ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಸಂದರ್ಶನ

ಆಮಿಷ, ಒತ್ತಡಗಳಿಗೆ ಪತ್ರಕರ್ತರು ಬಲಿಯಾಗಬಾರದು...
ಇದು 'ಸುಧಾ' ವಾರಪತ್ರಿಕೆಯ ಉಪ-ಸಂಪಾದಕ ಬಿ.ಎಂ. ಹನೀಫ್ ಅವರ ಮಾತು... ಮೂಲತಃ ಹಳೆಯಂಗಡಿಯವರಾದ ಇವರು ವಾಣಿಜ್ಯ ವಿಭಾಗದಲ್ಲಿ ಪದವಿ ಶಿಕ್ಷಣವನ್ನು ಗೋವಿಂದ ದಾಸ ಕಾಲೇಜಿನಲ್ಲಿ ಪಡೆದರು. ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯ ಸಂಘದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಇವರು. ಬೈಕಂಪಾಡಿಯ "ಮುಂಗಾರು" ಪತ್ರಿಕೆಯ ಮೂಲಕ ಪತ್ರಿಕೋದ್ಯಮದಲ್ಲಿ ತಮ್ಮ ಸೇವೆಯನ್ನು ಆರಂಭಿಸಿದರು. ಪ್ರಜಾವಾಣಿಯಲ್ಲೂ ಹಲವು ವರುಷಗಳ ಕಾಲ ಸೇವೆ ಸಲ್ಲಿಸಿದರು. ಪ್ರಸ್ತುತ 'ಸುಧಾ' ವಾರಪತ್ರಿಕೆಯ ಉಪ-ಸಂಪಾದಕರಾಗಿದ್ದಾರೆ. ಹಾಗೇ ವಿವಿಧ ಸಾಂಸ್ಕೃತಿಕ - ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರಜೊತೆ ನಡೆಸಿದ ಮಾತುಕತೆ ಹೀಗಿದೆ.* ವಾಣಿಜ್ಯ ವಿದ್ಯಾರ್ಥಿಯಾದ ತಮಗೆ ಪತ್ರಿಕಾರಂಗದಲ್ಲಿ ಆಸಕ್ತಿ ಹೇಗೆ ಹುಟ್ಟಿತು ?

ಶಾಲಾ ದಿನಗಳಲ್ಲಿ ಸಾಹಿತ್ಯದಲ್ಲಿ ನನಗೆ ಒಲವಿತ್ತು. ಕಥೆ, ಕಾದಂಬರಿಗಳನ್ನು ಓದುವುದು, ಬರೆಯುವುದರಲ್ಲಿ ಆಸಕ್ತಿ ಇತ್ತು. ಅದಕ್ಕೆ ಪೂರಕವಾದಂತಹ ಪರಿಸರ ನಾನು ಕಲಿತ ರೊಸಾರಿಯೋ ಶಾಲೆ, ಗೋವಿಂದ ದಾಸ ಕಾಲೇಜುಗಳಲ್ಲಿ ಒದಗಿತು. ಮೊದಮೊದಲು ಪ್ರಜಾವಾಣಿಯಲ್ಲಿ ವಾಣಿಜ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಿದ್ದೆ. ಆದರೆ ಇತರ ವಿಷಯಗಳಿಗೆ ಹೋಲಿಸಿದಾಗ ವಾಣಿಜ್ಯ ಲೇಖನಗಳನ್ನು ಬರೆಯುವುದು ಬಹಳ ಕಷ್ಟ... ಪದಗಳು ಸಿಗುವುದಿಲ್ಲ... ಹಾಗಾಗಿ ನಾನು ವಾಣಿಜ್ಯ ವಿದ್ಯಾರ್ಥಿಯಾದದ್ದು ಅನುಕೂಲವೇ ಆಯಿತು. ಮುಂದೆ ಬಿ.ಕಾಂ. ಮುಗಿಸಿ ಶುಗರ್ ಫ್ಯಾಕ್ಟರಿಯಲ್ಲಿ ವೃತ್ತಿ ಆರಂಭಿಸಿದಾಗ 'ಮುಂಗಾರು' ಪತ್ರಿಕೆ ಆರಂಭವಾಯಿತು. ಮುಂಗಾರು ಪತ್ರಿಕೆಯ ರಘುರಾಮ ಶೆಟ್ಟಿ ಅವರ ಮೂಲಕ ಪತ್ರಿಕೋದ್ಯಮವನ್ನು ಪ್ರವೇಶಿಸಿದೆ.

