ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಸೌಪರ್ಣಿಕಾ ನದಿಗೆ ಕಟ್ಟು, ಥಂಡಾ ಥಂಡಾ ಆನೆಝರಿಗೆ ಬೀಳಲಿದೆ ಕೊಡಲಿ ಪೆಟ್ಟು


ಉಡುಪಿ : ಸೌಪರ್ಣಿಕಾ ನದಿಗೆ ಕಟ್ಟುತ್ತಿರುವ ಒಡ್ಡು ಯಾರಿಗೆ ಎಷ್ಟು ಪ್ರಯೋಜನವಾಗುತ್ತದೆ ಎನ್ನೋದು ಭಗವಂತನಿಗೆ ಗೊತ್ತು!. ಆದರೆ ಸೌಪರ್ಣಿಕಾ ನದಿಗೆ ಕಟ್ಟುವ ಆಣೆಕಟ್ಟು ಥಂಡಾ ಥಂಡಾ ಕೂಲ್ ಕೂಲ್ ಆನೆಝರಿಗೆ ಹಾಕಲಿದೆ ಕೊಡಲಿ ಪೆಟ್ಟು.ಅರಣ್ಯ ಇಲಾಖೆ ಲಕ್ಷಾಂತರ ಸುರಿದು ಅಭಿವೃದ್ದಿ ಪಡಿಸಿದೆ ಆನೆಝರಿ ಒಡ್ಡಿನ ಹೆಸರಲ್ಲಿ ಕಣ್ಮುಚ್ಚಲಿದೆ. ಘಟ್ಟದಿಂದ `ಮಿಕ್ಕುವ ಹಲವಾರು ಚಿಕ್ಕಪುಟ್ಟ ಹಳ್ಳ,ಕೊಳ್ಳಕ್ಕೂ ಕಟ್ಟೆಕಟ್ಟಿ ಪಶ್ಚಿಮ ಘಟ್ಟದ ರಮಣೀಯ ದೃಶ್ಯಗಳನ್ನು ನುಂಗಿ ನೀರು ಬಿಟ್ಟಹಾಗೆ ಆನೆಝರಿ ಕೂಡ ಅಂದಕಾಲಕ್ಕೆ ಸೇರಲಿದೆ. ಈಗಾಗಲೇ ಲಿಂಗನಮಕ್ಕಿ ಹಿನ್ನೀರಿಗೆ `ಪಾಂಡವರತಳ್ಳಿ' ಜಲಸ್ಥಂಭನಕ್ಕೆ ಒಳಗಾಗಿದೆ.ಕುಕ್ಕನಗುಡ್ಡಕ್ಕೆ ಬೆಳ್ಳಕ್ಕಿಗಳ ಒಡ್ಡೋಲಗ ನಿಂತಿದೆ. ಹೆಗ್ಳಮನೆ ಹಸಿರು ಕಾಡು ತಲೆ ಬೋಳಿಸಿಕೊಂಡಿದೆ. ಇದರೊಟ್ಟಿಗೆ ಮಲೆನಾಡಿಗರ ಬೆಳದಿಂಗಳ ಮತ್ತು ಹೊಳೆ ಊಟಡದ ತಾಣವನ್ನು ಲಿಂಗನಮಕ್ಕಿ ಹಿನ್ನಿರು ಕಸಿದುಕೊಂಡಿದೆ. ಇದೆಲ್ಲಾ ಸಾಲದು ಎಂಬಂತೆ ಆಣೆಝರಿಯೂ ಗತವೈಭವಕ್ಕೆ ಸೇರಲಿದೆ.

ಎಲ್ಲಿದೆ ಆನೆಝರಿ
ಕೊಲ್ಲೂರಿ ನಿಂದ ಮಾರಳತೆ ಅಂತರದಲ್ಲಿ ಹಾಗೂ ಸೌಪರ್ಣಿಕಾ ನದಿಗೆ ಕಟ್ಟುವ ಆಣೆಕಟ್ಟಿನ ಕೂಗಳತೆ ನಡುವೆ ಆನೆಝರಿ ಬರುತ್ತದೆ. ಆನೆಝರಿ ಹೊಕ್ಕರೆ ಎಸಿ ರೂಂ ಹೊಕ್ಕ ಅನುಭವ ಕೊಡುತ್ತದೆ. ಆನೆಝರಿಯಲ್ಲಿ ಸೂರ್ಯ ರಶ್ಮಿ ಇಣಕಿ ನೋಡಲಿಕ್ಕೂ ಭಯ ಮಾಡುವಷ್ಟು ದಟ್ಟ ಕಾಡಿದೆ. ಹೆಮ್ಮರಗಳ ಒಡ್ಡೋಲಗ, ಮರಗಳಿಗೆ ಸುತ್ತಿಕೊಂಡ ಗಣಪೆ ಬೀಳಿನ ಹಿಂಡು, ಬಿದಿರು, ಬೆತ್ತ ನೂರಾರು ಬಗೆಯ ಸಸ್ಯಯ ಪ್ರಬೇಧ, ಸೂಕ್ಷಜೀವಿಗಳ ಆವಾಸಸ್ಥಾನ ಆನೆಝರಿಯ ಬಂಡವಾಳ.

ಸ್ವಾಭಾವಿಕ ಕಾಡನ್ನು ಆಶ್ರಯಿಸಿ ಅಪರೂಪದ ಪಕ್ಷಿಗಳ ಹಾಡು ಇಲ್ಲಿ ನಿತ್ಯನೂತನ. ಆನೆಝರಿ ಒಮ್ಮೆ ಹೊಕ್ಕರೆ `ಬಾಹ್ಯ ಪ್ರಪಂಚದ ಗೊಡವೆ ಮರೆಯಾಗುತ್ತದೆ. ಇಲ್ಲೇ ಇದ್ದುಬಿಡುವ ಅನ್ನಿಸದಿದ್ದರೆ ಮತ್ತೆ ಹೇಳಿ. ಏಕಾಂತಕ್ಕೆ, ಪ್ರಾಕೃತಿಕ ಸಂದರ್ಯಕ್ಕೆ, ಜಲಕ್ರೀಡಗೆ ಆನೆಝರಿಯಷ್ಟು ಪ್ರಶಸ್ತ ಜಾಗ ಮತ್ತೊಂದಿಲ್ಲ ಅಂದರೆ ಅತಿಶಯೋಕ್ತಿಯಲ್ಲ. ಸಸ್ಯ ಸಂಪದ್ಭ್ಭರಿತ ಆನೆಝರಿ ಕಾಲದಲ್ಲಿ ಸೇರುತ್ತಾ ಎನ್ನೋದು ಪರಿಸರ ಪ್ರಿಯರ ಪ್ರಶ್ನೆ.

