ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಅಡಿಕೆಯು ಏರು ಹಾದಿಯಲ್ಲಿ ಸಾಗುತ್ತಿದ್ದರೆ , ರಬ್ಬರ್ ಇಳಿಕೆಯ ಹಾದಿಯಲ್ಲಿದೆ. ಕೃಷಿಕರಿಗೆ ಈಗ ಇದೆರಡು ಸಂಗತಿಗಳು ಅತ್ಯಂತ ಪ್ರಮುಖ ಘಟ್ಟಗಳು. ಅನೇಕ ವರ್ಷಗಳ ಬಳಿಕ ಅಡಿಕೆ ಆಶಾದಾಯಕ ಹೆಜ್ಜೆ ಇರಿಸಿದರೆ , ರಬ್ಬರ್ ಇತ್ತೀಚೆಗೆ ತನ್ನ ಬಿಗುತನವನ್ನು ಸಡಿಲಿಸಿಕೊಂಡಿದೆ. ಹೀಗಾಗಿ ಕೃಷಿಕರಿಗೆ ಈಗ ಮಿಶ್ರಫಲ !.


ಸರಿಸುಮಾರು ಎಂಟು ಹತ್ತು ವರ್ಷಗಳ ಬಳಿಕ ಅಡಿಕೆ ಬೆಳೆಗಾರ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾನೆ. ಅಡಿಕೆಯ ದರ ಈಗ ಚೆನ್ನಾಗಿದೆ, ಎಂಬ ಒಂದು ಖುಷಿ ಅವನಿಗಿದೆ. ಉಳಿದ ಸಮಸ್ಯೆಗಳು ರಾಶಿ ರಾಶಿ ಇದ್ದರೂ ಧಾರಣೆ ಕೊಂಚ ತೃಪ್ತಿದಾಯಕವಾಗಿದೆ ಎಂಬ ನೆಮ್ಮದಿ ಇದೆ. ಮೊನ್ನೆ ಮೊನ್ನೆ ಶತಕ ದಾಟಿದ ಬಳಿಕ ಆತಂಕ ಹೆಚ್ಚಿತ್ತು. ಅಂತೂ ಎಲ್ಲಾ ಆತಂಕಗಳ ನಡುವೆಯೂ ಹಳೆ ಚಾಲಿ ಅಡಿಕೆಯು 150 ಗಡಿ ದಾಟಿ ಮುಂದೆ ಹೋಗಿದೆ. ಶುಕ್ರವಾರದಂದು 155 ರೂಪಾಯಿಯ ಆಸುಪಾಸಿಗೆ ಬಂದು ನಿಂತರೆ ಹೊಸ ಅಡಿಕೆಯೂ ಹಾಗೆಯೇ 136 ರೂಪಾಯಿವರಗೆ ಖರೀದಿಯಾಗಿದೆ. ಹೀಗಾಗಿ ಕೃಷಿಕರಿಗೆ ಹೊಸ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಧಾರಣೆ ಇಷ್ಟು ಏರಿಕೆಯ ಹಾದಿಯಲ್ಲಿದ್ದರೂ ಮಾರುಕಟ್ಟೆಗೆ ಅಡಿಕೆಯು ಸಾಕಷ್ಟು ಮಾರುಕಟ್ಟೆಗೆ ಬರುತ್ತಿಲ್ಲ.ಹೀಗಾಗಿ ಮತ್ತೆ ಏರುತ್ತಲೇ ಸಾಗಿದೆ ಈ ಧಾರಣೆ.ಈಗ ಒಂದು ಹಂತದ ಅಡಿಕೆಯನ್ನು ಕೃಷಿಕರು ಮಾರಾಟ ಮಾಡಿಯಾಗಿದೆ. ಇನ್ನು ಏನಿದ್ದರೂ ಅಗತ್ಯಕ್ಕೆ ತಕ್ಕಷ್ಟೇ ಮಾರುಕಟ್ಟೆಗೆ ಬಿಡುತ್ತಾರಾದ್ದರಿಂದ ಇದೇ ಧಾರಣೆ ಮುಂದುವರಿಯುವ ಸಾಧ್ಯತೆಯೇ ಹೆಚ್ಚು ಎಂಬುದು ಅಡಿಕೆ ಮರುಕಟ್ಟೆ ವಲಯದ ಮಾತು.ಧಾರಣೆ ಏರಿಕೆಗೂ ಪ್ರಮುಖ ಕಾರಣ ಇದೇ. ಬೇಡಿಕ ಇದೆ , ಅದಕ್ಕೆ ತಕ್ಕಷ್ಟು ಪೂರೈಕೆ ಇಲ್ಲ. ಅಂದರೆ ಈ ಬಾರಿ ಅಡಿಕೆ ಬೆಳೆಯೂ ಕಡಿಮೆ. ಇದರ ಜೊತೆಗೆ ಅಡಿಕೆ ಆಮದು ನಿಷೇಧ , ಕ್ಯಾಂಪ್ಕೋ ಪಾತ್ರ , ಗುಟ್ಕಾ ಇನ್ನಿತರ ವಿಚಾರಗಳೂ ಧಾರಣೆ ಏರಿಕೆಗೆ ಪೂರಕವಾಗಿದೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರ ಇನ್ನೊಂದು ಪ್ರಮುಖ ಬೆಳೆ ರಬ್ಬರ್ ಮಾತ್ರಾ ಈಗ ಇಳಿಕೆಯ ಹಾದಿಯಲ್ಲಿದೆ. ಒಂದು ತಿಂಗಳ ಹಿಂದೆ 242 ರೂಪಾಯಿವರೆಗೆ ಹೋಗಿದ್ದ ಧಾರಣೆ ಈಗ ಇಳಿಕೆಯ ಹಾದಿಯಲ್ಲಿದೆ.ಒಂದು ವಾರದ ಹಿಂದೆ ಅಂದರೆ ಕಳೆದ ಗುರುವಾರ 222.50 ರೂಪಾಯಿ ಇದ್ದ ರಬ್ಬರ್ ಧಾರಣೆ ನಿನ್ನ್ನೆ ಸಂಜೆಯ ವೇಳೆಗೆ 215.50 ರೂಪಾಯಿಗೆ ಇಳಿದಿದೆ. ಇಲ್ಲೂ ಹಾಗೆಯೇ ಇದು ತಾತ್ಕಾಲಿಕ ಇಳಿಕೆ ಎಂದು ಮಾರುಕಟ್ಟೆ ವಿಶ್ಲೇಷಣೆ ಹೇಳುತ್ತದೆ. ಒಂದು ತಿಂಗಳ ಹಿಂದೆ ಭಾರತದಲ್ಲಿ ರಬ್ಬರ್ ಕೊರತೆ ಬಂದಾಗ ವಾಣಿಜ್ಯ ಮಂಡಳಿಯ ರಬ್ಬರ್ ಆಮದಿಗೆ ಅನುಮತಿ ನೀಡಿತ್ತು. ಇದರಿಂದಾಗಿ ಮಲೇಶ್ಯಾ ಸೇರಿದಂತೆ ವಿವಿದ ದೇಶಗಳಿಂದ ರಬ್ಬರ್ ಆಮದಾಗಿತ್ತು. ಇದರಿಂದಾಗಿ ದೇಶದ ರಬ್ಬರ್ ಮಾರುಕಟ್ಟೆಗೆ ಕೊಂಚ ಹೊಡೆತ ಬಿತ್ತು. ಈ ನಡುವೆ ಬೇಸಗೆ ಕಾಲವಾದ್ದರಿಂದ ಸರಿಯಾದ ರಬ್ಬರ್ ಪೂರೈಕೆಯೂ ಇಲ್ಲದ ಕಾರಣದಿಂದಾಗಿ ಕೆಲ ಪ್ರಮುಖ ಕಂಪನಿಗಳಿಗೆ ರಬ್ಬರ್ ಸರಬರಾಜುದಾರರು ಹಿಂದೆ ಸರಿದಿದ್ದರು. ಹೀಗಾಗಿ ವಿದೇಶದ ರಬ್ಬರ್, ಎಲ್ಲಾ ತೆರಿಗೆಗಳೂ ಸೇರಿಕೊಂಡು 220 ರೂಪಾಯಿಯ ಆಸುಪಾಸಿನಲ್ಲಿ ಲಭ್ಯವಾಗುತ್ತಿದ್ದ ಕಾರಣ ಇದೇ ಧಾರಣೆ ಇಲ್ಲೂ ಮುಂದುವರಿಯಿತು ಎನ್ನುತ್ತದೆ ರಬ್ಬರ್ ಮಾರುಕಟ್ಟೆ ವಲಯ. ಇನ್ನು ಕೆಲವೇ ದಿನದಲ್ಲಿ ಮತ್ತೆ ಏರಿಕೆ ಕಾಣಬಹುದು ಎನ್ನುತ್ತದೆ ಇದೇ ವಿಶ್ಲೇಷಣೆ.

ಒಟ್ಟಿನಲ್ಲಿ ಮೊನ್ನೆ ಮೊನ್ನೆಯವರೆಗೆ ಏರುಹಾದಿಯಲ್ಲಿದ್ದ ರಬ್ಬರ್ ಈಗ ಇಳಿಕೆಯ ಹಾದಿಯಲ್ಲೇ ಸಾಗುತ್ತಿರುವಾಗ ರಬ್ಬರ್ ಬೆಳೆಗಾರರಿಗೆ ಒಂದು ಕಡೆ ಆತಂಕವಾಗುತ್ತಿದ್ದರೆ ಇತ್ತ ಕಡೆ ದಿನದಿಂದ ದಿನಕ್ಕೆ ಅಡಿಕೆ ಧಾರಣೆಯು ಏರುಹಾದಿಯಲ್ಲಿ ಸಾಗುತ್ತಿರುವುದರಿಂದ ಅಡಿಕೆ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡದ ಜಿಲ್ಲೆಯ ಕೃಷಿಕರಿಗೆ ಈಗ ಮಿಶ್ರ ಫಲ.

- ಮಹೇಶ್ ಪುಚ್ಚಪ್ಪಾಡಿ

0 comments:

Post a Comment