ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ವಿವಿಧತೆಯಲ್ಲಿ ಏಕತೆ ಎಂದಾಗ ನೆನಪಾಗುವುದು ನಮ್ಮ ದೇಶ ಭಾರತ. ಈ ವೈವಿಧ್ಯಮಯ ಸಂಸ್ಕೃತಿ, ಪರಿಸರ, ಸಂಪ್ರದಾಯದಿಂದಾಗಿ ಭಾರತ ಪ್ರವಾಸಿ ಆಕರ್ಷಣೆಯ ಕೇಂದ್ರ. ವಿಶ್ವದ ನಾನಾ ದಿಕ್ಕಿನಿಂದ ಕೋಟ್ಯಂತರ ಜನ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ನಮ್ಮ ದೇಶದ ಪ್ರಾಕೃತಿಕ ಚೆಲುವಿಗೆ ತಲೆಬಾಗದವರು ಯಾರು ? ಪ್ರವಾಸಿಗರ ಮೊದಲ ಆಕರ್ಷಣೆ ಪ್ರೇಮ ಸೌಧ ತಾಜ್ ಮಹಲ್ ಆದರೆ, ಬಳಿಕ ರಾಷ್ಟ್ರ ರಾಜಧಾನಿ ಹೊಸದಿಲ್ಲಿ ನೋಡಿಕೊಂಡು ಗೋವಾದ ಕಡಲ ಕಿನಾರೆಯಲ್ಲಿ ಕೊಂಚ ರಿಲ್ಯಾಕ್ಸ್ ಆಗುವುದು.. ಇನ್ನೊಂದೆಡೆ ಹಿಮಾಲಯ ಪರ್ವತ ಶ್ರೇಣಿ ಹತ್ತುವುದು, ಪವಿತ್ರ ಗಂಗಾನದಿಯ ಪುಣ್ಯ ಸ್ನಾನ.. ಪ್ರತಿ ರಾಜ್ಯಕ್ಕೂ ತನ್ನದೇ ಆದ ವಿಶೇಷತೆಗಳಿವೆ.


ಹೀಗೆ ಒಂದೇ ಎರಡೇ ಎಷ್ಟೊಂದು ಪ್ರವಾಸಿ ಆಕರ್ಷಣೆಗಳು..
ಭಾರತಕ್ಕೆ ಆಗಮಿಸುವ ಪ್ರವಾಸಿಗರಲ್ಲಿ, ಚಾರಣಕ್ಕೆ ಬರುವ ಯುವಕರು ಸೇರಿದಂತೆ ಎಲ್ಲ ವಯಸ್ಸಿನವರು ಕೂಡಾ ಇದ್ದಾರೆ. ನಮ್ಮ ದೇಶವೇ ಒಂದು ಅನುಭವ. ಹೀಗಾಗಿ ಈ ಅನುಭವ ಗಳಿಸುವುದು ಅನೇಕ ಪ್ರವಾಸಿಗರ ಹಂಬಲವಾಗಿರುತ್ತದೆ. ಅದನ್ನು ಈಡೇರಿಸಲು ಪ್ರವಾಸ ಕೈಗೊಂಡು ಇಚ್ಛೆ ಪೂರೈಸಿದ ತೃಪ್ತಿಯೊಂದಿಗೆ ವಾಪಸು ಹೋಗುತ್ತಾರೆ.


