ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಸ್ಪೆಷಲ್ ಸ್ಟೋರಿ

ಕವಿ-ಕಲಾವಿದನ ಪಾಲಿಗೆ ಕಲ್ಲುಗಳೂ ಒಂದು ಅದ್ಭುತವಾದ ಕಲ್ಪನೆಯನ್ನು ನೀಡುತ್ತದೆ. ಹಲವು ಕಾವ್ಯಗಳು ಇಂತಹ ನಿಸರ್ಗದತ್ತವಾದ ಕಲ್ಲ ರಾಶಿಯ ಮೇಲೆ ಹುಟ್ಟಿವೆ. ಕಲಾವಿದನ ಕ್ಯಾನ್ವಾಸ್ಗಳಿಗೂ ಈ ಕಲ್ಲ ರಾಶಿಗಳು ಅದ್ಭುತ ಪ್ರೇರಣೆ ನೀಡಿವೆ. ಅಂತಹ ಕಲ್ಲುಗಳ ರಾಶಿಯೇ ಒಂದು ನೈಜ ಕಲಾಕೃತಿ ಇದ್ದಂತೆ...ಒಂದು ಕಾವ್ಯವಿದ್ದಂತೆ... ಆದರೆ ರಾಜ್ಯದ ಪ್ರವಾಸೋದ್ಯಮ ಇಲಾಖೆಗೆ ಇವೆಲ್ಲವೂ ಬರಿಯ ಕಲ್ಲಾಗಿ ಕಾಣಿಸುತ್ತಿದೆ. ಒಂದಷ್ಟು ಕಾವ್ಯಾತ್ಮಕವಾಗಿ , ಕವಿದೃಷ್ಟಿಯಿಂದ ಮನಸ್ಸನ್ನು ಮುದಗೊಳಿಸುವ ತಾಣವಾಗಿ ಕಾಣುವಲ್ಲಿ ಸೊರಗಿಹೋಗಿದೆ. ಓ ಪ್ರವಾಸೋದ್ಯಮ ಇಲಾಖೆಯೇ ಇತ್ತನೋಡೊಮ್ಮೆ...ಗಾಢ ನಿದ್ದೆಯಿಂದ ಹೊರಬಂದು ನೋಡು ಎನ್ನುತ್ತಾರೆ ನಾಡೋಡಿ...


`ನಿಸರ್ಗ' ಇದೇ ಒಂದು ಅಚ್ಚರಿ!... ಅದ್ಭುತ!... ಸೃಷ್ಠಿಯೇ ಒಂದು ವೈಚಿತ್ರ!... ನಿಸರ್ಗವೇ ದೊಡ್ಡ ಕ್ಯಾನ್ವಾಸ್... ಅದರೊಳಗೆ ಅದೆಷ್ಟು ವರ್ಣ ವೈವಿಧ್ಯ!... ಬಣ್ಣಗಳ ಚೆಲ್ಲಾಟ!... ಅಚ್ಚರಿಗಳ ಸೃಷ್ಠಿ!... ಚಿತ್ತಾರಗಳ ಮೋಡಿ...
ಎಷ್ಟು ಹೇಳಿದರೂ ಕಡಿಮೆಯೇ ಅದೇ ಈ ದೊಡ್ಡ ಕ್ಯಾನ್ವಾಸ್ನ ಹೆಗ್ಗಳಿಕೆ...
ನಿಸರ್ಗದಲ್ಲೆಲ್ಲಾ ಒಂದಲ್ಲಾ ಒಂದು ಸಹಜ ಕಲಾಕೃತಿಗಳಿವೆ. ನೋಡುವ ದೃಷ್ಠಿಯಲ್ಲಿ ಅದರ ಅಂದಕಾಣಸಿಗುತ್ತದೆ. ಒಂದು ಮರವನ್ನೇ ಉದಾಹರಣೆಗೆ ತೆಗೆದುಕೊಳ್ಳುವ... ಮರದ ಅಂಕುಡೊಂಕಾದ ರೆಂಬೆ-ಕೊಂಬೆಗಳು, ಅದರ ಕಾಂಡ, ಬೇರುಗಳ, ಅಲ್ಲಲ್ಲಿ ಪೊಟರೆಗಳು, ವರ್ಣ ವಿಭಿನ್ನದ ಎಲೆಗಳ ರಾಶಿ, ತೊಗಟೆಯ ಮೇಲಣ ಸಣ್ಣ ಸಣ್ಣ ಚುಕ್ಕಿಗಳು, ಉಬ್ಬುತಗ್ಗುಗಳು... ಬಾಗಿ ಬಳುಕುವ ಇಡೀ ಮರ... ಇದನ್ನೆಲ್ಲಾ ನೋಡುವುದೇ ಒಂದು ಖುಷಿ.

