ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ಕೆಲ ಆಸ್ಪತ್ರೆಗಳಿಗೆ ಆರೋಗ್ಯ ವಿಮೆ(Health Insurance Policy) ಇರುವ ಗಿರಾಕಿಗಳು ಬಂದು ಬಿಟ್ಟರೆ ಚಿನ್ನದ ಮೊಟ್ಟೆ ಇಡುವ ಕೋಳಿ ಬಂದಷ್ಟು ಸಂತೋಷ
ಸುಮ ಮತ್ತು ಅವಳ ತಂಗಿ ಇಬ್ಬರೂ ವೈದ್ಯರು. ಸುಮ ಒಂದು ಪುಟ್ಟ ಆಸ್ಪತ್ರೆ ನಡೆಸುತ್ತಿದ್ದಾಳೆ.


ಒಮ್ಮೆ ಸುಮ ಎಲ್ಲೋ ಹೋಗಿದ್ದಳು. ಅಂತಹ ಸಮಯದಲ್ಲಿ ಒಂದು ಎಮರ್ಜನ್ಸಿ ಹೆರಿಗೆ ಕೇಸ್ ಬಂದಿದೆ. ಸುಮಳ ತಂಗಿ ತಕ್ಷಣ ಹೆರಿಗೆ ನೋವಿಂದ ನರಳುತ್ತಿದ್ದ ಆ ಹೆಂಗಸಿಗೆ ಡೆಲಿವರಿ ವಾರ್ಡಿಗೆ ಕರೆದುಕೊಂಡು ಹೋದಳು. ಅಕ್ಕ ಆಸ್ಪತ್ರೆಯಲ್ಲಿಲ್ಲದಿದ್ದರು ತಾನೇ ಸಾಹಸ ಮಾಡಿ ಹೇಗೋ ನಾರ್ಮಲ್ ಡೆಲಿವರಿ ಮಾಡಿಸಿಬಿಡುತ್ತಾಳೆ. ಅಕ್ಕ ಸಾಯಂಕಾಲ ಬರುತ್ತಾಳೆ. ಡೆಲಿವರಿ ಆದ ವಿಷಯ ತಿಳಿಯುತ್ತದೆ. ತಂಗಿಗೆ ಬಾಯಿಗೆ ಬಂದ ಹಾಗೆ ಬಯ್ಯುತ್ತಾಳೆ. ಬಯ್ಯಲು ಕಾರಣವೇನು ಗೊತ್ತೇ....? ತಂಗಿ ಮಾಡಿದ ಒಂದೇ ಒಂದು ತಪ್ಪು...ಆಕೆ ಅಂಥ ತಪ್ಪು ಮಾಡಿದ್ದೇನು...? ಆಕೆ ಮಾಡಿದ ತಪ್ಪು ಒಂದೇ - "ನಾರ್ಮಲ್ ಡೆಲಿವರಿ". ನಾರ್ಮಲ್ ಡೆಲಿವರಿ ಯಾಕೆ ಮಾಡಿದೆ....? ಸಿಸೇರಿಯನ್ ಮಾಡಬೇಕಿತ್ತು. ಅನ್ಯಾಯವಾಗಿ ೫೦ ಸಾವಿರ ರೂಪಾಯಿಗಳು ಹೋಯಿತಲ್ಲ. ನಿನಗೆ ಒಂದು ಚೂರು ಬುದ್ಧಿ ಇಲ್ಲ... ಹೀಗೆ ಅಕ್ಕ ಕೋಪಮಾಡಿಕೊಂಡು ತಂಗಿಗೆ ಬೈದಿದ್ದೇ ಬೈದಿದ್ದು. ಇದು ಕಟ್ಟು ಕತೆ ಅಲ್ಲ, ನಿಜವಾದ ನಡೆದ ಘಟನೆ. ಇಂತಹ ನೂರಾರು ಘಟನೆಗಳು ನಮ್ಮ ಸುತ್ತಮುತ್ತಲ ಆಸ್ಪತ್ರೆಗಳಲ್ಲಿ ನಡೆಯುತ್ತಿವೆ.

ಕೆಲ ಆಸ್ಪತ್ರೆಗಳಿಗೆ ಆರೋಗ್ಯ ವಿಮೆ(Health Insurance Policy) ಇರುವ ಗಿರಾಕಿಗಳು ಬಂದು ಬಿಟ್ಟರೆ ಚಿನ್ನದ ಮೊಟ್ಟೆ ಇಡುವ ಕೋಳಿ ಬಂದಷ್ಟು ಸಂತೋಷ ಆಗುತ್ತದೆ. ಕಂಪನಿಗಳಲ್ಲಿ ಕೆಲಸ ಮಾಡುವ ಎಂಪ್ಲಾಯಿಗಳು ಆಸ್ಪತ್ರೆಯವರಿಗೆ ಸಿಕ್ಕಿಬಿಟ್ಟರಂತೂ...ಮಜವೋ ಮಜ. ಸಾರಸಗಟಾಗಿ ಶೇವ್ ಮಾಡಿಬಿಡುತ್ತಾರೆ. ಏಕೆಂದರೆ ಒಂದು ಸಾಮನ್ಯ ಜ್ವರಕ್ಕೆ ೪೦ ಸಾವಿರ ರೂಪಾಯಿಗಳಷ್ಟು ಹಣವನ್ನು ಯಾರು ಕೊಡುತ್ತಾರೆ ಹೇಳಿ ಇವರಿಗೆ...? ಆಸ್ಪತ್ರೆಯವರು ಯೋಚಿಸುವ ರೀತಿಯೇ ಬೇರೆ....ವಿಮಾದಾರ ಪ್ರತಿ ವರ್ಷ ಪ್ರೀಮಿಯಂ ಕಟ್ಟುತ್ತಿದ್ದಾನೆ, ಆಸ್ಪತ್ರೆಯ ಬಿಲ್ಲನ್ನು ರೋಗಿ ತನ್ನ ಕೈಯಿಂದ ಕಟ್ಟುತ್ತಿಲ್ಲವಲ್ಲ....ವಿಮೆ ಕಂಪನಿ ವೆಚ್ಚ ಭರಿಸುತ್ತದೆ. ಎಷ್ಟು ಹಣ ಕಸಿಯಲು ಸಾಧ್ಯವೋ ಅಷ್ಟನ್ನು ಕಸಿದುಕೊಳ್ಳೋಣ...ಅಲ್ಲವೇ...?

ನೀವು ಮಾಡುತ್ತಿರುವುದು ಸರಿಯೇ ಅಂತ ಆಸ್ಪತ್ರೆಯವರಿಗೆ ಕೇಳಿ ನೋಡಿ...ಅವರು ಕೊಡುವ ಉತ್ತರ ಇಷ್ಟೆ - ನಮ್ಮ ಕಷ್ಟ ನಮಗೆ ಗೊತ್ತು. ಆಸ್ಪತ್ರೆ ನಡೆಸೋದು ಅಷ್ಟೊಂದು ಸುಲಭವಾದ ಕೆಲಸ ಅಲ್ಲ. ಆಸ್ಪತ್ರೆ ನಡೆಸಿ ನೋಡಿ ನಿಮಗೇ ಗೊತ್ತಾಗುತ್ತೆ. ಆ ಮೇಂಟನನ್ಸು, ಈ ಮೇಂಟನೆನ್ಸು, ಆ ಖರ್ಚು, ಈ ಟ್ಯಾಕ್ಸು...ಅಬ್ಬಬ್ಬಾ...ಸಾಕಾಗಿಹೋಗಿದೆ.