ಅಂಕಿ ಅಂಶವೊಂದರ ಪ್ರಕಾರ, ಪ್ರತಿ ವರ್ಷ ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚು ಕಡಿಮೆ 5 ಕೋಟಿ. ಇವರಲ್ಲಿ ಹೆಚ್ಚಿನವರು ಕೂಡಾ ಊರು ನೋಡುವುದಕ್ಕೆ ಬರುವವರು. ಇನ್ನು ಕೆಲವರು ಇತರೆ ಉದ್ದೇಶಕ್ಕಾಗಿ ಆಗಮಿಸುತ್ತಾರೆ. ಹಾಗೆ ನೋಡಿದರೆ, ಭಾರತ ಪ್ರವಾಸಿ ಆಕರ್ಷಣೆಯಲ್ಲಿ ವೈದ್ಯಕೀಯ ಚಿಕಿತ್ಸೆ ಕೂಡಾ ಸೇರಿಕೊಂಡಿದೆ. ಅದು, ಆಯುರ್ವೇದ ಇರಬಹುದು, ಯೋಗ ಇರಬಹುದು ಅಥವಾ ಅಲೋಪತಿ, ಯುನಾನಿ, ಹೋಮಿಯೋಪತಿಯೇ ಇರಬಹುದು. ವಿದೇಶಗಳಿಗೆ ಹೋಲಿಸಿದರೆ, ಉತ್ತಮ ಗುಣಮಟ್ಟದ ಚಿಕಿತ್ಸೆ ಭರಿಸಬಹುದಾದ ವೆಚ್ಚದಲ್ಲಿ ಭಾರತದಲ್ಲಿ ಪಡೆಯಬಹುದು. ಈ ಬಗ್ಗೆ ಇತ್ತೀಚೆಗೆ ಅಮೇರಿಕಾ ಅಧ್ಯಕ್ಷರು ನೀಡಿದ ಹೇಳಿಕೆ ವ್ಯಾಪಕ ಟೀಕೆಗೆ ಒಳಗಾಗಿತ್ತು ಅನ್ನೋದು ಬೇರೆ ವಿಚಾರ. ಆದರೂ, ಒಮ್ಮೆ ವೈದ್ಯಕೀಯ ಕ್ಷೇತ್ರ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಮೆಡಿಕಲ್ ಟೂರಿಸಂ ಎಂಬ ಕಲ್ಪನೆ...

ಜಾಗತಿಕವಾಗಿ ಮೆಡಿಕಲ್ ಟೂರಿಸಂ ಹೆಚ್ಚು ಹೆಚ್ಚು ಆದ್ಯತೆ ಪಡೆಯುತ್ತಿದೆ. ಭಾರತದಲ್ಲೂ ಮೆಡಿಕಲ್ ಟೂರಿಸಂಗೆ ಆದ್ಯತೆ ಇದೆ. ಹೀಗೆ ಹೇಳುವುದಕ್ಕಿಂತಲೂ ಭಾರತ ಮೆಡಿಕಲ್ ಟೂರಿಸಂ ಹಬ್ ಆಗಿ ಬೆಳೆದಿದೆ ಎಂದೇ ಹೇಳಬಹುದು. ವೈದ್ಯಕೀಯ ಚಿಕಿತ್ಸೆಗಾಗಿ ಜನರು ದೇಶ ಭಾಷೆ ಸಂಸ್ಕೃತಿಯ ಗಡಿ ಮರೆತು ಹೋಗುತ್ತಿರುವ ಬೆಳವಣಿಗೆ ಇಂದು ನಿನ್ನೆಯದಲ್ಲ. ಆದರೂ, ಕಳೆದ ಒಂದು ದಶಕದಲ್ಲಿ ಈ ಸಂಖ್ಯೆ ಹೆಚ್ಚಿದೆ ಎಂದೇ ಹೇಳಬೇಕಾಗುತ್ತದೆ. ಕಾರಣ ಇಷ್ಟೇ... ಅಂತರ್ಜಾಲ ತಾಣ, ತಂತ್ರಜ್ಞಾನಗಳು ಇಡೀ ವಿಶ್ವವನ್ನೇ ಒಂದು ಗ್ರಾಮವನ್ನಾಗಿಸಿದೆ.. ಎಲ್ಲವೂ ಸ್ಥಳೀಯ ಎನ್ನುವಷ್ಟರಮಟ್ಟಿಗೆ..

