ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಂಗಳೂರು:ಮಳೆಗಾಲ ಆರಂಭವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಸ್ಯೆಗಳ ಸರಮಾಲೆ ಪ್ರಾರಂಭ.ಇದು ಇಂದು ನಿನ್ನೆಯದಲ್ಲ...ಮಳೆಗಾಲ ಬರುವಾಗ ಸಮಸ್ಯೆಗಳು ಎದುರಾಗುವಾಗ ಎಚ್ಚರಗೊಳ್ಳುವ ಸರದಿ...ಆದರೆ ಎದುರಾಗುವ ಸಂಭವನೀಯ ಪ್ರಾಕೃತಿಕ ವಿಕೋಪ ಮತ್ತು ಮಾನವ ನಿರ್ಮಿತ ವಿಕೋಪಗಳನ್ನು ತಡೆಯಲು ಸರ್ವಸನ್ನದ್ಧರಾಗುವಂತೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಎಲ್ಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸಿದ ಸುದೀರ್ಘ ಸಭೆಯಲ್ಲಿ ವಿಕೋಪ ತಡೆಗೆ ಕೈಗೊಂಡಿರುವ ಕ್ರಮಗಳ ಕುರಿತು ಸಂಬಂಧಪಟ್ಟವರಿಂದ ಸಮಗ್ರ ಮಾಹಿತಿಯನ್ನು ಕೋರಿದ ಜಿಲ್ಲಾಧಿಕಾರಿಗಳು, ಕಚೇರಿಯಲ್ಲಿರುವ ತುರ್ತು ವಿಕೋಪ ನಿರ್ವಹಣಾ ಕೇಂದ್ರದಲ್ಲಿ ಎಲ್ಲ ಮಾಹಿತಿಗಳು ಸಮರ್ಪಕವಾಗಿರಬೇಕು; ಹಾಗೂ ಪರಿಸ್ಥಿತಿ ಎದುರಿಸಲು, ಸಮಯ ಪೋಲಾಗದಂತೆ ನಿರ್ವಹಿಸಲು ಸೌಲಭ್ಯಗಳಿರಬೇಕು. ಹಾಗಾಗಿ ಎಲ್ಲ ಅಧಿಕಾರಿಗಳು ಹಾಗೂ ಕಂಪೆನಿಗಳು ರೂಪಿಸಿರುವ ಕಾರ್ಯಯೋಜನೆ ಹಾಗೂ ಸಂಪನ್ಮೂಲ ಸೌಲಭ್ಯಗಳ ಕುರಿತ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕೆಂದು ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ನೆಲ್ಯಾಡಿಯಲ್ಲಿ ನಡೆದ ಎರಡು ಟ್ಯಾಂಕರ್ ದುರಂತಗಳ ನಿದರ್ಶನ ನೀಡಿದ ಜಿಲ್ಲಾಧಿಕಾರಿಗಳು, ಪರಿಹಾರದಲ್ಲಾದ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಗೆ ಸುನಾಮಿ ಅಪ್ಪಳಿಸಿದರೆ ಕೈಗೊಳ್ಳಬಹುದಾದ ತುರ್ತು ಕ್ರಮಗಳ ಬಗ್ಗೆ , ಸಮುದ್ರ ತೀರದಲ್ಲಿರುವವರನ್ನು ಸ್ಥಳಾಂತರಗೊಳಿಸುವ ಬಗ್ಗೆ ಕಾರ್ಯಯೋಜನೆ ರೂಪಿಸುವಂತೆ ಮೀನುಗಾರಿಕೆ ಮತ್ತು ಬಂದರು ಅಧಿಕಾರಿಗಳಿಗೆ ಸೂಚಿಸಿದರು. ದೊಡ್ಡ ದೊಡ್ಡ ಕಂಪೆನಿಗಳಾದ ಎಂ ಸಿ ಎಫ್, ಕೆಐಒಸಿಎಲ್, ಬಿ ಎ ಎಸ್ ಎಫ್, ಎಂ ಆರ್ ಪಿ ಎಲ್, ಎನ್ ಎಂ ಪಿ ಟಿ ಗಳಲ್ಲಿ ಅವಘಡಗಳು ಸಂಭವಿಸಿದರೆ ನಿವಾರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಎಲ್ಲ ಕಂಪೆನಿಗಳು ಜಿಲ್ಲಾಡಳಿತಕ್ಕೆ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಸಂಬಂಧಪಟ್ಟ ಕಂಪೆನಿಯ ಅಧಿಕಾರಿಗಳಿಗೆ ನಿರ್ದೇಶಿಸಿದರು. ಕಂಪೆನಿಯ ಒಳಗಡೆ ಹಾಗೂ ಸುತ್ತಮುತ್ತಲ ಪರಿಸರಕ್ಕೆ ಹಾನಿಯಾಗದಂತೆ ರೂಪಿಸಿರುವ ಯೋಜನೆಗಳ ಮಾಹಿತಿಯನ್ನು ಎಲ್ಲರೂ 15 ದಿನಗಳೊಳಗಡೆ ನೀಡಲು ಸೂಚಿಸಿದ ಜಿಲ್ಲಾಧಿಕಾರಿಗಳು, ಗ್ಯಾಸ್ ಫಿಲ್ಲಿಂಗ್ ಕಂಪೆನಿಗಳು ಟ್ಯಾಂಕರ್ ಗಳನ್ನು ತಮ್ಮ ಸರಹದ್ದಿನಿಂದ ಹೊರಗೆ ಕಳುಹಿಸಿದ ಬಳಿಕ ಸಾರ್ವಜನಿಕವಾಗಿ ರಸ್ತೆ ಬದಿಗಳಲ್ಲಿ ನಿಲ್ಲಲು ಅವಕಾಶವಿಲ್ಲ ಎಂಬ ಬಗ್ಗೆ ಎಲ್ಲ ಕಂಪೆನಿಗಳಿಗೂ ಜಿಲ್ಲಾಡಳಿತ ಪತ್ರ ರವಾನಿಸಿದ್ದು, ಅನುಷ್ಠಾನದಲ್ಲಿ ಲೋಪವೆಸಗಿದರೆ ಶಿಸ್ತುಕ್ರಮಕ್ಕೆ ಸಿದ್ಧರಾಗಿ ಎಂಬ ಎಚ್ಚರಿಕೆಯನ್ನೂ ನೀಡಿದರು.