ರೋಗಿಯ/ವಿಮಾದಾರನ ಯೋಚನೆಗಳೇ ಬೇರೆ....ನಾನು ಪ್ರೀಮಿಯಂ ಕಟ್ಟುತ್ತಿದ್ದೇನೆ. ಜನರಲ್ ಅಥವಾ ಸೆಮಿ ಪ್ರೈವೇಟ್ ವಾರ್ಡ್ ಗೆ ಯಾಕೆ ಹೋಗಬೇಕು..? ಡೀಲಕ್ಸ್ ವಾರ್ಡ್ ಗೇ ಹೋಗೋಣ. ಪಾಪ ! ಆಸ್ಪತ್ರೆಯವರು ಅವನ ಜುಟ್ಟು ಬುಡದಿಂದ ಕುಯ್ಯುತ್ತಿರುವುದು ಆತನಿಗೆ ಗೊತ್ತಾಗುವುದಿಲ್ಲ. ಗೊತ್ತಾದರೂ ಬೇಜಾರಿಲ್ಲ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂದು ಕೊಂಡಿರುತ್ತಾನೆ. ನೆಂಟರಸ್ಥರಿಗೆ ನಾನು ಸ್ಪೆಷಲ್ ವಾರ್ಡ್ ನಲ್ಲಿ ಇದ್ದೇನೆ ಅಂತ ಬೇರೇ ಹೇಳಬೇಕಲ್ಲ...!

ಕೆಲವು ಎಂಪ್ಲಾಯಿಗಳಂತೂ ಕ್ರಿಮಿನಲ್ ಗಳು, ತಾವು ಆಸ್ಪತ್ರೆಯಲ್ಲಿ ಭರ್ತಿಯೇ ಆಗಿರುದುವುದಿಲ್ಲ, ಆಸ್ಪತ್ರೆಯವರ ಜೊತೆ ಸೆಟ್ಟಿಂಗ್ ಮಾಡಿಕೊಂಡು, ಪಾಲಿಸಿ ಹಣವನ್ನು ಕ್ಲೇಮ್ ಮಾಡಿಸಿಕೊಂಡು ಅರ್ಧ ಅರ್ಧ ಹಣ ಹಂಚಿಕೊಳ್ಳುತ್ತಾರೆ. ಇಂತಹ ಪ್ರಕರಣಗಳಲ್ಲಿ ಕೆಲವರು ಸಿಕ್ಕಿಹಾಕಿಕೊಂಡು ಕಂಪನಿಗಳು ಅಂತಹವರಿಗೆ ಗುಪ್ತವಾಗಿ ಕೆಲಸದಿಂದ ವಜಾ ಮಾಡಿರುವುದು ಸಹ ಉಂಟು.

ಇನ್ನು ಕೆಲವು ಆಸ್ಪತ್ರೆಗಳು ಆಲ್ಕೋಹಾಲ್ ರೋಗಿಗಳ ಕೇಸ್ಗಳನ್ನು ಸಹ ಪಾಸ್ ಮಾಡಿಸಲು ಹಿಂಜರಿಯುವುದಿಲ್ಲ. ಇಂತಹ ಅನೇಕ ಕೇಸ್ಗಳನ್ನು ಕಂಡು ಹಿಡಿಯಲು TPA ಕಂಪನಿಗಳು ಒಂದು ನಿಗ್ರಹಾ ದಳವನ್ನು ರೂಪಿಸಿದ್ದಾರೆ. ಸಂಶಯ ಬಂದರೆ, ಆಸ್ಪತ್ರೆಗೆ ಧಿಡೀರನೆ ಭೇಟಿ ನೀಡಿ ಕೇಸ್ ಕಂಡು ಹಿಡಿಯಲು ಪ್ರಯತ್ನ ಮಾಡುತ್ತಾರೆ. IRDA (ಸರ್ಕಾರಿ ಸಮಿತಿ) ಟಿ.ಪಿ.ಎ. ಗಳಿಗೆ ಇನ್ನೂ ಹೆಚ್ಚು ಅಧಿಕಾರ ನೀಡಬೇಕು, ಆಗ ಮೋಸಗಾರರನ್ನು ಶಿಕ್ಷೆಗೆ ಗುರಿಪಡಿಸಬಹುದು.

ಈಗ ಸ್ಪಲ್ಪ ವಿಮೆ ಬಗ್ಗೆ ತಿಳಿದುಕೊಳ್ಳೋಣ...

ಸಾಮಾನ್ಯವಾಗಿ ಲೈಫ್ ಇನ್ಶೂರೆನ್ಸ್ ಬಗ್ಗೆ ಎಲ್ಲರಿಗು ಗೊತ್ತು ಆದರೆ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ತಿಳುವಳಿಕೆ ಬಹಳ ಕಡಿಮೆ. ಅಷ್ಟು ಇಷ್ಟು ಗೊತ್ತಿದ್ದರು ತನ್ನದೇ ಆದ ಡೌಟುಗಳು ಇದ್ದೇ ಇರುತ್ತವೆ. ನಮ್ಮ ದೇಶದ ಸುಮಾರು 2% ಜನರು ಮಾತ್ರ ಆರೋಗ್ಯ ವಿಮೆಯನ್ನು ಹೊಂದಿದ್ದಾರೆ. ಮುಂಬರುವ 10 ವರ್ಷಗಳಲ್ಲಿ ಈ ಪ್ರಮಾಣ ಹೆಚ್ಚಾಗಲಿದೆ ಎಂಬುದು ಇನ್ಶೂರೆನ್ಸ್ ಕಂಪನಿಗಳ ಲೆಕ್ಕಾಚಾರ. ಹಾಗಾದಲ್ಲಿ ಸುಮಾರು 20 ಸಾವಿರ ಕೋಟಿಯ ವಹಿವಾಟು ನಡೆದಂತಾಗುತ್ತದೆ.

ಏನಿದು ಹೆಲ್ತ್ ಇನ್ಶೂರೆನ್ಸ್..?

ಅನಾರೋಗ್ಯದ ಪರಿಸ್ಥಿತಿ ಅಥವಾ ಆಕಸ್ಮಿಕ ದುರಂತಗಳಿಂದ ಎದುರಾಗುವ ವೈದ್ಯಕೀಯ ವ್ಯಚ್ಚವನ್ನು ಭರಿಸುವ ವಿಮೆಗೆ ಆರೋಗ್ಯ ವಿಮೆ ಎನ್ನುತ್ತಾರೆ. ನಾಳೆ ನಮ್ಮ ಜತೆಯಲ್ಲಿ ಏನು ನಡೆಯಬಹುದು ಎಂಬುದು ನಮಗೆ ಗೊತ್ತಿಲ್ಲ. ಇಂದು ಆರೋಗ್ಯ ಚೆನ್ನಾಗಿರಬಹುದು, ನಾಳೆ ಏನೋ ಪರಿಚಿತ,ಅಪರಿಚಿತ ಕಾಯಿಲೆಗಳಿಗೆ ಒಳಗಾಗಬಹುದು ಅಥವಾ ಯಾವುದೋ ಆಕಸ್ಮಿಕ ಘಟನೆ ಸಂಭವಿಸಿ ಪ್ರಾಣಾಪಾಯವಾಗಬಹುದು. ಅಂತಹ ಸಂದರ್ಭದಲ್ಲಿ ಕೈಯಲ್ಲಿ ಹಣವಿದ್ದರೆ ಮಾತ್ರ, ನಮ್ಮ ಆರೋಗ್ಯವನ್ನು ಕಾಪಾಡಲು ಅಥವಾ ಬಂದಿರುವಂತಹ ಅನಾಹುತದಿಂದ ಪಾರಾಗಲು ಪ್ರಯತ್ನ ಮಾಡಬಹುದು. ಹಣ ಇಲ್ಲದಿದ್ದರೆ....? ಆಸ್ಪತ್ರೆಯ ಮೆಟ್ಟಿಲು ಹತ್ತಲು ಸಹ ನೂರು ಸಲ ಯೋಚಿಸಬೇಕಾಗುತ್ತದೆ. ಒಂದು ಆರೋಗ್ಯ ವಿಮೆ ಮಾಡಿಸಿದ್ದರೆ ಧೈರ್ಯದಿಂದ ಆಸ್ಪತ್ರೆಗೆ ಹೋಗಿ ಭರ್ತಿಯಾಗಬಹುದು.

