ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:03 PM

ಇದು ಎ.ಸಿ ಮನೆಗಳು!

Posted by ekanasu

ಇದೀಗ ಅಪರೂಪ

ಹೌದು ಇದು ನಿಜಾರ್ಥದಲ್ಲಿ ಹವಾನಿಯಂತ್ರಿತ ಮನೆಗಳು... ಬೇಸಿಗೆಯಲ್ಲಿ ಕೂಲ್ ಕೂಲ್! ಮಳೆಗಾಲದಲ್ಲಿ ಬೆಚ್ಚನೆಯ ವಾತಾವರಣ. ಇದೊಂದು ನೈಸರ್ಗಿಕ ಹವಾನಿಯಂತ್ರಿತ ವ್ಯವಸ್ಥೆ. ಕರಾವಳಿಯ ಹಳ್ಳಿಗಳಲ್ಲಿ ಕೆಲವರ್ಷಗಳ ಹಿಂದೆ ಇಂತಹ ಮನೆಗಳು ಮಾಮೂಲಿ. ಕೇರಳದ ಕಾಸರಗೋಡಿನಲ್ಲಂತೂ ಮುಳಿಹುಲ್ಲಿನ ಬೆಚ್ಚನೆಯ ಮನೆಗಳು ಮಾಮೂಲಿಯಾಗಿದ್ದವು. ಈಗಲೂ ಕುಗ್ರಾಮಗಳಲ್ಲಿ ಇವು ಅಪರೂಪಕ್ಕೆ ಕಾಣಸಿಗುತ್ತವೆ....
ಮುಳಿಹುಲ್ಲಿನ ಈ ಮನೆಗಳ ರಚನೆಯೇ ಒಂದು ವೈಶಿಷ್ಠ್ಯಪೂರ್ಣ. ಇದೊಂದು ಕಲೆ. ಸರಳ ವಿಧಾನದಲ್ಲಿ ರಚಿಸಲ್ಪಡುವ ಈ ಮನೆ ಒಂದು ಸುಖದ ವಾತಾವರಣವನ್ನು ನೀಡುತ್ತದೆ.ಸೆಗಣಿ ಸಾರಿಸಿದ ಮಣ್ಣಿನ ನೆಲ. ಅಲ್ಲೊಂದು ಹುಲ್ಲ ಚಾಪೆ, ಕೂರಲು ಮಣ್ಣಿನ ಚಿಟ್ಟೆ... ಎದುರು ದೊಡ್ಡ `ದಳಿ' ತಟ್ಟಿ ಕಿಟಿಕಿಗಳು... ಇದು ಸಾಮಾನ್ಯ ಮುಳಿ ಹುಲ್ಲಿನ ಮನೆಯ ಒಂದು ನೋಟ. ಸೆಕೆಗಾಲ ಬಂದಾಗ ವರ್ಷಂಪ್ರತಿ ಮಾಡಿನ ರಿಪೇರಿ. ಮತ್ತೆ ಮಳೆಗಾಲಕ್ಕೆ ಬೆಚ್ಚನೆಯ ಮಾಡು ರೆಡಿ. ಮಾಡಿನ ಮೇಲ್ಭಾಗದ ಒಂದು ತಟ್ಟು ಮುಳಿಹುಲ್ಲು ಜಾರಿಸಿ ಹೊಸ ಮುಳಿಹುಲ್ಲು ಹೊದೆಸಲಾಗುತ್ತದೆ. ಮುಳಿಹುಲ್ಲುಗಳನ್ನು ಮಾಡಿಗೆ ಹೊದೆಸುವುದೂ ಒಂದು ಕಲೆಯೇ ಸೈ. ಅದು ಎಲ್ಲರಿಗೂ ಸಾಧ್ಯವಿಲ್ಲ. ಅದಕ್ಕೆ ಅದರದ್ದೇ ಆದ ವಿಧಾನವಿದೆ. ಆ ರೀತಿಯಲ್ಲಿ ಹೊದೆಸಿದರಷ್ಟೇ ಮಾಡು ಸಮರ್ಪಕವಾಗಿ ನೀರನ್ನು ತಡೆಯುತ್ತದೆ. ಅದೆಲ್ಲಾ ಹಿಂದಿನ ಹಿರಿಯರಿಗೆ ಕರತಲಾಮಲಕ!

