ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
`ಅವ್ಯಕ್ತ' - ವ್ಯಕ್ತವಾಗದೆ ಉಳಿದ ಟೀವಿ ಧಾರಾವಾಹಿ
ಆಗ ನಾನು ಜನಪ್ರಿಯತೆ ಪಡೆಯುತ್ತಿದ್ದ ಸಮಯ. ಅದೃಷ್ಟ ನನ್ನನ್ನು ಹುಡುಕಿಕೊಂಡು ಬರುತ್ತಿದ್ದಂತೆ ನನಗೆ ಬಾಸವಾಗಿತ್ತು.

ನನ್ನ ಮೊದಲನೆ ಕಾದಂಬರಿ `ಮುರಳಿಯ ನಾದವ ಕೇಳಿ' ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದಾಗ ಕಾರ್ತಿಕ್ (ಪ್ರಸ್ತುತ ಕಿರು ತೆರೆಯ ಹಾಸ್ಯ ಕಲಾವಿದ) ನನ್ನನ್ನು ಹುಡುಕಿಕೊಂಡು ನಮ್ಮ ಫ್ಲ್ಯಾಟ್ಗೆ ಬಂದ. ಜೊತೆಗೆ ಅವನ ಗೆಳೆಯರೂ ಇದ್ದರು. ಮನೆಗೆ ಬಂದವರೇ, ಸಾರ್, ನಿಮ್ಮ ಯಾವುದಾದರೂ ಒಂದು ಕಥೆಯನ್ನು ನಮಗೆ ಟೀವಿ ಧಾರಾವಾಹಿ ಮಾಡುವುದಕ್ಕೆ ಕೊಡಿ ಅಂದ. ನನಗೋ ಆಶ್ಚರ್ಯ. ಇಷ್ಟು ಪಕ್ಕನೆ ನನ್ನನ್ನು ಗುರುತಿಸುವಷ್ಟರ ಮಟ್ಟಿಗೆ ಬೆಳೆದೆನೆ ಅಂದುಕೊಂಡೆ. ಆಗ ನನ್ನ ಐದನೆ ಕಾದಂಬರಿ `ನಕ್ಷತ್ರ ಬಳ್ಳಿ' ಉದಯವಾಣಿಯ ಶುಕ್ರವಾರದ ಸಂಚಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. ಅದನ್ನು ಕೊಡಿ ನಾವು ಸೀರಿಯಲ್ ಮಾಡ್ತೀವಿ ಅಂದ. ಅದು ಆಗಿನ್ನು ಶುರುವಾಗಿದೆ ಮಾತ್ರ ನಲವತ್ತೆರಡು ವಾರ ನೀವು ಕಾಯಬೇಕಾದೀತು ಅಂದೆ. ಬಳಿಕ ನನ್ನ ಕಥೆಗಳ ಬಗ್ಗೆ ಕೇಳಿ ತಿಳಿದುಕೊಂಡ ನಂತರ `ಶಿಲ್ಪ ಬಂಡೆ' ಅನ್ನುವ ಕಾದಂಬರಿಯನ್ನು ಆಯ್ಕೆ ಮಾಡಿ, ಅದನ್ನೇ ನಿರ್ಮಿಸುವುದಾಗಿ ತೆಗೆದುಕೊಂಡ.

ಆ ಬಳಿಕ ಅವರ ಶೆಡ್ಯೂಲ್ಗಳೆಲ್ಲಾ ಮುಗಿದ ಮೇಲೆ ನನ್ನನ್ನು ಕರೆದು, ಸಾರ್, ಇದಕ್ಕೆ ಸಂಭಾಷಣೆ ನೀವೇ ಬರಿಬೇಕು ಅಂದ. ನನಗೇನೋ ಬಹಳ ಹುರುಪು ಸರಿಯೆಂದು ಒಪ್ಪಿಕೊಂಡೆ. ಆದರೆ ಆದದ್ದೆ ಬೇರೆ!