ಆರೋಗ್ಯ ವಿಮೆಯ ಹಲವಾರು ಕಂಪನಿಗಳಿವೆ. ನ್ಯಾಷನಲ್, ನ್ಯೂ ಇಂಡಿಯಾ, ಒರಿಯಂಟಲ್ ಮತ್ತು ಯುನೈಟೆಡ್ - ಇವು ಸರ್ಕಾರಿ ವಿಮೆ ಕಂಪನಿಗಳು. ಖಾಸಗಿ ಕಂಪನಿಗಳಿಗೂ ಬರ ಇಲ್ಲ. ಅಂತರ್ಜಾಲದಲ್ಲಿ ಜಾಲಾಡಿ ನಮಗಿಷ್ಟವಾದ ಕಂಪನಿ ಆರಿಸಿಕೊಳ್ಳಬಹುದು. ಅದೂ ಆಗಲ್ಲ ಅಂದರೆ. ನಮಗೆ ಸಹಾಯ ಮಾಡಲು ಏಜೆಂಟ್ ಗಳು ನಮಗಾಗಿ ಕೈಕಟ್ಟಿ ನಿಂತಿದ್ದಾರೆ. ಪಾಲಿಸಿ ಮಾಡಿಸುವುದು ಬಿಡುವುದು ಅವರವರ ಇಷ್ಟ. ಆದರೆ ಅದರ ಬಗ್ಗೆ ಸ್ಪಲ್ಪ ಸಾಮಾನ್ಯ ಜ್ಞಾನಪಡೆದುಕೊಳ್ಳುವುದು ತಪ್ಪೇನಿಲ್ಲ...ಅಲ್ಲವೇ..?

ಆರೋಗ್ಯ ವಿಮೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

೧. ಇಂಡಿವಿಜ್ಯುವಲ್ ಪಾಲಿಸಿ

೨. ಗ್ರೂಪ್ ಪಾಲಿಸಿ

ಇಂಡಿವಿಜ್ಯುವಲ್ ಪಾಲಿಸಿ:

ಈ ವಿಮೆಯ ವ್ಯಾಪ್ತಿಗೆ ವಿಮಾದಾರ ಮಾತ್ರ ಒಳಪಡುತ್ತಾನೆ. ಉದಾಹರಣೆಗೆ ನಮ್ಮ ಮನೆಯಲ್ಲಿ ನಾಲ್ಕು ಸದಸ್ಯರಿದ್ದೇವೆ ಆದರೆ ನಾನೊಬ್ಬ ಮಾತ್ರ ಆರೋಗ್ಯವಿಮೆ ಮಾಡಿಸಿದ್ದೇನೆ. ಉಳಿದ ಸದಸ್ಯರು ಆರೋಗ್ಯ ವಿಮೆ ಮಾಡಿಸಿಲ್ಲ. ನಾನು ಅನಾರೋಗ್ಯದ ಕಾರಣ ಆಸ್ಪತ್ರೆ ಸೇರಿದ್ದರೆ, ನಾನು ಹೊಂದಿರುವ ವಿಮಾ ವ್ಯಾಪ್ತಿಗೆ ಅನುಗುಣವಾಗಿ ಚಿಕಿತ್ಸಾ ವೆಚ್ಚವನ್ನು ವಿಮೆ ಮೂಲಕ ತುಂಬ ಬಹುದು.

ವಿಮಾವ್ಯಾಪ್ತಿ:

ನಾನು ಒಂದು ಲಕ್ಷದ ವಿಮೆಯನ್ನು ಮಾಡಿಸಿದ್ದೇನೆ. ಅದರ ಕಾಲಾವಧಿ ಒಂದು ವರ್ಷ ಮಾತ್ರ. ಪಾಲಿಸಿಯ ಕಾಲಾವಧಿಯಲ್ಲಿ ನನಗೆ ಏನಾದರು ರೋಗ ಬಂದಲ್ಲಿ ಅಥವಾ ಅಪಘಾತ ಸಂಭವಿಸಿದಲ್ಲಿ ಆ ಒಂದು ಲಕ್ಷ ರೂಪಾಯಿಗಳನ್ನು ನಾನು ಬಳಸಿಕೊಳ್ಳಲು ಅರ್ಹನಾಗಿರುತ್ತೇನೆ. ಪಾಲಿಸಿಯ ಕಾಲಾವಧಿ ತೀರುವ ಮುನ್ನವೆ ಪ್ರೀಮಿಯಂ(ಒಂದು ವರ್ಷಕ್ಕೆ ಸುಮಾರು ೩ ಸಾವಿರ ರೂಪಾಯಿಗಳು) ಹಣವನ್ನು ಕಟ್ಟಿ ಪಾಲಿಸಿಯನ್ನು ರಿನೀವಲ್ ಮಾಡಿಸಿಕೊಂಡರೆ ಅದು ಚಾಲ್ತಿಯಲ್ಲಿರುತ್ತದೆ ಅಥವಾ ಜೀವಂತವಾಗಿರುತ್ತದೆ.

ಇಂಡಿವಿಜ್ಯುವಲ್ ಫ್ಲೋಟರ್ ಪಾಲಿಸಿ:

ಈ ವಿಮೆಯ ವ್ಯಾಪ್ತಿಗೆ ವಿಮಾದಾರನ ಕುಟುಂಬ ಒಳಪಡುತ್ತದೆ. ಪಾಲಿಸಿಯಲ್ಲಿ ನಮೂದಿಸಿರುವ ಕುಟುಂಬದ ಎಲ್ಲಾ ಸದಸ್ಯರು ವಿಮೆಯ ಲಾಭ ಪಡೆಯಬಹುದು. ಉದಾಹರಣೆಗೆ ವಿಮೆಯ ಮೊತ್ತ(Sum Insured) ಒಂದು ಲಕ್ಷ. ನನ್ನ ಕುಟುಂಬದ ನಾಲ್ಕು ಸದಸ್ಯರ ಹೆಸರನ್ನು ನಾನು ಪಾಲಿಸಿಯಲ್ಲಿ ನೊಂದಾಯಿಸಿದ್ದೇನೆ. ಆ ಒಂದು ಲಕ್ಷ ವಿಮೆಯ ಮೊತ್ತವನ್ನು ನಾಲ್ಕು ಸದಸ್ಯರು ಸಹ ಬಳಸಿಕೊಳ್ಳಲು ಅರ್ಹರಾಗಿರುತ್ತಾರೆ.

ಗ್ರೂಪ್ ಪಾಲಿಸಿ:

ಖಾಸಗಿ ಕಂಪನಿಗಳಲ್ಲಿ ಅಥವಾ ಬೇರೆ ಬೇರೆ ಇಲಾಖೆಗಳಲ್ಲಿ ಗುಂಪು ಗುಂಪಾಗಿ ಕೆಸಲ ಮಾಡುವವರು ಈ ವಿಮೆಯ ವ್ಯಾಪ್ತಿಯಲ್ಲಿ ಬರುತ್ತಾರೆ. ಆ ನೌಕರರಿಗೆ/ಕಾರ್ಮಿಕರರಿಗೆ ಅವರು ಕೆಲಸ ಮಾಡುತ್ತಿರುವ ಕಂಪನಿಯೇ ಆರೋಗ್ಯವಿಮೆ ಮಾಡಿಸಿಕೊಡುತ್ತದೆ. ತಿಂಗಳ ವರಮಾನದಲ್ಲಿ ಒಂದಷ್ಟು ಪ್ರಿಮಿಯಂ ಹಣವನ್ನು ಕಡಿದುಕೊಳ್ಳಲಾಗುತ್ತದೆ. (ಪ್ರತಿಯೊಂದು ಕಂಪನಿಯ ತನ್ನದೇ ಆದ ನೀತಿ ನಿಯಮಗಳಿವೆ.) ಕಂಪನಿಗಳು ಗುಂಪು ಗುಂಪಾಗಿ ಒಟ್ಟಾರೆ ಪಾಲಿಸಿಗಳನ್ನು ಮಾಡಿಸುವುದರಿಂದ ಮತ್ತು ಅಧಿಕ ಪ್ರೀಮಿಯಂ ಭರಿಸುವುದರಿಂದ ಅವರಿಗೆ ವಿಶೇಷವಾದ ರಿಯಾಯಿತಿಗಳು ಸಿಗುತ್ತವೆ. ಉದಾಹರಣೆಗೆ - ಹೆರಿಗೆ ಸೌಲಭ್ಯ. ಇಂಡಿವಿಜ್ಯುವಲ್ ಪಾಲಿಸಿಯಲ್ಲಿ ಈ ಸೌಲಭ್ಯವನ್ನು ಕಲ್ಪಿಸಲಾಗುವುದಿಲ್ಲ.

