ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಎಸ್ಕ್ಲೂಸಿವ್


ವಿರಾಟ್ ವಿರಾಗಿ ವೇಣೂರ ಗೊಮ್ಮಟೇಶನಿಗೆ ಇದೀಗ ಮಹಾಮಜ್ಜನದ ಭರದ ಸಿದ್ಧತೆ. 2012 ಜನವರಿ 29ರಂದು ಮಹಾಮಜ್ಜನಕ್ಕೆ ದಿನನಿಗಧಿ. 9ದಿನಗಳ ಕಾಲ ಮಹಾಮಜ್ಜನದ ವೈಭವದ ಕಾರ್ಯಕ್ರಮ. ಮಹಾಮಸ್ತಕಾಭಿಷೇಕಕ್ಕಾಗಿ ಪೂರ್ವಭಾವೀ ತಯಾರಿಗಳು ಭರದಿಂದ ಸಾಗುತ್ತಿದೆ. ಮೇ.19ರಂದು ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ದಿನಾಂಕದ ಅಧಿಕೃತ ಘೋಷಣೆ ನಡೆಯಲಿದೆ. ಒಟ್ಟಾರೆಯಾಗಿ ಇದೀಗ ಮತ್ತೊಮ್ಮೆ ವೇಣೂರು ಮಹಾಮಜ್ಜನದ ಚಾರಿತ್ರಿಕ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ. ಕೇವಲ ಜೈನ ಸಮುದಾಯವಷ್ಟೇ ಅಲ್ಲ...ಊರ ಪರವೂರ ಜನತೆ ಈ ಚಾರಿತ್ರಿಕ ಮಹತ್ಕಾರ್ಯದ ವೀಕ್ಷಣೆಗೆ ಕಾತುರರಾಗುತ್ತಿದ್ದಾರೆ....ಇದೇ ಇಂದಿನ ಈ ಕನಸು ವಿಶೇಷ ವರದಿ.


40ವರುಷಗಳ ಸುಧೀರ್ಘ ಅವಧಿಯ ಬಳಿಕ ಫಲ್ಗುಣೀ ನದೀ ತೀರದ ವೇಣೂರಿನಲ್ಲಿ 2000ನೇ ಇಸವಿಯಲ್ಲಿ ಮಹಾಮಜ್ಜನ ಕಾರ್ಯಕ್ರಮ ನಡೆದಿತ್ತು. ಎರ್ಮೋಡಿ ಗುಣಪಾಲ ಜೈನ್ ಅವರ ನೇತೃತ್ವದಲ್ಲಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಆ ಕಾರ್ಯಕ್ರಮ ನಡೆದಿತ್ತು. ಅದಾಗ ಸಚಿವರಾಗಿದ್ದ ಧನಂಜಯ ಕುಮಾರ್ ಅವರು ವೇಣೂರು ಪರಿಸರದ ಮೂಲಭೂತ ಅಭಿವೃದ್ಧಿಯೂ ಸೇರಿದಂತೆ ಮಹಾಮಜ್ಜನಕ್ಕೆ ಸರಕಾರದಿಂದ ಆರ್ಥಿಕ ಧನ ಸಹಾಯವನ್ನು ಮಾಡಿದ್ದರು. ನಭೂತೋ ಎಂಬಂತೆ ವ್ಯವಸ್ಥಿತವಾಗಿ ಮಹಾಮಜ್ಜನ ಅತ್ಯಂತ ಸಂಭ್ರಮ ಸಡಗರದಿಂದ ಮೂಡಿಬಂದಿತ್ತು.ಆ ಕಾರ್ಯಕ್ರಮದ ನೆನಪು ಮಾಸುವ ಮುನ್ನವೇ ಇದೀಗ 12ವರುಷಗಳ ನಂತರ ಮತ್ತೆ ಮಹಾಮಜ್ಜನಕ್ಕೆ ವೇಣೂರ ಬಾಹುಬಲಿ ಸಿದ್ಧನಾಗಿದ್ದಾನೆ. ವಿರಾಟ್ ವಿರಾಗಿಗೆ ಮಜ್ಜನದ ಸಂಭ್ರಮ...
ಅಂದು ಮಸ್ತಕಾಭಿಷೇಕದ ನಂತರ ವೇಣೂರು ಬಾಹುಬಲಿ ಬೆಟ್ಟದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಸಭಾ ಭವನದ ನಿರ್ಮಾಣ, ಅತಿಥಿಗೃಹಗಳ ನಿರ್ಮಾಣ ಕಾರ್ಯಗಳು ನಡೆದಿದ್ದವು. ಈ ಬಾರಿಯೂ ಮಜ್ಜನದ ಸವಿನೆನಪಿಗಾಗಿ ಹಲವಾರು ಯೋಜನೆಗಳು ರೂಪುಗೊಳ್ಳುತ್ತಿವೆ. ಮತ್ತೆ ಮಜ್ಜನದ ಸವಿ ಸವಿಯುವ ಕಾಲ ಕೂಡಿಬರುತ್ತಿದೆ. ವೇಣೂರು ಪವಿತ್ರ ಯಾತ್ರಾಸ್ಥಳವಾಗಿ ರೂಪುಗೊಳ್ಳುತ್ತಿದೆ...

