ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ನನ್ನ ನಿರ್ದೇಶನ / ನಿರ್ಮಾಣದ ಫೋಟೋ ಕಾಮಿಕ್ಸ್ `ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವಾಗ ಬಹಳಷ್ಟು ಮಂದಿ ಮೆಚ್ಚುಗೆ ಸೂಚಿಸಿದ್ದರು. ಬಳಿಕ ಕೆಲವರು ಟೀವಿ ಧಾರಾವಾಹಿಯನ್ನು ನಿರ್ಮಿಸುವಂತೆ ನನ್ನನ್ನು ಕೇಳಿಕೊಂಡಿದ್ದರು. ಆದರೂ ಟೀವಿ ಧಾರಾವಾಹಿಗಾಗಿ ಅಷ್ಟು ಬಂಡವಾಳ ಹೂಡುವುದು ಕಷ್ಟ ಸಾಧ್ಯವೆ ಆಗಿತ್ತು. ಈ ವಿಷಯವನ್ನು ನನ್ನ ಆತ್ಮೀಯ ಗೆಳೆಯರೊಬ್ಬರ ಜೊತೆಗೆ ಹಂಚಿಕೊಂಡೆ. ಅವರು, ಬೆಳ್ಳೆಯವರೆ, ಯಾಕಾಗ್ಬಾರ್ದು... ಟೀವಿ ಧಾರಾವಾಹಿಯನ್ನು ತಯಾರಿಸೋಣ. ಅದಕ್ಕೆ ಬೇಕಾದ ಸ್ಪಾನ್ಸರ್ಸ್ ಅನ್ನು ನಾನು ಹುಡುಕಿಕೊಡ್ತೀನಿ. ನೀವು ಕಥೆ ಸಿದ್ಧಪಡಿಸಿ ಅಂದರು.

ಆಗ `ಅಪೂರ್ವರಾಗ' ಕಾದಂಬರಿಯನ್ನು ಬರೆದು ಮುಗಿಸಿ ಒಂದು ಮಾಸ ಪತ್ರಿಕೆಗೆ ಪ್ರಕಟಣೆಗೆ ಕಳುಹಿಸಿದ್ದೆ. ಪತ್ರಿಕೆಯ ಸಂಪಾದಕರು ಅದನ್ನು ಆರು ತಿಂಗಳುಗಳ ಕಾಲ ಹಾಗೆ ಮುಚ್ಚಿಟ್ಟಿದ್ದರು. ಕೊನೆಗೆ ನಾನಾಗಿಯೆ ಪ್ರಕಟಣೆಯ ಬಗ್ಗೆ ಕೇಳಿದೆ. ಅದಕ್ಕವರು, ಕಾದಂಬರಿ ತುಂಬಾ ಚೆನ್ನಾಗಿದೆ. ಆದರೆ ನಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ಬಹಳಷ್ಟು ದೊಡ್ಡದಾಯಿತು ಅಂದಾಗ ನಾನು ಅವರ ಬಳಿ ಇನ್ನು ಮಾತನಾಡಿ ಉಪಯೋಗವಿಲ್ಲವೆಂದುಕೊಂಡು ಅದನ್ನು ವಾಪಾಸು ಕಳಿಸುವಂತೆ ಕೋರಿದೆ. ಒಂದೇ ವಾರದಲ್ಲಿ ಅದು ನನ್ನ ಮನೆಗೆ ವಾಪಾಸು ಬಂತು. ಅದನ್ನು ಪುಸ್ತಕ ರೂಪದಲ್ಲಿಯಾದರು ಪ್ರಕಟಿಸೋಣವೆಂದುಕೊಂಡು ಮಂಗಳ/ ಅಕ್ಷಯ ಪ್ರಕಾಶನದ ಸೀತಾರಾಮ ಹೆಗಡೆಯವರನ್ನು ಕೇಳಿಕೊಂಡೆ. ನನಗೆ ಬೇಕಾದ ರೀತಿಯಲ್ಲಿ ಪುಸ್ತಕವನ್ನು ಪ್ರಕಟಿಸಿಕೊಡುವ ಅವರ ಮೇಲೆ ಅಭಿಮಾನವಿದೆ. ಅವರು ಚಿತ್ರಕಲಾವಿದ ಮೋನಪ್ಪನವರ ಕೈಯಲ್ಲಿ ಚಿತ್ರವನ್ನು ಬರೆಸಿ ಅಂದವಾಗಿ ಮುದ್ರಿಸಿಕೊಟ್ಟರು. ಅದನ್ನು ತೆಗೆದುಕೊಂಡು ನನ್ನ ಆತ್ಮೀಯರ ಬಳಿ ಹೋದೆ. ಅವರು ಅದನ್ನು ಓದಿ ತಿಳಿಸುವುದಾಗಿ ನನ್ನನ್ನು ಕಳುಹಿಸಿದರು.