ಕೆಲ ಗ್ರೂಪ್ ಪಾಲಿಸಿಯಲ್ಲಿ ಪಾಲಿಸಿಯ ನಿಯಮಗಳಾದ 4.1, 4.2, 4.3 ಅನ್ವಯಿಸುವುದಿಲ್ಲ ಆದರೆ ಇಂಡಿವಿಜ್ಯುವಲ್ ಪಾಲಿಸಿಯಲ್ಲಿ ಈ ನಿಯಮಗಳು ಅನ್ವಯಿಸುತ್ತವೆ.

ಮಾರುಕಟ್ಟೆಯಲ್ಲಿ ಈಗಿರುವ ನಾಲ್ಕು ಸರ್ಕಾರಿ ಆರೋಗ್ಯ ವಿಮೆ ಕಂಪನಿಗಳಲ್ಲಿ ಈ ಕೆಳಗಿನ ಪಾಲಿಸಿ ನಿಯಮಗಳು ಚಾಲ್ತಿಯಲ್ಲಿವೆ (ಸರ್ಕಾರಿ ಮತ್ತು ಖಾಸಗಿ ವಿಮೆ ಕಂಪನಿಗಳು ಕಾಲಕ್ಕುನುಗುಣವಾಗಿ ತಮ್ಮ ನಿಯಮಗಳನ್ನು ಬದಲಿಸುತ್ತಿರುತ್ತವೆ.)

4.1 -

ಪಾಲಿಸಿಯನ್ನು ತೆಗೆದುಕೊಳ್ಳುವ ಸಮಯದಲ್ಲಿ ವಿಮಾದಾರನಿಗಿದ್ದಂತಹ ಅಥವಾ ವಿಮೆ ತೆಗೆದುಕೊಳ್ಳುವ ಮುಂಚಿತವಾಗಿದ್ದಂತಹ ಕಾಯಿಲೆಗಳು ಮತ್ತು ಅದರಿಂದ ಉದ್ಭವಿಸುವ ತೊಂದರೆಗಳಿಗೆ ವಿಮೆ ಕಂಪನಿ ವೆಚ್ಚವನ್ನು ಭರಿಸುವುದಿಲ್ಲ. ಆದರೆ ನಾಲ್ಕು ವರ್ಷ ಸತತವಾಗಿ ಪಾಲಿಸಿಯನ್ನು ಕ್ಲೇಮ್ ಮಾಡದೇ ಇದ್ದಲ್ಲಿ, ಪಾಲಿಸಿ ತೆಗೆದುಕೊಳ್ಳುವ ಮುನ್ನ ಇದ್ದ ಎಲ್ಲಾ ಕಾಯಿಲೆಗಳಿಗೆ ವಿಮೆ ಕಂಪನಿ ವೆಚ್ಚವನ್ನು ಭರಿಸುತ್ತದೆ.
4.2 -

ಪಾಲಿಸಿ ಮಾಡಿಸಿದ 30 ದಿನಗಳ ಒಳಗೆ ನಿಯಮ 4.3 ಕ್ಕೆ ಸಂಬಂಧಪಟ್ಟ ಯಾವುದೇ ಕಾಯಿಲೆಗೂ ವಿಮೆ ಕಂಪನಿ ವೆಚ್ಚ ಭರಿಸುವುದಿಲ್ಲ.
4.3 -

ಪಾಲಿಸಿ ಮಾಡಿಸಿದ ಎರಡು ವರ್ಷದ ಒಳಗೆ ಈ ಕೆಳಗಿನ ಕಾಯಿಲೆಗಳು ವಿಮಾದಾರನಲ್ಲಿ ಕಂಡು ಬಂದಲ್ಲಿ ವಿಮೆ ಕಂಪನಿ ಆ ರೋಗಕ್ಕೆ ಖರ್ಚಾದ ಹಣವನ್ನು ಭರಿಸುವುದಿಲ್ಲ. ಅಂದರೆ ಸ್ವತಃ ರೋಗಿಯೇ ಖರ್ಚನ್ನು ಭರಿಸಿಬೇಕಾಗುತ್ತದೆ. ಆದರೆ ವಿಮಾದಾರ ಸತತವಾಗಿ ಎರಡು ವರ್ಷಗಳವರೆಗೆ ತನ್ನ ಪಾಲಿಸಿಯನ್ನು ರಿನೀವಲ್ ಮಾಡಿಸಿ, ಪಾಲಿಸಿಯನ್ನು ಚಾಲ್ತಿಯಲ್ಲಿಟ್ಟಿದ್ದರೆ ವಿಮೆ ಕಂಪನಿ ಈ ಕಾಯಿಲೆಗಳಿಗೆ ವೆಚ್ಚವನ್ನು ಭರಿಸುತ್ತದೆ.
೧.ಯಾವುದೇ ಚರ್ಮ ರೋಗಗಳು

೨.ಯಾವುದೇ ರೀತಿಯ ಒಳ ಅಥವಾ ಹೊರ ಅಮಾರಕ ರೋಗ ತಗುಲಿದ, ಗಂತಿ,ಗಂಟು,ಅರ್ಬುದ,ದುರ್ಮಾಂಸ,ಎದೆಯಲ್ಲಿ ಗಂಟು

೩.ಅಮಾರಕ ಕಿವಿ,ಮೂಗು,ಗಂಟಲು ಅಸ್ವಸ್ಥತೆ ಅಥವಾ ರೋಗ

೪.ಅಮಾರಕ ಮೂತ್ರಕೋಶದ ಅಥವಾ ಜನನೇಂದ್ರಿಯಕ್ಕೆ ಸಂಬಂಧಪಟ್ಟ ಗ್ರಂಥಿಯ ಕಾಯಿಲೆಗಳು

೫.ಕಣ್ಣಿನ ಪೊರೆ ಮತ್ತು ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಕಾಯಿಲೆಗಳು

೬.ಮಧುಮೇಹ

೭.ಜಠರಕ್ಕೆ ಸಂಬಂಧಿಸಿದ ಕಾಯಿಲೆಗಳು

೮.ಸಂಧಿವಾತ, ಕೀಲುಗಳು ಊದಿ ಕೆರಳುವ ರೋಗ

೯.ಹರ್ನಿಯ, ಎಲ್ಲಾ ರೀತಿಯ ಅಂಡವಾಯು ರೋಗ

೧೦.ಹೈಡ್ರೋಸೀಲ್

೧೧.ರಕ್ತದೊತ್ತಡ

೧೨.ರಕ್ತಸ್ರಾವಕ್ಕೆ ಸಂಬಂಧಪಟ್ಟ/ಗರ್ಭ ಜಾರುವಿಕೆ/ಸಂಬಂಧಪಟ್ಟ ಕಾಯಿಲೆಗಳು

೧೩.ಕೀಲು ನೋವು

೧೪.ಪೈಲ್ಸ್ - ಮೂಲವ್ಯಾಧಿ ರೋಗ

೧೫.ಪಿಲಾನಿಡಲ್ ಸೈನುಸ್, ಸೈನಸೈಟಿಸ್ ತೊಂದರೆಗಳು

೧೬.ಬೆನ್ನುಹುರಿ, ಬೆನ್ನು ಮೂಳೆ ಕುಸಿತ (ಅಪಘಾಗ ರಹಿತ)