ಆ ಧಾರಾವಾಹಿಯನ್ನು ನಿರ್ದೇಶಿಸಲು ಬೆಂಗಳೂರಿನಿಂದ ಒಬ್ಬ ಡೈರೆಕ್ಟರ್ ಬರುವವರಿದ್ದರು. ಹಾಗಾಗಿ ಅವರು ಮಂಗಳೂರಿಗೆ ಬಂದಾಗ ನಾನು ಅವರನ್ನು ಭೇಟಿಯಾಗಬೇಕು, ಆ ಬಳಿಕ ಸಂಭಾಷಣೆ ಕಾರ್ಯ ಆರಂಭಿಸಬೇಕೆಂದು ಕೇಳಿಕೊಂಡ ಕಾರ್ತಿಕ್ . ನಾನು ಅದಕ್ಕೂ ಒಪ್ಪಿಕೊಂಡೆ. ಯಾಕೆಂದರೆ ನನಗೆ ಆ ಫೀಲ್ಡ್ನಲ್ಲಿ ನನ್ನ ಮೊದಲ ಪ್ರಯತ್ನ. ಅವರಿಂದ ಮಾಹಿತಿಯನ್ನು ಕೇಳಿ ತಿಳಿದುಕೊಂಡ ಬಳಿಕ ನಾನು ಸಂಭಾಷಣೆಯನ್ನು ಆರಂಭಿಸುವುದು ಒಳ್ಳೆಯದೆಂದುಕೊಂಡೆ.

ಅಂತು ಡೈರೆಕ್ಟರ್ ಬಂದವರೇ ಹೊಟೇಲ್ ಶಾನ್ ಪ್ಲಾಝ್ಹಾದಲ್ಲಿ ಉಳಿದುಕೊಂಡಿದ್ದರು. ಅಂತು ಕಾರ್ತಿಕ್ ನಿಂದ ಬುಲಾವ್ ಬಂತು, ಸಾರ್, ಡೈರೆಕ್ಟರ್ ಸಾಹೇಬ್ರು ಬಂದಿದ್ದಾರೆ. ನೀವು ಬೆಳಿಗ್ಗೆ ಅವರನ್ನು ಭೇಟಿಯಾಗಬೇಕಂತೆ ಅಂದು ಅವರು ಉಳಿದುಕೊಂಡಿರುವ ರೂಂ ನಂಬರ್ ಹೇಳಿದ. ನನಗೋ ಧರ್ಮಸಂಕಟ. ಹೇಳದೆ ಕೇಳದೆ ಆಫೀಸಿಗೆ ರಜೆ ಹಾಕುವಂತೆ ಇರಲಿಲ್ಲ. ಆಫೀಸಿಗೆ ಹೋಗುವ ಮೊದಲು ಮಹಾಶಯರನ್ನು ಭೇಟಿಯಾಗುವುದು ಸಾಧ್ಯವೇ ಅಂದುಕೊಂಡು ಮತ್ತೆ ಕಾರ್ತಿಕ್ ಗೆ ಫೋನ್ ಮಾಡಿ ನನ್ನ ಪರಿಸ್ಥಿತಿಯನ್ನು ವಿವರಿಸಿದೆ.