ಆನೆಝರಿ ಅಂತ ಹೆಸರು ಬರಲು ಕಾರಣವಿದೆ. ಸೌಪರ್ಣಿಕಾ ಹರಿವು ಆನೆಝರಿಯಲ್ಲಿ ಮಂದ್ರ ಮಂದ್ರಾ. ಸುತ್ತಿಬಳಸಿ ಹರಿಯುವ ನದಿ ಗಜ ಗಾತ್ರದ ಹೊಂಡ ಸೃಷಿಸಿದೆ. ಹೊಂಡದಲ್ಲಿ ಆನೆಗಳ ಹಿಂಡು ಜಲಕ್ರೀಡೆಯಾಡುತ್ತಿದ್ದವು ಎನ್ನೋ ಹಿನ್ನೆಲೆಯಲ್ಲಿ ಆನೆಝರಿ ಎಂಬ ನಾಮ ಬಂದಿದೆ.
ಆನೆಝರಿಯಲ್ಲಿ ಆನೆಗೆ ಬೇಕಾಗುವ ಹಸಿರು ಸಿಗುತ್ತಿತ್ತು. ಹಾಗೆ ನೀರಿನಲ್ಲಿ ಖುಷಿ ಖುಷಿಯಲ್ಲಿ ಮೀಯುವಷ್ಟು ನೀರಿರುತ್ತದೆ. ಆನೆಝರಿಯಲ್ಲಿ ತಂಪಾಗಿರುವ ನೀರು ಖುಷಿಕೊಡುತ್ತದೆ. ಆನೆಗಳು ಝರಿಯಲ್ಲಿ ನೀರಾಟವಾಡಿ ನದಿಯ ಮಗ್ಗಲ್ಲಿರುವ ಸಮತಟ್ಟಾದ ಜಾಗದಲ್ಲಿ ರೆಸ್ಟ್ ಪಡೆದು ಕಾಡು ಸೇರುತ್ತಿದ್ದವು ಎಂಬ ಭಾವನೆಯಿದೆ. ಹಾಗೆ ಆನೆಗೆ ಬೇಕಾದ ಬಿದಿರು ಮತ್ತು ಬೈಣೆ ಮರಗಳಿದ್ದಿದ್ದರಿಂದ ಆನೆಗೆ ಝರಿ ಅಚ್ಚುಮೆಚ್ಚು. ಕಾಲಕ್ರಮೇಣ ಆನೆ ಬರೋದು ನಿಂತಿತು. ಹೆಸರು ಆನೆಝರಿ ಎನ್ನೋದು ಶಶ್ವತವಾಯಿತು.

ನೂರು ಕಣ್ಣು ಸಾಲದು
ಕೊಲ್ಲೂರು ರಾಜ್ಯ ಹೆದ್ದಾರಿಯ ಹೊರಳು ದಾರಿಯಲ್ಲಿ ಆನೆಝರಿಗೆ ಪ್ರಯಾಣ ಮಾಡೋ ಖುಷಿಯಿದೆಯಲ್ಲಾ ಅದು ವರ್ಣನೆಗೆ ನಿಲುಕದ್ದು. ಕೆಲವೆಡೆ ಹೆಮ್ಮಕ್ಕಳ ನೆತ್ತಿಯಮೇಲೆ ಬೈತಲೆ ತಗೆದ ಹಾಗೆ ದಾರಿ ಸಾಗುತ್ತದೆ. ಮತ್ತೆ ಕೆಲವೆಡೆ ಹಾವಿನ ಹಾಗೆ ಅಂಕುಡೊಂಕು ಏರಿಳಿದ ಆನೆಝರಿ ತಲುಪಬೇಕು.
ಆನೆಝರಿಯಲ್ಲಿ ನೀರು ಹಾವಿನ ಓಡಾಟ ಸಿಗುತ್ತದೆ. ಹಸಿರುಕಟ್ಟಿ ಕೂತರೆ ದಾಹ ತೀರಿಸಿಕೊಳ್ಳಲು ಬರುವ ಕಾಡು ಪ್ರಾಣಿ ನೋಡಬಹುದು. ಸೊಕ್ಕಿದ ಕಾಡೆಮ್ಮೆ, ಕೋಣ ಕೂಡಾ ಇದೆ. ಇದರೊಟ್ಟಿಗೆ ಕಾಳಿಂಗ ಇದ್ದಾನೆ. ರಾತ್ರಿ ನೀರವತೆಯಲ್ಲಿ ಹಲಿ ಕೂಗು ಕಿವಗೆ ಅಪ್ಪಳಿಸುತ್ತದೆ. ಇದು ಅನೆಝರಿಯ ವೈಭವ.


