ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
1:48 PM

ಮೈ ನಡುಗುತ್ತದೆ...

Posted by ekanasu

ವಿಶೇಷ ವರದಿ

ಪುತ್ತೂರು: ಅಂದು 2010 ಮೇ 22. ದುಬೈನಿಂದ ಹೊರಟ ಏರ್ಇಂಡಿಯಾ 165 ಜನರನ್ನು ಹೊತ್ತುಕೊಂಡು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ತಲಪಿತ್ತು.ಇನ್ನೇನು ವಿಮಾನ ಭೂಸ್ಪರ್ಶವಾಗಿದೆ. ಅಲ್ಲಿದ್ದ ಎಲ್ಲರೂ ತಮ್ಮವರನ್ನು ಕಾಣಲು , ತನ್ನ ಕೆಲಸಗಳ ಬಗ್ಗೆ ಯೋಚಿಸುತ್ತಿದ್ದರು. ಆದರೆ ಆ ಆಸೆ ಈಡೇರಿದ್ದು ಕೇವಲ 8 ಮಂದಿಗೆ ಮಾತ್ರಾ. ಉಳಿದ 158 ಮಂದಿ ಸಜೀವ ದಹನವಾದರು. ಆ ಕ್ಷಣವನ್ನು ನೆನಪಿಸಿಕೊಂಡರೆ ಭಯಾನಕ ಎಂದು ದುರಂತದಲ್ಲಿ ಬದುಕುಳಿದ ಪುತ್ತೂರಿನ ಅಬ್ದುಲ್ಲಾ ಹೇಳುತ್ತಾರೆ.158 ಜನರನ್ನು ಬಲಿ ತೆಗೆದುಕೊಂಡ ಅತ್ಯಂತ ದೊಡ್ಡ ದುರಂತದಲ್ಲಿ ಬದುಕುಳಿದ 8 ಜನರ ಪೈಕಿ ಪುತ್ತೂರಿನ ಇಸ್ಮಾಯಿಲ್ ಪುತ್ತೂರು ಅಬ್ದುಲ್ಲಾ ಒಬ್ಬರು. ಈ ದುರಂತವನ್ನು ಅವರು ನೆನೆಪಿಸಿಕೊಂಡು ಇಂದಿಗೂ ಒಮ್ಮೆ ನಿಟ್ಟುಸಿರು ಬಿಡುತ್ತಾರೆ. ವಿಮಾನ ಭೂಸ್ಪರ್ಶವಾಗಿತ್ತು. ಆಗ ಸಮಯ ಬೆಳಗ್ಗೆ 6.35 ರ ಹೊತ್ತು. ಅದ್ಯಾವುದೋ ಕೆಲಸವಿತ್ತು , ಜೊತೆಗೆ ಅನಾರೋಗ್ಯ ಪೀಡಿತ ತಂದೆಯನ್ನು ನೋಡುವ ತವಕದಲ್ಲಿದ್ದ ಅಬ್ದುಲ್ಲಾರಿಗೆ ಒಂದು ಕ್ಷಣ ಏನಾಗುತ್ತಿದೆ ಎಂತ ಅರಿವಾಗಲೇ ಇಲ್ಲವಂತೆ , ಇಡೀ ವಿಮಾನ ಅಲುಗಾಡಿತು , ದೊಡ್ಡ ಕಂದಕ್ಕೆ ಉರುಳಿ ಬಿದ್ದಾಗ ಹೊತ್ತಿ ಉರಿಯುತ್ತಿತ್ತು , ಕಣ್ಣೆದುರೇ ಸಜೀವ ದಹನವಾಗುತ್ತಿದೆ , ಚೀರಾಟ , ಗೋಳಾಟ ಕೇಳುತ್ತಿದೆ ಆದರೂ ಅಸಾಹಾಯಕ.
ಹಾಕಿದ್ದ ಸೀಟ್ ಬೆಲ್ಟ್ನ ಸಂದಿನಿಂದ ಜಾರಿ ನಿಂತಿದ್ದ ಅಬ್ದುಲ್ಲಾರ ಕೆಳಗೆ ಬೆಂಕಿ ಉರಿಯುತ್ತಿತ್ತು!. ಕೊಂಚ ಎಚ್ಚರ ತಪ್ಪಿದರೂ ಬೆಂಕಿಗೆ ಬೀಳುವ ಸನ್ನಿವೇಶ ಅದು. ಒಂದು ಕಾಲಿನಿಂದ ಅದ್ಯಾವುದೋ ವಸ್ತುವಿಗೆ ಮೆಟ್ಟಿ ನಿಂತು ಅಲ್ಲಿಂದ ಹಾರಿ ಬಂದು ಪೇಟೆ ಸೇರಿ ಆಸ್ಪತ್ರೆಗೆ ದಾಖಲಾದರು.ಅವರಿಗೆ ಕೈ ಹಾಗೂ ತಲೆಯ ಭಾಗವು ಸುಟ್ಟಿತ್ತು. ವಿಮಾನ ದುರಂತದ ಆ ಕಾಲದಲ್ಲಿ ಅದ್ಯಾವುದೋ ಮಗು ರಕ್ಷಣೆಗಾಗಿ ಬೊಬ್ಬಿಡುತ್ತಿತ್ತಂತೆ , ಆದರೆ ಅರೆ ಕ್ಷಣದಲ್ಲೇ ಅಲ್ಲೇ ಬೆಂಕಿ ಹತ್ತಿಕೊಂಡು ಚೀರಾಟ , ಗೋಳಾಟಗಳೆಲ್ಲಾ ನಿಂತು ಹೋದವು ಎಂದು ವಿವರಿಸುವ ಅವರು , ಇಡೀ ದುರಂತದಲ್ಲಿ 158 ಜನ ಕರಕಲಾಗಿ ಹೋದರು ಎಂದು ಕಹಿ ಅನುಭವವನ್ನು ಹಂಚಿಕೊಳ್ಳುತ್ತಾರೆ.ಅದರಲ್ಲಿ ನಾವು 8 ಜನ ಮಾತ್ರಾ ಅದೃಷ್ಠಶಾಲಿಗಳು ಎನ್ನುತ್ತಾರೆ.

