ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:38 PM

ಅಸ್ಪೃಶ್ಯರು

Posted by ekanasu

ಸಾಹಿತ್ಯ
ವೈದೇಹಿ ಕಾದಂಬರಿ
ಕಳೆದ ಸಂಚಿಕೆಯಿಂದ...
ಮಣೆಯಿಂದ ಗೌರಮ್ಮ ಮಗುವನ್ನು ತೆಗೆದು ಶಾಮಿಯ ತೊಡೆಯ ಮೇಲೆ ಇಟ್ಟಂತೆ ಮಾಡಿದರು. ಅಷ್ಟೇ. ತೆಗೆದಾಯಿತು., ಹಾಗೆ ಪುಟ್ಟ ಮತ್ತು ಜಯರ ತೊಡೆಯ ಮೇಲೆಯೂ. ಅಷ್ಟರೊಳಗೆ ಅವರೆಲ್ಲ ಮಗುವಿನ ಕೆನ್ನೆ ಮುಟ್ಟಿ, ಅಂಗಾಲು ಎಲ್ಲ ಸವರಿ `ಅಯ್ಯೋ ಎಷ್ಟು ಮೆತ್ತಗೆ ಅಲ್ಲ? ಹತ್ತಿಯೆಂದರೆ ಹತ್ತಿಯೇ. ಮುಟ್ಟಿದ್ದೇ ಗೊತ್ತಾಗುವುದಿಲ್ಲ'- ಎಂದು ಒಂದೊಂದು ಬಗೆಯ ಉದ್ಗಾರವೆತ್ತಿದರು. `ರವಿ, ಬಾಬುವನ್ನು ಎತ್ತಿಕೊಳ್ಳುತ್ತಿಯಾ? ಬಾ. ಇಲ್ಲಿ ಕುಳಿತುಕೋ'- ಎಂದರೆ ಎರಡು ವರ್ಷದ ರವಿ ಇಲ್ಲವೆನ್ನುವಂತೆ ತಲೆ ಅಲ್ಲಾಡಿಸಿದ. ನಿಂತಲ್ಲೆ ಉಚ್ಚೆಹೊಯ್ದು. `ಶ್ಶೀ ಈ ಮಾಣಿಗೆ ಅಪ್ಪುದೆಂತದು! ಒಳಗೆ ಉಚ್ಚೆ ಹೊಯ್ಯುವುದನ್ನು ಬಿಟ್ಟು ಎಷ್ಟು ಸಮಯವಾಗಿತ್ತು. ಈಗ ಹಾಸಿಗೆಯಲ್ಲೂ ಉಚ್ಚೆ! ಎರಡು ಸಮಾ ಕೊಡು ನೋಡುವ' - ಎಂದಳು ರತ್ನ.


`ಕೊಟ್ಟರೆ ಅದರ ಸಾಕಬ್ಬೆ ಹರಿದುಬಿಟ್ಟಾಳು ನನ್ನನ್ನು . ಹೊಯ್ಯಲಿ , ಹೊಯ್ದರೆ ಒರೆಸುತ್ತಾಳೆ. ಬೈಯಬಾರದಂತಲ್ಲ' - ಎಂದರು ಗೌರಮ್ಮ.
ಸಾಕಬ್ಬೆ ಎಂದರೆ ಸಾಕು ತಾಯಿ., ಮತ್ತೆ ಯಾರಲ್ಲ. ರತ್ನನ ತಂಗಿ ಸರೋಜ. ತಲೆ ತುಂಬ ಆದರ್ಶ ತಿಳುವಳಿಕೆ ತುಂಬಿಕೊಂಡು ಬಿಡು ಬೀಸು ಮಾತಿನ ಸರೋಜನಿಗೆ ಒಳಗಿನಿಂದ ಗೌರಮ್ಮನೂ ಕೊಂಚ ಹೆದರುವವರೇ.

