ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:00 PM

ಮೈಕ್ರೋ ಕಥೆಗಳು...

Posted by ekanasu

ಈ ಕನಸು ಅವಾರ್ಡ್

ಕೆಲವು ಕಥೆಗಳು ಮಿಂಚಿನಂತೆ ಮನದ ಹಾಳೆಗಳಲ್ಲಿ ಎರಗಿ ನಿಮಿಷಾರ್ಧದಲ್ಲಿ ಎಲ್ಲೋ ತರಗೆಲೆಗಳಂತೆ ಉದುರಿ ಹೋಗುತ್ತವೆ. ಹೇಳಲೇಬೇಕಂತಿದ್ದ ಹನಿ ಹನಿ ಮಾತುಗಳು ಹನಿ ಹನಿ ಕಥೆಗಳ ರೂಪದಲ್ಲಿ ಪ್ರಿಯ ಓದುಗರಿಗಾಗಿ...

ಪ್ರೇಮ ಸಮೀಕರಣ

ಓರ್ವ ಯುವಕನ ಶವ ನಗರದ ಬಹುಮಹಡಿ ಕಟ್ಟಡದಿಂದ ಉರುಳಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಆತ ಲೋಕಲ್ ಟಿವಿ ಚಾನೆಲ್ನಲ್ಲಿ ನಿರೂಪಕನಾಗಿ ಲವ್ ಗುರು ಕಾರ್ಯಕ್ರಮ ನಡೆಸುತ್ತಿದ್ದನಂತೆ. ಪ್ರಿಯತಮೆ ಬಿಟ್ಟು ಹೋದ ಆಘಾತ ಇವನ ಆತ್ಮಹತ್ಯೆಗೆ ಕಾರಣವೆಂದು ಸುತ್ತಮುತ್ತಲೆಲ್ಲಾ ಗುಸುಗುಸು. ಊರಿಗೆಲ್ಲಾ ತಾಳೆಯಾಗುತ್ತಿದ್ದ ಅವನ ಪ್ರೇಮ ಪ್ರಮೇಯ, ಪ್ರೇಮ ಸಮೀಕರಣಗಳು ಸ್ವಂತಕ್ಕೆ ಕೈ ಕೊಟ್ಟಿದ್ದವು.ಪದ ತನ್ಮಯತೆ
ಭಗ್ನಪ್ರೇಮಿಯೊಬ್ಬ ತನ್ನ ವಿರಹ ಮರೆಯಲು ಬರೆಯಲಾರಂಭಿಸಿದನಂತೆ. ಕೆಲವು ವರ್ಷಗಳ ನಂತರ ಅವನಲ್ಲಿ ಪರಿತಪಿಸುವಂಥದ್ದೇನೂ ಇರಲಿಲ್ಲ. ಅವನ ವೇದನೆಗಳೆಲ್ಲವೂ ಪದಗಳ ರೂಪದಲ್ಲಿ ಜನರ ಮನೆ ಮನಗಳಲ್ಲಿ ಗುಪ್ತನದಿಯಂತೆ ಹರಿದಾಡುತ್ತಿದ್ದವು.

ಲಂಚ
ಆತ ತನ್ನ ಜೀವಿತಾವಧಿಯಲ್ಲಿ ಬಡಬಗ್ಗರೆನ್ನದೆ ಜನರನ್ನು ಸುಲಿಯುತ್ತಾ ಸರಕಾರಿ ಆಫೀಸೊಂದರಲ್ಲಿ ಅಧಿಕಾರಿ ಹೆಸರಿನಡಿ ಮೆರೆಯುತ್ತಿದ್ದ. ಯಾರೋ ಹೇಳಿದಂತಾಯಿತು ಮೊನ್ನೆ, ಇವನನ್ನು ಮಣ್ಣು ಮಾಡಲು ಸ್ಮಶಾನದವನೂ ಅವನ ಮನೆಯವರಿಂದ ಎಲ್ಲೂ ಕೇಳದ ಭಕ್ಶೀಸು ತೆಗೆದುಕೊಂಡನಂತೆ. ಎಂಥಾ ಜಗತ್ತು!!