ಸ್ವಲ್ಪ ಸಮಯದ ಬಳಿಕ ಅವರಿಗೆ ನಾನೇ ಮತ್ತೆ ಟೀವಿ ಧಾರಾವಾಹಿಯ ನೆನಪು ಮಾಡಿದೆ. ಅವರು, ಕಥೆಯೇನೋ ಚೆನ್ನಾಗಿದೆ. ನಾನು ಬೆಂಗಳೂರಿನಲ್ಲಿರುವ ನನ್ನ ಕಸಿನ್ನನ್ನು ಮಾತಾಡಿ ಧಾರಾವಾಹಿಯ ಬಗ್ಗೆ ತಿಳಿಸುತ್ತೇನೆಂದರು. ಒಪ್ಪಿಕೊಂಡೆ. ಅಷ್ಟು ಹೊತ್ತಿಗಾಗಲೆ ಅವರಿಗೆ ಬೆಂಗಳೂರಿಗೆ ವರ್ಗವಾಗಿತ್ತು. ಮತ್ತೆ ನಮ್ಮ ಕಮ್ಯುನಿಕೇಷನ್ ಕೂಡ ಅರ್ಧಕ್ಕೆ ನಿಂತಿತು.
ಆ ಸಮಯದಲ್ಲಿ ನಾನು `ಮಲ್ಲಿಗೆ' ಮಾಸ ಪತ್ರಿಕೆಯ ಸಂಪಾದಕರಾದ ಎನ್ ಎಸ್. ಶ್ರೀಧರಮೂರ್ತಿಯವರ ಬಳಿ ಈ ವಿಷಯ ಪ್ರಸ್ತಾಪಿಸಿದೆ. ಅವರು ನಿರ್ದೇಶಕ ರಮೇಶ್ ಬೇಗಾರ್ ಅವರ ಪರಿಚಯ ಮಾಡಿಸಿದರು. ಆಗ ಬೆಂಗಳೂರಿಗೆ ವರ್ಗವಾಗಿದ್ದ ನನ್ನ ಗೆಳೆಯ ಮತ್ತೆ ಧಾರಾವಾಹಿಯ ಬಗ್ಗೆ ನೆನಪಿಸಿ ಅವರ ಕಸಿನ್ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ತಿಳಿಸಿದರು. ನಾನು ಬೇಗಾರ್ ಅವರನ್ನು ಮಂಗಳೂರಿಗೆ ಬರುವಂತೆ ಹೇಳಿ, ನಾನು, ನನ್ನ ಗೆಳೆಯ, ಅವನ ಕಸಿನ್ ಮತ್ತು ರಮೇಶ್ ಬೇಗಾರ್ ನಾವು ನಾಲ್ಕು ಮಂದಿಯೂ ತಾಜ್ಮಹಲ್ ಹೊಟೇಲ್ನಲ್ಲಿ ಕುಳಿತು ಅದರ ಬಗ್ಗೆ ಡಿಸ್ಕಷನ್ ನಡೆಸಿದೆವು. `ಪಾಪಿ ಹೋದಲ್ಲಿ ಮೊಳಕಾಲು ನೀರು' ಅನ್ನುವಂತೆ ಆಗಲೆ ರಿಸೆಷನ್ ಆರಂಭವಾಗಿತ್ತು. ಧಾರಾವಾಹಿ ನಿರ್ಮಿಸಬೇಕಾದ ವ್ಯಕ್ತಿ ಆಗಲೇ ಹಣ ಕಳೆದುಕೊಂಡಿದ್ದರು. ಅಲ್ಲಿಗೆ ನಮ್ಮ ಪ್ರೋಜೆಕ್ಟ್ ನೆನೆಗುದಿಗೆ ಬಿತ್ತು. ಆದರೆ ರಮೇಶ್ ಬೇಗಾರ್ರಂತಹ ವ್ಯಕ್ತಿಯ ಗೆಳೆತನ ನನಗೆ ದೊರಕಿದ್ದು ನನ್ನ ಪುಣ್ಯ. ಅವರು ಆಗಲೆ ಮಲೆನಾಡಿನ ಜನ ಜೀವನದ ಬಗ್ಗೆ ಒಂದು ಧಾರಾವಾಹಿಯನ್ನು ನಿರ್ದೇಶಿಸಿದ್ದಲ್ಲದೆ, `ಏಕೆ ಹೀಗೆ ನಮ್ಮ ನಡುವೆ' ಅನ್ನುವ ಧಾರಾವಾಹಿಯನ್ನು ನಿರ್ಮಿಸಿ ಜನಪ್ರಿಯರಾಗಿದ್ದರು.

ಎಲ್ಲಾ ದಿನಪತ್ರಿಕೆಗಳನ್ನು ಓದುವುದು ನನ್ನ ಹವ್ಯಾಸ. ಒಂದೆರಡು ವರ್ಷಗಳ ಬಳಿಕ ನಾನು ಹೀಗೆ `ವಿಜಯ ಕರ್ನಾಟಕ' ಪತ್ರಿಕೆಯನ್ನು ಓದುತ್ತಿರಬೇಕಾದರೆ ರಮೇಶ್ ಬೇಗಾರ್ರ ಬಗ್ಗೆ ಒಂದು ಲೇಖನ ಪ್ರಕಟವಾಗಿತ್ತು. ಅವರು `ಚಂದನ' ಟೀವಿಗಾಗಿ `ಪರಿಭ್ರಮಣ' ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದರು. ಅದನ್ನು ಓದಿ ನಾನು ಅವರಿಗೆ ಫೋನಾಯಿಸಿ ಅಭಿನಂದನೆಗಳನ್ನು ಹೇಳಿದೆ. ಅವರು ತತ್ಕ್ಷಣ, ಬೆಳ್ಳೆಯವರೆ, ನೀವು ತುಂಬಾ ಬರೆಯುತ್ತಿದ್ದೀರಲ್ಲಾ. ಎಲ್ಲಾ ಪತ್ರಿಕೆಗಳಲ್ಲು ಗಮನಿಸುತ್ತಿದ್ದೇನೆ ಅಂದರು. ಆಗ ನಾನು ಹೀಗೆ, ನಿಮ್ಮ ಧಾರಾವಾಹಿಯಲ್ಲಿ ಅಭಿನಯಿಸುವುದಕ್ಕೆ ಅವಕಾಶ ಕೊಡುತ್ತೀರ? ಎಂದು ಕೇಳಿದೆ. ಧಾರಾವಾಹಿಯಲ್ಲಿ ನಾನು ಅಭಿನಯಿಸಬೇಕೆನ್ನುವ ಬಯಕೆ ಹುಟ್ಟಿದ್ದು ಫೋಟೋಕಾಮಿಕ್ಸ್ಗಳನ್ನು ನಿರ್ದೇಶಿಸಿದ ಬಳಿಕ.

ಕೆಲವರಂತು ನನ್ನ ಫೋಟೋಕಾಮಿಕ್ಸ್ನಲ್ಲೇ ನಾನು ಅಭಿನಯಿಸಬೇಕಿತ್ತೆಂದು ಒತ್ತಾಯಿಸಿದ್ದರು ಕೂಡ. ಆದರೆ `ಒನ್ ಮ್ಯಾನ್ ಆರ್ಮಿ ' ಆಗುವುದಕ್ಕೆ ನನಗೆ ಇಷ್ಟವಿರಲಿಲ್ಲ. ಬೇಗಾರ್ರವರು ಕೂಡ, ನಿಮಗೆ ಅಭಿನಯಕ್ಕಿಂತಲೂ ಒಳ್ಳೆಯ ಅವಕಾಶ ಕೊಡುತ್ತೇನೆ. ಸಾಧ್ಯವಾದರೆ ಮುಂದಿನವಾರ ಶೃಂಗೇರಿಗೆ ಬನ್ನಿ. ಮಾತಾಡೋಣ ಅಂದರು. ನನಗಂತೂ ಬಹಳ ಖುಷಿಯಾಯಿತು. ಅವರು ಹೇಳಿದ ದಿನಾಂಕದಂದು ಶೃಂಗೇರಿಗೆ ಹೋದೆ.
`ಶೃಂಗಗಿರಿ'ಯಲ್ಲಿ ನಮಗಾಗಿ ಒಂದು ರೂಂ ಬುಕ್ ಮಾಡಿದ್ದರು. ಬಳಿಕ ಅವರ ಅಸಿಸ್ಟೆಂಟ್ ಜೊತೆಗೆ ಬಂದು ನನ್ನನ್ನು ಪರಿಚಯಿಸಿ, ಪರಿಭ್ರಮಣದ ಮುಂದಿನ ಐದು ಕಂತುಗಳಿಗೆ ಕಥಾ ವಿಸ್ತಾರ ಮತ್ತು ಸಂಭಾಷಣೆ ನಿಮ್ಮದು. ನೀವು ಒಪ್ಪಿಗೆ ಕೊಟ್ಟರೆ ಈವರೆಗೆ ಆದ ಕಂತುಗಳನ್ನು ನಮ್ಮ ನಿರ್ಮಾಪಕರ ಮನೆಯಲ್ಲಿ ಸಿಡಿ ಹಾಕಿ ತೋರಿಸುತ್ತೇನೆ ಅಂದರು. ನಾನು ಒಪ್ಪಿಕೊಂಡೆ. ಅದೇ ದಿನ ರಾತ್ರಿ ನಿರ್ಮಾಪಕ ಶಿವಣ್ಣರ ಮನೆಗೆ ಹೋಗಿ ಹಿಂದಿನ ಎಲ್ಲಾ ಕಂತುಗಳನ್ನು ನೋಡಿದೆ. ಇದರಿಂದ ನನಗೆ ಕಥಾವಿಸ್ತರಣೆಗೆ ಅನುಕೂಲವಾಯಿತು. ಮರುದಿನ ನಾನು ಹೊರಟು ಬರುವಾಗ ಬೇಗಾರ್ರವರು ಶೂಟಿಂಗ್ ಮಾಡುವ ದಿನವನ್ನು ಗೊತ್ತು ಮಾಡಿ ನಿಮಗೆ ತಿಳಿಸುತ್ತೇನೆ ಅಂದರು. ನೀವು ನಾಲ್ಕು ದಿನ ಇಲ್ಲಿಯೆ ಇರಬೇಕಾಗುತ್ತದೆ ಅಂದರು. ನಾನು ಒಪ್ಪಿಗೆ ಸೂಚಿಸಿ ಮನೆಗೆ ಬಂದೆ.