ಇತ್ತೀಚೆಗೆ ಜಿಲ್ಲಾಡಳಿತ ಬೀಚ್ ಕ್ಲೀನ್ ಮಾಡುವ ಸಂದರ್ಭದಲ್ಲಿ ಸಮುದ್ರ ತೀರದಲ್ಲಿ ಆಯಿಲ್ ಸ್ಪಿಲ್ಸ್ ಗಳ ಬಗ್ಗೆ ಮೀನುಗಾರರು ಗಮನಸೆಳೆದಿದ್ದು, ಎನ್ ಎಂ ಪಿ ಟಿ ಮತ್ತು ಕೋಸ್ಟ ಗಾರ್ಡ್ ಈ ಬಗ್ಗೆ ಗಮನ ಹರಿಸಿ ಕಾರಣದ ಬಗ್ಗೆ ವರದಿ ನೀಡಲು ಜಿಲ್ಲಾಧಿಕಾರಿಗಳು ಹೇಳಿದರು. ಸಮುದ್ರವನ್ನು ಕಲುಷಿತಗೊಳಿಸುವವರ ವಿರುದ್ದ ಕಠಿಣ ಕ್ರಮಕೈಗೊಳ್ಳುವುದಾಗಿಯೂ ನುಡಿದರು. ಕಂಪೆನಿಗಳು ಸುತ್ತಮುತ್ತಲ ಪರಿಸರದಲ್ಲಿ ವಾಸವಿರುವ ಜನಜೀವನದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಘಡಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ವಹಿಸಬೇಕಾದ ಮಾಹಿತಿಯನ್ನು ಜನರಿಗೂ ನೀಡಬೇಕೆಂದರು.
ಪೊಲೀಸ್ ಇಲಾಖೆಯಲ್ಲಿರುವ ವಿಕೋಪ ನಿರ್ವಹಣೆ ಸಿದ್ಧತೆ ಬಗ್ಗೆ, ಬಾಂಬ್ ಇದ್ದರೆ ನಿಷ್ಕ್ರಿಯ ಗೊಳಿಸುವ ಸಾಧನಗಳ ಬಗ್ಗೆ, ಸೌಲಭ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಕೋರಿದರು.
ಈ ಸಂಬಂಧ ಸಮಗ್ರ ಮಾಹಿತಿಯನ್ನಾಧರಿಸಿ ಎಲ್ಲ ಪ್ರಮುಖ ಸಂಬಂಧಪಟ್ಟ ಇಲಾಖೆಯವರಿಗೆ ಕೈಪಿಡಿ ನೀಡಲು ಉದ್ದೇಶಿಸಿದ್ದು, ಜಿಲ್ಲಾಧಿಕಾರಿಗಳ ಕೋಟ್ರ್ ಹಾಲ್ ನ ಪಕ್ಕದ ಕೋಣೆಯನ್ನು ವಿಕೋಪ ನಿರ್ವಹಣೆಗೋಸ್ಕರ ಸುಸ್ಸಜಿತವಾಗಿ ರೂಪಿಸಲಾಗುವುದು ಹಾಗೂ ರೊಟೇಷನ್ ಲ್ಲಿ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದರು. ಇಲ್ಲಿ ಫೋನ್, ಫ್ಯಾಕ್ಸ್, ಟಿವಿ, ಮಾಹಿತಿಗಳು ಲಭ್ಯವಿರುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

0 comments:

Post a Comment