ವೈದ್ಯಕೀಯ ಚಿಕಿತ್ಸೆಗೆ ಜನ ವಿದೇಶಗಳಿಗೆ ತೆರಳುವುದಕ್ಕೆ ಮೊದಲ ಕಾರಣ ಭರಿಸಲಾಗದ ವೆಚ್ಚ, ಆಧುನಿಕ ತಂತ್ರಜ್ಞಾನದ ಬಳಕೆ, ಫಲಿತಾಂಶ ಎಲ್ಲವೂ ಗಣನೆಗೆ ಬರುತ್ತದೆ. ಮೊದಲನೇ ಕಾರಣವಾದ ವೈದ್ಯಕೀಯ ವೆಚ್ಚವನ್ನು ಗಮನಿಸಿದ್ರೆ, ಒಂದು ಅಂಕಿ ಅಂಶದ ಪ್ರಕಾರ, ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆ ವೆಚ್ಚ ಶೇಕಡಾ 33 ರಿಂದ 50 ರಷ್ಟು ಹೆಚ್ಚಾಗಿದೆ. ಈ ಒಂದು ವಿಚಾರದಲ್ಲಿ ಭಾರತದಲ್ಲಿ ಭರಿಸಬಹುದಾದ ವೈದ್ಯಕೀಯ ವೆಚ್ಚಗಳು ಎಂಬುದು ವಿದೇಶದಿಂದ ಆಗಮಿಸುವವರ ಲೆಕ್ಕಾಚಾರದ ಅಭಿಮತ.
ಈ ಮಾತನ್ನು ಕೇಳಿದ ಭಾರತೀಯರು ಖಂಡಿತ ನಕ್ಕು ಬಿಡುತ್ತಾರೆ. ಯಾಕೆಂದರೆ, ಆಸ್ಪತ್ರೆ ಎಂದರೆ ಮಾರು ದೂರ ಓಡುವ ಜನ ನಾವು. ಅನಿವಾರ್ಯವಾಗಿ ಆಸ್ಪತ್ರೆಗೆ ಹೋಗಬೇಕು ಅಷ್ಟೇ.. ಅದೊಂಥರಾ ನರಕ ಯಾತನೆ.. ಆಸ್ಪತ್ರೆಯ ಟಿಪಿಕಲ್ ವಾಸನೆ, ವಾತಾವರಣ.. ರೋಗ ವಾಸಿ ಮಾಡುವುದಕ್ಕಿಂತ ಹೆಚ್ಚಾಗಿ ರೋಗಿ ಜೊತೆ ಹೋದವರ ಮನಸ್ಸಿಗೂ ಘಾಸಿ ಉಂಟು ಮಾಡುವ ಪರಿಸ್ಥಿತಿ ಸದ್ಯ ಇದೆ. ಯಾವುದೇ ಸರಕಾರಿ ಆಸ್ಪತ್ರೆಗೆ ಹೋದರೂ ಇದೇ ಕತೆ. ಇತ್ತೀಚೆಗೆ ವಿಕ್ಟೋರಿಯ ಆಸ್ಪತ್ರೆಗೆ ಸಚಿವರು ದಾಳಿ ನಡೆಸಿದಾಗ ಕಂಡು ಬಂದ ಅಂಶಗಳಷ್ಟೇ ಮಾಧ್ಯಮಗಳಲ್ಲಿ ವರದಿಯಾಗಿವೆ.