ಅವನು ತಕ್ಷಣ ಡೈರೆಕ್ಟರ್ಗೆ ಫೋನ್ ಮಾಡಿ ಬೆಳಿಗ್ಗೆ ಒಂಬತ್ತು ಗಂಟೆಯೊಳಗೆ ನಾನು ಅವರನ್ನು ಭೇಟಿಯಾಗುವ ವಿಷಯ ತಿಳಿಸಿದನೇನೋ. ಅವರು ಇನ್ನೂ ಸುಧಾರಿಸಿಕೊಂಡಿಲ್ಲ. ನೀವು ಮಧ್ಯಾಹ್ನದ ಹೊತ್ತಿಗೆ ಅವರನ್ನು ಭೇಟಿಯಾಗಿ, ಆ ಸಮಯದಲ್ಲಿ ನಾನು ಅಲ್ಲಿರುತ್ತೇನೆಂದು ಕಾರ್ತಿಕ್ ಹೇಳಿದ. ಇನ್ನು ಮಧ್ಯಾಹ್ನದ ಹೊತ್ತಿಗಂದರೂ ಕಷ್ಟವೇ ಒಮ್ಮೆ ಡಿಸ್ಕಷನ್ಗೆ ಕುಳಿತರೆ ಪಕ್ಕನೆ ಮುಗಿಯುವುದಿಲ್ಲವೆಂದು ನನಗೆ ತಿಳಿದಿತ್ತು. ಅದಕ್ಕಾಗಿ ನಾನು ಕಾರ್ತಿಕ್ ನನ್ನು ಕನ್ವಿನ್ಸ್ ಮಾಡಿ ಸಂಜೆ ಆಫೀಸು ಬಿಟ್ಟ ಮೇಲೆಯೆ ಭೇಟಿಯಾಗುವುದಾಗಿ ತಿಳಿಸಿದೆ. ಅವನು ಡೈರೆಕ್ಟರ್ರನ್ನು ಕೇಳಿ ಒಪ್ಪಿಗೆಯಿತ್ತ.

ಸಂಜೆಯ ಹೊತ್ತು ನಾನು ಅಳುಕುತ್ತಲೇ ಶಾನ್ ಫ್ಲಾಝ್ಹಾಗೆ ಹೋದೆ. ಡೈರೆಕ್ಟರ್ರವರ ಕೋಣೆಯ ಬಳಿ ನಿಂತು ಮೆಲ್ಲಗೆ ಬಾಗಿಲನ್ನು ಬಡಿದೆ. ಒಳಗೆ ಒಂದಿಬ್ಬರು ಹುಡುಗಿಯರಿಗೆ ಸ್ಕ್ರೀನ್ ಟೆಸ್ಟಿಂಗ್ ನಡಿಯುತ್ತಿತ್ತು. ಕಾರ್ತಿಕ್ ಕೂಡ ಅಲ್ಲೇ ಇದ್ದದ್ದರಿಂದ ನನಗೆ ಸಮಾಧಾನವಾಯಿತು.
ಬಾಗಿಲು ತೆರೆದು ಕಾರ್ತಿಕ್ ನನ್ನನ್ನು ಒಳಗೆ ಕರೆದ. ಒಂದರ್ಧಗಂಟೆಯಲ್ಲಿ ಡೈರೆಕ್ಟರ್ ಸಾಹೇಬ್ರು ಫ್ರೀಯಾದಾಗ ಕಾರ್ತಿಕ್ ನನ್ನನ್ನು ಅವರಿಗೆ ಪರಿಚಯಿಸಿದ. ಅವರು ನನಗೆ ಹಸ್ತಲಾಘವ ಮಾಡುತ್ತಾ, ಅನು ಬೆಳ್ಳೆ ಅಂದ್ರೆ ಹುಡುಗಿ ಅಂದುಕೊಂಡಿದ್ದೆ ಎಂದು ತಮಾಷೆ ಮಾಡಿದರು. ಬಳಿಕ ನನ್ನ ಬರವಣಿಗೆಯ ಬಗ್ಗೆ ಕೇಳಿದರು. ಬಹಳ ಹೆಮ್ಮೆಯಿಂದಲೇ ಹೇಳಿಕೊಂಡೆ. ಯಾಕೆಂದರೆ ನಾನಾಗ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ. ಆದರೆ ನನ್ನ ಆ ಸಂತೋಷ ಬಹಳ ಸಮಯ ಉಳಿಯಲಿಲ್ಲ.