ಹೀಗೆ ಸಣ್ಣ ಹುಲ್ಲಿನಿಂದ ತೊಡಗಿ, ಕೆರೆ, ಸರೋವರ, ನದಿ, ಕೊಳ, ಹಳ್ಳ, ತೋಡು, ಗುಡ್ಡ, ಬೆಟ್ಟ, ಕಲ್ಲು...ಎಲ್ಲೆಂದರಲ್ಲಿ ಒಂದಲ್ಲಾ ಒಂದು ಸುಂದರ ಕಲಾಕೃತಿಗಳನ್ನು ಪ್ರಕೃತಿಯೇ ಸೃಷ್ಠಿಸಿದೆ. ಅದು ನೈಜ ಕಲಾಕೃತಿ.ಕಲಾವಿದನ ಕಲಾಕೃತಿಗಳಿಗಿಂತಲೂ ವಿಭಿನ್ನವಾದ, ಶ್ರೇಷ್ಠವಾದ ಕಲೆ ಸಾಕ್ಷಾತ್ ಪ್ರಕೃತಿಯಲ್ಲಿ ಕಾಣಸಿಗುತ್ತದೆ. ಅದು ನೈಜ ಕಲೆಯಾಗಿದೆ. ಅದನ್ನು ಅನುಭವಿಸುವ ಸಾಮರ್ಥ್ಯ ನಮಗಿರಬೇಕಷ್ಟೇ.
ಹೀಗೇ ಸುತ್ತಾಡುತ್ತಿರಬೇಕಾದರೆ ಕಂಡುಬಂದುದೇ ಈ ಕಲ್ಲುಗಳ ರಾಶಿ. ಇದು ಕೇವಲ ಕಲ್ಲ ರಾಶಿಯಲ್ಲ. ನಿಸರ್ಗದ ಕಲೆ..ಕಲಾತ್ಮಕ ಕಾವ್ಯ, ಅಲ್ಲಿ ಜುಳು ಜುಳು ಸದ್ದುಮಾಡುತ್ತಾ ಬಾಗಿ ಬಳುಕಿ ಸಾಗುವ ನದಿಯಿದೆ...ನದಿಯ ಹರಿವಿಗೆ ಸಿಕ್ಕು ಒಂದೊಂದು ಕಲ್ಲುಗಳೂ ಒಂದೊಂದು ರೂಪ ತಳೆದಿವೆ. ಅವೆಲ್ಲಾ ನೋಡುಗನ ಮನ ಸೂರೆಗೊಳಿಸುವಂತಿವೆ. ನದಿಯ ನೀರ ಹರಿವಿನ ರಭಸಕ್ಕೆ ಕಲ್ಲುಗಳು ತಲೆ ಬಾಗಿಸಿವೆ.ವರ್ಷಾನುಗಟ್ಟಲೆ ನೀರ ವಿವಿಧ ರೀತಿಯ ಹರಿವಿಗೆ ಇವೆಲ್ಲಾ ನಿಧಾನವಾಗಿ ಕರಗಿ ಒಂದೊಂದು ರೂಪ ಪಡೆದಿವೆ. ಮಳೆಗಾಲ ಕಳೆದು ಬೇಸಿಗೆ ಬರುತ್ತಿದ್ದಂತೆಯೇ ನೀರು ಬತ್ತಿಹೋಗಿ ಕಲ್ಲುಗಳ ದರ್ಶನವಾಗತೊಡಗುತ್ತವೆ. ಒಂದಷ್ಟು ಹೊತ್ತು ಆ ಕಲ್ಲ ರಾಶಿಯನ್ನೇ ನೋಡುವ , ನೋಡಿ ಸಂತಸ ಪಡೆಯುವ ಭಾಗ್ಯ ನಮ್ಮದಾಗುತ್ತದೆ. ಕಲೆ ನೋಡುವ ದೃಷ್ಠಿಯಲ್ಲಿದೆ. ಕಲೆಯ ಸ್ವಾಧ ಅನುಭವಿಸಿದವನಿಗಷ್ಟೇ ಪ್ರಾಪ್ತವಾಗುತ್ತದೆ. ಅದಕ್ಕೆ ನಿದರ್ಶನವೇ ನಾಡಿನಾದ್ಯಂತ ತಣ್ಣನೆ ಹರಿಯುವ ನದೀಗಳು, ಅವುಗಳ ಒಡಲಲ್ಲಿರುವ ಚಿತ್ರ ವಿಚಿತ್ರ ಕಲ್ಲುಗಳು!

-ನಾಡೋಡಿ.

0 comments:

Post a Comment