ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:07 PM

ಸತ್ಕಾರದ ಸನ್ನಾಹ

Posted by ekanasu

ಭಕ್ತಿ ಸಿಂಚನ

ಪಾತಾಲವನ್ನೂ ಪುನೀತಗೊಳಿಸುವ ಪಾದಗಳು..!
ದೇವಲೋಕವನ್ನೇ ಮೇಲೆತ್ತುವ ಶೃಂಗಗಳು..!
ವಾತ್ಸಲ್ಯದ ಸಾ(ಗ)ರವನ್ನೇ ತುಂಬಿಕೊಂಡಿರುವ ಕೆಚ್ಚಲು..!
ಸೂರ್ಯ- ಚಂದ್ರರಿಗೇ ಬೆಳಕೀವ ಕಣ್ಣುಗಳು..!
ಹುಂಭಾರವದಲ್ಲಿ ಪ್ರತಿಧ್ವನಿಸುವ ವೇದಗಳು..!ಪ್ರಪಂಚದಲ್ಲಿರಬಹುದಾದ ಪವಿತ್ರತೆಯೆಲ್ಲವೂ ರಾಶೀಭವಿಸಿದ ಶರೀರ..!
ಬೇಡಿದ್ದನ್ನು ಮಾತ್ರವೇನು-ಬಯಸಿದ್ದನ್ನೆಲ್ಲ ಕೊಡುವ ಕಾಮಧೇನುವವಳು..
ಬಯಕೆಗಳನ್ನು ‘ವಶ’ದಲ್ಲಿರಿಸಿಕೊಂಡು ‘ವಶಿ’ಗಳೆನಿಸಿಕೊಳ್ಳುವವರಲ್ಲಿ ಶ್ರೇಷ್ಠರಾದ ‘ವಶಿಷ್ಠ’ರಿಗೆ ಒಲಿದು ಬಂದವಳು..
ಸೂರ್ಯನ ಸೆಳೆತಕ್ಕೆ ಒಳಗಾಗಿ, ಸತತವೂ ಆತನ ಸುತ್ತಲೇ ಸುತ್ತುವ, ಎಂದೂ ಆತನ ಪ್ರಭಾವಲಯವನ್ನು ಬಿಟ್ಟು ದೂರ ಹೋಗದ ಧರಣಿಯಂತೆ,
ತೇಜೋರಾಶಿಯೇ ಆದ, ವಸಿಷ್ಠರ ಪ್ರೀತಿಯ ಸೆಳೆತಕ್ಕೆ,ಆ ಗುರುಶ್ರೇಷ್ಠನ ಗುರುತ್ವಾಕರ್ಷಣೆಗೆ ಒಳಗಾಗಿ,’ಎಂದೂ ದೂರವಾಗಲಾರೆ’ನೆಂಬ ಭಾವದಲ್ಲಿ ಅವರ ಸನ್ನಿಧಿಯಲ್ಲಿಯೇ ನೆಲೆ ನಿಂತವಳು..!!

ಹಾಲಿಗೆ ಅಮೃತವನ್ನು ಸೇರಿಸಿದಂತೆ, ಮೊದಲೇ ಪವಿತ್ರವಾದ ವಸಿಷ್ಠಾಶ್ರಮವನ್ನು ತನ್ನ ಸಾನ್ನಿಧ್ಯಮಾತ್ರದಿಂದಲೇ ಮತ್ತಷ್ಟು ಪವಿತ್ರಗೊಳಿಸುತ್ತಾ,
ಚಿನ್ನಕ್ಕೆ ಪುಟಕೊಟ್ಟಂತೆ, ಸಹಜಶುದ್ಧನಾದ ತನ್ನ ಕಂದನ ಪುಟ್ಟ ತನುವನ್ನು ಪರಮವಾತ್ಸಲ್ಯದಿಂದ ಮತ್ತೆ ಮತ್ತೆ ನೆಕ್ಕಿ ನೆಕ್ಕಿ,ಮತ್ತಷ್ಟು ಶುಚಿಗೊಳಿಸುತ್ತಿದ್ದ ಶಬಲೆಯ ಕಿವಿಗಳಲ್ಲಿ ಅನುರಣಿಸಿತು ‘ಏಹಿ ಏಹಿ ಶಬಲೇ’ ಎನ್ನುವ ಪ್ರೇಮದೊಡೆಯನ ಕರೆ..
ಶಬಲೆಗೆ ತನ್ನ ಕರುವೆಂತೋ ವಸಿಷ್ಠರ ಕರೆಯೂ ಅಂತೆಯೇ..!
ಮುದ್ದು ಕರುವಿನಿಂದ ಮಮತೆಯ ಕರೆಯೆಡೆಗೆ ಧಾವಿಸಿದಳಾಕೆ..

ವಾತ್ಸಲ್ಯವನ್ನು ಹರಿಸುವುದರಲ್ಲಿ ಶಬಲೆಯ ಕೆಚ್ಚಲೊಡನೆ ಸ್ಪರ್ಧಿಸುವ ತನ್ನ ಅಮೃತಕರಗಳಿಂದ ಆಕೆಯ ಮೈದಡವಿ ನುಡಿದರು ವಸಿಷ್ಠರು..