ಡೈರೆಕ್ಟರ್ ಸಾಬ್ ನನ್ನನ್ನು ನೋಡುತ್ತಲೇ, ಶಿಲ್ಪ ಬಂಡೆ ಏನೂ ಚೆನ್ನಾಗಿಲ್ಲ. ಸದ್ಯದ ಮಟ್ಟಿಗೆ ಈ ಕಥೆಯನ್ನು ಡ್ರಾಪ್ ಮಾಡೋಣ. ನಾನು ಒಂದು ಕಥೆಯ ಎಳೆಯನ್ನು ಹೇಳುತ್ತೇನೆ. ನೀವು ಅದನ್ನು ಡೆವಲಪ್ ಮಾಡಿಕೊಂಡು ಬನ್ನಿ. ನಿಮಗೆ ಎರಡು ದಿನಗಳ ಸಮಯ ಕೊಡುತ್ತೇನೆ ಅಂದವರೆ ಕಾರ್ತಿಕ್ ನತ್ತ ತಿರುಗಿ, ಏನು ಕಾರ್ತಿಕ್? ಆದಿತಾ. ಯಾಕಂದ್ರೆ ಇದು ಪಕ್ಕಾ ಕಮರ್ಷಿಯಲ್ ಇದ್ದಂಗೆ ಇದೆ. ನಾವು ನಮ್ಮ ದಕ್ಷಿಣ ಕನ್ನಡದ ನಮ್ಮ ಮಣ್ಣಿನ ವಾಸನೆಯಿರುವ ಕಥೆಯನ್ನು ಸಿದ್ಧ ಪಡಿಸಿದರೆ ಅದು ಖಂಡಿತಾ ಸಕ್ಸಸ್ ಆಗುತ್ತೆ. ಬೆಳ್ಳೆಯವರೆ, ನಾನು ಹೇಳಿದ ಕಥೆಯನ್ನು ಡೆವಲಪ್ ಮಾಡಿ ಮುಖಕ್ಕೆ ಹೊಡೆದಂತೆ ನನ್ನ ಕಥೆಯನ್ನು ಡ್ರಾಪ್ ಮಾಡಿ ಅಣತಿ ಮಾಡಿದಂತೆ ಹೇಳಿದರು. ಅಲ್ಲೇ ನನ್ನ ಮೊದಲ ಸೋಲು. ನನಗೆ ಮೊದಲಿನಿಂದಲೂ ಕಾದಂಬರಿಯಾಧಾರಿತ ಚಲನಚಿತ್ರ, ಟೀವಿ ಧಾರಾವಾಹಿಗಳೆಂದರೆ ತುಂಬಾ ಇಷ್ಟ. ನನ್ನ ಕಾದಂಬರಿಗಳು ಕೂಡ ಸಿನಿಮಾವೋ, ಇಲ್ಲ ಟೀವಿ ಧಾರಾವಾಹಿಯೋ ಆಗಬೇಕೆನ್ನುವ ಹಂಬಲವಿತ್ತು. ಮೊದಲ ಪ್ರಯತ್ನವೇ ತಲೆಕೆಳಗಾಯಿತು.

ಅಂತು ಮನೆಗೆ ಬಂದವನೇ ರಾತ್ರಿಯೆಲ್ಲಾ ಕುಳಿತು ಆಲೋಚಿಸಿ ಎರಡು ದಿನಗಳಲ್ಲಿ ಕಥೆಯನ್ನು ಸಿದ್ಧಪಡಿಸಿ ಡೈರೆಕ್ಟರ್ರ ಬಳಿ ಕೊಂಡೊಯ್ದೆ. ಅವರು ಅದನ್ನು ಮತ್ತೆ ಓದುವುದಾಗಿ ಹೇಳಿ ಕಲಾವಿದರಿಗೆ ಕಮ್ಮಟವನ್ನು ಮಾಡುತ್ತಿದ್ದರು. ಯಾರು ಯಾರಿಂದ ಹೇಗೆ ಅಭಿನಯವನ್ನು ತೆಗೆಯಬೇಕೆನ್ನುವುದು ಅವರ ಉದ್ದೇಶವಾಗಿತ್ತು. ಆ ಬಳಿಕವೇ ಸಂಭಾಷಣೆಯನ್ನು ಬರೆಯಬೇಕಾಗಿತ್ತು. ಅದಕ್ಕಾಗಿ ಅವರು ನನ್ನನ್ನು ಕರೆದು ಟಿ. ಎನ್. ಸೀತಾರಾಮ್ ಅವರ `ಮುಕ್ತಾ' ಧಾರಾವಾಹಿಯನ್ನು ನೋಡಿ, ಅದರ ಸಂಭಾಷಣೆಗಳನ್ನು ಸ್ಟಡಿ ಮಾಡುವಂತೆ ತಿಳಿಸಿದರು. ಮನೆಯಲ್ಲಿ ದೂರದರ್ಶನ ಬಿಟ್ಟರೆ ಬೇರೆ ಯಾವ ಚಾನೆಲ್ಗಳು ಬರುತ್ತಿರಲಿಲ್ಲ. ಹಾಗಾಗಿ ಕೇಬಲ್ ಟೀವಿಯನ್ನು ಅನಿವಾರ್ಯವಾಗಿ ಅಳವಡಿಸಬೇಕಾಯಿತು. ಮುಕ್ತಾ ಧಾರಾವಾಹಿಯನ್ನು ಪ್ರತೀದಿನ ನೋಡುತ್ತಿದ್ದೆ. ಕೆಲವೊಂದು ಸೂಕ್ಷ್ಮತೆಗಳನ್ನು ಗುರುತಿಸಿಕೊಂಡೆ. ಅವರು ಯಾವ ಸಮಯದಲ್ಲಿಯೂ ಕರೆಯಬಹುದೆಂದುಕೊಂಡೆ. ಆದರೆ ಅವರು ನನ್ನನ್ನು ಕರೆಸಿ, ಎಲ್ಲಿ ನೀವು? ಇನ್ನೂ ಸಂಭಾಷಣೆಯ ಕೆಲಸ ಆರಂಭವಾಗಿಲ್ಲ ಅಂತ ಸಿಟ್ಟಿನಿಂದಲೇ ಅಂದರು. ನಾನು ಮರು ಮಾತಾಡದೆ ಸುಮ್ಮನಿದ್ದೆ.

ಅಂದಿನಿಂದ ನಮ್ಮ ಸಂಭಾಷಣೆಯ ಕೆಲಸ ಶುರುವಾಯಿತು. ಅದಕ್ಕಾಗಿಯೇ ಎರಡು ದಿನಗಳ ಸಿ.ಎಲ್. ಹಾಕಿ ಸಂಭಾಷಣೆ ಬರೆಯಲು ಡೈರೆಕ್ಟರ್ ಸಾಹೇಬ್ರ ಜೊತೆಗೆ ಕೂತೆ. ಹಗಲು ಹೊತ್ತಿಗೆ ಕಲಾವಿದರು ಅವರು ಇವರುಗಳೆಂದು ಡೈರೆಕ್ಟರ್ರನ್ನು ಭೇಟಿಯಾಗಲು ಬರುವಾಗ ಸಮಯವೆಲ್ಲಾ ಬರೀ ಹರಟೆಯಲ್ಲಿಯೇ ಮುಗಿಯುತ್ತಿತ್ತು. ರಾತ್ರಿ ಊಟವಾದ ಬಳಿಕ ಸಂಭಾಷಣೆಯ ಕೆಲಸ ಸಾಗುತ್ತಿತ್ತು. ಹೀಗೆ ನಿದ್ದೆಗೆಟ್ಟು ರಾತ್ರಿ ಎರಡು ಮೂರು ಗಂಟೆಗಳವರೆಗೆ ಸಂಭಾಷಣೆಯನ್ನು ಬರೆದು ಮುಗಿಸಿದ ಬಳಿಕ ಡೈರ್ರೆಕ್ಟರ್ ಸಾಹೇಬ್ರು, ನನ್ನ ಜೊತೆಗೆ ಕೆಲಸ ಮಾಡುವುದೆಂದರೆ ಹಾಗೆ, ನೋಡು ಅವ್ಯಕ್ತ ಇನ್ನೊಂದು ಮುಕ್ತಾ ಆಗಿ ಜನಪ್ರಿಯತೆ ಪಡೆಯುತ್ತದೆ ಅಂದರು. ಆಗ ನಾನು ಪಟ್ಟ ಶ್ರಮವೆಲ್ಲಾ ಸಾರ್ಥಕವಾದೀತು ಅನಿಸಿತು.