ಏಕಶಿಲಾ ಮೂರ್ತಿ
ದಿಣ್ಣೆಯೊಂದರ ಮೇಲೆ ಪ್ರತಿಷ್ಠಾಪನೆಗೊಂಡಿರುವ ವೇಣೂರಿನ ವಿರಾಟ್ ವಿರಾಗಿ ಅತ್ಯಂತ ನಯನ ಮನೋಹರ. 35ಅಡಿ ಎತ್ತರದ ಏಕಶಿಲಾ ಮೂರ್ತಿ ಮಂದಸ್ಮಿತನಾಗಿ ನೆಲೆನಿಂತಿದ್ದಾನೆ. ನಿರುಮ್ಮಳ ಮುಖಭಾವದೊಂದಿಗೆ ಆಕರ್ಷಕ ಭಂಗಿಯಲ್ಲಿರುವ ಈ ವಿಗ್ರಹ ಎಂತಹವರನ್ನೂ ಮೋಡಿಮಾಡದಿರದು.
ಎತ್ತರದ ದಿಣ್ಣೆಯಂತಿರುವ ದಿಬ್ಬದ ಮೇಲೆ ಈ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸುತ್ತ ಕೆಂಪುಕಲ್ಲಿನ ಪಾಗಾರ...ಎದುರು ಮಾನಸ್ಥಂಭಗಳನ್ನೊಳಗೊಂಡಿರುವ ಈ ಬಾಹುಬಲಿ ನೆಲೆನಿಂತ ಸ್ಥಳ "ಬಾಹುಬಲಿ ಬೆಟ್ಟ" ಎಂದೇ ಪ್ರಸಿದ್ಧಿ. ಸನಿಹದಲ್ಲೇ ಮಹಾಲಿಂಗೇಶ್ವರನ ದಿವ್ಯ ಸಾನಿಧ್ಯ. ಪಕ್ಕದಲ್ಲೇ ತೀರ್ಥಂಕರರ ಬಸದಿ. ಒಟ್ಟಾರೆಯಾಗಿ ವೇಣೂರಿನ ಮೇಲಿನ ಪೇಟೆ ಹಲವು ತೀರ್ಥಕ್ಷೇತ್ರಗಳನ್ನೊಳಗೊಂಡ ಒಂದು ಐತಿಹ್ಯದ ತಾಣ.
ಮೂಡಬಿದಿರೆ - ಬೆಳ್ತಂಗಡಿ ಹೆದ್ದಾರಿಯ ಪಾರ್ಶ್ವದಲ್ಲೇ ಬಾಹುಬಲಿಯ ಬೆಟ್ಟ ಗೋಚರವಾಗುತ್ತದೆ. ದೂರದೂರುಗಳಿಂದ ಯಾತ್ರಾರ್ಥಿಗಳು ಈ ಪ್ರದೇಶಕ್ಕೆ ದಿನಂಪ್ರತಿ ಭೇಟಿನೀಡುತ್ತಿದ್ದಾರೆ.

ವಿಶೇಷ ವರದಿ: ನಾಡೋಡಿ.

0 comments:

Post a Comment