ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:32 PM

ಥೂ ... ರಾಜಕೀಯ...

Posted by ekanasu

ರಾಜ್ಯ - ರಾಷ್ಟ್ರ
ಆಣೆ - ಪ್ರಮಾಣ, ಸವಾಲು - ಪ್ರತಿ ಸವಾಲು... ಹೇಸಿಗೆ ಹುಟ್ಟಿಸುವ ರಾಜಕಾರಣ. ಮಾನ ಮರ್ಯಾದೆ ಇಲ್ಲದ ರಾಜಕಾರಣಿಗಳು. ತಮ್ಮ ಸ್ಥಾನ ಮಾನದ ಬಗೆಗಿನ ಕಲ್ಪನೆಯೂ ಇವರಿಗಿಲ್ಲ. ಇವರೆಲ್ಲರೂ ರಾಜ್ಯವಾಳಲು ನಾಲಾಯಕ್ ...


ಕರ್ನಾಟಕ ಸರಕಾರವನ್ನು ಆಡಳಿತ ನಡೆಸುತ್ತಿರುವ ಆಡಳಿತಾರೂಢ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಇದೇ ರಾಜ್ಯವನ್ನು ಆಡಳಿತ ನಡೆಸಿ ಜನರಿಂದ "ನಲಾಯಕ್ " ಆಡಳಿತ ಎಂದು ಹೇಳಿಸಿಕೊಂಡು ಮತ್ತೆ ಅಧಿಕಾರ ಪಡೆಯುವಲ್ಲಿ ವಿಫಲಗೊಂಡ ಜೆ.ಡಿ.ಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಸುಪುತ್ರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಪರಸ್ಪರ ಕೆಸರೆರಚಾಟ ನಡೆಸಿಕೊಳ್ಳುತ್ತಿರುವುದು ನೋಡಿದರೆ ಇವರ್ಯಾರಿಗೂ ಕನಿಷ್ಠ ಜ್ಞಾನವೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿರುವ ಈ ರಾಜ್ಯವೂ ಪ್ರಜಾಪ್ರಭುತ್ವ ವ್ಯವಸ್ಥೆಗೊಳಪಡುತ್ತಿದೆ. ಜನರಿಂದ ಜನರಿಗಾಗಿ ಜನರೇ ಆಯ್ಕೆ ಮಾಡಿದ ಜನಪ್ರತಿನಿಧಿಗಳೆಂಬ ಇಂಥಹವರು ಕೊನೇ ಪಕ್ಷ ತಮಗಾದ ಪ್ರಾಯದ ಬಗೆಗಾದರೂ ಚಿಂತಿಸಿ ಮಾತನಾಡಬೇಕಾಗಿತ್ತು. ಬಿಡಿ ಇಡೀ ರಾಜ್ಯವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳೆಂಬ ಚಿಂತನೆಯಾದರೂ ಈ ರಾಜಕಾರಣಿಗಳಿಗೆ ಇರಬೇಕಾಗಿತ್ತು.