ಒಂದು ವಾರದಲ್ಲಿ ಕಲಾವಿದರನ್ನು ಅಣಿಗೊಳಿಸುವುದರಿಂದ ಹಿಡಿದು ಧಾರಾವಾಹಿಯ ಶೂಟಿಂಗ್ಗಾಗಿ ಸಕಲ ಸಿದ್ಧತೆಗಳು ನಡೆದವು. ಮುಂದಿನದ್ದು ಶೂಟಿಂಗ್ ಲೊಕೇಶನ್ಸ್. ಕಥೆಗೆ ಪೂರಕವಾದ ಲೊಕೇಶನ್ ಚಾರ್ಮುಡಿಯ ಬಳಿಯ ಒಂದು ಮನೆಯನ್ನು ಆಯ್ಕೆ ಮಾಡಿಕೊಂಡು ಬಂದ ಕಾರ್ತಿಕ್ ಡೈರೆಕ್ಟರ್ ಸಾಹೇಬ್ರಿಗೆ ಹೇಳಿದ್ದೆ ಅವರು ನನ್ನನ್ನು ಬರುವಂತೆ ಹೇಳಿ ಲೊಕೇಶನ್ ನೋಡಿಕೊಂಡು ಬರೋಣವೆಂದು ಹೊರಡಿಸಿದರು.
ನಮ್ಮ ಯೂನಿಟ್ನಲ್ಲಿಯೇ ಇದ್ದ ಒಬ್ಬ ಕಲಾವಿದ ಹೊಸ ಮಾರುತಿ ಓಮ್ನಿ ಕಾರನ್ನು ಖರೀದಿಸಿದ್ದ. ಆ ಹುರುಪಿನಿಂದಲೇ ಚಾರ್ಮುಡಿ ಗೆ ತನ್ನ ಕಾರಿನಲ್ಲೇ ಹೋಗೋಣ ಅಂದ. ಖರ್ಚು ಉಳಿಯಿತೆಂದುಕೊಂಡು ನಿರ್ಮಾಪಕರು ಒಪ್ಪಿಗೆ ಸೂಚಿಸಿದ್ದರು. ನಾನು, ಡೈರೆಕ್ಟರ್ ಸಾಹೇಬ್ರು, ಕಾರ್ತಿಕ್ ಮತ್ತು ನಿರ್ಮಾಪಕರು ಕಲಾವಿದನ ಕಾರಿನಲ್ಲಿ ಹೊರಟೆವು. ಹೊರಡುವಾಗಲೇನೋ ಕಾರು ನೇರವಾಗಿ ಚಾರ್ಮುಡಿ ತಲುಪಿತು. ಅಲ್ಲಿ ಇಳಿಯುತ್ತಿದ್ದಂತೆ ನಮಗೆ ಸ್ವಾಗತ ಕೋರಿದ್ದು ಎಡೆಬಿಡದೆ ಸುರಿಯುವ ಮೊದಲ ಮುಂಗಾರಿನ ಮಳೆ.

ಆ ಮಳೆಯಲ್ಲು ಯಾವ ಯಾವ ದೃಶ್ಯಕ್ಕೆ ಯಾವ ಯಾವ ಲೊಕೇಶನ್ ಅನ್ನುವುದನ್ನು ನನಗೆ ವಿವರಿಸುತ್ತಾ ರಾತ್ರಿ ಎಂಟು ಗಂಟೆಯಾಗಿದ್ದು ಕೂಡ ತಿಳಿಯಲಿಲ್ಲ. ಮತ್ತೆ ಮಂಗಳೂರಿಗೆ ವಾಪಾಸಾಗಬೇಕಿತ್ತು. ಕಾರು ಇರುವುದರಿಂದ ಇನ್ನಷ್ಟು ತಡವಾಗುತ್ತಿದೆಯೆಂದುಕೊಂಡು ಮನೆಗೆ ಫೋನ್ ಮಾಡಿ ಬರುವಾಗ ತಡವಾಗುತ್ತದೆಂದು ತಿಳಿಸಿದೆ.
