ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:23 PM

ಮನದಾಳದ ಮಾತುಗಳು...

Posted by ekanasu

21 ವರ್ಷಗಳ ಬಳಿಕ ಅಮ್ಮನಿಗೊಂದು ಪತ್ರ
ಮುಜುಗರ ಬಿಟ್ಟು ಈ ಪತ್ರ ಬರೆಯುತ್ತಿದ್ದೇನೆ ಅಮ್ಮ ಬೇಸರ ಮಾಡಿಕೊಳ್ಳಬೇಡ
ಹೆಣ್ಣು ಮಗು ಹುಟ್ಟೋದೇ ಅನಾಚಾರ, ದಾರಿದ್ರ್ಯ, ಕರ್ತವ್ಯ ಎನ್ನುವಂತಹ ದಿನಗಳಲ್ಲೇ ನಾನು ಹುಟ್ಟಿದಾಗ, ನನಗೆ 18ವರ್ಷವಾಗೂ ತನಕ ನಿಮಗೆ ಕಷ್ಟ ಕಟ್ಟಿಟ್ಟಬುತ್ತಿ, ಯಾವ ಕೆಲಸವು ನಿಮ್ಮ ಕೈ ಹಿಡಿಯಲ್ಲ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಾಗ ಧೃತಿಗೆಡದೆ, ಇತರರಂತೆ ನನ್ನನ್ನು ಕಸದ ಬುಟ್ಟಿಗೆ ಎಸೆಯದೆ ಮತ್ತಷ್ಟು ಪ್ರೀತಿ, ಕಾಳಜಿಯಿಂದ ನನ್ನನ್ನು ಬೆಳೆಸಿದೆ ಅಮ್ಮ ನಿಜಕ್ಕು ನೀನು ಗ್ರೇಟ್ . ನಾನು ಬೆಳೆದಂತೆ ಜ್ಯೋತಿಷಿಗಳು ನುಡಿದ ಭವಿಷ್ಯ ನಿಜವಾಗುತ್ತಾ ವಾಸ್ತವ ಸ್ಥಿತಿಗಳು ಬಲು ಕಠಿಣವಾಗಿ ಒಂದು ರೂಪಾಯಿಗೂ ಕಷ್ಟಪಡುವಂತಹ ಸಮಯದಲ್ಲಿ ನಿನ್ನ ಒಡವೆಗಳನ್ನು ಅಡವಿಟ್ಟು, ಸಾಸಿವೆ ಡಬ್ಬದಲ್ಲಿ ಕೂಡಿಟ್ಟ ಹಣವನ್ನು ಬಲು ಎಚ್ಚರಿಕೆಯಿಂದ ಬಳಸುತ್ತಾ ನನ್ನನ್ನು ಸಾಕಿ ಸಲುಹಿದೆ. ಅಂತಹ ಕಷ್ಟದ ಸಮಯದಲ್ಲು ನನ್ನೊಬ್ಬಳನಲ್ಲದೇ ನಿನ್ನ ಅಕ್ಕನ ಮಕ್ಕಳನ್ನು ನಿನ್ನ ಸ್ವಂತ ಮಕ್ಕಳಂತೆ ಯಾವುದೇ ಬೇಧ, ಬಾವ ತೋರದೆ ಸಲಹಿದೆ.


ಹಣದ ಮುಗ್ಗಟ್ಟಿನಿಂದ ಬಳಲುತ್ತಿದ್ದರು ಯಾರೊಬ್ಬ ಸಂಬಂಧಿಕರ ಬಳಿ ಹೇಳದೆ, ಹಣಕ್ಕಾಗಿ ಕೈಚಾಚದೆ ಕಷ್ಟವನ್ನೆಲ್ಲಾ ನಿನ್ನೆದೆಯಲ್ಲಿ ಹುದುಗಿಸಿಕೊಂಡು ಗುಟ್ಟಾಗಿ ಸಂಸಾರವನ್ನು ಸರಿದೂಗಿಸಿದೆಯಲ್ಲಾ ಅಮ್ಮ, ಕಷ್ಟದ ಜೀವನವನ್ನು ಸವಾಲಾಗಿ ಸ್ವೀಕರಿಸಿ ಗೆದ್ದೆ, ನೀನು ನಿಜವಾಗಿಯೂ ಹೀರೋಯಿನ್ ಅಮ್ಮ.