ರಾಜ್ಯದ ಸಮಸ್ತ ಜನತೆಯನ್ನು ಪ್ರತಿನಿಧಿಸುವ ಜನರಿಂದ ಚುನಾಯಿತಗೊಂಡಿರುವ ಇಂಥಹ ರಾಜಕೀಯ ವ್ಯಕ್ತಿಗಳು ತಮ್ಮ ತಮ್ಮ ಘನತೆ, ಸ್ಥಾನಮಾನಗಳ ಬಗ್ಗೆ ಕನಿಷ್ಠ ಚಿಂತನೆಯನ್ನೂ ನಡೆಸದೆ ಮಾತನಾಡುವುದು ಸರಿಯಲ್ಲ.
ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಂತ ಹಂತದಲ್ಲೂ ಆಡಳಿತಾರೂಢ ಬಿಜೆಪಿ ಸರಕಾರದ ಬಗ್ಗೆ ಕುಟಿಲ ರಾಜಕೀಯ ನೀತಿಯ ಮೂಲಕ ದಿನಕ್ಕೊಂದರಂತೆ ಅಂತೆ ಕಂತೆಗಳ ಸಂತೆಯನ್ನು ಸೃಷ್ಠಿಸುವ ಸಾಹಸವನ್ನು ಮಾಡುತ್ತಾ ಬಂದಿರುವುದು ಸುಳ್ಳಲ್ಲ. ತನ್ನ ಎಲೆಯಲ್ಲಿರುವ ಹೆಗ್ಗಣವನ್ನು ಬಿಟ್ಟು ಉಳಿದವರ ಬಟ್ಟಲಲ್ಲಿದ್ದ ನೊಣದ ಬಗ್ಗೆ ಮಾತನಾಡಿದ ಎಂಬಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ತನ್ನೊಡಲೊಳಗೆ ಹುಳುಕು ತುಂಬಿಸಿಕೊಂಡು ವೃಥಾ ರಾಜಕೀಯವನ್ನು ಮಾಡುವುದು ಸರಿಯಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಕೊಂಚ ಯೋಚಿಸಿ ಮಾತನಾಡುವುದು ಲೇಸು. ಒಂದು ಪೆಟ್ಟು ಎರಡು ತುಂಡು ಎಂಬ ಧೋರಣೆಯನ್ನು ತನ್ನ ಆ ಕುರ್ಚಿಯಲ್ಲಿದ್ದು ಅವರು ಮಾಡುವುದು ಸರಿಯಲ್ಲ.ಪ್ರತಿಯೊಂದು ಹೇಳಿಕೆಗಳನ್ನು ನೀಡುವಾಗಲೂ, ಮಾತುಗಳನ್ನಾಡುವಾಗಲೂ ಕ್ಷಣಕಾಲ ಯೋಚಿಸಿ ಅಳೆದು ಮಾತನಾಡಿದ್ದೇ ಆದಲ್ಲಿ ಪೇಚಿಗೆ ಸಿಲುಕುವ ಪ್ರಸಂಗದಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ. ತಮಗೆ ಸಿಕ್ಕಿದ ಅಧಿಕಾರವನ್ನು ಯಶಸ್ವಿಯಾಗಿ ಪೂರೈಸುವ ಕಾತರ ಯಡಿಯೂರಪ್ಪರಿಗೆ ಇರಬಹುದು. ಬೆಟ್ಟದಷ್ಟು ಕನಸುಗಳಿರಬಹುದು. ಅದರ ಸಾಕಾರಕ್ಕಾಗಿ ಹಗಲಿರುಳು ಪ್ರಯತ್ನಿಸುವ ಸಂದರ್ಭದಲ್ಲಿ ಯಾರಾದರೂ ಅಪಸ್ವರ ಎತ್ತಿದರೆ ಬೇಸರ, ದುಃಖ ಮೂಡುವುದು ಸಹಜ.ಇದು ಯಡಿಯೂರಪ್ಪರಿಗೆ ಮಾತ್ರವಲ್ಲ; ಆ ಸ್ಥಾನದಲ್ಲಿ ಕುಮಾರ ಸ್ವಾಮಿ ಅಥವಾ ನಾವು ನೀವು ಯಾರಿದ್ದರೂ ಆಗುವುದು ಸಹಜ. ಇದನ್ನು ಪ್ರತಿಪಕ್ಷಗಳು ಚಾತಕ ಪಕ್ಷಿಯಂತೆ ಕಾದು ಕುಟುಕುವ ರೀತಿ ನಿಜಕ್ಕೂ ಹೇಯ. ಏನೇ ಇರಲಿ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅದರದ್ದೇ ಆದಂತಹ ಘನತೆ, ಗೌರವಗಳಿವೆ. ಭಕ್ತಿಕೇಂದ್ರ, ಶಕ್ತಿ ಕೇಂದ್ರ, ಅಷ್ಟು ಮಾತ್ರವಲ್ಲದೆ ಕಾರಣೀಕ ಕೇಂದ್ರ ಧರ್ಮಸ್ಥಳಕ್ಕೆ ಇಂತಹ ಕೊಳಕು ಹುಳುಕುಗಳನ್ನು ಹೊತ್ತು ಈ ರಾಜಕಾರಣಿಗಳು ಬರುತ್ತಿರುವುದು ಸರಿಯಲ್ಲ. ಇನ್ನಾದರೂ ತಾವು ಜನರಿಂದ ಆರಿಸಲ್ಪಟ್ಟವರು; ಜನತೆ ನಮ್ಮನ್ನು ಈ ಆಸನದಲ್ಲಿ ಅಲಂಕರಿಸುವಂತೆ ಮಾಡಿದವರು . ಅವರ ಸೇವೆ ಮಾಡಬೇಕೆ ಹೊರತು ಪರಸ್ಪರ ಈ ರೀತಿಯ ಹೇಳಿಕೆಗಳನ್ನು ನೀಡಿ, ಆಣೆ ಪ್ರಮಾಣಗಳನ್ನು ಮಾಡಿ ಜನತೆಯ ಮುಂದೆ ತಮ್ಮ ಬುದ್ದಿ ಇಷ್ಟೇ ಎಂಬುದು ತೋರಿಸುವುದು ಸರಿಯಲ್ಲ ಎಂಬ ಕನಿಷ್ಠ ಜ್ಞಾನವನ್ನು ಈರ್ವರು ಅನುಭವೀ ರಾಜಕಾರಣಿಗಳು ಮಾಡಬೇಕಾಗಿದೆ. ಇನ್ನಾದರೂ ಮಾಜಿ ಇರಲಿ ಹಾಲಿ ