ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಲೀಲಾವತಿ ಬೈಪಡಿತ್ತಾಯ ಅವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿಪರಶುರಾಮ ಸೃಷ್ಟಿಯ ಕರಾವಳಿ ಮಣ್ಣಿನ ಕಣ ಕಣದಲ್ಲೂ ಯಕ್ಷಗಾನದ ಕಂಪಿದೆ. ಜನರ ನರನಾಡಿ ಯಕ್ಷಗಾನಕ್ಕೆ ಮಿಡಿಯುತ್ತದೆ. ಇಂಥಹ ಪರಿಸರದಲ್ಲಿ ಬೆಳೆದ ಲೀಲಾವತಿ ಬೈಪಾಡಿತ್ತಾಯ ಮಹಿಳಾ ಭಾಗವತಿಕೆ ಏಕೈಕ ಮಹಿಳೆ ಎಂಬ ಅಘ್ರಪಟ್ಟ ಲಂಕರಿಸಿದ್ದಾರೆ.
ಪುರುಷ ಪ್ರಧಾನ ಯಕ್ಷಗಾನದಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಮಹಿಳೆಯರು ಎಂಟ್ರಿ ಕೊಟ್ಟರೂ ಹೆಸರು ಮಾಡಿದೋರು ಕಡಿಮೆ. ಲೀಲಾವತಿ ಬೈಪಡಿತ್ತಾಯ ಅವರು ಗಟ್ಟಿಯಾಗಿ ಯಕ್ಷಗಾನದಲ್ಲಿ ನಿಂತು, ಭಾಗವತಿಕೆಯಲ್ಲಿ ಹೆಸರು ಮಾಡಿದರು. ಇವರ ಸಾಧನೆಗೆ ಹತ್ತು ಹಲವು ಪ್ರಶಸ್ತಿ ಸಿಕ್ಕಿದೆ. ಪ್ರಸಕ್ತ ಯಕ್ಷಗಾನ ಬಯಲಾಟ ಅಕಾಡೆಮಿ ಈ ಹೆಣ್ಣು ಮಗಳಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.ಹಿನ್ನೆಲೆಯೇನು : ಯಕ್ಷಗಾನ ಕ್ಷೇತ್ರದಲ್ಲಿ ಇಂಪಾದ ಸ್ವರದ ಮೂಲಕ ನೂರಾರು ಶೋತೃಗಳನ್ನು ಬೈಪಡಿತ್ತಾಯ ಮೋಡಿ ಮಾಡಿದ್ದಾರೆ ಅಂದರೆ ಅತಿಶಯೋಕ್ತಿಯಲ್ಲ. ಯಕ್ಷಗಾನಕ್ಕೆ ಮಹಿಳೆಯರ ಸ್ವರ `ಸೂಟ್' ಆಗೋದಿಲ್ಲ ಎಂಬ ಮಾತು ಅಳಿಸಿ ಹಾಕಿದ್ದಾರೆ.
ಯಕ್ಷಗಾನದ ರಿಂಗಿಣದ ನಾದ ಸದಾ ಸದಾ ಹರಿಯುವ ಕಾಸರಗೋಡಿನ ಮಧೂರು ಬೈಪಡಿತ್ತಾಯ ಅವರ ಹುಟ್ಟೂರು. ಇವರಿಗೆ ಯಕ್ಷಗಾನದ ಗೀಳು ಹೇಗೆ ಅಂಟಿತೋ ಗೊತ್ತಿಲ್ಲ. ಮಧೂರು ಸರಳಾಯರ ಮನೆಯಲ್ಲಿ ಸಂಗೀತಾಭ್ಯಾಸಕ್ಕೆ ಶುರುಹಚ್ಚಿಕೊಂಡರು.
ಬಡತನ ಸಂಗೀತಾಭ್ಯಾಸಕ್ಕೆ ಅಡ್ಡಗಾಲಿಕ್ಕುತ್ತಿದ್ದರೂ, ಸಂಗೀತ ಕಲಿಕೆ ನಿಲ್ಲಲಿಲ್ಲ. ಇದೇ ಬೈಪಡಿತ್ತಾಯ ಬದುಕಿಗೆ ಬೆಳಕಾಯಿತು. ಕಿತ್ತು ತಿನ್ನುವ ಬಡತನ ಮತ್ತು ತಂದೆ ನಿಧನ ಮುಂತಾದ ಕಿಹಿ ಹಿನ್ನೆಲೆಯಲ್ಲಿ ಕಲಿತದ್ದು ಏಳನೇ ತರಗತಿ. ಇವರು ಬೆಳೆದಿದ್ದು ಮಧೂರು ಪಡುಕಕ್ಕೆಪ್ಪಾಡಿ ಸೋದರ ಮಾವನ ಮನೆಯಲ್ಲಿ. ಮಾವ ರಾಮಕೃಷ್ಣ ಭಟ್ ಮಧೂರು ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ದೇವ ನೃತ್ತದಲ್ಲಿ ಸುಪ್ರಸಿದ್ದಿ ಪಡೆದಿದ್ದರು. ಕೇರಳ ರಾಜ್ಯ ಪ್ರಶಸ್ತಿಯೂ ಇವರಿಗೆ ಲಭಿಸಿತ್ತು.

ಹೊರಳು ದಾರಿಯಲ್ಲಿ : ಸಂಗೀತಾಭ್ಯಾಸ ಮಾಡುತ್ತಿದ್ದ ಇವರಿಗೆ ಮದುವೆ ನಂತರ ಯಕ್ಷಗಾನದ ನಂಟು ಅಂಟಿಕೊಂಡಿತು. ತೆಂಕುತಿಟ್ಟಿನ ಅಗ್ರಮಾನ್ಯ ಗುರು ಎಂದೇ ಗುರುತಿಸಿಕೊಂಡ ಹರಿನಾರಾಯಣ ಬೈಪಾಡಿತ್ತಾಯ ಅವರು ತಮ್ಮ ಹಾದಿಯಲ್ಲಿ ಪತ್ನಿ ಸಾಗಿಸುವಂತೆ ಮಾಡಿದರು.
ಸಂಗೀತ ರಾಗಗಳ ಪರಿಚಯವಿರುವ ಪತ್ನಿಗೆ ಯಕ್ಷಗಾನದ ಹಾಡುಗಾರಿಕೆ ಕಲಿಸಿದರೆ ಹೇಗೆ ಎಂಬ ಯೋಚನೆ ಲೀಲಾವತಿ ಬೈಪಡಿತ್ತಾಯ ಅವರ ಕೈಗೆ ಜಾಗಟೆ, ಕೋಲು ಬರಲು ಕಾರಣ. ಮೂಢ ನಂಬಿಕೆ ಕಟ್ಟಳೆ ಮೆಟ್ಟಿ ನಿಂತು, ತೆಂಕು ತಿಟ್ಟಿನ ಅಗ್ರಮಾನ್ಯ ಭಾಗವತರಾಗಿ ಮೆರೆದ ಬೈಪಾಡಿತ್ತಾಯ ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಪಟ್ಟಕ್ಕೇರಿದರು.
ಸುಬ್ರಹ್ಮಣ್ಯ ಮೇಳ, ಪುತ್ತೂರು ಮೇಳ, ಕದ್ರಿ ಮೇಳ, ಕರ್ನಾಟಕ ಮೇಳ, ಅರುವ ಮೇಳ, ಬಪ್ಪನಾಡು ಮೇಳ, ಕುಂಬಳೆ, ತಲಕಳ ಮೇಳ ಮುಂತಾಗಿ ಮೇಳಗಳಲ್ಲಿ ಇಪ್ಪತ್ತು ವರ್ಷ ಡೇರೆ ಮತ್ತು ಬಯಲಾಟ ಮೇಳಗಳದಲ್ಲಿ ಪತಿ ಜೊತೆ ಊರಿಂದೂರಿಗೆ ತಿರುಗಾಟ ಮಾಡಿದ್ದಾರೆ. ಅದೆಷ್ಟೋ ಕಲಾವಿದರನ್ನು ರಂಗದಲ್ಲಿ ಕುಣಿಸಿದ್ದಾರೆ. ಇವರಿಗೆ ಯಕ್ಷಗಾನ ಬದುಕಿನಲ್ಲಿ ಸಿದ್ಧಿ, ಪ್ರಸಿದ್ಧಿ ದೊರೆತದ್ದು ಎಂಭತ್ತರ ದಶಕದಲ್ಲಿ.

ಅರ್ವ ನಾರಾಯಣ ಶೆಟ್ಟಿ ಅವರು ಅಳದಂಗಡಿ ಡೇರೆ ಮೇಳದಲ್ಲಿ ಪ್ರಧಾನ ಭಾಗವತರಾಗಿ ಭೂಮಿಕೆ ನಿಭಾಯಿಸಿದರು. `ಪರಕೆದ ಪಿಂಗಾರ' ಯಕ್ಷಗಾನದ ಹಾಡುಗಳ ಇಂದಿಗೂ ವೀಕ್ಷಕರ ನೆನಪಿನಾಳದಲ್ಲಿ ಉಳಿದಿರೋದು ಬೈಪಡಿತ್ತಾಯ ಅವರ ತಾಕಿತ್ತಿಗೆ ಸಾಕ್ಷಿ.
ದಿ.ಶೇಣಿ ಗೋಪಾಲಕೃಷ್ಣ ಭಟ್, ಬಣ್ಣದ ಮಾಲಿಂಗ, ಹೊಸಹಿತ್ಲು ಮಹಾಲಿಂಗ ಭಟ್, ಪಡ್ರೆ ಚಂದು, ಪುತ್ತೂರು ನಾರಾಯಣ ಹೆಗ್ಡೆ, ಅಳಿಕೆ ರಾಮಯ್ಯ ರೈ, ಕೆ.ಗೋವಿಂದ ಭಟ್, ಪುತ್ತೂರು ಕೃಷ್ಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಎಂಪೆಕಟ್ಟೆ ರಾಮಯ್ಯ ರೈ, ಕುಂಬಳೆ ಸುಂದರ ರಾವ್, ಶಂಕರನಾರಾಯಣ ಸಾಮಗ, ರಾಮದಾಸ ಸಾಮಗ, ಎಂ.ಎಲ್.ಸಾಮಗ, ತೆಕ್ಕಟ್ಟೆ ಆನಂದ ಮಾಸ್ತರ್, ಪ್ರಭಾಕರ ಜೋಷಿ ಮುಂತಾದ ಯಕ್ಷಲೋಕದ ಘಟಾನುಘಟಿ ದಿಗ್ಗಜರನ್ನು ಕುಣಿಸಿ ಮಾತನಾಡಿಸಿದ ಗಟ್ಟಿಗಾತಿ ಇವರು. ಪತಿ ಹರಿನಾರಾಯಣರು. ಬಲಿಪ ಭಾಗವತರು, ಮಂಡೆಚ್ಚರು, ಕಡತೋಕ ಭಾಗವತರು, ನೆಡ್ಲೆ ನರಸಿಂಹ ಭಟ್, ಬಲ್ಲಾಳರು, ಭೀಮ ಭಟ್, ಅಡೂರು ಮದ್ಲೆಗಾರರು, ಗೋಪಾಲಕೃಷ್ಣ ಕುರುಪ ಮುಂತಾದ ಅಗ್ರಗಣ್ಯ ಹಿಮ್ಮೇಳ ಕಲಾವಿದರ ಒಡನಾಟ ಇವರನ್ನು ತಿದ್ದಿ ತೀಡಿತು.

ಸಾಧನೆ ಏನೇನು : ಯಕ್ಷಗಾನ ಕ್ಷೇತ್ರದಲ್ಲಿ ಕಾಲಿಟ್ಟ ವೊದಲ ಮಹಿಳೆ, ಯಕ್ಷಗಾನಕ್ಕೆ ಹೆಣ್ಣು ಕಂಠವೂ ಹೊಂದುತ್ತದೆ ಎಂದು ತೋರಿಸಿ, ರಾತ್ರಿಯಿಡೀ ನಿದ್ದೆಗೆಟ್ಟು ಊರಿಂದೂರಿಗೆ ತಿರುಗಾಟ,ಹಗಲಲ್ಲಿ ನಿದ್ದೆ, ರಾತ್ರಿ ಕಲಾ ಪ್ರದರ್ಶನಕ್ಕೆ ಸಿದ್ಧವಾಗುವ ಛಾತಿ ಮುಂದಾವು ಇವರ ಸಾಧನೆಯೇ ಸರಿ. ಸಂಗೀತಾಭ್ಯಾಸ ಮಾಡಿದ್ದರೂ, ಯಕ್ಷಗಾನದ ಸೊಗಡಿಗೆ ಧಕ್ಕೆಯಾಗದಂತೆ, ಸಂಪ್ರದಾಯ ಕೆಡದಂತೆ ನೋಡಿಕೊಂಡರು. ಲೋಪವಿಲ್ಲದ ಸಾಹಿತ್ಯ ಶುದ್ಧಿ, ಭಾಷಾ ಶುದ್ಧಿ. ಕೇವಲ 7ನೇ ತರಗತಿ ಓದಿದ್ದರೂ, ಆಕೆಗೆ ಸಾಹಿತ್ಯ ಸರಸ್ವತಿ ಒಲಿದಿದ್ದಾಳೆ.
ಬೈಪಡಿತ್ತಾಯ ಅವರಿಗೆ ಈಗ ಅರವತ್ನಾಲ್ಕರ ಹರೆಯ. ತಮ್ಮಂತೆ ಇತರ ಮಹಿಳೆಯರೂ ಯಕ್ಷಗಾನ ಕ್ಷೇತ್ರದಲ್ಲಿ ಮುಂದೆ ಬರಬೇಕೆಂಬುದು ಇವರ ಆಸೆ. ಯಕ್ಷಗಾನ ಪಾಠ, ಕರ್ನಾಟಕ ಶಾಸ್ತ್ರೀಯ ಸಂಗೀತ ಇವರು ಕಲಿಸುತ್ತಿದ್ದಾರೆ. ಪತಿಯೊಂದಿಗೆ ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರದ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಯಾವುದೇ ಪ್ರಸಂಗ ಆಡಿಸುವ ವೊದಲು, ಹಿರಿಯ ಮತ್ತು ಕಿರಿಯ ಕಲಾವಿದರೊಂದಿಗೆ ಚೌಕಿಯಲ್ಲಿ ಚರ್ಚಿಸಿ, ಪ್ರದರ್ಶನ ಎಲ್ಲೂ ಲೋಪವಾಗಬಾರದು ಎಂಬ ನೆಲೆಯಲ್ಲಿ ಪೂರ್ವ ತಯಾರಿ ರೀತಿ ಯುವ ಕಲಾವಿದರಿಗೆ ಸೂರ್ತಿ.
ಬಡಗು ತಿಟ್ಟಿನ ಮಹಾನ್ ಭಾಗವತ ದಿ. ಕಾಳಿಂಗ ನಾವಡ ಜತೆ ಇವರು ಕಾರ್ಯಕ್ರಮ ನೀಡಿದ್ದಾರೆ. ನಾವಡ ಅವರು ಬೈಪಡಿತ್ತಾಯ ಅವರ ಭಾಗವಿಕೆ ಮೆಚ್ಚಿಕೊಂಡಿದ್ದರು. ಮುಂಬೈಯಲ್ಲಿ ಕಾಳಿಂಗ ನಾವಡ ಮತ್ತು ಬೈಪಡಿತ್ತಾಯ ಒಂದೇ ವೇದಿಕೆಯಲ್ಲಿ ಶೋತೃಗಳನ್ನು ಮೆಚ್ಚಿಸಿದ್ದರು.

