ಬೆಲ್ಲದ ಹಂಚಿಕೆ ಇಲ್ಲಿ ಮುಖ್ಯವಾಗಿ ಕಂಡು ಬರುತ್ತದೆ.

ಹೀಗೆ ರಾಜ್ಯದ ವಿವಿಧ ಭಾಗದಲ್ಲಿ ವಿವಿಧ ರೀತಿಯಾಗಿ ಯುಗಾದಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ನವ ಸಂವತ್ಸರ ಎಲ್ಲರಿಗೂ ಶಭವನ್ನು ಉಂಟು ಮಾಡಿಲಿ. ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಷಯಗಳು.


- ದರ್ಶನ್ ಎಂ, ಕಮ್ಮಾರಗಟ್ಟೆ
ಪ್ರಥಮ ಪತ್ರಿಕೋದ್ಯಮ,ಆಳ್ವಾಸ್ ಕಾಲೇಜು,ಮೂಡುಬಿದಿರೆ.

2 comments:

Abhirama Hegde said...

ಸುಖ ದುಖಗಳ ಹದವಾದ ಮಿಶ್ರಣ ಅಗತ್ಯ.. ಜೀವನವೆ೦ಬ ಖಾದ್ಯ ರುಚಿಯಾಗುದು ಆಗಲೇ..ಆಚರಣಾ ವಿಧಾನಗಳ ಉತ್ತಮ ಸಂಗ್ರಹ..

Anonymous said...

ಎಲ್ಲರಿಗೂ ಯುಗಾದಿಯ ಶುಭಾಶಯಗಳು. ಬೇವು ಬೆಲ್ಲ ತಿಂದು, ಹೋಳಿಗೆಯ ಊಟ ಮಾಡಿ ಮುಂದಿನ ಯುಗಾದಿಯವರೆಗಿನ ಬದುಕಿಗೆ ಕನಸುಗಳ ತೋರಣ ಕಟ್ಟೋಣ.
Deepak.

Post a Comment