ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಆಧುನಿಕ ಸಂಕೀರ್ಣದಲ್ಲಿ ಕಲೆಗೆ ಬೆಲೆಯೇ ಇಲ್ಲವೇನೋ ಎಂಬ ಅನುಮಾನ ಮೂಡುತ್ತಿದೆ. ಎಸ್ಎಸ್ಎಲ್ ಸಿ ಮುಗಿದ ನಂತರ ಎಲ್ಲಾ ವಿದ್ಯಾಥಿಗಳಿಗೂ ಸಹಜವಾಗಿ ಮೂಡುವ ಪ್ರಶ್ನೆ ಎಂದರೆ ಪಿಯುಸಿಗೆ ಯಾವ ಕಾಂಬಿನೇಶನ್ ತೆಗೆದುಕೊಳ್ಳಬೇಕು ಎನ್ನುವುದು. ಸಾಮಾನ್ಯವಾಗಿ ಪ್ರಥಮ ಪಿಯುಸಿಗೆ ಇರುವ ವಿಷಯಗಳೆಂದರೆ ಕಲೆ, ವಿಜ್ಞಾನ, ವಾಣಿಜ್ಯ, ಶಿಕ್ಷಣ ಇತ್ಯಾದಿ. ಇದರಲ್ಲಿ ಕಲೆ ಕೀಳು ಎಂಬ ಭಾವನೆ ಎಲ್ಲರಲ್ಲೂ ಮೂಡುತ್ತಿದೆ. ಇದರಿಂದ ಎಷ್ಟು ಲಾಭ ಇದೆ ಎಂಬುದು ಯಾರಿಗೂ ತಿಳಿದಿಲ್ಲ.ಕಲಾ ವಿಭಾಗದಲ್ಲಿ ಕಲಿಯುವುದರಿಂದ ಅನೇಕ ಲಾಭಗಳು ಇವೆ. ಜ್ಞಾನಾರ್ಜನೆ ಬಯಸುವವರಿಗೆ ಇದೊಂದು ಜ್ಞಾನದ ನಿಧಿಯಾಗಿದೆ. ಇದರಲ್ಲಿ ಅಸಂಖ್ಯಾತ ಸಂಸ್ಕೃತಿಗಳ ಕ್ರಾಂತಿಗಳ, ಆವಿಷ್ಕಾರಗಳ, ದೇಶವಿದೇಶಗಳ ಚರಿತ್ರೆಗಳು ಸಂಘ ಸಂಸ್ಥೆಗಳ ಸಾಧನೆಗಳು, ಸಾಹಸ ಗಾಧೆಗಳು, ರಾಜಕೀಯ ಏರಿಳಿತಗಳು, ಕಲೆ, ಸಾಹಿತ್ಯ, ಧಾರ್ಮಿಕ, ಆರ್ಥಿಕ ಸಾಮಾಜಿಕ ಇತ್ಯಾದಿ ವಿಷಯಗಳ ಅಧ್ಯಯನದಿಂದ ಅಪಾರ ಜ್ಞಾನ ಲಭ್ಯವಾಗುತ್ತದೆ.
ಇದರ ಅಧ್ಯಯನವು ಅಹ್ಲಾದಕರ ಹಾಗೂ ರೋಮಾಂಚನವಾಗಿದೆ. ನಮ್ಮ ಜ್ಞಾನಾಂಧಕಾರವನ್ನು ನಾಶ ಪಡಿಸಲು ಮತ್ತು ಜ್ಞಾಪಕ ಶಕ್ತಿ, ಕಲ್ಪನಾಶಕ್ತಿ, ಆಲೋಚನಾಶಕ್ತಿ ಮತ್ತು ವಿವೇಚನಾ ಶಕ್ತಿಗಳನ್ನು ಬೆಳೆಸಿಕೊಳ್ಳಲು ಕಲಾ ಜ್ಞಾನ ಜ್ಯೋತಿ ಅಗತ್ಯ. ವಿಜ್ಞಾನ ಮತ್ತು ತಾಂತ್ರಿಕ ವಿಷಯಗಳ ಅಧ್ಯಯನದಿಂದ ಬೌದ್ದಿಕ ವಿಕಾಸವಾಗದು. ಅವು ಕೇವಲ ಸೀಮಿತ ವಿಷಯಕ್ಕೆ ಮಾನವನನ್ನು ಬಂಧಿಸಿವೆ.
ಕಲಾ ವಿದ್ಯಾಭ್ಯಾಸಕ್ಕೆ ಪೋಷಕರೇ ತಮ್ಮ ಮಕ್ಕಳಿಗೆ ದಾರಿ ತಪ್ಪಿಸುತ್ತಿದ್ದಾರೆ.ಆರ್ಟ್ಸ್ ತಗೋಬೇಡ ಅದರಲ್ಲಿ ಏನೂ ಇಲ್ಲ, ಸೈನ್ಸ್ ತಗೋ ಡಾಕ್ಟರ್, ಇಂಜಿನಿಯರ್ ಆಗಬಹುದು ಅಂತ ಹೇಳುತ್ತಿದ್ದಾರೆ.
ಇದು ಪಿಯುಸಿ ಕಥೆ ಆದರೆ... ಪದವಿಗೆ ಬಂದಾಗ ಮತ್ತೆ ಗೊಂದಲ. ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ ಓದಿದ ವಿದ್ಯಾರ್ಥಿ ಪದವಿಗೆ ಬಂದ ನಂತರ ಬಿಬಿಎಂ ತಗೆದುಕೊಳ್ಳುತ್ತಿರುವುದು ಒಂದು ವಿಪರ್ಯಾಸ. ಹೀಗೇ ಮುಂದುವರಿದರೆ ಜೆಓಸಿ ಯನ್ನು ಮುಚ್ಚಿದ ಹಾಗೇ ಕಲಾ ವಿಭಾಗವನ್ನು ಮುಚ್ಚುವ ಸ್ಥಿತಿ ಬಂದರೂ ಏನೂ ಆಶ್ಚರ್ಯವಿಲ್ಲ.

