ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
"ಕನಸಲ್ಲೂ ಮತ್ತೆ ಬರದಿರಲಿ..."ಹೌದು ಈ ಭಾವನೆ ಎಲ್ಲರ ಮನದಲ್ಲೂ ಇದ್ದೇ ಇದೆ...ಇಂದಿಗೆ ಸರಿಯಾಗಿ ಒಂದು ವರುಷದ ಹಿಂದೆ...ಬೆಳ್ಳಂಬೆಳಗ್ಗೆ ಹಲವರು ಇನ್ನೂ ಸಿಹಿನಿದ್ದೆಯ ಮಂಪರಿನಲ್ಲಿರುವಾಗಲೇ ಬರಸಿಡಿಲಿನಂತೆ ಬಂದೆರಗಿದ ಭೀಕರ ಸುದ್ದಿ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು.


ದುಬೈನಿಂದ ಮಂಗಳೂರಿಗೆ ಪ್ರಯಾಣಿಕರನ್ನು ಹೊತ್ತು ತಂದಿದ್ದ ಏರ್ ಇಂಡಿಯಾ - ಐ ಎಕ್ಸ್ 812 ವಿಮಾನ ಕೆಂಜಾರು ಕಣಿವೆಯಲ್ಲಿ ಧರೆಗುರುಳಿ ಎಲ್ಲರ ಕಣ್ಣೆದುರಲ್ಲೇ ಸುಟ್ಟು ಭಸ್ಮಗೊಂಡಿತು...ಒಳಗಿದ್ದ 158ಮಂದಿಯನ್ನು ತನ್ನೊಂದಿಗೆ ಆಗುತಿಗೀಡುಪಡಿಸಿ...
ತನ್ನ ಮಗ ಇನ್ನೇನು ಮನೆ ಸೇರುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಹೆತ್ತಬ್ಬೆ...ಗಂಡನೊಂದಿಗೆ ಈ ಬಾರಿ ಸುತ್ತಾಡಬೇಕು ಎಂಬ ಸುಂದರ ಸ್ವಪ್ನ ಕಂಡಿದ್ದ ಪತ್ನಿ... ಅಪ್ಪನ ಮುಖನೋಡದೆ ಎಷ್ಟು ಸಮಯವಾಯಿತು ...ಬೇರ ಬರಬಾರದಾ...ಎಂದು ಹುಸಿಮುನಿಸು ತೋರಿದ ಪುಟ್ಟ ಮಗು... ಅಣ್ಣ ಬರುತ್ತಾನೆ, ಮಾಮ ಬರುತ್ತಾನೆ...ಎಂದೆಲ್ಲಾ ನೂರೆಂಟು ಕನಸು ಕಂಡಿದ್ದ ನೆಂಟರಿಷ್ಟರು...ಗೆಳೆಯನ ಆಗಮನದ ನಿರೀಕ್ಷೆಯಲ್ಲಿದ್ದ ಆತ್ಮೀಯ ಮಿತ್ರ...ಹೀಗೆ ಒಂದೆರಡಲ್ಲ...ನೂರಾರು ಮಂದಿಯ ಕನಸುಗಳು ಒಮ್ಮೆಲೇ ಸುಟ್ಟು ಕರಕಲಾಗಿ ಹೋಯಿತು...ಕೆಂಜಾರು ಕಣಿವೆಯಲ್ಲಿನ ಬೆಂಕಿ ಆ ಸುಂದರ ಸ್ವಪ್ನಗಳಿಗೆ ತಿಲಾಂಜಲಿ ಬರೆದಿತ್ತು... "ಇಡೀ ಜನಸಮೂಹದಲ್ಲೇ ಅಯ್ಯೋ...ಛೇ...ಹೀಗಾಗಬಾರದಿತ್ತು" ಎಂಬ ಉದ್ಗಾರ ಮಾತ್ರ...ಜೊತೆಗೆ ಪ್ರಾಣರಕ್ಷಣೆಯ ಕಾರ್ಯ...
ಒಟ್ಟಿನಲ್ಲಿ ಕೆಲವು ಗಂಟೆಗಳ ಕಾರ್ಯಾಚರಣೆ...ದೊರೆತದ್ದು ಗುರುತಿಸಲಾರದ ಸ್ಥಿತಿಯಲ್ಲಿದ್ದ ಹೆಣಗಳ ರಾಶಿ... ವೇದನೆ...ರೋಧನ...ಮುಗಿಲು ಮುಟ್ಟಿದ ಕರಿ ಹೊಗೆಯಂತೆ...
ಶವ ವಶಕ್ಕೆ ಪಡೆಯುವಲ್ಲೂ ಗೊಂದಲ...ಪರಿಹಾರಕ್ಕೆ ಹಪಹಪಿ...ಪರಿಹಾರದ ಹಣ ಪಡೆದುಕೊಳ್ಳುವುದಕ್ಕಾಗಿಯೇ "ಶವ" ಪಡೆದ ಅನೇಕಮಂದಿ... "ಸೂರು ಸುಟ್ಟಾಗ ಬೀಡಿ ಹೊತ್ತಿಸಿದಂತೆ" ಎಂಬಂತೆ ದುರಂತ ಸ್ಥಳದಲ್ಲಿದ್ದ ಚಿನ್ನಾಭರಣ ದೋಚಿದ ಧನಪಿಶಾಚಿಗಳು... ಮುಂದಿನ ಕೆಲದಿನಗಳಲ್ಲೇ ಘಟನಾ ಸ್ಥಳದಲ್ಲಿ ಮಡಿದವರ ಫಲಕ ಅನಾವರಣ...ಕಿಡಿಗೇಡಿಗಳಿಂದ ಫಲಕ ಹಾನಿ... ಇದೆಲ್ಲಾ ಕಳೆದು ವರುಷ ಒಂದು ಸಂದಿದೆ...

