ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯಆತ್ಮೀಯರಿಗೆ ವಂದನೆಗಳು.
ನಿನ್ನೆ ನಿಮ್ಮ ಫೋನ್ ಬಂದಾಗ ಎಂಥೆಂಥಹಾ ಶಬ್ಧಗಳೋ... ವಸ್ತುಗಳಿಲ್ಲದೆ ಶಬ್ಧಗಳಲ್ಲಿ ಪ್ರತ್ಯಕ್ಷವಾಗುವ ಭಾವಗಳಂತೆ. ಸ್ವಲ್ಪ ಹೊತ್ತಿನ ಹಿಂದೆ `ಲಾವಾ' ಎಂಬ ಕವನ ಬರೆದಿದ್ದೆ. ಬಿ.ಜಿ.ಸತ್ಯ ಮೂರ್ತಿಗೆ ಪತ್ರಬರೆಯಲು ಎಂದು ಹೊರಟವನು ಆ ಕವನ ಬರೆದಿದ್ದೆ. ಅದರ ಕೆಲವು ಗೆರೆಗಳು ಹೀಗಿದ್ದವು.ಮತ್ತೇನು ಸಮಾಚಾರ ಹೇಳು
-ವುದಿರಲಿಲ್ಲ ನಿಮಗೆ; ನನಗೆ
ಒಂದು ಕವನ ಹೇಳುವುದಿತ್ತು(ಅದು)
ವೃಂದಾವನ ಸುಟ್ಟುಹೋದ ದುರಂತ
-ಕವನ ಬೂದಿಕವನ ಅಸ್ಥಿ ಕವನ ಧ್ವಂಸ ಕವನ
ಹೂವುಗಳು ಸುಟ್ಟು ಹೋದವು - ಮಕರಂದ ಜೊತೆಯಲ್ಲಿ!
ಬೀಜಗಳು ಸುಟ್ಟು ಹೋದವು - ಸುತ್ತ ಭ್ರೂಣಗಳು ಜೊತೆಯಲ್ಲಿ !
ನೆಲ ಸುಡಲಿಲ್ಲ - ಮರಗಳು ಸುಟ್ಟವು - ಜೀವಗಳು ಜೊತೆಯಲ್ಲಿ!

ಹೀಗೇ ಸಾಗುವ ಕವನ ಒಂದೆಡೆ ಹೀಗೆ ಹೇಳುತ್ತದೆ...

" ನಿಗಿ ನಿಗಿ ಕಂಡ - ಕೆಂಡ ಕೆಂಡಾಮಲ ಜೀವಗಳು
ಉರಿ ಉರಿ ಉರಿದೇ ಹೋದವು ಹೊಗೆಗಳಿಲ್ಲದೇ ಸುಡುವ ಸೂರ್ಯನಂತೆ!

ಆಮೇಲೆ ನೀವು ಮಾತ ನಾಡಿದಿರಿ. ಒಂದು ಲೇಖನ ಬರೆದು ಮುಗಿಸಿದ್ದೆ. ಊಟ ಮಾಡಿ ಶಶಿ ಮಲಗಿ ನಿದ್ರಿಸಿದ ಸಮಯ ನೋಡಿ ಇನ್ನೊಂದು ಬರೆಯಲು ಕುಳಿತೆ. ಬೆರಳುಗಳು ಎಂತಹಾ ವೇಗದಲ್ಲಿ ಚಲಿಸಿದವು ಎಂದರೆ ಅರ್ಧಗಂಟೆಯೊಳಗೆ ಲೇಖನ ಬರೆದು ಮುಗಿಸಿದೆ. " ಉಲ್ಕೆಗಳ ಲೋಕದಲ್ಲಿ ಸೂರ್ಯನನ್ನು ಹುಡುಕುತ್ತಾ" ಎಂಬ ತಲೆಬರಹ ಕೊಟ್ಟಾಗ ಬದುಕು ಸಾರ್ಥಕ ಅನ್ನುವಂಥಾ ಭಾವ. ಲೇಖನ ಪ್ರಪಂಚದಲ್ಲಿ ಇಂಥಹಾ ಒಂದು ಲೇಖನ ಯಾರಿಂದಲೂ ಬರೆಯಲ್ಪಟ್ಟಿರಲಿಲ್ಲ - ಮುಂದೆ ಯಾರೂ ಬರೆಯಲಾರರು. `ಏರಿದ ಗುಡ್ಡವನ್ನೇ ಹಿಮಾಲಯ ಅಂದುಕೊಳ್ಳುತ್ತಾರೆ' `ಹಿಮಾಲಯದಿಂದ ಗಂಗೆ ಹರಿಯುತ್ತಾಳೆ' `ಬರಿಗುಡ್ಡ ಏರಿದವರ ಕಣ್ಣುಗಳಿಂದ ಗೆರೆನದಿಗಳು' ಇತ್ಯಾದಿ ಸಾರ್ಥಕ ಗೆರೆಗಳು ನನ್ನೊಳಗಿನಿಂದ ಹೊರಬಂದವು. ಪುರುಷಯತ್ನ ಮತ್ತು ಸೋಲು . `ಸೋಲಿನಂತಹಾ ಗೆಲುವು' ಕೊಟ್ಟ ಕೊನೆಗೆ ಬಂದೇ ಬರುವ ಶೂನ್ಯ ಸಂಪಾದನೆ. ಇತ್ಯಾದಿಗಳು ಒಂದು ಕವನದ ಸಾಲುಗಳ ಹಾಗೆ ಹರಿದು ಬಂದವು. ಉಲ್ಕೆ ಬೀಳುವಾಗ ಒಂದು ಬೆಳಕಿನ ಗೆರೆ ಗೋಚರವಾಗುತ್ತದೆ. ಅದು ಅನಂತದಲ್ಲಿ ಆರಂಭವಾಗಿ ಅನಂತದಲ್ಲಿ ಕೊನೆಗೊಳ್ಳುತ್ತದೆ. ಮತ್ತು ಒಂದು ಬದುಕಿಗೆ, ಅದರ ಪೂರ್ಣತೆಯಲ್ಲೂ ಲಭ್ಯವಾಗು ಒಂದೇ ಒಂದು ಬೆಳಕಿನ ಗೆರೆ. ಅರ್ಥ ಮಾಡಿಕೊಳ್ಳುತ್ತೀರಾ?


- ನಿಮ್ಮ ವ್ಯಾಸ...
ವ್ಯಾಸರ ಪತ್ರಗಳು ಹಾಗೆಯೇ ಅವರ ಲೇಖನಗಳಂತೆ.ಅಷ್ಟೊಂದು ವಿಷಯ ವಸ್ತು. ನಿರೂಪಣಾ ಶೈಲಿ.ನಿಜಕ್ಕೂ ನಮ್ಮಂತಹ ಕಿರಿಯರನ್ನೂ ಆ ಹಿರಿಯ ಜೀವಿ ನಡೆಸಿಕೊಂಡ ರೀತಿ, ತೋರಿದ ಪ್ರೀತಿ ನಿಜಕ್ಕೂ ಅನರ್ಘ್ಯ. ವ್ಯಾಸರು ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಪತ್ರಗಳು ಆ ನೆನಪುಗಳನ್ನು ಮತ್ತೆ ಮತ್ತೆ ಬಿಚ್ಚಿಡುತ್ತಿದೆ. ನೆನಪುಗಳ ಓಘದಲ್ಲಿ ಮತ್ತೆ ವ್ಯಾಸರನ್ನು ಕಾಣುವ ತವಕ... ಹಂತ ಹಂತದಲ್ಲಿ ಅವರಾಡುತ್ತಿದ್ದ ಮಾತು...ದೂರವಾಣಿ ಸಂಭಾಷಣೆ...ಪ್ರೀತಿಯ ಪತ್ರಗಳು... ನೆನೆಯುತ್ತಿದ್ದಂತೆಯೇ ಕಣ್ಣು ಮಂಜಾಗುತ್ತಿದೆ...ಅಂಚಲ್ಲಿ ನೀರು ಜಿನುಗುತ್ತಿದೆ... ಮುಂದೆ ಬರೆಯಲು ಸಾಧ್ಯವಾಗುತ್ತಿಲ್ಲ...ಮುಂದಿನ ವಾರ ಮತ್ತೆ ಇನ್ನೊಂದು ವ್ಯಾಸರು ಬರೆದ ಪತ್ರದೊಂದಿಗೆ ಭೇಟಿಯಾಗೋಣ...
ಇಂತು ನಿಮ್ಮವ... - ಹರೀಶ್ ಕೆ.ಆದೂರು.

1 comments:

ಸಿಮೆಂಟು ಮರಳಿನ ಮಧ್ಯೆ said...

ನನಗೆ ಇಷ್ಟ ವ್ಯಾಸರಾಯರು..

ವ್ಯಾಸರಾಯರ ಪ್ರಭಾವ ನನ್ನ ಮೇಲೆ ಇದೆ..
ನನಗೆ ಅವರ ಬರವಣಿಗೆ ಬಹಳ ಇಷ್ಟ...

Post a Comment