ಅಂತೂ ಮಳೆಗಾಲ ಇನ್ನೇನು ಆರಂಭವಾಗಬೇಕೆನ್ನುವ ಕೆಲವೇ ದಿನಗಳ ಮುಂದೆ ಶೂಟಿಂಗ್ನ ದಿನವನ್ನು ಗೊತ್ತುಪಡಿಸಿ ಬೇಗಾರ್ರವರು ನನಗೆ ಫೋನಾಯಿಸಿದರು. ನಾನು ನಾಲ್ಕು ದಿನಗಳ ರಜೆ ಹಾಕಿ ಶೃಂಗೇರಿಗೆ ಹೊರಟೆ. ಮೊದಲೇ ಮಲೆನಾಡಿನ ಬಗ್ಗೆ ವಿಪರೀತ ಮೋಹ ಬೆಳೆಸಿಕೊಂಡವನು ನಾನು. ಬಜಗೋಳಿಯಿಂದ ಹಿಂಡಿದು ಶೃಂಗೇರಿಯವರೆಗೂ ಕಾಣುವ ಮಲೆನಾಡ ದೃಶ್ಯ ವೈಭವವನ್ನು ನೆನಪಿಸಿಕೊಂಡು ಪುಳಕಿತನಾಗುತ್ತಿದ್ದೆ. ನಡು ನಡುವೆ ಬೇಗಾರ್ರವರು, ಬೆಳ್ಳೆಯವರೆ, ಈಗ ಎಲ್ಲಿ ಬರ್ತಾ ಇದ್ದೀರಿ? ಎಂದು ಪದೇ ಪದೇ ವಿಚಾರಿಸೋರು. ಅಂತು ಸಂಜೆಯ ಸೂರ್ಯ ಕಂತುವ ಮುನ್ನ ನಾನು ಶಾರದಾಂಬೆಯ ನೆಲವನ್ನು ಸೋಕಿಯಾಗಿತ್ತು.

ಬಸ್ ಸ್ಟಾಂಡಲ್ಲಿ ಇಳಿದವನೇ ಬೇಗಾರ್ರಿಗೆ ಫೋನ್ ಮಾಡಿದೆ. ಅವರು `ಕಾಳಿಂಗ' ಕ್ಯಾಸೇಟ್ ಅಂಗಡಿಯ ಬಳಿ ಬರುವಂತೆ ಹೇಳಿದರು. ಅಟೋ ಹಿಡಿದು ಅಲ್ಲಿಗೆ ಹೊರಟೆ. ಅವರು ನನ್ನನ್ನು ತಮ್ಮ ಮಾಮೂಲಿ ಅಡ್ಡೆ (ಅವರೇ ಹೇಳಿಕೊಳ್ಳುತ್ತಿದ್ದುದು) ಶೃಂಗಗಿರಿಗೆ ಕರೆದುಕೊಂಡು ಹೋದರು.
ನೋಡಿ, ವಿಷಯ ಹೀಗೀಗೆ ಇದೆ. ಇಷ್ಟಿಷ್ಟು ಪುಟ ಒಂದೊಂದು ದೃಶ್ಯಕ್ಕೆ ನೀವು ಬರೆಯಬೇಕು. ಇವತ್ತು ರೆಸ್ಟ್ ತೆಗೆದುಕೊಂಡು ನಾಳೆಯಿಂದ ನಿಮ್ಮ ಕೆಲಸ ಆರಂಭಿಸಿ. ಅಂತು ಎರಡು ದಿನಗಳೊಳಗೆ ಕಥಾವಿಸ್ತರಣೆ ಮತ್ತು ಸಂಭಾಷಣೆ ಮುಗಿದಿರಬೇಕು ಅಂದು ನನ್ನನ್ನು ಬೀಳ್ಕೊಟ್ಟರು. ಜೊತೆಗೆ ನನ್ನ ಕಾಫಿ, ತಿಂಡಿ ಊಟಕ್ಕೆ ಗುರುಪ್ರಸಾದ್ ಹೊಟೇಲನ್ನು ಗೊತ್ತು ಪಡಿಸಿದರು.