ಕಾರು ಚಾರ್ಮುಡಿಯನ್ನು ಬಿಟ್ಟಿತು. ಆದರೆ ಮಳೆ ಮಾತ್ರ ಬಿಡಲೊಲ್ಲದು. ಉಜಿರೆ ದಾಟಿ ಸ್ವಲ್ಪ ದೂರ ಬಂದಿದೆಯಷ್ಟೆ ಕಾರು ಬಹಳಷ್ಟು ವೇಗದಿಂದ ಓಡುತ್ತಿತ್ತು. ಡ್ರೈವರ್ಗೆ ಕಾರಿನ ಮೇಲೆ ಹಿಡಿತವಿರಲಿಲ್ಲ. ಎದುರಿಗೆ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡುವ ಬರದಲ್ಲಿ ಕಾರು ಒಂದು ದೊಡ್ಡ ಕಲ್ಲಿನ ಮೇಲೆ ಏರಿ ಅದರ ಅಡಿಭಾಗ ಕರ್ಕಶ ದನಿಯಿಂದ ಸದ್ದು ಮಾಡುತ್ತಾ ಟೆಲಿಫೋನ್ ಇಲಾಖೆಯವರ ಗುಂಡಿಯ ಒಳಗೆ ಎಡ ಭಾಗದ ಎರಡು ಗಾಲಿಗಳನ್ನು ಹುದುಗಿಸಿ ದಡಕ್ಕನೆ ನಿಂತಿತು. ನಾವೆಲ್ಲ ಮಳೆಯನ್ನೂ ಲೆಕ್ಕಿಸದೆ ಭಯದಿಂದ ಕೆಳಗಿಳಿದೆವು. ಅಂತು ಆ ರಾತ್ರಿಗೆ ಏನು ಮಾಡುವುದೆಂದು ತಿಳಿಯಲಿಲ್ಲ. ಕಾರನ್ನು ಬಿಟ್ಟು ಹೋಗುವಂತೆ ಇಲ್ಲ. ಅಲ್ಲಿ ರಾತ್ರಿಯಲ್ಲಿ ಜನಸಂಚಾರ ಕೂಡ ಇಲ್ಲ. ಕೊನೆಗೆ ಹೇಗೋ ಅಕ್ಕಪಕ್ಕದ ಮನೆಯವರಿಂದ ಬಡಿಗೆಗಳನ್ನು ಪಡೆದುಕೊಂಡು ಕಾರನ್ನು ಹೇಗೋ ಗುಂಡಿಯಿಂದ ಮೇಲಕ್ಕೆತ್ತಿದರೂ ಕಾರು ಸ್ಟಾರ್ಟ್ ಆಗುತ್ತಲೇ ಭಯಂಕರ ಶಬ್ದ ಹೊರಡಿಸಿ ಮುಂದೆ ಹೋಗಲಾರದಂತೆ ಇತ್ತು. ಕೊನೆಗೂ ಶತ ಪ್ರಯತ್ನ ಮಾಡಿ ಹೇಗೂ ಮಂಗಳೂರು ತಲುಪುವಾಗ ರಾತ್ರಿ ಒಂದು ಗಂಟೆ. ಮಂಗಳೂರು ಮಲಗಿತ್ತು.