ಆನೆಝರಿ ಸಾಹಸ ಜಲಕ್ರೀಡೆ ಮತ್ತು ಅಡ್ವೆಂಚರ್ ಪ್ರಿಯರಿಗೆ ಕೈ ಬೀಸಿ ಕರೆಯುತ್ತದೆ. ಹಾಗಾಗಿ ಅರಣ್ಯ ಇಲಾಖೆ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಚಿಕ್ಕ ಚಿಕ್ಕ ಕುಟೀರ ಟೆಂಟ್ ಹಾಕಿದೆ. ಹಾಗೆ ನದಿಯಲ್ಲಿ ಹಗ್ಗ ಹಾಕಿ ಟ್ರಕ್ಕಿಂಗ್ ಮಾಡಬಹುದು. ಮರದಿಂದ ಮರಕ್ಕೆ ಮರಕೋತಿ ಆಡಬಹುದು. ಬೇಸಿಗೆ ರಜೆಯಲ್ಲಂತೂ ಆನೆಝರಿಯಲ್ಲಿ ಮಕ್ಕಳ ಕಲರವವಿರುತ್ತದೆ. ನದಿಯಲ್ಲಿ ಬೋಟ್ಗಳ ಓಡಾಟವಿರುತ್ತದೆ. ಕೊಲ್ಲ್ಲೂರು ಶ್ರೀ ಮಾಕಾಂಬಿಕೆ ದೇವಿ ದರ್ಶನ ಮಾಡಿದವರು ಹಾಗೆ ಆನೆಝರಿಗೂ ಎಂಟ್ರಿಕೊಡುತ್ತಾರೆ. ಸೌಪರ್ಣಿಕಾ ನದಿಯ ಒಡ್ಡು ಎದ್ದರೆ ಪ್ರಕೃತಿಕ ಸೊಬಗಿನ ಆನೆಝರಿ ಅಸ್ತಿತ್ವ ಕಳೆದುಕೊಳ್ಳುತ್ತದೆ. ಸೌಪರ್ಣಿಕಾ ನದಿಗೆ ಕಟ್ಟಿದ ಒಡ್ಡಿನ ಹಿನ್ನೀರಿನ ಬಸಿ ಆನೆಝರಿಗೂ ಮುಟ್ಟಲಿದೆ.

ಒಟ್ಟಾರೆ ಗುಂಡ್ಯಾ ಆಣೆಕಟ್ಟು, ನೇತ್ರಾವತಿ ತಿರುವು, ದಕ್ಷಿಣಕ್ಕೆ ಹರಿವ ನದಿಗಳ ಪಥ ಪರಿರ್ವನೆ ಮುಂತಾದ ಬಾನ್ಗಂಡಿಯಿಂದ ಕಂಗಾಲಾದ ಕರಾವಳಿಯ ಅವಳಿ ಜಿಲ್ಲೆಗೆ ಸೌಪರ್ಣಿಕಾ ಅಣೆಕಟ್ಟು ಮತ್ತೊಂದು ತೆಲನೋವಾಗಿ ಪರಿಣಮಿಸಿದೆ. ಸೌಪರ್ಣಿಕಾ ನದಿಗೆ ಒಡ್ಡೆದ್ದರೆ ಉಡುಪಿಜಿಲ್ಲೆ ನಾಗರಿಕರ ಬಾಯಿಗೆ ಮಣ್ಣು ಬೀಳಲಿದೆ ಎನ್ನೋದು ಎಷ್ಟು ಜನರಿಗೆ ಗೊತ್ತಿದೆ. ಪರಿಸರ ಹೋರಾಟಗಾರ ಎಲ್ಲಿದ್ದಾರೆ. ಘಟ್ಟದ ಬುಡದಲ್ಲಿ ನೀರುನಿಲ್ಲಿಸಿದರೆ ಘಟ್ಟ ಖುಸಿಯೋದಿಲ್ಲ ಅನ್ನೋದಕ್ಕೆ ಏನು ಗ್ಯಾರೆಂಟಿ. ಉತ್ತರ ಹೇಳೋರು ಎಲ್ಲಿದ್ದಾರೆ.

- ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment