ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜೀವ್ ದಿಕ್ಷಿತ್, ಅಣ್ಣಾ ಹಜಾರೆ ಮತ್ತು ಸುಲಭವಾಗಿ ಎಚ್ಚೆತ್ತುಕೊಳ್ಳದ ನಾವೆಲ್ಲರು !

ರಾಜೀವ್ ದಿಕ್ಷಿತ್ ಈ ಹೆಸರು ಕೇಳಿದೊಡನೆ ದೇಶದಲ್ಲಿ ಲಕ್ಷಾಂತರ ಜನರು ಬಾವುಕರಾಗುತ್ತಾರೆ. ವಿದೇಶಿ ತಂಪು ಪಾನಿಗಳ ನೈಜ ಸ್ವರೂಪವನ್ನು ಬಿಚ್ಚಿಟ್ಟವರು, ಸ್ವಿಸ್ ಬ್ಯಾಂಕ್ನ ಕಪ್ಪು ಹಣದ ಬಗ್ಗೆ ಅಡ್ವಾಣಿಯವರಿಗಿಂತ ಸುಮಾರು 15 ವರ್ಷ ಮುಂಚೆಯೆ ಹೇಳಿದವರು ದೀಕ್ಷಿತ್. ದೇಶ ಕಂಡ ಮಹಾನ್ ವಿದ್ವಾಂಸ, ನಿಸ್ವಾರ್ಥಿ, ಹೋರಾಟಗಾರ ರಾಜೀವ್ ದಿಕ್ಷಿತ್. ಶ್ರೀಮಂತ ಮನೆತನದಲ್ಲಿ ಹುಟ್ಟಿದ್ದ ದೀಕ್ಷಿತರು ಆಜಾದಿ ಬಚಾವೊ ಆಂದೋಲನಕ್ಕಾಗಿ ತಮ್ಮ ಧನ, ಆಯುಷ್ಯ, ಸರ್ವಸ್ವವನ್ನು ತೇಯ್ದರು. ವಿದೇಶಿ ತಂಪು ಪಾನೀಯಗಳ ನೈಜ ಸ್ವರೂಪವನ್ನು ವೈಜ್ಞಾನಿಕವಾಗಿ ಅವರು ನಿರೂಪಿಸಿದರೂ ಜನ ಅದನ್ನು ನೋಡಿ, ಕೇಳಿ ಖುಷಿಪಟ್ಟರು ಹೊರತು ಕುಡಿಯುವುದನ್ನು ಬಿಡಲಿಲ್ಲ! ಅವರ ವಾಕ್ಚಾತುರ್ಯ ಪ್ರಬುದ್ಧ ಹಿಂದಿ, ಪ್ರಾಮಾಣಿಕತೆಗೆ ವ್ಹಾ ವ್ಹಾ ಎಂದರು ಹೊರತು ಮಾತುಗಳನ್ನು ಪಾಲಿಸಲಿಲ್ಲ.


ಇಂದು ಅಣ್ಣ ಹಜಾರೆಯವರಿಗೆ ದೊರೆಯುತ್ತಿರುವ ಜನಬೆಂಬಲದ ಅರ್ಧದಷ್ಟು ದಿಕ್ಷಿತರಿಗೆ ಸಿಗಲಿಲ್ಲ. ಹಜಾರೆಯವರಂತೆ ದಿಕ್ಷಿತರು ಪ್ರಾಮಾಣಿಕರಾಗಿದ್ದರು. ರಾಜಕೀಯದ ಆಸೆ, ಹುದ್ದೆಯ ಆಸೆ, ಜನಪ್ರಿಯತೆಯ ಆಸೆ ಯಾವುದು ಅವರಿಗೂ ಇರಲಿಲ್ಲ. ಆದರೂ ಅವರಿಗೆ ಹಜಾರೆಯವರಿಗೆ ದೊರೆತಷ್ಟು ಜನಬೆಂಬಲ ಸಿಗಲಿಲ್ಲ. ಈ ದೇಶದಲ್ಲಿ ಎಷ್ಟೋ ಜನ ಪ್ರಾಮಾಣಿಕರಿಗೆ ನಾವು ಬೆಂಬಲ ನೀಡದೆ ಮೂಲೆಗುಂಪು ಮಾಡಿದ್ದೇವೆ. ಅಪರೂಪಕೊಮ್ಮೆ ಜೆ.ಪಿ. ಯಂತವರಿಗೆ ಜನ ಬೆಂಬಲ ಸಿಕ್ಕಿದೆ. ಹಜಾರೆಯಂತವರ ಕರೆಗೆ ಜನ ಬೆಂಬಲ ನೀಡಿದ್ದಾರೆ ಅಷ್ಟೇ. ಅವರಿಬ್ಬರು ಒಂದೇ ರೀತಿ ಅಲ್ಲದಿರಬಹುದು. ಆದರೆ ದಿಕ್ಷಿತ್, ಹಜಾರೆ, ಜೆ.ಪಿ.ಯೆಲ್ಲ ಪ್ರಾಮಾಣಿಕ ಹೋರಾಟಗಾರರೇ. ಯಾಕೆ ಹೀಗೆ ಆಗುತ್ತದೆ? ಚೆರಿಶ್ಮಾ ಇದ್ದರೆ ಜನ ಬೆಂಬಲ ಸಿಗುತ್ತದೆ ಎನ್ನುವುದು ಸುಳ್ಳು ದಿಕ್ಷಿತರಿಗೆ ಚೆರಿಶ್ಮಾ ಇತ್ತು. ಅವರು ಆಯ್ದುಕೊಂಡ ಕ್ಷೇತ್ರಗಳೆ ಕಾರಣವೆ? ಅದೂ ಅಲ್ಲ.

ಬಲಿಗಂಬದ ಮೇಲೆ ತಲೆಯನ್ನಿಡುವ ತನಕ ದಂಗೆ ಎಳದ ಜನರನ್ನು ಕಂಡು ದುಃಖವಾಗುತ್ತದೆ. ನನಗೆ. ಎಂದವರು ಕಲೀಲ್ ಗಿರ್ಬನ್. ಚಾಲ್ತಿಯಲ್ಲಿರದ ಈ ಸಾಲನ್ನು ನೆನಪಿಸಿದವರು ನಾಗರಿಕ ಪತ್ರಿಕೆಯ ಕೃಷ್ಣಮೂರ್ತಿ ಹೆಬ್ಬಾರ್. ನಾನು ಮುಂದಿಟ್ಟಿರುವ ಪ್ರಶ್ನೆಗೆ ಉತ್ತರ ಇದೇ ಸಾಲಿನಲ್ಲಿದೆ. ಏನೇ ಅವಘಡಗಳು ದೇಶದಲ್ಲಿ ಸಂಭವಿಸಿದರು ಅದು ನಮ್ಮನ್ನು ಬಲಿಗಂಬದ ತನಕ ಕೊಂಡೊಯ್ಯದಿದ್ದರೆ ನಾವು ಎಚ್ಚೆತ್ತುಕೊಳ್ಳುವುದಿಲ್ಲ. ದೇಶದ ಒಳಿತಿಗಾಗಿ ಸ್ವದೇಶಿ ಉತ್ಪನ್ನಗಳನ್ನು ಬಳಸಿ ಎಂದರೆ ಬಹುತೇಕ ಜನರು ಬಳಸುವುದಿಲ್ಲ! ವಿದೇಶಿ ಬಳಸಿ ನಮಗೆ ತಕ್ಷಣ ದೊಡ್ಡ ಪ್ರಮಾಣದಲ್ಲಿ ಹಾನಿಯಾದರೆ ಮಾತ್ರ ಸ್ವದೇಶಿ ಬಳಸುತ್ತೇವೆ. ಅಣ್ಣಾ ಹೋರಾಡುತ್ತಿರುವುದು ಬ್ರಷ್ಟಾಚಾರದ ವಿರುದ್ಧ ಭ್ರಷ್ಟಾಚಾರದಿಂದಲೇ ಎಷ್ಟೇ ಭಾರತೀಯರಿಗೆ ಮಗನ ನೌಕರಿ, ಸೈಟು, ಪ್ರಮೋಷನ್ನು ಅಸಾಧ್ಯವಾದ ಮಾತಾಗಿದೆ.

ಲಂಚ ನೀಡಿ ಅದೆಲ್ಲವನ್ನೂ ಪಡೆದವರೂ ಲಂಚಕ್ಕೆ ನೀಡಿದ್ದು ಇನ್ವೆಂಸ್ಟ್ಮೆಂಟ್, ಇನ್ವೆಂಸ್ಟ್ಮೆಂಟ್ ಜಾಸ್ತಿಯಾಯಿತು! ಎಂದು ಪರಿಗಣಿಸಿ ಭ್ರಷ್ಟಾಚಾರವನ್ನು ಶಪಿಸುತ್ತಿದ್ದಾರೆ. ಹೀಗೆ ಭ್ರಷ್ಟಾಚಾರ ಬಹುತೇಕ ಜನರ ಕುತ್ತಿಗೆಗೆ ಬಲಿಗಂಬವಾಗಿ ಪರಿಣಮಿಸಿದೆ. ಮೇಲಾಗಿ ಎ. ರಾಜಾ, ಕಲ್ಮಾಡಿ ಮುಂತಾದವರ ಹಗರಣಗಳು ಜನರಲ್ಲಿ ಅಸಹ್ಯ ಮೂಡಿಸಿದ್ದವು. ಆ ಸಂದರ್ಭದಲ್ಲಿ ಅಣ್ಣಾ ಉಪವಾಸ ಕುಳಿತಿದ್ದರಿಂದ ಜನ ಬೆಂಬಲ ನೀಡಿದ್ದರು. ಭ್ರಷ್ಟಾಚಾರ ಈ ಪ್ರಮಾಣದಲ್ಲಿ ಇರದಿದ್ದರೆ ಅಣ್ಣಾರ ಹೋರಾಟಕ್ಕೆ ಇಷ್ಟು ಬೆಂಬಲ ಸಿಗುತ್ತಿರಲಿಲ್ಲ. ಭ್ರಷ್ಟಾಚಾರದಿಂದ ಯಾವುದೋ ಒಂದು ವರ್ಗಕ್ಕೆ ತೊಂದರೆಯಾಗುತ್ತಿದೆ. ಹೋರಾಟಕ್ಕೆ ಬನ್ನಿ ಎಂದರೆ ಇಷ್ಟೊಂದು ಜನ ಸೇರುತ್ತಿರಲಿಲ್ಲ. ಭ್ರಷ್ಟಾಚಾರ ಇವತ್ತು ಬಡ ಮಧ್ಯಮ ಹಾಗೂ ಎಲ್ಲಾ ವರ್ಗದವರಿಗೂ ಹಿಂಸೆ ನೀಡುತ್ತಿದೆ. ಅದೆ ಕಾರಣಕ್ಕಾಗಿ ದೇಶವೇ ಅಣ್ಣಾ ಬೆಂಬಲಕ್ಕೆ ನಿಂತಿದೆ.

ನೀವೇ ಗಮನಿಸಿ ಪೆಪ್ಸಿ, ಕೋಲಾ, ಅಪಾಯಕಾರಿ ಎಂದು ಎಲ್ಲರಿಗೂ ತಿಳಿದಿದೆ ಆದರೆ ಅದರಿಂದ ನೇರವಾಗಿ ತೊಂದರೆಗೆ ಒಳಪಟ್ಟವರು ತುಂಬಾ ಕಡಿಮೆ. ಎಲ್ಲೊ ಆಗೊಮ್ಮೆ ಈಗೊಮ್ಮೆ 5 ಬಾಟಲಿ ಪೆಪ್ಸಿ ಕುಡಿದ ವಿದ್ಯಾರ್ಥಿ ಸಾವು ಎನ್ನುವುದನ್ನು ನಾವು ಪತ್ರಿಕೆಗಳಲ್ಲಿ ಓದಿದ್ದೇವೆ ಹೊರತು ಅದರ ಸಣ್ಣ ವಿಕಾರವನ್ನು ನಾವು ಅನುಭವಿಸಿಲ್ಲ. ಆದರೆ ಭ್ರಷ್ಟಾಚಾರದ ಅಪಾಯವನ್ನು ಅನುಭವಿಸಿದ್ದೇವೆ. ಅರ್ಥಾತ್ ಭ್ರಷ್ಟಾಚಾರ ನಮ್ಮನ್ನು ಬಲಿಗಂಬಕ್ಕೆ ತಂದು ನಿಲ್ಲಿಸಿದೆ ಆದರೆ ಪೆಪ್ಸಿ ಕೊಲಾ ಹಾಗೆ ಮಾಡಲಿಲ್ಲ ಅದಕ್ಕಾಗಿ ದಿಕ್ಷಿತರು ಹೇಳಿದ ಪೆಪ್ಸಿ ಕೊಲಾ ಹಠಾವೊಕ್ಕಿಂತ ಅಣ್ಣಾ ಹೇಳಿದ ಭ್ರಷ್ಟಾಚಾರ ಹಠಾವೊಗೆ ನಾವು ಹೆಚ್ಚು ಬೆಂಬಲ ನೀಡಿದ್ದೇವೆ.