ಸರೋಜ ಹೀಗೇ ಮಾಡಿ ತಾನು ಬಾಣಂತನ ಮುಗಿಸಿ ಏಳುವುದರೊಳಗೆ ಮಾಣಿಗೆ ಸಲಿಗೆ ಜಾಸ್ತಿಕೊಡುತ್ತಾಳೋ ಏನೋ, ಅವನ ಮೇಲಿನ ತನ್ನ ಬಿಗಿ ತಪ್ಪುತ್ತದೆಯೋ ಏನೋ ಅಂತೆಲ್ಲಾ ರತ್ನ ಹೇಳಿ ಮುಗಿಸುವುದರೊಳಗೆ ಸರೋಜನೇ ಅಲ್ಲಿಗೆ ಬಂದಳು.

`ಯಂತ ಮಾರಾಯ್ತಿ. ಹೊಡೆಯದೆ ಚೆಂದದಿಂದ ನೋಡಿಕೊಂಡಳು ಎಂಬಂಥ ಮಾತು ನಿನ್ನ ಬಾಯಿಲ್ಲಿ ಬರಲಿಕ್ಕಿಲ್ಲ ಸುಳ್ಳ? ಆ ಮಾಣಿ ಮೊದಲೇ ಬೆಪ್ಪುಗಟ್ಟಿದೆ. ಇನ್ನಷ್ಟು ಬೆಪ್ಪು ಕಟ್ಟಿಸು. ನಾನೀಗ ಸಲುಗೆ ಕೊಟ್ಟರೆ ನೀನು ಕರೆದುಕೊಂಡು ಹೋದಮೇಲೆ ಭಾವಯ್ಯ ಅದನ್ನು ಬಿಡಿಸಿಯಾರು' - ಎಂದಳು.

ಅದಕ್ಕೆ ಸರಿಕಟ್ಟಿ ಏನೋ ಮಾತನಾಡಲು ಹೊರಟ ರತ್ನನಿಗೆ `ಬಾಣಂತಿ ಹೆಚ್ಚು ಮಾತಾಡಬಾರದು. ಮಲಕೋ ಸುಮ್ಮನೆ. ಆ ಹೆಣ್ಣಿನ ಮಾತನ್ನ ಮಾತನ್ನ ಇನ್ನೂ ಮನಸ್ಸಿನೊಳಗೆ ಜಗಿಯುತ್ತ ಇರಬೇಡ' - ಎಂದರು ಗೌರಮ್ಮ.
ಅವರ ಈ ಮಾತು ಕೇಳಿದ್ದೇ ರತ್ನನ ಕಣ್ಣುಗಳಲ್ಲಿ ನೀರು ತುಂಬಿತು... ಆದರೆ ನಿಜಕ್ಕೂ ಕಣ್ಣೀರು ತುಂಬಿದ್ದು ಗಂಡನ ನೆನಪಾಗಿಯೇ? - ಗಂಡನ ನೆನಪಾದರೆ ಮುಖದಲ್ಲಿ ಮುಗುಳ್ನಗೆ ತೇಲಿ ಬಾರದವಳು ರತ್ನ.

ಆವತ್ತು ರಾತ್ರಿ ಮಗು ಹುಟ್ಟಿದ ಜಾಗದಲ್ಲಿ ಒಂದು ಪೆನ್ಸಿಲು ಕಾಗದ ಸ್ವಲ್ಪ ಅಕ್ಕಿ ವೀಳ್ಯದೆಲೆ , ಅಡಿಕೆ, ಬಾಳೆ ಹಣ್ಣು ಎಲ್ಲ ಇಟ್ಟು ಬ್ರಹ್ಮ ಇಂದು ಬಂದು ಮಗುವಿನ ಹಣೆಗೆ ಬರೆಯಲು ಸಜ್ಜುಗೊಳಿಸುವ ಶಾಸ್ತ್ರವೂ ಆಯಿತು. ಬ್ರಹ್ಮ ಬಂದು ಏನು ಬರೆಯುವನೋ. ಅಂತೂ ಅಲ್ಲಿಟ್ಟ ಸಾಮಾಗ್ರಿಗಳೆಲ್ಲ ನಾಳೆ, ಅಂದು ಹೆರಿಗೆಯಾದೊಡನೆ ಬಟ್ಟೆ ತೆಗೆದುಕೊಂಡು ಹೋಗಿ ಮಡಿ ಮಾಡಿದ ಮಡಿವಾಳ್ತಿಗೆ ಸೇರುತ್ತದೆ.

- ವೈದೇಹಿ.

0 comments:

Post a Comment