ನನ್ನಲ್ಲಿ ಬರೆಯುವ ಹುಮ್ಮಸಿದ್ದುದ್ದರಿಂದ ನಾಳೆಯವರೆಗೆ ಕಾಯುವ ಸಮಯವಿರಲಿಲ್ಲ. ಅವರು ಕೊಟ್ಟ ಪೆನ್ನು ಪೇಪರ್ಗಳನ್ನು ತೆಗೆದುಕೊಂಡು ಬರೆಯಲು ಆರಂಭಿಸಿದೆ. ಮಧ್ಯೆ ರಾತ್ರಿಯ ಊಟಕ್ಕೆ ಬ್ರೇಕ್ ಕೊಟ್ಟಿದ್ದೆನೆನೋ? ಮುಂಜಾವಿನ ನಾಲ್ಕು ಗಂಟೆಯವರೆಗೂ ಬರೆಯುತ್ತಾ ಕುಳಿತೆ. ಕೊನೆಗೆ ಎರಡು ಗಂಟೆಗಳಷ್ಟು ಸಮಯ ನಿದ್ದೆ ಮಾಡಿ, ಎದ್ದು ಶಾರದಾಂಬೆಯ ದರ್ಶನ ಮುಗಿಸಿಕೊಂಡು ಬಂದವನೆ, ಗುರುಪ್ರಸಾದದಲ್ಲಿ ಟಿಫಿನ್ ಮುಗಿಸಿ ಮರಳಿ ಶೃಂಗಗಿರಿಗೆ ವಾಪಾಸಾದೆ.
ಸುಮಾರು ಹತ್ತುಗಂಟೆಗೆಲ್ಲ ಬೇಗಾರ್ ಸಾರ್ ಫೋನ್ ಮಾಡಿ ಶೃಂಗಗಿರಿಗೆ ಬರುವುದಾಗಿ ತಿಳಿಸಿದರು. ಅಷ್ಟರೊಳಗೆ ನಾನು ಬರೆದಿದ್ದನ್ನು ತಿದ್ದುಪಡಿ ಮಾಡುತ್ತಾ ಕುಳಿತೆ. ಅವರು ಬಂದವರೆ ನನ್ನ ಕೆಲಸವನ್ನು ಪರಿಶೀಲಿಸಿ ಅಭಿನಂದನೆ ತಿಳಿಸಿದರು. ಕೊನೆಗೆ ಅವುಗಳನ್ನೆಲ್ಲಾ ಮನೆಗೆ ತೆಗೆದುಕೊಂಡು ಹೋಗಿ ಸಂಜೆಗೆ ಕೆಲವೊಂದು ಬದಲಾವಣೆಗಳನ್ನು ಸೂಚಿಸಿದರು. ಅವನ್ನೆಲ್ಲಾ ಅದೇ ರಾತ್ರಿ ಮಾಡಿ ಮುಗಿಸಿದ ಬಳಿಕ ಮತ್ತೂ ಒಂದು ದಿನದ ಅವಕಾಶವಿತ್ತು. ಅವರೇ ಬರೆಯಬೇಕಿಂದಿರುವ ಒಂದೆರಡು ದೃಶ್ಯಗಳನ್ನು ನನಗೆ ಬರೆಯಲು ಹೇಳಿದ ಮೇಲೆ ಮರುದಿನ ಅದನ್ನೂ ಬರೆದು ಮುಗಿಸಿದೆ.
ಅಂತು ನಾಲ್ಕು ದಿನದ ರಜೆಯಲ್ಲಿ ಎರಡು ದಿನ ಮುಗಿಯಿತು. ಇನ್ನೆರಡು ದಿನ ಶೂಟಿಂಗ್ಗಾಗಿ ಮೀಸಲಾಗಿತ್ತು. ನನಗೂ ಶೂಟಿಂಗ್ ನೋಡುವ ಕುತೂಹಲ. ಶೃಂಗಗಿರಿಯಲ್ಲಿ ಇದ್ದಕ್ಕಿದ್ದಂತೆ ಜನರ ಗದ್ದಲ ಆರಂಭವಾಯಿತು. ಅಂದರೆ ಬೆಂಗಳೂರಿನಿಂದ ಕಲಾವಿದರು, ಲೈಟಿಂಗ್ನವರು, ಕ್ಯಾಮರಾ ಮನ್, ಮೇಕಪ್ ಮನ್, ಅಸಿಸ್ಟೆಂಟ್ ಡೈರೆಕ್ಟರ್... ಹೀಗೆ ಚಿತ್ರೀಕರಣಕ್ಕೆ ಸಂಬಂಧಪಟ್ಟವರೆಲ್ಲಾ ಬಂದಿಳಿದರು. ಏನೋ ಒಂದು ಹೊಸ ಪರಿಸರವೇ ನಿರ್ಮಾಣವಾದಂತೆ ಗಲಿಬಿಲಿ, ಲವಲವಿಕೆ, ಓಡಾಟಗಳೆಲ್ಲಾ ಆರಂಭವಾಗಿತ್ತು.