೧೭.ಪಿತ್ತಜನಕಾಂಗ ಮತ್ತು ಪಿತ್ತನಾಳದ ಕಲ್ಲು

೧೮.ಮೂತ್ರಜನಕಾಂಗದ ಕಲ್ಲುಗಳು

೧೯.ಜನ್ಮಜಾತ ಕಾಯಿಲೆಗಳು

೨೦.ವೆರಿಕೋಜ್ ವೈನ್ಸ್/ವೆರಿಕೋಜ್ ಹುಣ್ಣು

ಪಾಲಿಸಿ ಮಾಡಿಸಿದ ನಾಲ್ಕು ವರ್ಷದ ಒಳಗೆ ಈ ಕೆಳಗಿನ ಕಾಯಿಲೆಗಳು ವಿಮಾದಾರನಲ್ಲಿ ಕಂಡು ಬಂದಲ್ಲಿ ವಿಮೆ ಕಂಪನಿ ಆ ರೋಗಕ್ಕೆ ಖರ್ಚಾದ ಹಣವನ್ನು ಭರಿಸುವುದಿಲ್ಲ. ಅಂದರೆ ಸ್ವತಃ ರೋಗಿಯೇ ಖರ್ಚನ್ನು ಭರಿಸಿಬೇಕಾಗುತ್ತದೆ. ಆದರೆ ವಿಮಾದಾರ ಸತತವಾಗಿ ನಾಲ್ಕು ವರ್ಷಗಳವರೆಗೆ ತನ್ನ ಪಾಲಿಸಿಯನ್ನು ರಿನೀವಲ್ ಮಾಡಿಸಿ, ಪಾಲಿಸಿಯನ್ನು ಚಾಲ್ತಿಯಲ್ಲಿಟ್ಟಿದ್ದರೆ ವಿಮೆ ಕಂಪನಿ ಈ ಕಾಯಿಲೆಗಳಿಗೆ ವೆಚ್ಚವನ್ನು ಭರಿಸುತ್ತದೆ.

೧.ವಯಸ್ಸಿಗ ಸಂಬಂಧಪಟ್ಟ ಕೀಲುನೋವು/ಆಸ್ಟಿಯೋ ಆರ್ಥ್ರೈಟಿಸ್/ಆಸ್ಟಿಯೋ ಪೊರೋಸಿಸ್

೨.ಕೀಲು ಬದಲಾವಣೆ

ಈ ಕೆಳಗೆ ನಮೂದಿಸಿರುವ ಕಾಯಿಲೆ/ಶಸ್ತ್ರಚಿಕಿತ್ಸೆಗಳನ್ನು ಹೊರತುಪಡಿಸಿ ಬೇರಾವ ಕಾಯಿಲೆಗಳಿಗು ಕನಿಷ್ಟಪಕ್ಷ 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಲೇ ಬೇಕು. ಇಲ್ಲವಾದಲ್ಲಿ ವಿಮಾದರನೇ ಆಸ್ಪತ್ರೆ ಬಿಲ್ಲನ್ನು ಕೈಯಿಂದ ಕಟ್ಟಬೇಕಾಗುತ್ತದೆ. ವಿಮಾದಾರ ಕೇವಲ ತಪಾಸಣೆಗಾಗಿ ಮಾತ್ರ ಆಸ್ಪತ್ರೆಯಲ್ಲಿ ಭರ್ತಿಯಾಗಿ ೨೪ ತಾಸು ಕಳೆದಿದ್ದರೂ ಸಹ ವಿಮೆ ಕಂಪನಿ ಖರ್ಚನ್ನು ಭರ್ತಿಸುವುದಿಲ್ಲ. (ಉದಾಹರಣೆಗೆ - ನನಗೆ ಬೆನ್ನುನೋವು, MRI ಮಾಡಿಸಿಕೊಂಡೆ, ರಿಪೋರ್ಟಿನಲ್ಲಿ ಎಲ್ಲಾ ನಾರ್ಮಲ್ ಇದೆ ಅಂತ ಬಂತು. ವೈದ್ಯರು ಗುಳಿಗೆಗಳನ್ನು ಮಾತ್ರ ಬರೆದು ಕೊಟ್ಟರು - ಅಂತಹ ಸಂದರ್ಭದಲ್ಲಿ ವಿಮೆ ಕಂಪನಿ ಖರ್ಚು ಭರಿಸುವುದಿಲ್ಲ. ಕಾಯಿಲೆಗೆ ಆಸ್ಪತ್ರೆಯಲ್ಲಿ ತಕ್ಕ ಚಿಕಿತ್ಸೆ ಕೊಡಲೇಬೇಕು ಆಗ ಮಾತ್ರ ವಿಮೆ ಕಂಪನಿ ಖರ್ಚನ್ನು ಭರಿಸುತ್ತದೆ.)

೧.ರೇಬಿಸ್ ಲಸಿಕೆ

೨.ಅಪೆಂಡಿಸೆಕ್ಟಮಿ

೩.ಸಿ.ಎ.ಜಿ.

೪.ಕಾರೋನರಿ ಆನ್ಜಿಯೋಪ್ಲಾಸ್ಟಿ

೫.ದಂತ ಚಿಕಿತ್ಸೆ(ಅಪಘಾತಕ್ಕೆ ಒಳಗಾಗಿದ್ದರಿ ಮಾತ್ರ)

೬.ಗರ್ಭಪಾತ

೭.ಕಣ್ಣಿನ ಶಸ್ತ್ರಚಿಕಿತ್ಸೆ

೮.ಮೂಳೆ ಮುರಿತ/ಜಾರುವಿಕೆ

೯.ಜೀರ್ಣಾಂಗವ್ಯೂಹಕ್ಕೆ ಸಂಬಂಧಿತ

೧೦.ಡಯಾಲಿಸಿಸ್

೧೧.ಹೈಡ್ರೊಸೀಲ್

೧೨.ಗರ್ಭಕೋಶ ಶಸ್ತ್ರಚಿಕಿತ್ಸೆ

೧೩.ಹರ್ನಿಯಾ

೧೪.ಕಿಡ್ನಿ ಕಲ್ಲು

೧೫.ಕಿಮೋಥೆರಪಿ

೧೬.ಪೈಲ್ಸ್/ಫಿಸ್ತುಲ

೧೭.ಪ್ರೊಸ್ಟೇಟ್

೧೮.ರೇಡಿಯೋಥೆರಪಿ

೧೯.ಸೈನಸೈಟಿಸ್

೨೦.ಪಿತ್ತಜನಕಾಂಗದ ಕಲ್ಲು

೨೧.ಗಂಟಲ ಗಂಟಿನ ಶಸ್ತ್ರಚಿಕಿತ್ಸೆ

೨೨.ಮೂತ್ರಜನಕಾಂಗಕ್ಕೆ ಸಂಬಂಧಿತ

ಸೂಚನೆ: ಅನಾವಶ್ಯಕ ಗರ್ಭಪಾತಕ್ಕೆ ವಿಮೆ ಕಂಪನಿ ಖರ್ಚು ಭರಿಸುವುದಿಲ್ಲ.

ನಗದು ರಹಿತ ಕ್ಲೇಮ್(Cashless):

ಈ ನಡುವೆ "ಕ್ಯಾಶ್ಲೆಸ್" ಎನ್ನುವ ಪದ ಬಹಳ ಚಾಲ್ತಿಯಲ್ಲಿದೆ. ಈ ಪ್ಲಾನ್ ಪ್ರಕಾರ ಆಸ್ಪತ್ರೆಯ ಖರ್ಚುಗಳನ್ನು ಭರಿಸುವ ಕೆಲಸವನ್ನು ಆಸ್ಪತ್ರೆ ಮತ್ತು ವಿಮೆ ಕಂಪನಿ ನೇರವಾಗಿ ಮಾಡಿಕೊಳ್ಳುತ್ತವೆ. (ಆಸ್ಪತ್ರೆಗೆ ನೀವು ಭರ್ತಿಯಾಗಲು ಹಣ ತೆಗೆದುಕೊಂಡು ಹೋಗುವ ಬದಲು, ವಿಮೆ ಕಂಪನಿ/ಟಿ.ಪಿ.ಎ ಕಂಪನಿ ನಿಮಗೆ ನೀಡಿರುವ ಗುರುತಿನ ಚೀಟಿ ಕೊಂಡೊಯ್ಯಬೇಕಾಗುತ್ತದೆ)