ಇದು ಇಡೀ ದುರಂತದ ಅನುಭವವಾದರೆ ,ಅವರ ಆ ನಂತರ ಬದುಕು ಮಾತ್ರಾ ಅದೃಷ್ಠದಿಂದ ವಂಚಿತವಾಯಿತು. ದುಬೈನಲ್ಲಿ ಸೂಪರ್ ಮಾರ್ಕೆಟ್ ಒಂದರಲ್ಲಿ ಮ್ಯಾನೇಜರ್ ಆಗಿದ್ದ ಅಬ್ದುಲ್ಲಾ , ಆ ದುರಂತದ ಬಳಿಕ ಸುಮಾರು 3 ತಿಂಗಳ ನಂತರ ಹೋದಾಗ ಅವರ ವೀಸಾ , ಪಾಸ್ಪೋರ್ಟ್ ಎಲ್ಲವೂ ಕಾಣೆಯಾಗಿತ್ತು. ಹೊಸದಾಗಿ ಸರಿಯಾದ ಉದ್ಯೋಗವೂ ಸಿಕ್ಕಿಲ್ಲ. ಇತ್ತ ಏರ್ ಇಂಡಿಯಾ ಬದುಕುಳಿದವರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರೂ ಅದ್ಯಾವುದೋ ಸಬ್ ಕಾಂಟ್ರಾಕ್ಟ್ ಕೆಲಸ ನೀಡುವುದಾಗಿ ಹೇಳಿತು. ಅದೂ ಕಡಿಮೆ ಸಂಬಳದಲ್ಲಿ.ಇದನ್ನು ಒಲ್ಲೆ ಎಂದ ಅಬ್ದುಲ್ಲಾ ಬೇರೆ ಕೆಲಸ ಹುಡುಕಿದರೂ ಸರಿಯಾದ ಕೆಲಸ ಸಿಕ್ಕಿಲ್ಲ. ದುಬೈಗೆ ಮತ್ತೆ ಹೋದರೂ ಅಲ್ಲಿ ಸರಿಯಾಗಿಲ್ಲ. ಸದ್ಯ ಏರ್ ಇಂಡಿಯಾ ಹಾಗೂ ಕೇಂದ್ರ ಸರಕಾರ ನೀಡಿದ ಪರಿಹಾರ ಧನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮುಂದೇನೋ ಗೊತ್ತಿಲ್ಲ ಅಂತಿದ್ದಾರೆ ಅವರು.

ಒಟ್ಟಿನಲ್ಲಿ 158 ಜನರನ್ನು ಬಲಿ ತೆಗದುಕೊಂಡ ಆ ದುರಂತ ಇನ್ನೂ ನೆನಪಾಗಿಯೇ ಉಳಿದುಕೊಂಡಿದೆ. ಭಯಾನಕವಾದ ನೆನಪಿನಿಂದ ಹೊರಬರಲು ಪ್ರಯತ್ನಿಸಿದರೂ ಮರೆಯಲಾಗುತ್ತಿಲ್ಲ ಎಂದು ಅಬ್ದುಲ್ಲಾ ತನ್ನ ನೆನಪನ್ನು ಹಂಚಿಕೊಳ್ಳುತ್ತಾರೆ.

- ಮಹೇಶ್ ಪುಚ್ಚಪ್ಪಾಡಿ.

0 comments:

Post a Comment