ಯು ಟರ್ನ್

ನಟೀಮಣಿಯೊಬ್ಬಳು ಪ್ರಚಾರಗಿಟ್ಟಿಸಲು ಎಲ್ಲಿಲ್ಲದ ಕಸರತ್ತು ಮಾಡುತ್ತಿದ್ದಳು. ಕೊನೆಗೂ ಒಂದು ದಿನ ಸಮಾಜದ ಓರ್ವ ಪ್ರತಿಷ್ಠಿತ ವ್ಯಕ್ತಿಯೊಬ್ಬನ ಜೊತೆ ಖಾಸಗೀ ಗುಂಡು ಪಾರ್ಟಿಯಲ್ಲಿ ಅವಳ ಫೋಟೋ ಕಾಣಿಸಿಕೊಂಡು ಆಕೆ ರಾತ್ರೋರಾತ್ರಿ ಸುದ್ದಿಯಾದಳು. ಆ ನ್ಯೂಸ್ ಚಾನೆಲ್ ಮೇಲೆ ಈಗ ಆಕೆ ಮಾನನಷ್ಟ ಮೊಕದ್ದಮೆ ಹೂಡಿದ್ದಾಳಂತೆ. ಪ್ರಚಾರ ಬೇಕು, ವಿವಾದ ಬೇಡ ಅನ್ನೋ ಮಾತು ಎಷ್ಟು ಸರಿ ಕಣ್ರೀ! ಸಂತೆಯ ನಡುವಿನಲ್ಲಿ ಮನೆ ಕಟ್ಟಿಸಿ ಶಬ್ದಕ್ಕೆ ಹೆದರಿದಂತೆ.

ಬದುಕುವ ದಾರಿ
ಕೆಲವು ವರ್ಷಗಳ ಹಿಂದಿನ ಕಥೆ. ಅಲೆಮಾರಿಯಾಗಿದ್ದ ಆತ ಹಿಮಾಲಯದ ತಪ್ಪಲಲ್ಲಿ ದಾರಿ ತಪ್ಪಿ ಹೋಗಿ ನೆಲೆ ಕಾಣದೆ ಅಲೆದಾಡುತ್ತಿದ್ದ. ಯಾವುದೋ ಸಾಧು ಮಾರ್ಗಮಧ್ಯೆ ಬಿಟ್ಟುಹೋಗಿದ್ದ ಕಾವಿ ಬಟ್ಟೆಯೊಂದು ಅವನಿಗೆ ದಾರಿಯಲ್ಲಿ ಸಿಕ್ಕಿತು. ಈಗ ಆತ ಶ್ರೀ ಶ್ರೀ ಶ್ರೀ ನಾಮಧೇಯದೊಂದಿಗೆ ಬಲು ದೊಡ್ಡ ಸ್ವಾಮಿಯಂತೆ. ಭಕ್ತರ, ಹಿಂಬಾಲಕರ ಹಿಂಡಿನ ಜೊತೆ ಆರಾಮ ಜೀವನವಂತೆ. ಬದುಕಲು ಗೊತ್ತಿರುವವನಿಗೆ ಹಿಮಾಲಯವಾದರೇನು, ಪಾತಾಳವಾದರೇನು!

ವಾಗ್ಮಿ
ರಾಜಕಾರಣಿಯೊಬ್ಬ ತನ್ನ ಚುನಾವಣಾ ಪ್ರಚಾರದಲ್ಲಿ ದೇಶದ ಸ್ಥಿತಿಯ ಬಗ್ಗೆ ರೈತರನ್ನುದ್ದೇಶಿಸಿ ಗಂಟೆಗಟ್ಟಲೆ ಮಾತಾಡುತ್ತಾ ಗಳಗಳನೆ ಕಣ್ಣೀರ ಮಳೆಯನ್ನೂ ಸುರಿಸಿದ. ಆಗತಾನೇ ಪಾರ್ಟಿಯ ಕಡೆಯಿಂದ ಚುನಾವಣೆಗೆ ಟಿಕೆಟ್ ಪಡೆದಿದ್ದ ಜನಪ್ರಿಯ ನಟನೊಬ್ಬ ತನ್ನ ಪಕ್ಕದವನ ಕಿವಿಯಲ್ಲಿ ಉಸುರಿದ, "ನನ್ನ ಬದಲು ಫಿಲಂಫೇರ್ ಇವರಿಗೆ ಬರಬೇಕಿತ್ತು."

