ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:39 AM

ಅಸ್ಪೃಶ್ಯರು

Posted by ekanasu

ವೈದೇಹಿ ಕಾದಂಬರಿ
ಕಳೆದ ಸಂಚಿಕೆಯಿಂದ...

`ಮಗು ಚಂದ ಉಂಟು' - ಎಂದ ಪುಟ್ಟು.
`ಹೌದು. ಚಂದ ಉಂಟು ' - ಎಂದಳು ಅವಳು.
`ಕೆಂಪು ಕೆಂಪು' - ಎಂದು ಜಯ ಹೇಳಿದಾಗ,
`ಹೌದು ಒಡತಿ ಕೆಂಪು ಕೆಂಪು' - ಎಂದಳು. ಯಾರೇನು ಹೇಳಿದರೂ ಹೂಂಗುಡುತ್ತ ಅರೆಪಚ್ಚೆ ನಗುವಿನಲ್ಲಿ ಅದನ್ನೇ ಪುನಃ ಹೇಳಿದರೆ ಅದು ನರಪಟೆಯೇ.

ಪಾರ್ತಕ್ಕ ಪುಟ್ಟ ಜಯರನ್ನು ಕರೆದು `ಹಾಗೆಲ್ಲ ಹೇಳಿ. ಮಗುವಿಗೆ ದೃಷ್ಟಿಬೀಳುತ್ತದೆ ಅಷ್ಟೆ. ಅವುಗಳ ಹತ್ತಿರ ಏನು ಹೋಕಿಲ್ಲದ ಪಂಚಾಯತಿಗೆ? ... ಗೌರಿ , ಎಣ್ಣೆ ಬೇಗ ಕೊಡಬಾರದ? ಅದರ ಗಾಡಿ ಒಮ್ಮೆ ಹೋಗಲಿ ಮಾರಾಯ್ತಿ.'
`ಅದು ಬಂದಕೂಡಲೇ ಇಲ್ಲೇನು ಜನ ಉಂಟ? ತಯಾರು ಮಾಡಿ ಕೊಡಲಿಕ್ಕೆ? ನಿಲ್ಲಲಿ ಸ್ವಲ್ಪ' - ಎಂದರು ಗೌರಮ್ಮ. ಜಯ ಮತ್ತೆ ಹೊರಗೋಡಿದಳು.


`ಚಣ್ಣಮ್ಮ ' - ಎಂದಳು ನರಪಟೆ ಉದ್ದ ನಗೆಯಲ್ಲಿ .
`ಏಯ್ , ನೀನೆಲ್ಲಿರುವುದು?'
`ನಾನು ಓ ಅಲ್ಲಿ. ನರಿಬೇಣದ ಆಚೆ.'
`ನಾ ಬರುವುದ ಒಂದು ಸಲ?'
`ಶ್ಶ್ ... ನೀವು ಬರುವ ಜಾಗವಲ್ಲ ಒಡತಿಯರೆ ಅದು.'
`ಹೋಗು ಅವಳೊಟ್ಟಿಗೇ. ಅವಳ ಮಗನಿಗೇ ನಿನ್ನನ್ನು ಮದುವೆ ಮಾಡಿ ಕೊಡುವ... ಯಾರು ಬಂದರೂ ಅವರ ಹತ್ತಿರ ಅವಡೆಸೊಪ್ಪಿಗೆ ಉಪ್ಪಿಲ್ಲದ ಮಾತಿಗೆ ಕೂತಾಯಿತು. ನಡಿ ಒಳಗೆ ' - ಎಂದು ಗದರಿಸಿದರು ಗೌರಮ್ಮ ಎಣ್ಣೆ ತಂದು ದೂರದಲ್ಲಿ ಇಡುತ್ತ.