ಕಲೆಯ ಅಧ್ಯಯನದಿಂದ ಕೇವಲ ಜ್ಞಾನಾರ್ಜನೆ ಮಾತ್ರ ಆಗುವುದಿಲ್ಲ. ಅನೇಕ ವೃತ್ತಿಪರ ಉಪಯೋಗಗಳೂ ಇವೆ. ಪತ್ರಿಕೋದ್ಯಮ, ಆಡಳಿತ, ಕ್ಷೇತ್ರ, ಪ್ರವಾಸೋದ್ಯಮ, ವಕೀಲೀ ಕ್ಷೇತ್ರ, ಬಿ.ಎ ಡಿಟೆಕ್ಟೀವ್ ಸೈನ್ಸ್, ಮಾನವ ಸಂಪನ್ಮೂಲ ಅಭಿವೃದ್ದಿ, ಅಧ್ಯಾಪನ ಕ್ಷೇತ್ರ ಹೀಗೆ ಹಲವಾರು ಕ್ಷೇತ್ರಗಳು ಇವೆ. ಇವಲ್ಲದೇ ಐಎಎಸ್ ಹಾಗೂ ಕೆಎಎಸ್ ಮುಂತಾದ ರಾಷ್ಟ್ರೀಯ ಹಾಗೂ ಪ್ರದೇಶಿಕ ಹುದ್ದೆಗಳಲ್ಲಿ ಕಲಾ ವಿಷಯಗಳೇ ಪ್ರಮುಖವಾಗಿ ಕಂಡು ಬರುತ್ತವೆ. ಯಾವ ವಿಷಯವೂ ಮೇಲಲ್ಲ, ಯಾವ ವಿಷಯವೂ ಕೀಳಲ್ಲ. ಎಲ್ಲಾ ವಿಷಯಗಳಿಗೂ ತನ್ನದೇ ಆದಂತಹ ಪ್ರಾಮುಖ್ಯತೆ ಇದೆ. ಆದ್ದರಿಂದ ಕಲಾ ವಿದ್ಯಾಭ್ಯಾಸವನ್ನು ತಾತ್ಸಾರ ಮಾಡುವ ಬದಲು ಪ್ರೋತ್ಸಾಹ ಮಾಡಿ.

ಬಿ.ಎಂ ದರ್ಶನ್ ಕಮ್ಮಾರಗಟ್ಟೆ,
ಬಿ.ಎ ಪತ್ರಿಕೋದ್ಯಮ,
ಆಳ್ವಾಸ್ ಕಾಲೇಜ್,
ಮೂಡುಬಿದಿರೆ.

0 comments:

Post a Comment