ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಈಶ್ವರಮಂಗಲದಲ್ಲಿ ಅಶೋಕ್ ಸಿಂಘಾಲ್ ಅವರಿಗೆ ಧರ್ಮಶ್ರೀ ಪ್ರಶಸ್ತಿ ಪ್ರದಾನ

ಪುತ್ತೂರು: ಲೋಕದ ಸಮಸ್ತ ಜೀವಿಗಳಲ್ಲಿರುವುದು ಸನಾತನ ಧರ್ಮ. ಸನಾತನವಾದ ದೇಶ ಭಾರತದ ಮಟ್ಟಿಗೆ ಧರ್ಮವೇ ನಿಜವಾದ ಸಂಪತ್ತು ಇದನ್ನು ರಕ್ಷಿಸುವವರಿಗೆ ಭಾವದ ಅರ್ಪಣೆ ಮಾಡಬೇಕಾಗಿದೆ. ಅಂತಹ ಕಾರ್ಯವು ಧರ್ಮಶ್ರೀ ಪ್ರತಿಷ್ಠಾನದ ಮೂಲಕ ನಡೆದಿದೆ ಎಂದು ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.


ಪುತ್ತೂರಿನ ಈಶ್ವರಮಂಗಲದ ಹನುಮಗಿರಿಯಲ್ಲಿ ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ಭಾನುವಾರದಂದು ನಡೆದ ಧರ್ಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶ್ವಹಿಂದೂ ಪರಿಷತ್ ಅಂತರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಆಶೀರ್ವಚನ ನೀಡಿದರು. ಎಲ್ಲರಿಗೂ ಮಂಗಲವನ್ನು ಉಂಟುಮಾಡುವ ಈ ಕ್ಷೇತ್ರದಲ್ಲಿ ಹನುಮಗಿರಿಯ ಮೂಲಕ ಇನ್ನೂ ಒಂದು ಮಂಗಲಕರವಾದ ವಾತಾವರಣ ಉಂಟಾಗಿದೆ ಎಂದ ಅವರು ದೇಶಕ್ಕಗಿ ಅತ್ಯುನ್ನತ ಆದರ್ಶ , ತ್ಯಾಗ ಮಾಡಿದ ಜನರನ್ನು ದೇಶ ಭಕ್ತಿ , ಧರ್ಮ ಭಕ್ತಿಯ ಜನರು ಭಾವವನ್ನು ಅರ್ಪಣೆ ಮಾಡುವುದೇ ದೊಡ್ಡದಾದ ಸೇವೆ ಎಂದ ಅವರು ಹನುಮಗಿರಿಯು ಸಮಾಧಾನ ಮತ್ತು ಪ್ರೇರಣೆ ನೀಡುವ ಸ್ಥಳ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಧರ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ವಿಶ್ವ ಹಿಂದೂಪರಿಷತ್ ಅಂತರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ , ದೇಶ ಕಾರ್ಯ , ಧರ್ಮ ಕಾಯವೇ ದೊಡ್ಡದು ಎಂಬ ತತ್ವದಲ್ಲಿ ಬೆಳೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಇಂತಹ ಯಾವುದೇ ಪ್ರಶಸ್ತಿಗಳನ್ನು ಬಯಸುವುದಿಲ್ಲ , ಇನ್ನೂ ಮಾಡಬೇಕಾದ ಕೆಲಸಗಳಿವೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸು ನನಸಾಗಬೇಕಾಗಿದೆ. ಇನ್ನು ಏನೇ ಆದರೂ ರಾಮ ಜನ್ಮ ಭೂಮಿ ಹಿಂದೂಗಳಿಗೆ ಸೇರಿದ್ದು ಎಂದ ಅವರು ಇಂದು ರಾವಣರ ಸಂಖ್ಯೆ ಹೆಚ್ಚಾಗುತ್ತಿದೆ ಅದಕ್ಕಾಗಿ ರಾಮರುಗಳ ಸಂಖ್ಯೆಯೂ ಇಲ್ಲಿ ಹೆಚ್ಚಾಗಬೇಕಾಗಿದೆ ಎಂದ ಅಶೊಕ್ ಸಿಂಘಾಲ್ , ಭಾರತೀಯ ಪದ್ಧತಿಯ ಶಿಕ್ಷಣ ನೀಡುವ ವ್ಯವಸ್ಥೆ ಬರಬೇಕಾಗಿದೆ.ಇದರಿಂದಾಗಿ ಇಲ್ಲಿನ ಸಂಸ್ಕೃತಿ ಬೆಳೆಯಬಲ್ಲುದು ಎಂದು ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಕರ್ನಾಟಕ ಕೇರಳದ ಗಡಿಯಲ್ಲಿರುವ ಈ ಹನುಮ ಕ್ಷೇತ್ರವು ಹೊಸ ಸೃಷ್ಠಿ , ಇಲ್ಲಿ ರಾಮ ಹನುಮರ ಸಮಾಗಮವಾಗಿದೆ ಇದು ಎಲ್ಲರಿಗೂ ಆದರ್ಶವಾಗಿದೆ ಎಂದ ಅವರು ಇಡೀ ರಾಜ್ಯಕ್ಕೇ ಈ ಕ್ಷೇತ್ರದಿಂದ ಸನ್ಮಂಗಲವಾಗಲಿ ಎಂದರಲ್ಲದೆ ಸರಕಾರವು ಸಮಸ್ಯೆಯಿಂದ ಆದಷ್ಟು ಬೇಗನೆ ಹೊರಬರಲಿದೆ ಮುಂದೆ 2 ವರ್ಷಗಳ ಕಾಲ ಆಡಳಿತ ನಡೆಸಲಿದ್ದು ದೇಶದಲ್ಲೇ ಮಾದರಿ ರಾಜ್ಯವನ್ನಾಗಿಸುವುದಾಗಿ ಹೇಳಿದರು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ , ಧರ್ಮ ಪ್ರತಿಷ್ಠಾಪನೆ ಹಾಗೂ ಲೋಕೋದ್ದಾರದ ಕೆಲಸ ಇಲ್ಲಾಗಿದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅಭಿನಂದನಾ ಭಾಷಣ ಮಾಡಿದರು.

ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ , ಕರಾವಳಿ ಅಭಿವೃದ್ಧ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ , ಧರ್ಮಶ್ರೀ ಪ್ರತಿಷ್ಠಾನದ ಮಹಾಪೋಷಕ ಜಿ.ಕೆ.ಮಹಾಬಲೇಶ್ವರ ಭಟ್ , ಧರ್ಮಶ್ರೀ ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ , ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷೆ ಮಲ್ಲಿಕಾ ಪ್ರಸಾದ್ , ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ , ಆಂಜನೇಯ ಭಕ್ತ ಸಮಿತಿ ಅಧ್ಯಕ್ಷ ಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

- ಚಿತ್ರ,ವರದಿ: ಮಹೇಶ್ ಪುಚ್ಚಪ್ಪಾಡಿ.

0 comments:

Post a Comment