ಇಷ್ಟಕ್ಕೂ ಎಚ್ಚೆತ್ತುಕೊಳ್ಳಲು, ಅಣ್ಣಾರಂತವರ ಜೊತೆ ಕೈ ಜೋಡಿಸಲು ಇಷ್ಟಕ್ಕೂ ಬಲಿಗಂಬದ ಪರಿಸ್ಥಿತಿ ಬರುವ ತನಕ ಕಾಯಬೇಕೆ? ಎಂಡೋಸಲ್ಘಾನ್ ಇನ್ನೆಷ್ಟು ಜನರನ್ನು ಕಿತ್ತು ತಿಂದ ಮೇಲೆ ನಾವು ಎಚ್ಚೆತ್ತುಕೊಳ್ಳುತ್ತೇವೆ. ಅವಘಡಗಳು ಮಿತಿ ಮೀರಿದಾಗ ಮಾತ್ರ ನಾವು ಎಚ್ಚೆತ್ತುಕೊಳ್ಳುತ್ತೇವೆ. ಅದಕ್ಕಿಂತ ಸ್ವಲ್ಪ ಹಿಂದಿನ ಘಟ್ಟವಿರುವಾಗಲು ಯಾವುದಾದರು ಒಬ್ಬ ಪ್ರಮಾಣಿಕ ಹೋರಾಟಕ್ಕೆ ನಿಂತರೆ ನಮ್ಮ ಬೆಂಬಲ ಪಡೆಯುವುದು ಕಷ್ಟವೇ! ಇದೆ ಕಾರಣದಿಂದ ಬಾಬಾ ಆಮ್ಟೆಯವರ ಕೆಲವು ಹೋರಾಟಗಳು ಯಶಸ್ವಿಯಾಗಲಿಲ್ಲ. ಅದೆಷ್ಟೋ ರೈತರ ಪರ ಹೋರಾಟಗಳು ಸೋತು ಹೋದವು.

ಸ್ವಸ್ಥ ಸಮಾಜ ನಿರ್ಮಾಣವಾಗಬೇಕಾದರೆ ಅವಘಡಗಳು ಮಿತಿ ಮೀರಿದಾಗ ಮಾತ್ರ ಹೋರಾಟ ಮಾಡಿದರೆ ಸಾಲದು. ಅಣ್ಣಾರ ಹೋರಾಟ ಎ. ರಾಜಾ ಅಥವಾ ಕಲ್ಮಾಡಿ ಎಂಬ ಭ್ರಷ್ಟನ ವಿರುದ್ಧವಲ್ಲ ಅದು ಭ್ರಷ್ಟಾಚಾರದ ವಿರುದ್ಧ. ನಾವೇ ಲಂಚ ನೀಡಿದರೆ ಅಥವಾ ಪಡೆದರೆ ಅದು ನಮ್ಮ ಭ್ರಷ್ಟಾಚಾರದ ವಿರುದ್ಧವೂ ಆಗುತ್ತದೆ. ಅಣ್ಣಾರ ಹೋರಾಟ ಮಸೂದೆಯ ಜೊತೆಯಲ್ಲಿ ಜನರನ್ನು ಶುದ್ದ ಹಸ್ತರನ್ನಾಗಿ ಮಾಡಲಿ ಎಂದು ಆಶಿಸೋಣ ಬಹುಮುಖ್ಯವಾಗಿ ಅದು ಜನರನ್ನು ಅನ್ಯಾಯದ ವಿರುದ್ಧ ಸದಾ ಹೋರಾಡುವಂತೆ ಪ್ರೇರೆಪಿಸಲಿ ಎಂದು ಆಶಿಸೋಣ. ಪ್ರತಿ ಬಾರಿಯು ಅನ್ಯಾಯ ಮಿತಿ ಮೀರುವ ತನಕ ಸುಮ್ಮನಿದ್ದರೆ ಪ್ರಜಾಪ್ರಭುತ್ವ ಸೋಲುತ್ತದೆ.

-ಆದಿತ್ಯ ಭಟ್.

1 comments:

Anonymous said...

hai sir...........
gud article

Post a Comment