ಮಾರನೆ ದಿನ ಶೂಟಿಂಗ್ ಸ್ಪಾಟ್ಗೆ ಹೋಗಲು ಇಡ್ಲಿ, ವಡಾ ಸಾಂಬರ್ನಿಂದ ಹಿಡಿದು ಕ್ಯಾಮರಾದವರೆಗೂ ಸಿದ್ಧತೆ ನಡೆದು, ಒಂದು ಒಮ್ನಿಯಲ್ಲಿ ನಾಲ್ಕೈದು ಬಾರಿ ಟ್ರಿಪ್ ನಡೆದ ಬಳಿಕ ನಾವೂ ಅಲ್ಲಿಗೆ ಹೋದೆವು. ಈ ಹಿಂದೆ ಶೂಟಿಂಗ್ ಆದ ಸ್ಥಳಗಳನ್ನೆಲ್ಲಾ ಗುರುತು ಹಾಕಿಕೊಂಡು ಯಾವ ಯಾವ ದೃಶ್ಯ ಎಲ್ಲೆಲ್ಲಿ ನಡೆಯಬೇಕೆಂದುಕೊಂಡು ವಿವರಿಸಿ ಆ ಶೆಡ್ಯೂಲ್ನ ಪ್ರಕಾರವೇ ಶೂಟಿಂಗ್ ಮಾಡುತ್ತಿದ್ದರು. ನನ್ನನ್ನು ಬಹಳವಾಗಿ ಆಕರ್ಷಿಸಿದ್ದು ನದಿ ತೀರದಲ್ಲಿ ನಡೆದ ದೃಶ್ಯದ ಚಿತ್ರೀಕರಣ. ಪ್ಲಸೆಂಟ್ ಕ್ಲೈಮೇಟ್ನ ಜೊತೆಗೆ ಸಾವಿನ ನೋವುಂಡ ಕಥಾನಾಯಕನನ್ನು ಸಾಂತ್ವನಿಸುವ ದೃಶ್ಯ ಅದು. ಗೆಳೆಯ ನಾಗಾರಾಜ್ ರಾವ್ ಬಹಳ ಸಹಜವಾಗಿ ಧಾರಾವಾಹಿಯುದ್ದಕ್ಕೂ ನಟಿಸುತ್ತಾ, ಕೆಲವೊಂದು ಕಡೆ ತಮ್ಮದೇ ಆದರ್ಶದ ಡೈಲಾಗುಗಳನ್ನು ಹೇಳುತ್ತಾ ಅಲ್ಲಿದ್ದವರನ್ನೆಲ್ಲಾ ಭಾವುಕರನ್ನಾಗಿಸುತ್ತಿದ್ದರು.

ನಾಲ್ಕನೆ ದಿನ ಚಿತ್ರೀಕರಣ ನಡೆಯುತ್ತಿದ್ದಂತೆ ಎಲ್ಲಿತ್ತೋ ಕರಿ ಮೋಡಗಳು ಇದ್ದಕ್ಕಿದ್ದಂತೆ ದಟ್ಟೈಸಿ ಗುಡುಗು, ಮಿಂಚಿನ ಸಹಿತ ಒಂದೆರಡು ಗಂಟೆಗಳ ಕಾಲ ಮಲೆನಾಡಿನ ಮಳೆಯ ಚಂದವನ್ನು ಕಾಣಿಸಿತು. ಮಧ್ಯೆ ಶೂಟಿಂಗ್ಗೆ ತೊಂದರೆಯೆನಿಸಿದರೂ, ಆನಂತರ ಎಲ್ಲವೂ ನಿರಾಳವಾಗಿ ನಡೆಯಿತು.
