ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:32 PM

ಅಸ್ಪೃಶ್ಯರು

Posted by ekanasu

ವೈದೇಹಿ ಕಾದಂಬರಿ
ಕಳೆದ ಸಂಚಿಕೆಯಿಂದ...

ಗಂಜಿ ಉಂಡು ಕೈ ತೊಳೆದುಕೊಂಡು ಬಂದ ಶಿವ ಬಿಸಿಯೂಟದಿಂದಾಗಿ ಬೆವರಿ ಮುದ್ದೆಯಾದ ಮೈಯನ್ನು ಬೈರಾಸಿನಿಂದ ತಿಕ್ಕಿ ತಿಕ್ಕಿ ವರೆಸಿಕೊಳ್ಳುತ್ತ `ಅದಿರಲಿ ಪಾರ್ತಕ್ಕ, ಅಷ್ಟು ಮಕ್ಕಳನ್ನು ಹೆರುತ್ತಿದ್ದೆ ಅಂದಿರಲ್ಲ.ಅಷ್ಟು ಮಕ್ಕಳೂ ಶೂದ್ರರನ್ನೇ ಮದುವೆಯಾದರೆ ಆಗ?'ಪಾರ್ತಕ್ಕನಿಗೆ ಪ್ರತಿಸಲವೂ ಈ ಮಾತು ದುಃಖ ತರಿಸದು. ಅಪರೂಪಕ್ಕೊಮ್ಮೆ ಸಂದರ್ಭ ಹಾಗಿದ್ದರೆ ನಗು ಬರುವುದೂ ಉಂಟು. ಆ ವಿಷಯ ಗಂಭೀರವಾದದ್ದೂ ಹೌದು. ತಮಾಷೆಗೂ ಹೌದು. `ಏನು ಮಾಡುವುದು? ಹಾಗೆ ಆಗಲಿಕ್ಕಿಲ್ಲ. ಅವ ಒಬ್ಬ ಆದ ಅಂತೆಳಿ ಎಲ್ಲರೂ ಆಗುತ್ತಾರೆ ಅಂತ ಉಂಟ? ಒಂದು ವೇಳೆ ಅವರೂ ಆದರು ಅಂತಿಟ್ಟುಕೋ. ಅದು ನಾನು ಪಡೆದು ಬಂದದ್ದು ಅಂತ ಈಗ ಇದ್ದೆನಲ್ಲ , ಹಾಗೆಯೇ ಇದ್ದು ಬಿಡುತ್ತಿದ್ದೆ... ಅಷ್ಟು ಹೇಳುವವ ನಾಳೆ ನೀನು ಏನಾಗುತ್ತಿಯೋ...'
ನಾಳಿನ ವಿಚಾರ ನಾಳೆಗೆ . ಇವತ್ತೇನೋ ಸರೀ ಗಂಜಿ ಹೊಡೆದ ಕಾಣಿ. ಈಗ ಶಾಲೆಗೆ ಹೋಗಿ ಜತ್ತನ್ನ ಮಾಸ್ಟರ ಕುಟ್ಟಿ ತಿನ್ನಬೇಕು. ಲೆಕ್ಕದ ಹೋಂ ವರ್ಕ್ ಮಾಡದ್ದಕ್ಕೆ' - ಎನ್ನುತ್ತಾ ಹೊರಟು ಹೋದ.* * *

ಹತ್ತು ದಿನವಿಡೀ ರತ್ನನ ಕೋಣೆಗೆ ಯಾರೂ ಹೋಗುವಂತಿಲ್ಲ. ರತ್ನನನ್ನು ಮುಟ್ಟುವಂತೆಯೂ ಇಲ್ಲ.ಗಾಳಿ ಬೆಳಕು ಕೂಡಾ. ರತ್ನನಾದರೂ ಹೊರಗೆ ಬರುವಂತಿದೆಯೇ? ಸ್ನಾನ , ಕೈ ಕಾಲು ತೊಳೆಯುವುದಕ್ಕೆ ಒಂದು `ಅಮೆ ಹೊಂಡ' ಇದೆ. ಹೆರಿಗೆ ಕೋಣೆಯ ಹಿಂದೆಯೇ ಅದನ್ನು ನಿರ್ಮಿಸಿದ್ದಾರೆ.ಒಂದು ಹೊಂಡ ತೋಡಿ ಅದರ ಮೇಲೆ ಹಲಗೆಯನ್ನಿಟ್ಟಿದ್ದಾರೆ.ಸುತ್ತ ಮಡಲಿನ ಮರೆ ಹಾಕಿದ್ದಾರೆ. ಹೆತ್ತ ಕಸ ರಕ್ತ ಇತ್ಯಾದಿಗಳನ್ನೆಲ್ಲಾ ಬಾಚಿ ಆ ಅಮೆಹೊಂಡದಲ್ಲಿಯೇ ಹುಗಿದಿದ್ದಾರೆ.ಆ ಕೆಲಸವನ್ನೆಲ್ಲಾ ಅಪ್ಪಿ ಎಂಬಾಕೆ ಮಾಡುವವಳು.ಅವಳಿಗೆ ಇದೆಲ್ಲ ಮಾಡಿದ್ದಕ್ಕೆ ವಿಶೇಷ ಮರ್ಯಾದೆ ಇದೆ. ಪಾರ್ತಕ್ಕ ಇಲ್ಲದಿದ್ದರೆ ಹತ್ತು ದಿನಗಳ ಕಾಲ ಬಾಣಂತಿ ಜೊತೆ ಇರಬೇಕಾದವಳೂ ಅಪ್ಪಿಯೇ. ಆದರೆ ಈಗ ಅವರು ಇರುವುದರಿಂದ ರತ್ನನ ಬಾಣಂತನಕ್ಕೆ ಅಪ್ಪಿಯ ಹಂಗಿಲ್ಲ.

`ಇವತ್ತು ಸತ್ತರೆ ನಾಡಿದ್ದು ಮೂರನೇ ದಿನ' - ಎಂಬ ಒಂದು ಮಾತಿದೆ. ದಿನ ಓಡುವುದು ಅಷ್ಟು ವೇಗವಾಗಿ ಅಂತ ಸೂಚಿಸಲು. ಹುಟ್ಟಿದರೂ ಅಷ್ಟೇ.ಏಳನೇ ದಿನ ಬಂದಾಯಿತು. ಏಳನೆಯ ದಿನ ಮಗುವಿನ ಹೊಕ್ಕುಳು ಚೊಟ್ಟು ಒಣಗಿ ಬಿತ್ತು. ಬಿದ್ದುದನ್ನು ಗೌರಮ್ಮ ಮಕ್ಕಳಿಗೆ ತೋರಿಸಿದರು. ಇನ್ನು ಮಗುವಿನ ಮೈಲಿಗೆ ಕಳೆಯಿತು. ಬಟ್ಟೆಯಿಲ್ಲದ ಮಗುವನ್ನು ಈಗ ಯಾರೂ ಮುಟ್ಟಬಹುದು.`ಯಾರಿಗೆ ಮಗು?' - ಎಂದರೆ ಪುಟ್ಟ ಜಯ ಶಾಮಿ ಎಲ್ಲ ನಾಫಸ್ಟ್, ನಾಫಸ್ಟ್ ಎಂದಾಯಿತು.
ಆದರೆ ಶಾಮಿ ರತ್ನ ಹೆತ್ತ ದಿನ ರಾತ್ರಿಯೇ ಹೇಳಿದ್ದಳಲ್ಲ, ಅವಳಿಗೇ ಫಸ್ಟ್ ಅಂತ ಆಯಿತು. ಪಾರ್ತಕ್ಕ ಮಗುವಿನ ಬಟ್ಟೆ ಕಳಚಿ ಒಂದು ಮಣೆಯ ಮೇಲೆ ಇಟ್ಟರು. ಬಟ್ಟೆ ಕಳಚಿದ ಮಗು ಆಧಾರವೇ ತಪ್ಪಿದಂತಾಗಿ ಆಧಾರಕ್ಕಾಗಿ ಏನೋ ಹಿಡಿಯಲೆಂಬಂತೆ ಗಾಳಿಯಲ್ಲಿ ಕೈ ಕಾಲುಗಳನ್ನು ಕಂಗಾಲಾಗಿ ಆಡಿಸಿತು. ಮಕ್ಕಳು ಕಿಟಿ ಕಿಟಿ ನಕ್ಕವು. ರವಿ ಮಾಣಿ ಮಾತ್ರ ಬಾಗಿಲ ಸಂದಿಯಲ್ಲಿ ನಿಂತು ತನ್ನ ಅಮ್ಮನನ್ನೇ ನೋಡುತ್ತಿತ್ತು.ರತ್ನ ತಡೆಯಲಾರದೆ ` ಬಾ ಬಾಬಣ್ಣ, ಆಮೇಲೆ ಅಂಗಿ ಚಂಡಿ ಮಾಡಿ ಮಿಂದು ಬಂದರಾಯಿತು.' - ಎಂದರೆ ಪಾರ್ತಕ್ಕ `ನಿನ್ನ ಕೊಂಯ್ಯಾರ ಸಾಕು.ಇವತ್ತು ಬಂದು ಮಂಚ ಹತ್ತುತ್ತದೆ.ನಾಳೆ ಹೊಟ್ಟೆಯ ಮೇಲೆಯೇ ಬಂದು ಕುಳಿತುಕೊಳ್ಳುತ್ತದೆ. ಹಾಗೆಲ್ಲ ಕರೆಯಬೇಡ'- ಎನ್ನುತ್ತ ಬರಲೋ ಬೇಡವೋ ಎಂದು ಒಂದು ಹೆಜ್ಜೆ ಮುಂದಿಟ್ಟ ರವಿ ಮಾಣಿಗೆ `ಹ್ಹೇ., ಅಮ್ಮನನ್ನು ಮುಟ್ಟಬಾರದು ಹಾಗೆಲ್ಲ.ಅವಳಿಗೆ ಅಬ್ಬು ಆಗಿದೆ'- ಎಂದರು. ರವಿ ಬೆಚ್ಚಿ ಮುಂದಿಟ್ಟ ಹೆಜ್ಜೆಯನ್ನು ಹಿಂದಿಟ್ಟು ಮತ್ತೆ ಬಾಗಿಲ ಸಂದಿಯಲ್ಲೇ ನಿಂತ.

(ಮುಂದಿನ ವಾರಕ್ಕೆ...)

- ವೈದೇಹಿ.


0 comments:

Post a Comment