ಟಿ. ಪಿ. ಎ. (TPA - Third Party Administration):

ಎಲ್ಲ ಖಾಸಗಿ ಮತ್ತು ಸರ್ಕಾರಿ ವಿಮೆ ಕಂಪನಿಗಳು ತಮ್ಮ ಅತಿಯಾದ ಕೆಲಸದ ಭಾರ ತಾಳಲಾರದೆ, ಕೆಲಸದ ಕಾರ್ಯವೈಖರಿಯನ್ನು ಉತ್ತಮಪಡಿಸಲು ಮತ್ತು ಅತಿ ಶೀಘ್ರವಾಗಿ ವಿಮೆದಾರನಿ ಸಹಾಯ ಕಲ್ಪಿಸಲು, ಸರ್ಕಾರದ ಕಾನೂನಿಡಿ ನೊಂದಣಿಯಾಗಿರುವ ಹೊರಗುತ್ತಿಗೆ ಕಂಪನಿಗಳಿಗೆ ತಮ್ಮ ಕೆಲಸವನ್ನು ವರ್ಗಾಯಿಸಿವೆ. ಆ ಹೊರಗುತ್ತಿಗೆ ಕಂಪನಿಗಳಿಗೆ TPA ಕಂಪನಿ ಎನ್ನುತ್ತಾರೆ. ವಿಮೆದಾರ ಯಾವುದೇ ವಿಮೆ ಕಂಪನಿಗೆ ನೇರವಾಗಿ ಸಂಪರ್ಕಿಸುವ ಬದಲು ಟಿ.ಪಿ.ಎ. ಕಂಪನಿಗಳ ಸಂಪರ್ಕಕ್ಕೆ ಒಳಪಡುತ್ತಾನೆ. ವಿಮೆದಾರರಿಗೆ ಸಹಾಯ ಮಾಡಲು TPA ಗಳು ಕಾಲ್ ಸೆಂಟರ್ ಗಳ ವ್ಯವಸ್ಥೆ ಮಾಡಿವೆ.(ವಿಮೆದಾರ ತನ್ನ ಟಿಪಿಎ ಕಂಪನಿಯ ಫೋನ್ ನಂಬರ್ ತಿಳಿದುಕೊಳ್ಳುವುದು ಉತ್ತಮ).

ಉದಾಹರಣೆಗೆ - ನಾನು ಅರೋಗ್ಯವಿಮೆಯನ್ನು ನ್ಯಾಶನಲ್ ಇನ್ಶೂರೆನ್ಸ್ ಕಂಪನಿಯಿಂದ ತೆಗೆದುಕೊಂಡೆ. ಆಗ ಅವರು ನನಗೆ ಒಂದು ಪಾಲಿಸಿಯ ಪ್ರತಿಯನ್ನು ಕೊಡುತ್ತಾರೆ. ಅದರಲ್ಲಿ ಪಾಲಿಸಿಯ ಕಾಲಾವಧಿ,ಪಾಲಿಸಿಯ ಮೊತ್ತ(Sum Insured),ನನ್ನ ಹೆಸರು,ವಯಸ್ಸು,ಲಿಂಗ,ಪಾಲಿಸಿಯ ನಂಬರ್,ಪಾಲಿಸಿಯ ಕಾಯಿದೆ ಕಾನೂನು ಇತ್ಯಾದಿ ಇರುತ್ತದೆ. ಅದನ್ನು ನಾವು ಜೋಪಾನವಾಗಿಟ್ಟುಕೊಳ್ಳಬೇಕಾಗುತ್ತದೆ. ಏಕೆಂದರೆ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಬಂದರೆ ಪಾಲಿಸಿ ನಂಬರ್ ಬಹಳ ಮುಖ್ಯ.

ನ್ಯಾಶನಲ್ ಇನ್ಶೂರೆನ್ಸ್ ಕಂಪನಿಯವರು ನನ್ನ ಪಾಲಿಸಿಯ ಎಲ್ಲಾ ವಿವರಗಳನ್ನು ಟಿ.ಪಿ.ಎ. ಕಂಪನಿಗೆ ಕಳುಹಿಸುತ್ತಾರೆ. (ಸದ್ಯಕ್ಕೆ ೨೮ ಟಿ.ಪಿ.ಎ. ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ). ಆ ಟಿ.ಪಿ.ಎ. ಕಂಪನಿಗಳು ಪಾಲಿಸಿದಾರನ ವಿಳಾಸಕ್ಕೆ - ವಿಮಾದಾರರೇ ನೀವು ನಮ್ಮ ಟಿ.ಪಿ.ಎ. ಕಂಪನಿಯ ಕಾರ್ಯವ್ಯಾಪ್ತಿಯಲ್ಲಿ ಒಳಪಡುತ್ತೀರಿ ಎಂದು ವಿಮಾದಾರನಿಗೆ ಖಚಿತ ಪಡಿಸಲು, ಮುಂದೆ ಯಾವುದೇ ರೀತಿಯ ಮಾಹಿತಿ ಅಥವಾ ಸೇವೆ ಪಡೆಯಲು ಒಂದು ಗುರುತಿನ ಚೀಟಿಯನ್ನು(Identity Card) ಕಳುಹಿಸುತ್ತಾರೆ. ಅದರಲ್ಲಿ ವಿಮಾದಾರನಿಗೆ ಒಂದು ವಿಶೇಷ ಗುರುತಿನ ಸಂಖ್ಯೆಯನ್ನು ಕೊಟ್ಟಿರಲಾಗುತ್ತದೆ. ವಿಮಾದಾರ ಆಸ್ಪತ್ರೆಗೆ ಭರ್ತಿಯಾಗಬೇಕಾದರೆ ಆ ಐ.ಡಿ. ಕಾರ್ಡನ್ನು ಕೊಂಡೊಯ್ಯಬೇಕಾಗುತ್ತದೆ. ಆಗ "ಕ್ಯಾಶ್ಲೆಸ್ ಫೆಸಿಲಿಟಿ" ಪಡೆಯಲು ಸಹಾಯವಾಗುತ್ತದೆ.