ಇಂತಹ ಮನೆಗಳು ಗಡಿನಾಡ ಕಾಸರಗೋಡು ಸೇರಿದಂತೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಅಲ್ಲೊಂದು ಇಲ್ಲೊಂದು ಉಳಿದುಕೊಂಡಿದೆ. ಪ್ರವಾಸೋದ್ಯಮ ಇಲಾಖೆ ಪ್ರವಾಸೀ ತಾಣಗಳಲ್ಲಿ ಈ ರೀತಿಯ ಮನೆಗಳನ್ನು ನಿರ್ಮಿಸಿ ಅದರಲ್ಲಿ ಪಟ್ಟಣದ ಮಂದಿಗೆ ಸುಖದಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟರೆ ಅದು ಹಿಟ್ ಆಗುವುದರಲ್ಲಿ ಸಂದೇಹವೇ ಇಲ್ಲ...

ಇದೀಗ ಕಾಲ ಬದಲಾದಂತೆ ಮುಳಿಹುಲ್ಲಿನ ಮನೆಗಳು ಮಾಯ. ಬದಲಿಗೆ ಆರ್.ಸಿ.ಸಿ ಮನೆಗಳ ನಿರ್ಮಾಣ. ಅಪರೂಪವೆಂಬಂತೆ ಹಂಚಿನ ಮನೆಗಳು. ಇವುಗಳು ಇಂದಿನ ವಾತಾವರಣಕ್ಕೆ ಒಗ್ಗುತ್ತಿಲ್ಲ. ಸೆಕೆಕಾಲದಲ್ಲಿ ಕೂಲ್ ಇರೋದಿಲ್ಲ. ಕೂಲ್ ಆಗಿರ್ಬೇಕಾದ್ರೆ ಎ.ಸಿ ಬೇಕೇ...ಬೇಕು. ಹಿಂದಿನಂತೆ ಮುಳಿ ಹುಲ್ಲುಗಳು ಲಭ್ಯವಾಗುವ `ಬಯಲು'ಗಳೂ ಇಂದಿಲ್ಲ. ಮುಳಿಹುಲ್ಲೂ ಇಲ್ಲ. ಕ್ಷಣ ಕ್ಷಣಕ್ಕೆ ಸಮಾಜ ಬದಲಾಗುತ್ತಿದ್ದಂತೆಯೇ ಇವೆಲ್ಲವೂ ನಾಶವಾಗುತ್ತಾ ಸಾಗುತ್ತಿವೆ. ಅಂತೂ ಅಪರೂಪಕ್ಕೆ ಕೆಲವೆಡೆಗಳಲ್ಲಿ ಈ ಮನೆಗಳು ಕಾಣಸಿಗುತ್ತವೆ.
ಇಂದು ಇದೇ ಮನೆಗಳನ್ನು ಹೋಲುವ `ರೆಸಾರ್ಟ್ 'ಗಳು ಕೊಂಚ ಆಧುನೀಕ ಗೆಟಪ್ಗಳೊಂದಿಗೆ ನಿರ್ಮಾಣವಾಗುತ್ತಿವೆ. ಏನಿದ್ದರೂ ಹಳೆಯ ತಂತ್ರಜ್ಞಾನಕ್ಕೆ ತಲೆಬಾಗಲೇ ಬೇಕು...ಯಾವತ್ತಿಗೂ `ಓಲ್ಡ್ ಈಸ್ ಗೋಲ್ಡ್'!

- ವರ್ಷಾ

0 comments:

Post a Comment