ಸನ್ಮಾನಗಳ ಮಹಾಪೂರ : ಇವರಿಗೆ ಸಾಕಷ್ಟು ಪ್ರಶಸ್ತಿ, ಸನ್ಮಾನ ಸಂದಿವೆ. ಅಗರಿ ಭಾಗವತ ಪ್ರಶಸ್ತಿ, ಉಳ್ಳಾಲದ ರಾಣಿ ಅಬ್ಬಕ್ಕ ಪ್ರಶಸ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ತಾಲೂಕು ಪ್ರಶಸ್ತಿ ಹಾಗೂ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಇವರ ಮನೆ ಗೋಡೆ ಸನ್ಮಾನ ಪತ್ರಗಳಿಂದ ಅಲಂಕೃತ. ಎಂಬತ್ತರ ದಶಕದಲ್ಲೇ ಮಂಗಳೂರು ಆಕಾಶವಾಣಿಯಲ್ಲಿ ಅವರ ಧ್ವನಿ ಪ್ರದ್ವನಿಸಿದೆ.
ಹೆಣ್ಣು ಮಕ್ಕಳ ಯಕ್ಷಗಾನ ತಂಡಕ್ಕೆ ಬೈಪಡಿತ್ತಾಯ ಆಧಾರ ಸ್ತಂಭ. ಮಂಗಳೂರು ವಿಮಾನ ನಿಲ್ದಾಣ ಬಜ್ಪೆತಲಕಳ ಎಂಬ ಊರಲ್ಲಿ ಪತಿಯೊಂದಿಗೆ ವಾಸಿಸುತ್ತಿರುವ ಇವರ ಕಲಾ ಸೇವೆಗೆ ಜೈ ಅನ್ನದೆ ವಿಧಿಯಿಲ್ಲ.
ಹತ್ತುಹಲವು ಕ್ಷೇತ್ರದಲ್ಲಿ ಪುರುಷರಗಿಂತ ಕಮ್ಮಿಯಿಲ್ಲ ಅಂತ ಮಹಿಳೆಯರೂ ನಿರೂಪಿಸುತ್ತಲೇ ಬಂದಿದ್ದಾರೆ. ಹಾಗೆ ಯಕ್ಷಗಾನ ಹಾಡುಗಾರಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಲೀಲಾವತಿ ಬೈಪಡಿತ್ತಾಯ ಅವರಿಗೆ ಸಿಕ್ಕಿ ಪ್ರಶಸ್ತಿ, ಪ್ರಶಸ್ತಿಯ ಮೌಲ್ಯ ವೃದ್ಧಿಸಿದೆ. ನಿಮಗೆ ಗೊತ್ತಿರಲಿ ಪರ್ತಕರ್ತ ಅವಿನಾಶ ಬೈಪಡಿತ್ತಾಯ ಇವರ ಪುತ್ರ.


-ಶ್ರೀಪತಿ ಹೆಡಗೆ ಹಕ್ಲಾಡಿ

0 comments:

Post a Comment