ಆಸ್ಪತ್ರೆಯಲ್ಲಿ ಭರ್ತಿಯಾಗಲು ನೀವು ಹೋದಿರಿ ಎಂದಿಟ್ಟುಕೊಳ್ಳೋಣ. ಅಲ್ಲಿ - ನನ್ನ ಬಳಿ ಹೆಲ್ತ್ ಇನ್ಶೂರೆನ್ಸ್ ಇದೆ, ಕ್ಯಾಶ್ಲೆಸ್ ಫೆಸಿಲಿಟಿ ಕೊಡಿ ಎಂದು ಕೇಳಬೇಕು. ಆಗ ಅವರು ನಿಮ್ಮದು ಯಾವ ಟಿ.ಪಿ.ಎ. ಎಂದು ಕೇಳುತ್ತಾರೆ. ಅವರ ಹತ್ತಿರ ಎಲ್ಲಾ ಟಿ.ಪಿ.ಎ. ಗಳ "ಕ್ಲೇಮ್ ಫಾರ್ಮ್" ಗಳಿರುತ್ತವೆ. ಆ ಫಾರ್ಮಿನಲ್ಲಿ ನಿಮಗೆ ಟಿ.ಪಿ.ಎ. ಕಂಪನಿ ಕೊಟ್ಟಿರುವ ಗುರುತಿನ ಸಂಖ್ಯೆ ಅಥವಾ ಪಾಲಿಸಿ ಸಂಖ್ಯೆ,ನಿಮ್ಮ ಹೆಸರು,ವಯಸ್ಸು,ಲಿಂಗ,ಮೊಬೈಲ್ ನಂಬರ್ ಬರೆದು, ರುಜು ಮಾಡಿ ಕೊಡಬೇಕು. ನೀವು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಎಮ್ಪ್ಲಾಯಿ ನಂಬರ್ ನಮೂದಿಸಬೇಕು. ಅವರು ಆ ಫಾರ್ಮನ್ನು ನಿಮಗೆ ಯಾವ ವೈದ್ಯರು ನೋಡುತ್ತಿದ್ದಾರೋ ಅವರಿಗೆ ಕೊಡುತ್ತಾರೆ. ಆ ವೈದ್ಯರು ನಿಮ್ಮ ರೋಗಲಕ್ಷಣಗಳನ್ನು ಮತ್ತು ಅದಕ್ಕೆ ಬೇಕಾದ ಚಿಕಿತ್ಸೆ ಹಾಗೂ ಅದಕ್ಕೆ ತಗಲುವ ವೆಚ್ಚವನ್ನು ಅದರಲ್ಲಿ ಭರ್ತಿಮಾಡಿ ಅವರಿಗೆ ಹಿಂತಿರಿಗಿಸುತ್ತಾರೆ. ನಿಮಗೆ ಆಸ್ಪತ್ರೆಯಲ್ಲಿ ಭರ್ತಿಮಾಡಿಕೊಂಡು, ನಂತರ ಆ ಕ್ಲೇಮ್ ಫಾರ್ಮನ್ನು ಆಸ್ಪತ್ರೆಯವರು ಟಿ.ಪಿ.ಎ. ಕಂಪನಿಗೆ ಫ್ಯಾಕ್ಸ್ ಮಾಡುತ್ತಾರೆ ಅಥವಾ ಅಂತರ್ಜಾಲದ ಸಹಾಯದಿಂದ ಕಳುಹಿಸುತ್ತಾರೆ.ಆ ಫ್ಯಾಕ್ಸ್ ಟಿ.ಪಿ.ಎ. ಗೆ ಬಂದಾಕ್ಷಣ ರೋಗಿಯ ವಿವರಗಳನ್ನು ಟಿ.ಪಿ.ಎ. ಕಂಪನಿ ತನ್ನ ತಂತ್ರಾಂಶದಲ್ಲಿ ಸಂಗ್ರಹಿಸಿಕೊಂಡು ನಂತರ ಟಿ.ಪಿ.ಎ. ಕಂಪನಿಯ ವೈದ್ಯರ ಬಳಿ ಕಳುಹಿಸುತ್ತದೆ (ಎಲ್ಲಾ ಕೆಲಸಗಳೂ ಅಂತರ್ಜಾಲದ ಮುಖಾಂತರ ನಡೆಯುತ್ತವೆ). ಟಿ.ಪಿ.ಎ. ವೈದ್ಯರು ರೋಗಿಯ ಬಗ್ಗೆ ಆಸ್ಪತ್ರೆಯವರು ಕಳುಹಿಸಿರುವ ಎಲ್ಲಾ ವಿವರಗಳನ್ನು ಓದುತ್ತಾರೆ. ನಂತರ ಪಾಲಿಸಿಯ ನಿಯಮಗಳ ಪ್ರಕಾರ ಕ್ಯಾಶ್ಲೆಸ್ ಸೌಲಭ್ಯ ಪಡೆಯಲು ವಿಮಾದಾರ ಅರ್ಹನಾಗಿದ್ದರೆ, ಆಸ್ಪತ್ರೆಯವರು ಎಷ್ಟು ಹಣ ಕೇಳುತ್ತಿದ್ದಾರೆ, ಎಷ್ಟು ಕೊಡಬಹುದು ಎಂದು ತೀರ್ಮಾನಿಸಿ , ನಿಯಮಗಳ ಪ್ರಕಾರ ನಾವು ಇಷ್ಟು ಹಣವನ್ನು ಬಿಡುಗಡೆ ಮಾಡಿದ್ದೇವೆ ಎಂದು ಆಸ್ಪತ್ರೆಗೆ ಫ್ಯಾಕ್ಸ್ ಕಳುಹಿಸುತ್ತಾರೆ. (ಕೆಲವು ರೋಗಗಳಿಗೆ ಪ್ಯಾಕೇಜ್ ಗಳಿರುವುದುಂಟು).

ಹಣ ಬಿಡುಗಡೆ ಮಾಡುವ ಮೊದಲು, ಇನ್ನೇನಾದರು ಆಸ್ಪತ್ರೆಯಿಂದ ಹೆಚ್ಚಿನ ಮಾಹಿತಿ ಬೇಕಾದರೆ, ನಮಗೆ ಇಂತಹ ಮಾಹಿತಿ ಬೇಕೆಂದು ಆಸ್ಪತ್ರೆಗೆ ಫ್ಯಾಕ್ಸ್ ಕಳುಹಿಸುತ್ತಾರೆ, ಉತ್ತರ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ.

ಕೆಲವು ಸಂದರ್ಭಗಳಲ್ಲಿ ವಿಮಾದಾರ ಪಾಲಿಸಿಯ ನಿಯಮಗಳ ಪ್ರಕಾರ ಕ್ಯಾಶ್ಲೆಸ್ ಸೌಲಭ್ಯ ಪಡೆಯಲು ಅರ್ಹನಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ. ಈ ನಿಮ್ಮ ರೋಗಿ ಪಾಲಿಸಿಯ ನಿಯಮಗಳ ಪ್ರಕಾರ ಕ್ಯಾಶ್ಲೆಸ್ ಸೌಲಭ್ಯ ಪಡೆಯಲು ಅರ್ಹನಾಗಿರುವುದಿಲ್ಲ, ದಯವಿಟ್ಟು ಎಲ್ಲಾ ವೆಚ್ಚವನ್ನು ರೋಗಿಯಿಂದ ಪಡೆದುಕೊಳ್ಳಿ ಎಂದು ಆಸ್ಪತ್ರೆಗೆ ಫ್ಯಾಕ್ಸ್ ಮೂಲಕ ಸಂದೇಶವನ್ನು ಕಳುಹಿಸಲಾಗುತ್ತದೆ. ಇದೆಲ್ಲಾ ಆರು ಗಂಟೆಗಳಲ್ಲಿ ನಡೆದು ಹೋಗುತ್ತದೆ. ರೋಗಿ ಗುಣವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಮಯದಲ್ಲಿ ಫೈನಲ್ ಬಿಲ್ ಪುನಃ ಟಿ.ಪಿ.ಎ. ಗೆ ಬರುತ್ತದೆ. ಆಗ ಟಿ.ಪಿ.ಎ. ವೈದ್ಯರು ಡಿಸ್ಚಾರ್ಜ್ ಸಮ್ಮರಿಯನ್ನು ಸಂಪೂರ್ಣವಾಗಿ ವೀಕ್ಷಿಸಿ, ಫೈನಲ್ ಬಿಲ್ಲನ್ನು ಜಾಲಾಡುತ್ತಾರೆ. ಎಲ್ಲವು ಸರಿಯಾಗಿದ್ದಲ್ಲಿ ಬಿಲ್ಲನ್ನು ಅಪ್ರೂವ್ ಮಾಡುತ್ತಾರೆ. ಈ ಫ್ಯಾಕ್ಸ್ ಆಸ್ಪತ್ರೆಗೆ ತಲುಪಿದಾಕ್ಷಣ ಆಸ್ಪತ್ರೆಯಿಂದ ರೋಗಿ ಹೊರಗೆ ಹೋಗಲು ಅನುಮತಿ ಸಿಗುತ್ತದೆ.

ರೋಗಿಯ ಎಲ್ಲಾ ವರ್ಜಿನಲ್ ಡಾಕ್ಯುಮೆಂಟುಗಳನ್ನು ಆಸ್ಪತ್ರೆಯಿಂದ ಟಿ.ಪಿ.ಎ.ಗೆ ತರಸಿಕೊಳ್ಳುತ್ತಾರೆ. ಅದನ್ನು ಕೂಲಂಕುಶವಾಗಿ ವೀಕ್ಷಿಸಿ, ನಂತರ ಆಸ್ಪತ್ರೆಗೆ ಇ-ಸರ್ವಿಸ್ ಮೂಲಕ ಹಣ ಪಾವತಿ ಮಾಡುತ್ತಾರೆ.