” ಶಬಲೇ ! ಚಕ್ರವರ್ತಿಯಾದ ಕೌಶಿಕನನ್ನೂ, ಆತನ ಅನಂತ ಪರಿವಾರವನ್ನೂ ಸತ್ಕರಿಸಬಯಸಿದ್ದೇನೆ..ಜೀವರಾಶಿಗಳನ್ನು ತೃಪ್ತಿಪಡಿಸುವುದರಲ್ಲಿಯೇ ಪರಮತೃಪ್ತಿಯನ್ನು ಕಾಣುವವಳಲ್ಲವೇ ನೀನು ?ಜಗದ ಹಸಿವಿಗಿಂತ ನಿನ್ನ ಹಾಲು ದೊಡ್ಡದೆಂಬುದು ಇಂದು ಪ್ರಕಟವಾಗಲಿ..ಕೌಶಿಕನು ಇಂದು ನಿನ್ನ ಕರುವಾಗಲಿ..ಸಾಗರ ಸದೃಶವಾದ ಈ ಸೇನಾಸ್ತೋಮದಲ್ಲಿ ಯಾರು ಯಾರು ಯಾವ ಯಾವ ಬಗೆಯ ಭಕ್ಷ್ಯ- ಭೋಜ್ಯಗಳನ್ನು, ಲೇಹ್ಯ-ಚೋಷ್ಯಗಳನ್ನು, ಖಾದ್ಯ-ಪೇಯಗಳನ್ನು ಬಯಸುವರೋ, ಅದೆಲ್ಲವನ್ನೂ ಅವರವರಿಗೆ ಶಾಶ್ವತ ತೃಪ್ತಿಯಾಗುವಷ್ಟು ಉಣಬಡಿಸಬೇಕು ನೀನು..
ಕೇವಲ ಕ್ಷೀರವನ್ನಲ್ಲ,ಕಾಮನೆಗಳನ್ನೇ ವರ್ಷಿಸಬೇಕು ನೀನಿಂದು..! ”

‘ಬೇಕೇ?’ ಎಂಬಂತೆ ಮುನಿಯ ಮೊಗವನ್ನೊಮ್ಮೆ ವೀಕ್ಷಿಸಿದಳು ಶಬಲೆ..
‘ನನಗಾಗಿ’ ಒಂದೇ ಪದದಲ್ಲಿ ಉತ್ತರಿಸಿದರು ವಸಿಷ್ಠರು..
ವಸಿಷ್ಠರಿಗಾಗಿಯೆಂದಾದರೆ ಕ್ಷೀರಧಾರೆಯೇನು, ಜೀವಧಾರೆಯನ್ನೇ ಹರಿಸಬಲ್ಲ ಶಬಲೆಯು ಸಿದ್ಧಳಾದಳು, ಕಂಡು ಕೇಳರಿಯದ ಕೌತುಕದ ಲೋಕವೊಂದಕ್ಕೆ ಕೌಶಿಕನನ್ನು ಕರೆದೊಯ್ಯಲು..

ಟಿಪ್ಪಣಿ :-
ಆಹಾರಗಳಲ್ಲಿ ಆರು ಬಗೆ..
ಆಹಾರಂ ಷಡ್ವಿಧಂ ಚೂಷ್ಯಮ್ ಪೇಯಂ ಲೇಹ್ಯಂ ತಥೈವ ಚ | ಭೋಜ್ಯಂ ಭಕ್ಷ್ಯಂ ತಥಾ ಚರ್ವ್ಯಂ ಗುರು ವಿದ್ಯಾತ್ ಯಥೋತ್ತರಂ ||

ಆಹಾರವು ಚೂಷ್ಯ, ಪೇಯ, ಲೇಹ್ಯ, ಭೋಜ್ಯ, ಭಕ್ಷ್ಯ, ಚರ್ವ್ಯ ಎಂಬುದಾಗಿ ಆರು ವಿಧ..
ಇವುಗಳಲ್ಲಿ ಮುಂದು-ಮುಂದಿನವು ಹಿಂದು-ಹಿಂದಿನದಕ್ಕಿಂತ ಗುರುಸ್ವಭಾವದವು..
ಚೂಷ್ಯ=ಹೀರಿ ಕುಡಿಯುವ ರಸವುಳ್ಳ ಆಹಾರವಸ್ತು, ಕಬ್ಬು,ಮೊದಲಾದವು..
ಪೇಯ=ನೀರು,ಪಾನಕ, ಮೊದಲಾದ ಕುಡಿಯುವ ವಸ್ತುಗಳು.
ಲೇಹ್ಯ=ನಾಲಗೆಯಿಂದ ನೆಕ್ಕಿ ರಸಾಸ್ವಾದನೆ ಮಾಡುವ ಆಹಾರ, ಚಟ್ನಿ,ಉಪ್ಪಿನಕಾಯಿ ಮೊದಲಾದವು.
ಭೋಜ್ಯ=ಊಟಮಾಡುವ ಅನ್ನ ಮೊದಲಾದ ಆಹಾರವಸ್ತುಗಳು.ಇದಕ್ಕೆ ಖಾದ್ಯ ಎನ್ನುವ ರೂಢಿಯು ಇದೆ.
ಭಕ್ಷ್ಯ=ತಿಂಡಿತಿನಿಸು ಮೊದಲಾದ ಆಹಾರ ಭಕ್ಷ್ಯ, ಗಟ್ಟಿಯಾದ ಆಹಾರವಸ್ತು.. ಸಿಹಿತಿಂಡಿ, ರೊಟ್ಟಿ, ಕಡುಬು ಮೊದಲಾದವು..
ಚರ್ವ್ಯ=ಹಲ್ಲಿನಿಂದ ಜಗಿದು ತಿನ್ನುವ ಆಹಾರವಸ್ತುಗಳು.. ಅವಲಕ್ಕಿ, ಪುರಿ, ಹುರಿಗಡಲೆ ಮೊದಲಾದವುಗಳು..
(ಶ್ರೀ ಗುರುಗಳ ಇನ್ನಷ್ಟು ವಚನಾಮೃತಗಳಿಗಾಗಿ ಹರೇರಾಮ.ಇನ್ ಲಾಗ್ ಇನ್ ಮಾಡಿರಿ.)

0 comments:

Post a Comment