`ಬಯ್ಯಬೇಡಿ. ಪಾಪ , ಮಗು. ಅಮ್ಮ ಪಾಯಸ ಯಾವಾಗ?' - ಉತ್ತರ ಸಿಗದ ನರಪಟೆ ಅದೇ ಸಹಜವೆಂಬಂತೆ ಎಣ್ಣೆಯ ಗೆರಟೆ ಎತ್ತಿಕೊಂಡು ನಗುವಿನ ಗೆಜ್ಜೆಯೊಂದಿಗೆ ಹೊರಟು ಹೋದಳು.
ಅಂಗಳ ಗುಡಿಸುತ್ತ ಇದ್ದ ಚಂದು `ಅಗಣಿ ಅಮ್ಮ , ಈ ನರಪಟೆಗೆ ಇದ್ದ ಖುಶಿ ಯಾರಿಗಿಲ್ಲ, ಸುಳ್ಳ? ಒಂದಕ್ಕೆ ಕಾಣಿ. ಏನಿಲ್ಲದವರು ಗಮ್ಮತ್ತಿನಲ್ಲಿರುತ್ತಾರೆ, ನಮ್ಮಂತಹವರಿಗೆ ಮೂರು ಹೊತ್ತೂ ಚಿಂತೆ.'
ಗೌರಮ್ಮ ಅವಳಿಗೆ ನೇರ ಉತ್ತರ ಕೊಡಲಿಲ್ಲ. ನಮ್ಮಂತಹವರಿಗೆ ಅಂತ ಹೇಳಿ ತಾವೂ ಅವಳೂ ಸರಿಸಮವೆನ್ನುವಂತೆ ಮಾತಾಡಲು ಇವಳು ಯಾವ ದೊಡ್ಡ ಪುಳುಕಿ? ಎಂದು ಚಂದುವಿಗೆ ಕೇಳಿಸುವಂತೆಯೇ ಹೇಳುತ್ತಾ ಒಳಗೆ ಬಂದಳು.