* ದಿನಪತ್ರಿಕೆಗಿರುವಷ್ಟು ಓದುಗರು ಇಂದು ಸಾಪ್ತಾಹಿಕ ನಿಯತಕಾಲಿಕಗಳಿಗೆ ಏಕಿಲ್ಲ ?

ನಿಜ... ದಿನಪತ್ರಿಕೆಗಳಿಗೆ ಹೋಲಿಸಿದಲ್ಲಿ ಸಾಪ್ತಾಹಿಕ ಪತ್ರಿಕೆಗಳಿಗೆ ಓದುಗರು ಕಡಿಮೆ. ಏಕೆಂದರೆ ದಿನಪತ್ರಿಕೆಗಳು ದಿನನಿತ್ಯದ ಸುದ್ದಿಗಳನ್ನು ಓದುಗರಿಗೆ ತಲುಪಿಸುತ್ತದೆ. ಆದ್ದರಿಂದ ದಿನಪತ್ರಿಕೆಗಳಿಗೆ ಇಂದು ಹೆಚ್ಚಿನ ಓದುಗರಿದ್ದಾರೆ. ಇವತ್ತು ಸುಧಾ ಪತ್ರಿಕೆಗೆ 4 ಲಕ್ಷ ಓದುಗರಿದ್ದಾರೆ. ವಾರಪತ್ರಿಕೆಗಳಲ್ಲಿ ಬರುವ ಕಥೆ, ಕಾದಂಬರಿಗಳನ್ನು ಹೆಣ್ಣು ಮಕ್ಕಳು ಹೆಚ್ಚಾಗಿ ಓದುತ್ತಾರೆ. ಆದರೆ ಟಿ.ವಿ. ಬಂದ ನಂತರ ಧಾರಾವಾಹಿಗಳ ಸಂಖ್ಯೆ ಹೆಚ್ಚಾದಾಗ ಹೆಣ್ಣು ಮಕ್ಕಳು ಅತ್ತ ಆಕರ್ಷಿತರಾದರು. ಇವತ್ತಿನ ನಮ್ಮ ಜನರಲ್ಲಿ ಆರಾಮದ ಪ್ರವೃತ್ತಿ ಹೆಚ್ಚಾಗುತ್ತಾ ಇದೆ. ಕಷ್ಟಪಡಬಾರದು... ಮನೋರಂಜನೆ ಸಿಗಬೇಕು ಅನ್ನುವ ಪ್ರವೃತ್ತಿ.

* ವಿದ್ಯುನ್ಮಾನ ಮಾಧ್ಯಮದ ಬೆಳವಣಿಗೆಯಿಂದಾಗಿ ಮುದ್ರಣ ಮಾಧ್ಯಮ ತನ್ನ ಜನಪ್ರಿಯತೆ ಕಳೆದುಕೊಂಡಿದೆ ಎಂಬ ಕೂಗು ಕೇಳಿ ಬರುತ್ತಿದೆ. ಇದರ ಬಗ್ಗೆ ತಮ್ಮ ಅಭಿಪ್ರಾಯ...

ಖಂಡಿತವಾಗಿ ಇಲ್ಲ. ವಿದ್ಯುನ್ಮಾನ ಮಾಧ್ಯಮದಿಂದಾಗಿ ಮುದ್ರಣ ಮಾಧ್ಯಮದ ಜನಪ್ರಿಯತೆ ಕಡಿಮೆ ಆಗಿಲ್ಲ. ನೀವು ಉದಾಹರಣೆಗೆ ಗಮನಿಸುವುದಾದರೆ ಮುಂಬೈ ಭಯೋತ್ಪಾದಕ ದಾಳಿಯನ್ನು ಟಿ.ವಿ. ಮಾಧ್ಯಮಗಳು ಸತತವಾಗಿ 3 ದಿನ ಬಿತ್ತರಿಸಿದವು. ದಾಳಿಯ ಬಗ್ಗೆ ಇಂಚಿಂಚು ತೋರಿಸಿದರು. ಈ ಬಗ್ಗೆ ಪತ್ರಿಕೆಗಳು ವರದಿ ಮಾಡಿದಾಗ 25,000 ಪ್ರತಿಗಳು ಜಾಸ್ತಿ ಮಾರಾಟ ಆದವು.

* ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೃಜನಶೀಲ ಬರವಣಿಗೆ ಕಡಿಮೆಯಾಗುತ್ತಾ ಇದೆ ಎಂಬ ಅಪವಾದದ ಕುರಿತು ತಮ್ಮ ಅಭಿಪ್ರಾಯ...

ನಿಜ. ಏಕೆಂದರೆ ಅವಕಾಶ ಕಡಿಮೆ ನೋಡಿ...ಎಲ್ಲರೂ ಸಾಹಿತ್ಯವನ್ನು ಓದುವುದಿಲ್ಲ. ಸಾಹಿತ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಜನರು ಓದುವುದಿಲ್ಲ. ವಿಷಯಾಧಾರಿತ ಸಂಬಂಧಿತ ಲೇಖನಗಳು ವ್ಯಾಪಕವಾಗಿವೆ.

* ಪತ್ರಿಕೋದ್ಯಮ ಸಂಪೂರ್ಣವಾಗಿ 'ಉದ್ಯಮ' ವಾಗಿ ಬದಲಾಗಿದೆ. ರಾಜಕೀಯ ಹಸ್ತಕ್ಷೇಪ ಹೆಚ್ಚಾಗ್ತಾ ಇದೆ. ರಾಜಕೀಯ ನಾಯಕರು ತಮ್ಮ ಸ್ವಂತ ಉದ್ದೇಶಗಳಿಗೆ ಮಾಧ್ಯಮವನ್ನು ಬಳಸುತ್ತಿದ್ದಾರೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಅಂತ ಕರೆಸಿಕೊಳ್ಳುವ ಸಮಾಜದಲ್ಲಿ ಅರಿವನ್ನು, ಉತ್ತಮ ಸಂದೇಶಗಳನ್ನು ನೀಡಬೇಕಾದ ಮಾಧ್ಯಮಗಳಲ್ಲಿ ಇದು ಉತ್ತಮ ಬದಲಾವಣೆಯೇ ?

ರಾಜಕೀಯದವರು ಎಲ್ಲರ ಮೇಲೂ ಪ್ರಭಾವ ಬೀರುತ್ತಾರೆ. ಅವರು ಧರ್ಮಗುರುಗಳನ್ನು, ಶಿಕ್ಷಣವನ್ನು ಬಿಟ್ಟಿಲ್ಲ. ಹೀಗಿರುವಾಗ ಪತ್ರಕರ್ತರಲ್ಲಿ ಭದ್ರತೆ ಹೆಚ್ಚಬೇಕು. ನಿಜವಾದ ಪತ್ರಕರ್ತ ರಾಜಕಾರಣಿಗಳೊಂದಿಗೆ ಸ್ನೇಹ ಇಟ್ಟುಕೊಳ್ಳಬಾರದು. ಒಂದು ವೇಳೆ ಸಂಬಂಧ ಇಟ್ಟುಕೊಂಡರೂ ಅದು 'ಲವ್ ಆಂಡ್ ಹೇಟ್' ಬಂಧವಾಗಿರಬೇಕು. ಅತಿಯಾದ ಪ್ರೀತಿಯೂ ಇರಬಾರದು, ದ್ವೇಷವೂ ಇರಬಾರದು. ಹಾಗಂತ ಎಲ್ಲಾ ರಾಜಕಾರಣಿಗಳು ಕೆಟ್ಟವರಲ್ಲ. ಪರಿಸ್ಥಿತಿ, ವ್ಯವಸ್ಥೆ ಅವರನ್ನು ಕೆಡಿಸ್ತಾ ಇದೆ.

* ಪತ್ರಿಕೋದ್ಯಮ ಮತ್ತು ಮಾಧ್ಯಮಗಳಲ್ಲಿ ಇವತ್ತು ಗುಣಮಟ್ಟದ ವಿಷಯಗಳಿಗಿಂತಲೂ ಟಿ.ಆರ್.ಪಿ. ಮತ್ತು ಮಾರಾಟ ಹೆಚ್ಚಿಸಿಕೊಳ್ಳುವ ವ್ಯಾಪಾರ ನಡೀತಾ ಇದೆ. ಈ ಬದಲಾವಣೆಯ ಕುರಿತು ತಮ್ಮ ಅಭಿಪ್ರಾಯ.