ಶೂಟಿಂಗ್ನ ಕೊನೆಯ ದೃಶ್ಯ ನಿರ್ಮಾಪಕ ಶಿವಣ್ಣರವರ ಮನೆಯಲ್ಲಿಯೆ ನಡೆಯುವುದಿತ್ತು. ನಮ್ಮ ಯೂನಿಟ್ ಅಲ್ಲಿಗೆ ಶಿಫ್ಟಾಗುವ ಹೊತ್ತಿಗೆ ಸಂಪೂರ್ಣ ಕತ್ತಲಾವರಿಸುವ ಭಯ. ಅದಕ್ಕೂ ಮುನ್ನ ನಾನು ಉಜಿರೆಗೆ ಮರಳಬೇಕಾಗಿತ್ತು. ಬೇಗಾರ್ರವರನ್ನು ಕರೆದು ನಾನು ಹೊರಡುವ ಸೂಚನೆ ಕೊಟ್ಟೆ. ಅವರು ನನ್ನ ಸಹಕಾರವನ್ನು ಪ್ರಶಂಸಿಸುತ್ತಾ, ಮುಂದಿನ ಧಾರಾವಾಹಿಗಳಲ್ಲಿ ಅವಕಾಶ ಕೊಡುವುದಾಗಿ ಹೇಳಿ ನನ್ನನ್ನು ಬಸ್ ಸ್ಟಾಂಡ್ವರೆಗೂ ಬಿಡುವಂತೆ ಕಾರಿನ ಹುಡುಗನಿಗೆ ಹೇಳಿದರು. ನಾನು ಶೃಂಗಗಿರಿಗೆ ಬಂದು ರೂಮ್ ಚೆಕ್ಔಟ್ ಮಾಡಿ ಕಾರಿನಲ್ಲಿ ಬಸ್ ಸ್ಟಾಂಡ್ಗೆ ಬಂದೆ. ಕಾರ್ಕಳಕ್ಕೆ ಹೊರಡುವ ಕೊನೆಯ ಬಸ್ ಹೊರಡಲು ಸಜ್ಜಾಗಿತ್ತು. ಬಸ್ ಹತ್ತಿ ಕುಳಿತು ನಾಲ್ಕು ದಿನಗಳ ಹೊಸ ಅನುಭವವೊಂದನ್ನು ಬಸ್ಸಿನ ಸೀಟ್ಗೆ ಭಾರ ಹಾಕಿ, ತಲೆಯೊರಗಿಸಿ ಮೆಲುಕು ಹಾಕತೊಡಗಿದೆ.

ಪ್ರತೀ ಭಾನುವಾರವೂ `ಪರಿಭ್ರಮಣ'ದ ಕಂತುಗಳಿಗಾಗಿ ಕಾಯುತ್ತಿದ್ದೆ. ಕೊನೆಗೂ `ಬಾಳ ಪಯಣದ ದಾರಿಯ ಹಿಂದೆ, ಎಡರು ತೊಡರುಗಳ ಸಹಿಸುತ ಮುಂದೆ...' ಸುಭಾಷ್ ಹಾರೆಗೊಪ್ಪ ಅವರ ಮಧುರ ಕಂಠದ ಶೀರ್ಷಿಕೆ ಹಾಡಿನೊಂದಿಗೆ ಒಂದು ಕ್ಷಣ ಬಂದು ಮರೆಯಾಗಿ ಹೋಗುವ `ಸಂಭಾಷಣೆ - ಅನು ಬೆಳ್ಳೆ' ನೋಡುತ್ತಲೇ ಒಳಗೊಳಗೆ ಖುಷಿ ಪಡುತ್ತಿದ್ದೆ. ಐದು ವಾರಗಳ ಕಾಲ ಅದನ್ನು ತಪ್ಪದೆ ವೀಕ್ಷಿಸಿದೆ. ಹೊಸ ಅನುಭವವನ್ನು ಗಳಿಸಿಕೊಡುವುದಕ್ಕೆ ಅವಕಾಶ ಕೊಟ್ಟ ರಮೇಶ್ ಬೇಗಾರ್ ಅವರಿಗೆ ಕೃತಜ್ಞತೆಯನ್ನು ಸೂಚಿಸಲೇಬೇಕು.

- ಅನು ಬೆಳ್ಳೆ

0 comments:

Post a Comment