ಕೆಲವರು ಕ್ಯಾಶ್ಲೆಸ್ ಸೌಲಭ್ಯಕ್ಕೆ ಹೋಗಲ್ಲ. ತಾವೆ ಸ್ವತಃ ಆಸ್ಪತ್ರೆಯ ಬಿಲ್ಲನ್ನು ಕಟ್ಟಿ ನಂತರ ಟಿ.ಪಿ.ಎ. ಗೆ ತಮ್ಮ ಎಲ್ಲಾ ವರ್ಜಿನಲ್ ಬಿಲ್ಲುಗಳನ್ನು,ಆಸ್ಪತ್ರೆಯ ದಾಖಲೆಗಳನ್ನು ಕಳುಹಿಸಿ ಹಣವನ್ನು ಪಡೆಯುತ್ತಾರೆ. ಟಿ.ಪಿ.ಎ. ಕಂಪನಿ ದಾಖಲೆಗಳನ್ನು ಕೂಲಂಕುಶವಾಗಿ ವೀಕ್ಷಿಸಿ ವಿಮಾದಾರ ಅರ್ಹನಾಗಿದ್ದರೆ ಮಾತ್ರ ಅವನ ವಿಳಾಸಕ್ಕೆ ಚೆಕ್ ಕಳುಹಿಸುತ್ತದೆ.(ಇದಕ್ಕೆ ೩ ತಿಂಗಳುಗಳು ಹಿಡಿಯುತ್ತವೆ)

ನನ್ನದು ಒಂದೇ ವಿನಂತಿ. ಆರೋಗ್ಯವಿಮೆ ಮಾಡಿಸುವುದು ಬಿಡುವುದು ನಿಮಗೆ ಬಿಟ್ಟಿದ್ದು. ಹಾಗೆ ಮಾಡಿಸಲು ಇಷ್ಟವಿದ್ದರೆ, ಕೂಲಂಕುಶವಾಗಿ ಪಾಲಿಸಿಯ ಕಂಡೀಷನ್ ಗಳನ್ನು ಓದಿ. ಬೇಕಾದರೆ ಏಜಂಟ್ ಹತ್ತಿರ ಎರಡು ದಿನ ಸಮಯ ತೆಗೆದುಕೊಳ್ಳಿ. ನಿಮಗೆ ಏನಾದರು ಸಂಶಯಗಳಿದ್ದರೆ ಆತನಿಗೆ ಕೇಳಿ ತಿಳಿದುಕೊಳ್ಳಿ. ಕಮೀಷನ್ ಆಸೆಗೆ ಅವರು ಹೆಚ್ಚಿನ ವಿವರಗಳನ್ನು ನೀಡದೆಯೇ ಪಾಲಿಸಿಯನ್ನು ನಿಮಗೆ ಮಾರಿ ಬಿಡುತ್ತಾರೆ.

ಕೆಲವರು ಇಂಡಿವಿಜ್ಯುವಲ್ ಪಾಲಿಸಿ ಮಾಡಿಸಿ ಹೆರಿಗೆಗಾಗಿ ಹೋಗಿ ಆಸ್ಪತ್ರೆಯಲ್ಲಿ ಭರ್ತಿಯಾಗಿರುತ್ತಾರೆ. ಬಿಲ್ಲು ಐವತ್ತು ಸಾವಿರ ಆಗಿರುತ್ತದೆ. ಆಮೇಲೆ ಹೊತ್ತಾಗುತ್ತೆ ಹೆರಿಗೆ ಪಾಲಿಸಿ ನಿಮಯಗಳಿಗೆ ಒಳಪಡುವುದಿಲ್ಲ ಅಂತ. ಆಗ ಶುರು ನೋಡಿ ಅವರ ಪರದಾಟ....

ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರು ದಯವಿಟ್ಟು ಡೀಲಕ್ಸ್ ರೂಂ ಗೆ ಹೋಗಬೇಡಿ. 30% ಬಿಲ್ಲು ಹೆಚ್ಚು ಬರುತ್ತೆ. ಆ 30% ಹಣ ನಿಮ್ಮ ಪಾಲಿಸಿಯಲ್ಲಿ ಉಳಿದಿದ್ದರೆ ನಾಳೆ ನಿಮಗೇ ಉಪಯೋಗ ಆಗಬಹುದು ಅಲ್ಲವೆ...? (ಆಸ್ಪತ್ರೆಗೆ ಭರ್ತಿಯಾಗುವ ಮುನ್ನ ನಿಮ್ಮ ಕಂಪನಿಯ ನಿಯಮಗಳ ಪ್ರಕಾರ ನೀವು ಯಾವ ರೂಮ್ ಗೆ ಭರ್ತಿಯಾಗುವ ಅರ್ಹತೆ ಹೊಂದಿದ್ದೀರಿ ಎಂದು ತಿಳಿದುಕೊಳ್ಳಿ.)(ಕೆಲವು ಕಂಪನಿಗಳಲ್ಲಿ ನೌಕರರು ಕೊ-ಪೆ ಕೊಡಬೇಕಾಗುತ್ತದೆ. ಉದಾಹರಣೆಗೆ - ಬಿಲ್ಲಿನ ಮೊತ್ತವನ್ನು ನೀವು 10% ಕಟ್ಟಬೇಕಾಗುತ್ತದೆ ಉಳಿದ ಹಣ ಕಂಪನಿ ಕಟ್ಟುತ್ತದೆ)

ಕೆಲ ಕಂಪನಿಗಳಲ್ಲಿ ಅಂಬ್ರೆಲ್ಲಾ ಕವರ್/ಬಫರ್ ಅಮೌಂಟ್ ಅಂತ ಪ್ರತ್ಯೇಕ ಠೇವಣಿ ಇರುತ್ತದೆ. ಕೆಲವೊಮ್ಮೆ ನಿಮ್ಮ ಪಾಲಿಸಿಯ ಎಲ್ಲಾ ವಿಮೆಮೊತ್ತ ಖರ್ಚಾಗಿ ಹೋದರೆ, ನಿಮ್ಮ ಕಂಪನಿ ಬಫರ್ ಅಮೌಂಟ್ ನಿಂದ ಟಿ.ಪಿ.ಎ. ಕಂಪನಿಯ ಮೂಲಕ ಆಸ್ಪತ್ರೆಗೆ ಹಣ ಬಿಡುಗಡೆ ಮಾಡುತ್ತದೆ. ನಿಮ್ಮ ಹೆಚ್.ಆರ್. ಬಳಿ ಕೇಳಿ ತಿಳಿದುಕೊಳ್ಳಿ.(ಪ್ರತಿಯೊಂದು ಕಂಪನಿಯ ತನ್ನದೇ ಆದ ನಿಯಮಗಳಿವೆ)

ಮಾನಸಿಕ ಕಾಯಿಲೆಗಳಿಗೆ,ಏಡ್ಸ್ ಮತ್ತು ಇನ್ನಿತರೆ ಗುಪ್ತ ಕಾಯಿಲೆಗಳಿಗೆ,ಮದ್ಯಪಾನ ಸಂಬಂಧಿತ ಕಾಯಿಲೆಗಳಿಗೆ,ಭಯೋತ್ಪಾದನೆಯಿಂದ ಸಂಭವಿಸಿದ ಅನಾಹುತಗಳಿಗೆ ಯಾವುದೇ ಆರೋಗ್ಯವಿಮೆಯಲ್ಲಿ ಸ್ಥಾನವಿಲ್ಲ.

ನಿಮಗೆ ವಿಮೆ ಕಂಪನಿ ಅಥವಾ ಟಿ.ಪಿ.ಎ ಕಂಪನಿಯ ಸೇವಗಳು ಇಷ್ಟವಾಗದಿದ್ದಲ್ಲಿ ಬೇರೆ ವಿಮೆ ಕಂಪನಿ ಅಥವಾ ಟಿ.ಪಿ.ಎ ಕಂಪನಿಗೆ ಯಾವುದೇ ತೊಂದರೆ ಇಲ್ಲದೆ ವರ್ಗಾವಣೆಗೊಳ್ಳಬಹುದಾದ ಕಾನೂನು ಶೀಘ್ರವೇ ಬರಲಿದೆ.

-ಜಬೀವುಲ್ಲಾ ಖಾನ್

0 comments:

Post a Comment