ಆ ದಿನದಿಂದ ನಾಲ್ಕು ದಿನವಿಡೀ ರಾತ್ರಿ ಹಗಲು ಒಂದು ಮಾಡಿ ಅತ್ತಿತು ಮಗು. ಒಂದೇ ಸಮನೆ ರಭಸದಿಂದ ಚಿಮ್ಮುವ ಹಾಲಿಗೆ ಬಾಯಿ ಕೊಡಲು ತ್ರಾಣವಿಲ್ಲದೆ ಅಳುವುದು. ದ್ರಾಕ್ಷಿ ಬತ್ತಿ ಎಷ್ಟು ಚೀಪಿದರೇನು, ಹೊಟ್ಟೆ ತುಂಬುತ್ತದೆಯೇ? ರಾತ್ರಿಯೆಲ್ಲ ಪಾರ್ತಕ್ಕ ಕಾಲು ಮೇಲೆ ಹಾಕಿಕೊಂಡು ಹಾಡಿನ ಮಳೆಗೆರೆದರೂ ಮಗು ಅಳು ಬಿಡಲಿಲ್ಲ. ಎದೆಯಲ್ಲಿ ಹಾಲು ತುಂಬಿ ಮಗು ಕುಡಿಯದೆ ರತ್ನನಿಗೆ ನೋವು ಸರುವಾಗಿ ಸಾಕಾಯಿತು. ಕಂಕುಳದಲ್ಲಿ ಗಣ್ಣೆ ಎದ್ದಿತು. ಎದೆ ಬೀಗಿತು. ಇನ್ನೇನು ಮಾಡುವುದು ? ಎಣ್ಣೆ ಮಾರುವ ಮಾಧು ಮ್ಯಾಣತಿ ಬಂದವಳು ನೋವಿನಿಂದ ನರಳುವ ರತ್ನಳನ್ನು ಕಂಡು ಬೇಸರಗೊಂಡಳು. `ಹಂಗರೆ ಅಮ್ಮ ಇಷ್ಟು ಹೆತ್ತು ಹಿಡಿದಿದ್ದೀರಿ! ಒಂದು ಮುಟ್ಸು ಗೊತ್ತಿಲ್ಲವೆ? ಮಲ್ಲಿಗೆ ಚೆಂಡನ್ನು ಎದೆಯ ಮೇಲಿಟ್ಟು ಕಾಣಿ.ಹಾಲೆಲ್ಲ ಇಳಿದು ಬೀಗು ಮಾಯವಾಗುತ್ತದೆ' - ಎಂದಳು.
ಅವಳು ಹೇಳಿದಂತೆ ಮಲ್ಲಿಗೆ ಚೆಂಡನ್ನು ತಂದು ಎರಡೂ ಮೊಲೆಗಳಿಗೆ ಸುತ್ತಿ ಹಗುರವಾಗಿ ಇಟ್ಟದ್ದೇ ಗಟ್ಟಿಗೊಂಡಿದ್ದ ಹಾಲೆಲ್ಲ ಕರಗಿ ಹರಿದು ಹೋಯಿತು.ಅಯ್ಯೋ , ಮಗು ಕುಡಿಯುತ್ತಿತ್ತಲ್ಲ. ದಂಡ ಹರಿದು ಹೋಯ್ತಲ್ಲ ಎಂದು ರತ್ನ ಹೊಟ್ಟೆಯುರಿ ಬಿಟ್ಟರೆ, ಇನ್ನು ಹಾಲಾಗುವುದೇ ಎಂಬುದು ಪಾರ್ತಕ್ಕನ ಸಂಶಯ. ಪಾರ್ತಕ್ಕನ ಸಂಶಯ ನಿಜವಾಯಿತು. ಹಾಲಿನಿಂದ ಬಿರಿಯುವಂತಿದ್ದ ಮೊಲೆಗಳು ಹಾಲೆಲ್ಲ ಕರಗಿ ಕುಗ್ಗಿ ಸಣ್ಣದಾದವು ಮೆತ್ತಗಾದವು. ಮತ್ತೆ ಪುನಃ ಹಾಲುತ್ಪನ್ನವಾಗಲು ಬುದ್ಧಿಯನ್ನೆಲ್ಲ ಖರ್ಚು ಮಾಡಿದರು ಪಾರ್ತಕ್ಕ. ಜೀರಿಗೆ, ಕಾಯಿ ಹಾಲು ಬೆಲ್ಲ ದಿನವೂ ಅರೆದು ಕೊಡಿ ಎಂದರು ಯಾರೋ. ಒಬ್ಬೊಬ್ಬರು ಒಂದೊಂದು ಉಪಾಯ ಹೇಳಿದರು. `ಬಂದಬಂದವರು ಒಂದೊಂದು ಹೇಳಿ ಬಂದ ಮಗು ಒಳಗೆ ಹೋಯ್ತಂತೆ' - ಎಂಬ ಗಾದೆ ಮಾತನ್ನು ನುಡಿದು ನಗುವರ ಪಾರ್ತಕ್ಕ. ಇಷ್ಟೆಲ್ಲ ಆಗಿದ್ದು ಆ ನರಪಟೆಯ `ದೃಷ್ಟಿ'ಯಿಂದಲೇ . ಬಳಿದು ಹಾಕುವ ಅಂದರೆ ಸೂತಕ ಕಳೆದಿಲ್ಲ.`ನರಪಟೆ ಕಣ್ಣಲ್ಲಿ ಕಾಣದೆಯೇ ಇಷ್ಟು ದೃಷ್ಟಿ ನೆಡಬೇಕಾದರೆ ಇನ್ನು ಕಂಡಿದ್ದರೆ?'
`ಮಕ್ಕಳೋ ಮರಿಯೋ, ಇನ್ನು ಸಾಕಪ್ಪ , ಇವರ ಹತ್ತಿರ ಇನ್ನು ಆಪರೇಷನ್ ಮಾಡಿಸಿಕೊಳ್ಳಲು ಹೇಳುತ್ತೇನೆ' - ಎಂದಳು ರತ್ನ.
`ನೀನು ಹೇಳಿದರೆ ಮಾಡಿಸಿಕೊಂಡೇ ಬಿಟ್ಟಾನಾ ಅವನು? ತನ್ನ ಬುದ್ಧಿಗೆ ಹೌದು ಎಂದು ಕಂಡರೆ ಮಾಡಿಸಿಕೊಂಡಾನು' - ಎಂದರು ಗೌರಮ್ಮ ಅಳಿಯ ಸ್ವಂತ ಬುದ್ಧಿಯವ ಎಂಬ ಹೆಮ್ಮೆಯಿಂದ.
ಪಾರ್ತಕ್ಕನಿಗೆ ರತ್ನನ ಮಾತು ಸಮ ಕಾಣಲಿಲ್ಲ.
(ಮುಂದುವರಿಯುವುದು...)

- ವೈದೇಹಿ.

0 comments:

Post a Comment