ನಿಜ. ಟಿ.ವಿ. ಗಳಲ್ಲಾದರೆ ಟಿ.ಆರ್.ಪಿ. ರೇಟಿಂಗ್, ಪತ್ರಿಕೆಗಳಲ್ಲಾದರೆ ನಂ. 1 ಪತ್ರಿಕೆ ಎಂದು ಹೇಳಲಾಗುತ್ತದೆ. ಮಾರಾಟ ಹೆಚ್ಚಿಸಿಕೊಳ್ಳುವುದಕ್ಕಾಗಿ ಉಚಿತ ಸೋಪ್, ಕ್ರೀಮ್ಗಳನ್ನು ನೀಡಲಾಗುತ್ತದೆ. ಪತ್ರಿಕೆಗಳು ಹಲವಾರು ಬಾರಿ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತವೆ. ಬಹಳ ವಿಚಿತ್ರ ಎಂದರೆ ಸುಧಾ ಪತ್ರಿಕೆಯ ಜೊತೆಗೆ ನಾವು ಒಪ್ಪಂದ ಮಾಡಿಕೊಂಡ ತಯಾರಿಕೆಯ ಸ್ಯಾಂಪಲನ್ನು ಇಟ್ಟು ಮಾರಾಟ ಮಾಡಿದಾಗ ಮಾಮೂಲಿಗಿಂತ 15 ರಿಂದ 20,000 ಜಾಸ್ತಿ ಮಾರಾಟ ಆಯಿತು. ನಿಜಕ್ಕೂ ಇದನ್ನೆಲ್ಲಾ ಗಮನಿಸುವಾಗ ಓದುಗರು ಏನನ್ನು ಬಯಸುತ್ತಿದ್ದಾರೆ ಎಂದು ಆಶ್ಚರ್ಯವಾಗುತ್ತದೆ. ಓದುಗರು ಜ್ಞಾನವನ್ನು ಬಯಸುತ್ತಾರೋ ಅಥವಾ ಪುಕ್ಕಟೆ ವಸ್ತುಗಳನ್ನೋ ಎಂದು ತಿಳಿಯುವುದಿಲ್ಲ.

ಟಿ.ವಿ. ಗಳಲ್ಲಿ ಇತ್ತೀಚೆಗೆ ಭಯಾನಕ, ಗೊತ್ತಿಲ್ಲದಂತಹ ವಿಷಯಗಳನ್ನು ಬಂಡವಾಳವನ್ನಾಗಿಸಿ, ಅದನ್ನು ರೀಕ್ರಿಯೆಟ್ ಮಾಡುತ್ತಾರೆ. ಟಿ.ಆರ್.ಪಿ. ಗಾಗಿ ಜನರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಿದರೆ ಒಳ್ಳೆಯದು. ಭಯಾನಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದೆಂದು ನಾನು ಹೇಳುತ್ತಿಲ್ಲ. ಆದರೆ ಅದು ಜನರಲ್ಲಿ ಮೂಢ ನಂಬಿಕೆ, ಅವೈಜ್ಞಾನಿಕತೆ, ಭಯವನ್ನು ಬಿತ್ತಬಾರದು. ಇತ್ತೀಚೆಗೆ ಒಂದು ಪತ್ರಿಕೆ ಜಪಾನ್ನಲ್ಲಾದ ಸುನಾಮಿಯನ್ನು ಮುಂದಿರಿಸಿಕೊಂಡು ಇನ್ನೇನು ಪ್ರಳಯ ಆಗುತ್ತದೆ ಎಂದು ತನ್ನ ಮೊದಲ ಪುಟದಲ್ಲಿ ಮುದ್ರಿಸಿತು. 20 ಪುಟಗಳಲ್ಲಿ ವಿವರಿಸಿತು. ಸಿಕ್ಕಾಪಟ್ಟೆ ಮಾರಾಟ ಆಯಿತು. ಆದರೆ ಮುಂದೆ ಪ್ರಳಯವೂ ಆಗಿಲ್ಲ. ಏನೂ ಆಗಿಲ್ಲ. ಇದಕ್ಕೆ ಕಾರಣವನ್ನು ಪತ್ರಿಕೆ ನೀಡಲಿಲ್ಲ. ಪ್ರಶ್ನಿಸುವ ಮನೋಭಾವವನ್ನು ಓದುಗರು ಬೆಳೆಸಿಕೊಳ್ಳಬೇಕು. ಇಲ್ಲಿ ಸಮಸ್ಯೆ ಎರಡು ಕಡೆಗಳಿಂದ ಆಗುತ್ತಿದೆ. ಇಂತಹ ಸಾಮಾಜಿಕ ಬೇಜವಾಬ್ದಾರಿತನದ ವಿರುದ್ಧ ಬುದ್ಧಿಶಕ್ತಿ ಇಲ್ಲದವರಂತೆ ಜನರು ವರ್ತಿಸಬಾರದು.

* ತಾವು ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರ ಎರಡರಲ್ಲೂ ತಮ್ಮ ಸೇವೆ ಸಲ್ಲಿಸಿದ್ದೀರಾ. ತಮ್ಮ ಕೊಡುಗೆಯನ್ನು ನೀಡಿದ್ದೀರಿ. ತಾವು ಕಂಡಂತೆ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಇರುವ ಭಿನ್ನತೆಗಳೇನು ?

ಪತ್ರಿಕೋದ್ಯಮದಲ್ಲಿ ಸುದ್ದಿಯನ್ನು ಕೊಡುವುದು ಮತ್ತು ಅಭಿಪ್ರಾಯಗಳನ್ನು ರೂಪಿಸುವುದು. ಪತ್ರಿಕೆಯ ಧೋರಣೆಗಳು ಬೇರೆ ಬೇರೆ ಇರುತ್ತವೆ. ಅವರವರ ಅನುಕೂಲಕ್ಕಾಗಿ ಸುದ್ದಿಯನ್ನು ಕೊಡುತ್ತಾರೆ. ಪ್ರತಿಯೊಂದು ಪತ್ರಿಕೆಗೂ ಅದರದೇ ಆದ ಧೋರಣೆಗಳಿರುತ್ತವೆ. ದಿನಂಪ್ರತಿ, ದಿನದ ಸುದ್ದಿಗಳನ್ನು ಪ್ರಕಟಿಸುವುದರ ಜೊತೆಗೆ ಪತ್ರಿಕೆಗಳಲ್ಲಿನ ಪುರವಣಿಗಳಲ್ಲಿ ಸಾಂಸ್ಕೃತಿಕ, ಜೀವನ ಶೈಲಿ, ಸಮಸ್ಯೆಗಳಿಗೆ ಸಂಬಂಧಪಟ್ಟ ಲೇಖನಗಳು ಪ್ರಕಟವಾಗುತ್ತವೆ.

ಸಾಹಿತ್ಯದಲ್ಲಾದರೆ, ಈಗ ಸಮುದ್ರ ತೀರದಲ್ಲಿ ಒಂದು ಸಂಜೆ ಒಬ್ಬ ಕವಿ ಹಾಗೂ ಜನಸಾಮಾನ್ಯ ಕುಳಿತುಕೊಂಡಿದ್ದಾನೆ ಎಂದಿಟ್ಟುಕೊಳ್ಳಿ. ಆಗ ಸೂರ್ಯ ಮುಳುಗುವ ಹೊತ್ತು ಕವಿಗೆ ಬಹಳ ಸುಂದರವಾಗಿ ಕಾಣುತ್ತದೆ. ತನ್ನದೇ ಶೈಲಿಯಲ್ಲಿ ಅದರ ವರ್ಣನೆ ಮಾಡುತ್ತಾನೆ. ಆದರೆ ತನ್ನದೇ ಕಷ್ಟದಲ್ಲಿ, ಜಂಜಾಟದಲ್ಲಿ ಸಿಲುಕಿರುವ ಜನಸಾಮಾನ್ಯನಿಗೆ ಆ ದೃಶ್ಯ ಮಾಮೂಲಿಯಂತೆ ಕಾಣುತ್ತದೆ. ಅವನಿಗೆ ನಾಳೆಯ ಚಿಂತೆ ಇರುತ್ತದೆ. ಹೀಗೆ ಒಂದೇ ದೃಶ್ಯವನ್ನು ಒಬ್ಬ ಕವಿ ಹಾಗೂ ಜನಸಾಮಾನ್ಯ ಹೇಗೆ ನೋಡುತ್ತಾನೆ ಎಂಬುದು ಮುಖ್ಯವಾಗುತ್ತದೆ. ಸಾಹಿತ್ಯದ ಮೂಲಕ ಜನರನ್ನು, ಜನರ ಮನಸ್ಸನ್ನು ನಿರ್ಮಲ ಮಾಡಬೇಕು. ತೊಂದರೆ, ಕಷ್ಟದಲ್ಲಿರುವ ಮನುಷ್ಯನನ್ನು ಸಹೃದಯನನ್ನಾಗಿ ಮಾಡಬೇಕು.

* ಯುವ ಪತ್ರಕರ್ತರಿಗೆ, ಸಾಹಿತಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಕಿವಿ ಮಾತೇನು ?

ಯೌವ್ವನವೆಂಬುದು ಅದ್ಭುತವಾದ ಜೀವನ. ಮಾಡುವ ಕೆಲಸವನ್ನು ಮನಸ್ಸಿಟ್ಟು ಮಾಡಬೇಕು. ಆಸಕ್ತಿಗೆ ಪೂರಕವಾದಂತಹ ಕೆಲಸಗಳನ್ನು ಮಾಡಬೇಕು. ಹೆತ್ತವರ ಒತ್ತಡಕ್ಕೆ ಮಣಿಯಬಾರದು. ವೃತ್ತಿ ಯಾವುದೇ ಆಗಿರಲಿ ನೆಮ್ಮದಿಯಾಗಿ ಇರಬೇಕು. ಹಣದ ಜೊತೆಗೆ ನೆಮ್ಮದಿ ಇದ್ದಾಗ ಮಾತ್ರ ಆತ್ಮ ತೃಪ್ತಿ ಸಿಗುತ್ತದೆ. ಸಮಾಜ ಕಲುಷಿತವಾಗಿದೆ. ಕಾಲೇಜು ದಿನಗಳಲ್ಲೇ ಯುವಕರು ಗಟ್ಟಿ ಮನಸ್ಸು ಮಾಡಬೇಕು. ಏಕೆಂದರೆ ಹೊರಗಡೆ ಜಾತಿಯ ಒತ್ತಡ, ರಾಜಕಾರಣಿಗಳ ಒತ್ತಡ, ಹಣದ ಆಮಿಷಗಳು ಬರುತ್ತವೆ. ಅನ್ಯಾಯವಾಗಿ ಹಣ ಮಾಡಲು ಹೋಗಬಾರದು. ನ್ಯಾಯವಾಗಿ ದುಡಿದು ನೆಮ್ಮದಿಯ ಜೀವನ ನಡೆಸಬೇಕು. ಭಾಷೆ, ವೈವಿಧ್ಯಮಯ ಏಕತೆ ಇಲ್ಲಿದೆ. ಆದರೆ ಯಾವುದು ನಮ್ಮ ಶಕ್ತಿಯಾಗಬೇಕಿತ್ತೋ ಅದನ್ನು ದೌರ್ಬಲ್ಯ ಅಂತ ತಿಳಿದುಕೊಂಡಿದ್ದೇವೆ. ಯುವಕರು ಗಟ್ಟಿ ಮನಸ್ಸು ಮಾಡಬೇಕು. ಮುಂದಿನ ಜೀವನಕ್ಕೆ ಇದು ಸಹಕಾರಿಯಾಗುತ್ತದೆ. ನ್ಯಾಯಯುತವಾಗಿ ಬದುಕಲು ಸಾಕಷ್ಟು ಅವಕಾಶಗಳಿವೆ. ಈ ನೈತಿಕತೆ ನಮ್ಮೊಳಗೆ ಇದೆ. ಆದರೆ ನಾವದನ್ನು ಮರೆತು ಬಿಡುತ್ತೇವೆ.


ಸಂದರ್ಶಕಿ : ಶ್ವೇತಾ, ಪ್ರಥಮ ಬಿ.ಎ.
ಗೋವಿಂದ ದಾಸ ಕಾಲೇಜು, ಸುರತ್ಕಲ್.

1 comments:

Anonymous said...

ಹನೀಫ್ ‌ ಸುಧಾ ಪತ್ರಿಕೆಯ ಸಹ ಸಂಪಾದಕರೋ ಅಥವಾ ಉಪ ಸಂಪಾದಕರ...?
ಕೃಷ್ಣಪ್ರಸಾದ್ ಕೆ.ಎನ್.

Post a Comment