ಭಾರತದಲ್ಲಿ ಮೆಡಿಕಲ್ ಟೂರಿಸಂ

ಜಾಗತಿಕ ಮೆಡಿಕಲ್ ಟೂರಿಸಂ ಎಂದಾಕ್ಷಣ ಮೊದಲ ಸಾಲಿನಲ್ಲಿ ಕಾಣಸಿಗುವ ದೇಶದ ಹೆಸರು ಭಾರತ. ನಮ್ಮ ದೇಶದಲ್ಲಿ ಮೆಡಿಕಲ್ ಟೂರಿಸಂಗೆ ಅಷ್ಟೊಂದು ಅವಕಾಶ ಇದೆ. 2004 ರ ಅಂಕಿ ಅಂಶಗಳನ್ನು ಗಮನಿಸಿದ್ರೆ ಅಂದಿಗೇ 1.5 ಲಕ್ಷ ಮೆಡಿಕಲ್ ಟೂರಿಸ್ಟ್ ಗಳು ಭಾರತಕ್ಕೆ ಆಗಮಿಸಿ ಚಿಕಿತ್ಸೆ ಪಡೆದಿದ್ರು. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. 2008ರ ವೇಳೆಗೆ, ಶೇಕಡಾ 33 ರಷ್ಟು ಅಂದರೆ 2 ಲಕ್ಷ ಮೀರಿತ್ತು. ಈ ವಾರ್ಷಿಕ ಅಂಕಿ ಅಂಶಗಳ ಲೆಕ್ಕಾಚಾರದ ಪ್ರಕಾರ 2015ರ ವೇಳೆ ಮೆಡಿಕಲ್ ಟೂರಿಸ್ಟ್ಗಳ ಸಂಖ್ಯೆ 50 ಲಕ್ಷ ದಾಟಲಿದೆ.
ಅಚ್ಚರಿ ಎನಿಸುತ್ತಿದೆ ಅಲ್ಲವೇ.. ಭಾರತದಲ್ಲಿ ಖಾಸಗಿ ಆಸ್ಪತ್ರೆಗಳು ಅತ್ಯಾಧುನಿಕ ಮೆಡಿಕಲ್ ಟ್ರೀಟ್ಮೆಂಟ್ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಇದು ಜಾಗತಿಕ ಮಟ್ಟದಲ್ಲಿ ಗಮನಸೆಳೆಯುವಂತೆ ಮಾಡಿವೆ. ವಿದೇಶಿ ಪ್ರವಾಸಿಗರಿಗೆ ಚಿಕಿತ್ಸೆಗೆ ದಾಖಲಾದಾಗ, ಆರಾಮದಾಯಕ ವಾಸ್ತವ್ಯಕ್ಕೆ ಬೇಕಾದ ಅನುಕೂಲಮಾಡಿಕೊಡುವ ಪರಿಪಾಠ ಕೂಡಾ ಇದೆ. ಪಾಶ್ಚಿಮಾತ್ಯ ವೈದ್ಯಕೀಯ ಚಿಕಿತ್ಸೆ ಪದ್ಧತಿ ಕಲಿತ ವೈದ್ಯರಿಂದ ಅತ್ಯಂತ ಕಡಿಮೆ(ವಿದೇಶಕ್ಕೆ ಹೋಲಿಸಿದರೆ) ವೆಚ್ಚದಲ್ಲಿ ಸೇವೆ ಒದಗಿಸಲಾಗುತ್ತದೆ.

ಇನ್ನೊಂದು ಪ್ಲಸ್ ಪಾಯಿಂಟ್ ಅಂದರೆ, ಭಾರತದಲ್ಲಿ ಯಾವ ವಿದೇಶಿಯನಿಗೂ ಭಾಷೆ ಒಂದು ತೊಡಕಾಗಲ್ಲ. ಯಾಕೆಂದ್ರೆ ಬಹುತೇಕ ಭಾರತೀಯರು ಇಂಗ್ಲಿಷ್ ಮಾತನಾಡುತ್ತಾರೆ..!