ಅದಾದ ಬಳಿಕ ಡೈರೆಕ್ಟರ್ ಸಾಹೇಬ್ರು ಶೂಟಿಂಗ್ಗೆ ದಿನ ಗೊತ್ತು ಪಡಿಸಿ ನನ್ನನ್ನು ಅಲ್ಲಿಗೆ ಬರುವಂತೆ ಕರೆದರು. ಆದರೆ ಆಫೀಸಿನ ಕೆಲಸದ ಒತ್ತಡದಿಂದ ನನಗೆ ರಜೆ ದೊರಕಲಿಲ್ಲ. ಶೂಟಿಂಗ್ಗೆ ಹೋಗುವ ಅವಕಾಶ ತಪ್ಪಿ ಹೋಯಿತು. ಡೈರೆಕ್ಟರ್ ಸಾಹೇಬ್ರು ನನ್ನ ಮೇಲೆ ಮುನಿಸಿಕೊಂಡರಂತೆ. ಕೆಲವೊಂದು ಡೈಲಾಗ್ಗಳನ್ನು ಸ್ಪಾಟ್ನಲ್ಲಿಯೇ ಬದಲಾಯಿಸಬೇಕಾಗಿರುವುದರಿಂದ ಶೂಟಿಂಗ್ ನಡೆಯುವಾಗ ಸಂಭಾಷಣೆಕಾರನ ಅಗತ್ಯವಿದೆಯೆನ್ನುವುದು ಅವರ ಮುನಿಸಿನ ಕಾರಣವಂತೆ.
ಕಥೆ ಆರಂಭವಾಗುವುದು ಹೀಗೆ: ಕೆಳಗೆ ತುಂಬಿ ಹರಿಯುವ ನದಿ. ಇಬ್ಬರು ಹುಡುಗಿಯರು ಮಳೆಯಲ್ಲಿ ಕೊಡೆ ಹಿಡಿದುಕೊಂಡು ಕಾಲೇಜ್ಗೆ ಹೋಗುವಾಗ ನದಿಯ ದಂಡೆಯಮೇಲೆ ಒಂದು ಕೊಳೆತು ನಾರುವ ಹೆಣವನ್ನು ನೋಡುತ್ತಾರೆ. ಆ ಹೆಣದ ಸುತ್ತಾ ಕಥೆ ಬಿಚ್ಚಿಕೊಳ್ಳುತ್ತದೆ. ಅವರೊಲ್ಲೊಬ್ಬ ಹುಡುಗಿಗೆ ಅದು ತನ್ನ ಪ್ರೇಮಿಯ ಶವವೆನ್ನುವ ಆತಂಕ. ಊರಿನ ಹಿರಿಯ ವ್ಯಕ್ತಿಗೆ ಅದು ಮನೆ ಬಿಟ್ಟು ಹೋದ ತನ್ನ ಮಗನೆನ್ನುವ ಸಂದೇಹ. ನದಿ ತೀರದಲ್ಲಿರುವ ದೇವಸ್ಥಾನದ ಅರ್ಚಕರಿಗೆ ಆ ಹೆಣದಿಂದ ದೇವರಿಗೆ ಸಮರ್ಪಿಸುವ ನೀರು ಮೈಲಿಗೆಯಾಯಿತೆನ್ನುವ ದೋರಣೆ... ಹೀಗೆ ನಾನಾ ವಿಧಗಳಲ್ಲಿ ಸಾಗುವ ಕಥೆಯಲ್ಲಿ ಕೊನೆಗೂ ಆ ಶವದ ಇತ್ಯರ್ಥವಾಗದೆ ಹೋಗುತ್ತದೆ.
ಐದು ಕಂತುಗಳಿಗಾಗುವಷ್ಟು ಧಾರಾವಾಹಿ ಸಿದ್ಧವಾಗಿ ಸ್ಥಳಿಯ ಚಾನೆಲ್ನಲ್ಲಿ ಜಾಹೀರಾತು ಕೂಡ ಆರಂಭವಾಯಿತು. ನಾವು ಅದನ್ನು ನೋಡಿಯೇ ಸಂಭ್ರಮಿಸಿದ್ದೆವು. ಆದರೆ... ಏನೇನೋ ಕಾರಣಗಳಿಂದ ಶೂಟಿಂಗ್ ಮುಂದುವರೆಯಲೇ ಇಲ್ಲ. ಅಂತು `ಅವ್ಯಕ್ತ' ವ್ಯಕ್ತವಾಗದೆ ಉಳಿಯಿತು.

- ಅನು ಬೆಳ್ಳೆ.

0 comments:

Post a Comment