ಅಭಿಮಾನಿ ದೇವರು
ಪಂದ್ಯದ ಅಂತಿಮ ಘಟ್ಟದಲ್ಲಿ ಬಂದ ಆತನ ಒಂದು ಬಿರುಸಿನ ಸಿಕ್ಸರ್ ಹೊಡೆತ ಸ್ಟೇಡಿಯಂನಲ್ಲಿ ಕುಳಿತ ಓರ್ವ ಮಹಿಳೆಯ ಮೂಗನ್ನು ಜಖಂಗೊಳಿಸಿತ್ತು. ಮಾನವೀಯತೆಯ ಮೂರ್ತಿಯಂತಿದ್ದ ಆ ಆಟಗಾರ ಆಕೆಯನ್ನು ನೋಡಲು ಆಸ್ಪತ್ರೆಗೆ ಭೇಟಿ ಕೊಟ್ಟನು. ಮರುದಿನ ಆಕೆ ಅದೇ ಚೆಂಡನ್ನು ಇಪ್ಪತ್ತೈದು ಕೋಟಿಗೆ ಆಟಗಾರನ ಸಹಿಯೊಂದಿಗೆ ತನ್ನದಾಗಿಸಿಕೊಂಡಳು.

ಪ್ರೀತಿ
ಯೌವ್ವನದಲ್ಲಿ ಆಕೆ ತನ್ನ ಬಾಳಸಂಗಾತಿಯಾಗಲು ಕಲ್ಪನೆಯ ಕನಸಿನ ರಾಜಕುಮಾರನ್ನೇನೂ ಹುಡುಕಲಿಲ್ಲ. ಆದರೂ ಆಕೆ ಇಂದು ತನ್ನ ಗಂಡ ಮಕ್ಕಳೊಂದಿಗೆ ಸಂಸಾರದಲ್ಲಿ ಸಂತೋಷದಲ್ಲಿದ್ದಾಳೆ. ವಿವಾಹ ಜೀವನ ಆಕೆಗೆ ಎಲ್ಲಾ ಸ್ಥಿತಿಯಲ್ಲೂ ರಾಣಿಯನ್ನಾಗಲು ಕಲಿಸಿದೆ, ತನ್ನ ಹೃದಯ ಶ್ರೀಮಂತಿಕೆಯಿಂದ!

ಹಟ
ಪ್ರತಿಷ್ಠೆ ಮತ್ತು ಸಂಬಂಧಗಳ ನಡುವೆ ಯಾವುದನ್ನು ಆರಿಸಬೇಕೆಂಬುದೇ ಆತನಿಗೊಂದು ಬಹುದೊಡ್ಡ ಚಿಂತೆಯಾಗಿತ್ತು. ಕೊನೆಗೂ ಪ್ರತಿಷ್ಠೆಯೇ ಮೇಲುಗೈಯನ್ನು ಪಡೆಯಿತು. ಆದರೆ ಈ ಬಾರಿಯ ಗೆಲುವಿನ ಸುಖವನ್ನು ಸವಿಯಲು ಅವನಿಗೆ ಯಾವುದೇ ಆಪ್ತನ ಜೊತೆಯಿರಲಿಲ್ಲ.

ಪ್ರಶಸ್ತಿ
ಆ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಲು ಆ ಲೇಖಕಿ ಹಗಲು ರಾತ್ರಿ ರಾಜಕಾರಣಿಗಳ ಕೈ-ಕಾಲು ಹಿಡಿದು ಲಾಬಿ ನಡೆಸುತ್ತಿದ್ದಳು. ಕೊನೆಗೂ ಐವತ್ತು ಸಾವಿರ ರೂಪಾಯಿಗೆ ವ್ಯವಹಾರ ಕುದುರಿತು. ಪ್ರಶಸ್ತಿಯ ಪೂರ್ತಿ ಮೊತ್ತ ಐವತ್ತು ಸಾವಿರ ಆ ರಾಜಕಾರಣಿಯ ಪಾಲಾಯಿತು. ಶಾಲು, ಗಂಧದ ಹಾರ ಮತ್ತು ಅರ್ಧ ಕಿಲೋ ಹಣ್ಣುಗಳು ಇವರ ಪಾಲಿಗೆ ಪಂಚಾಮೃತವಾಯಿತು.


- ಪ್ರಸಾದ್ ಕೆ.

0 comments:

Post a Comment