ಈ ವಿಮಾನ ದುರಂತ ನಡೆದ ನಂತರ ಅನೇಕ ಊಹಾಪೋಹಗಳು ಹುಟ್ಟಿಕೊಂಡವು.ಕೆಂಜಾರು ಪ್ರದೇಶದ ಬಗ್ಗೆ ತಲೆಗೊಬ್ಬರಂತೆ ಮಾತನಾಡಿಕೊಂಡರು. ದುರಂತಕ್ಕೀಡಾದ ವಿಮಾನದ ಪೈಲೆಟ್ ನ ನಡವಳಿಕೆಯು ಕಪ್ಪುಪೆಟ್ಟಿಗೆಯಲ್ಲಿ ಭದ್ರವಾಗಿತ್ತು..ಹಾಗಾಗಿ ದುರಂತಕ್ಕೆ ಪ್ರಮುಖ ಕಾರಣವೂ ಗೊತ್ತಾಯಿತು... ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಬದಲಾಗುತ್ತಿದ್ದ ಮಂಗಳೂರು ಏರ್ ಪೋರ್ಟ್ ಈ ದುರಂತದಿಂದಾಗಿ "ಕ್ರಿಟಿಕಲ್ ಏರ್ ಪೋರ್ಟ್ " ಎಂಬ ಹೆಸರು ಪಡೆದುಕೊಂಡಿತು. ಗುಡ್ಡಗಳ ನಡುವೆ ಎತ್ತರದ ಪರಿಸರದಲ್ಲಿರುವ ಮಂಗಳೂರಿನ ವಿಮಾನ ನಿಲ್ದಾಣ "ಟೇಬಲ್ ಟಾಪ್" ವಿಮಾನ ನಿಲ್ದಾಣ ಎಂದೇ ಕರೆಯಿಸಿಕೊಂಡಿತ್ತು. ಆದರೆ ವರುಷದ ಹಿಂದೆ ಘಟಿಸಿದ ದುರಂತ ಇಂದಿಗೂ ಹಸಿರಾಗಿದೆ...ಮತ್ತೆ ಮತ್ತೆ ಕಾಡುತ್ತಿದೆ...ಇನ್ನೆಂದೂ ಎಲ್ಲೂ ಈ ರೀತಿಯ ದುರ್ಘಟನೆ ನಡೆಯದಿರಲೆಂಬ ಹಾರೈಕೆ ನಮ್ಮೆಲ್ಲರದ್ದು...


(ದುರಂತದ ದಿನ ಈ ಕನಸು.ಕಾಂ ನೇರ(LIVE) ವರದಿ ಭಿತ್ತರಿಸಿತ್ತು...)

0 comments:

Post a Comment