ನಾನು ಶಾಲೆಯಲ್ಲಿ ಕಲಿಯುತ್ತಿದ್ದಾಗ ಶಿಕ್ಷಕರು ನೀನು ಮುಂದೆ ಏನಾಗಬೇಕು ಅಂದುಕೊಂಡಿದ್ದೀಯ ಎಂದಾಗ ತಟ್ಟನೆ ನನ್ನ ಮನಸ್ಸಿಗೆ ಬರುತ್ತಿದ್ದಿದ್ದು ನಾನು ನನ್ನ ತಾಯಿಯ ಹಾಗೆ ಚೆನ್ನಾಗಿ ಸಂಸಾರ ಸರಿದೂಗಿಸಿಕೊಂಡು ನಡೆಯುವ ಒಳ್ಳೆಯ ಗೃಹಿಣಿಯಾಗಬೇಕು ಎನ್ನುವ ಆಸೆಯಿದ್ದರು ನಾಚಿಕೆಯಿಂದ ಅದನ್ನು ಹೇಳಲಾಗದೆ ಮತ್ತೇನೋ ಹೇಳಿ ಸುಮ್ಮನಾಗುತ್ತಿದೆ. ಆದರೆ ಈಗಲೂ ನನ್ನ ಕನಸು, ಆಸೆ, ಗುರಿ ಎಲ್ಲಾ ಅದೇ ಅಮ್ಮ.
ಕಾಲ ಕಳೆದಂತೆ ನಮ್ಮ ಕಷ್ಟದ ಜೀವನ ಕರಗಿ ಒಳ್ಳೆಯ ದಿನಗಳು ಎದುರಾದಗಲೂ ಹಿಂದಿನ ದಿನಗಳನ್ನು ನೆನೆದು ನೀನು ಮರುಗುತ್ತಿದ್ದೆ, ಆದರೆ ಅಮ್ಮ ನಾನು ನಿನಗೆ ಭಾಷೆ ಕೊಡುತ್ತೇನೆ ನನ್ನ ವಿದ್ಯಾಭ್ಯಾಸ ಮುಗಿಯಲು ಇನ್ನು ಎರಡು ತಿಂಗಳು ಬಾಕಿ ಇದೆ. ಅದು ಮುಗಿಯುತ್ತಿದ್ದಂತೆ ಒಳ್ಳೆಯ ಕೆಲಸಕ್ಕೆ ಸೇರಿ ನಿನ್ನನ್ನು ಸಂತೋಷವಾಗಿ ರಾಣಿಯ ಹಾಗೇ ನೋಡಿಕೊಳ್ಳಬೇಕು ಎನ್ನುವ ಆಸೆ ಇದೆ ಅದನ್ನು ನೆರೆವೇರಿಸೋಕೆ ಅವಕಾಶ ಕೊಡು ಅದಕ್ಕಾಗಿ ನನ್ನ ಮದುವೆಯನ್ನು ಇನ್ನು ಎರಡು ವರ್ಷಕ್ಕಾದರೂ ಮುಂದೂಡು ಪ್ಲೀಸ್...

ನನ್ನ ವಿದ್ಯಾಭ್ಯಾಸ ಮುಂದುವರೆದಂತೆ ನಾನು ಹಲವಾರು ಕಡೆ ತರಬೇತಿ ಶಿಬಿರಗಳಿಗಾಗಿ ಹೋಗಬೇಕಾಗುತ್ತಿತ್ತು, ಆಗ ನಿನ್ನೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಸಮಯದಲ್ಲಿ ಮುಗ್ದತೆಯಿಂದ ನೀನು ನನಗೆ ಬೈಯುತ್ತಿದ್ದೀಯಲ್ಲ ಆ ಮಾತು ನೀನು ದೇಶ ಸುತ್ತೋದು ಕಲ್ತಿದ್ದೀಯ ನನ್ನ ಬಗ್ಗೆ ನಿನಗೆ ಕಾಳಜಿನೇ ಇಲ್ಲ ಎಂದಾಗ ನನ್ನ ಮನಸ್ಸಿಗೆ ಎಷ್ಟು ಬೇಸರ ಆಗ್ತಿತ್ತು ಗೊತ್ತ. ನಾನು ಎಲ್ಲೇ ಹೋದರು ನಿನಗಾಗಿ ನನ್ನ ಮನಸ್ಸು ತುಡಿಯುತ್ತಿತ್ತು, ನೀನು ಮಾಡುವ ರುಚಿಕರ ಅಡುಗೆಗಾಗಿ ಹಾತೊರೆಯುತ್ತಿದ್ದೆ ಅಮ್ಮ.
ಕೆಲವೊಮ್ಮೆ ನಾನು ಏನೂ ಕೆಲಸ ಮಾಡಲ್ಲ ಎಂದಾಗ ಕೋಪ ಮಾಡಿಕೊಂಡು ಬೈಯುತ್ತಿದ್ದೀರಲ್ಲ ಆಗ ನಾನು ಸಹ ಕೋಪದಿಂದ ನಿನ್ನ ಮೇಲೆ ರೇಗಾಡುತ್ತಿದ್ದೆ. ಆನಂತರ ನನ್ನ ತಪ್ಪಿನ ಅರಿವಾಗಿ ಮರುಗುತ್ತಿದ್ದೆ ನನ್ನ ಕ್ಷಮಿಸಮ್ಮ.
ಕೊನೆಯದಾಗಿ ಹಲವು ಕ್ಷೇತ್ರಗಳಲ್ಲಿ ಪುರುಷರನ್ನು ಮೀರಿಸುವಂತಹ ಸಾಧನೆಯನ್ನು ಕೈಗೊಂಡ ಮಹಿಳೆಯರನ್ನು ಸಾಧಕಿ ಎನ್ನುತ್ತಾರೆ ಆದರೆ ಪುರುಷರಿಂದಲೂ ನಿಭಾಯಿಸಲು ಸಾಧ್ಯವಾಗದಂತಹ ಸಂಸಾರ ಎನ್ನುವ ಕಡಲನಲ್ಲಿ ಸಮರ್ಥವಾಗಿ ಈಜಿ ಜೀವನ ನಡೆಸುತ್ತಿದ್ದೀಯಲ್ಲಮ್ಮ ನೀನೆ ನಿಜವಾದ ಸಾಧಕಿ

ಪ್ರೀತಿಯಿಂದ,

ಸ್ಮಿತ ಸತ್ಯಪ್ರಕಾಶ್
ಅಂತಿಮ ಪತ್ರಿಕೋದ್ಯಮ
ಮಾನಸಗಂಗೋತ್ರಿ
ಮೈಸೂರು

0 comments:

Post a Comment