ಸಾಮಾನ್ಯವಾಗಿ, ಭಾರತಕ್ಕೆ ಆಗಮಿಸುವ ಮೆಡಿಕಲ್ ಟೂರಿಸ್ಟ್ಗಳು ಒಂದೋ ಓಪನ್ ಹಾರ್ಟ್ ಸರ್ಜರಿ ಅಥವಾ ಆರ್ಥೋಪೆಡಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ಸರ್ಜರಿಗೆ ಒಳಗಾಗುವವರು. ನಿಮಗೆ ಅಗತ್ಯ ಆರೋಗ್ಯ ವಿಮೆ ಇಲ್ಲದೇ ಹೋದರೆ, ಅತ್ಯಂತ ದುಬಾರಿ ಚಿಕಿತ್ಸೆ ಇವು.. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದ ಖಾಸಗಿ ಆಸ್ಪತ್ರೆಗಳು ಇಂತಹ ಚಿಕಿತ್ಸೆ ನೀಡುವುದರಲ್ಲಿ ಪಳಗಿವೆ. ಇದಲ್ಲದೇ, ಪ್ಲಾಸ್ಟಿಕ್ ಸರ್ಜರಿ, ಕ್ಯಾನ್ಸರ್ ಗೆ ಸಂಬಂಧಪಟ್ಟ ಚಿಕಿತ್ಸೆ, ಕಿಡ್ನಿ ಸ್ಟೋನ್ ಮೊದಲಾದ ಚಿಕಿತ್ಸೆಗೂ ಭಾರತಕ್ಕೆ ಆಗಮಿಸುವವರಿದ್ದಾರೆ.

ಆಸ್ಪತ್ರೆಗಳ ಬಗ್ಗೆ ಹೇಳಬೇಕು ಅಂದರೆ, ರಸ್ತೆಯಲ್ಲಿ ಸಂಚರಿಸುವಾಗ ಸಾಕಷ್ಟು ಹೋರ್ಡಿಂಗ್ ಕಾಣಸಿಗುತ್ತವೆ. ಆರೋಗ್ಯ ಸೇವೆ ಕುರಿತ ಹೋರ್ಡಿಂಗ್ ಕೂಡಾ ಇದರಲ್ಲಿವೆ. . ಇನ್ನು ಜಾಹೀರಾತು ಹಾಗು ಇನ್ನಿತರೆ ಮಾಧ್ಯಮದ ಮೂಲಕ ಭಾರತಕ್ಕೆ ಮೆಡಿಕಲ್ ಟೂರಿಸ್ಟ್ಗಳನ್ನು ಸೆಳೆಯುವ ಆಸ್ಪತ್ರೆಗಳ ಪಟ್ಟಿಯಲ್ಲಿ ಅಪೊಲೋ, ಮ್ಯಾಕ್ಸ್ ಹೆಲ್ತ್ ಕೇರ್ ಮುಂಚೂಣಿಯಲ್ಲಿವೆ. ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾರೆ, ಜಯದೇವ, ವೊಕ್ಹಾರ್ಡ್, ಬಿಜಿಎಸ್, ಫೋರ್ಟ್ಸ್, ಮಣಿಪಾಲ್, ಕೊಲಂಬಿಯ ಏಷ್ಯಾ ಆಸ್ಪತ್ರೆಗಳು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತವೆ. ಆರೋಗ್ಯ ಕ್ಷೇತ್ರದಲ್ಲೊಂದು ಬದಲಾವಣೆಯ ಧ್ಯೇಯದೊಂದಿಗೆ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ವಿಕ್ರಂ ಆಸ್ಪತ್ರೆ ಕೂಡಾ ಈ ಪಟ್ಟಿಗೆ ಸೇರ್ಪಡೆಗೊಂಡಿದೆ.

ಒಟ್ಟಿನಲ್ಲಿ ಆರೋಗ್ಯ ಕ್ಷೇತ್ರ ಮೆಡಿಕಲ್ ಟೂರಿಸ್ಟ್ಗಳಿಗೆ ಸೀಮಿತವಾಗದಿರಲಿ.. ಭಾರತೀಯರಿಗೂ ಭರಿಸುವುದಕ್ಕೆ ಸಾಧ್ಯವಾಗುವಂತೆ ಸೇವೆಯನ್ನು ಒದಗಿಸಲಿ.. ಆಸ್ಪತ್ರೆ ಎಂದರೆ ಸುಲಿಗೆ ಕೇಂದ್ರವಾಗದಿರಲಿ ಎಂಬುದೇ ನಮ್ಮೆಲ್ಲರ ಆಶಯ...

- ಉಮೇಶ್ ಕುಮಾರ್ ಶಿಮ್ಲಡ್ಕ

0 comments:

Post a Comment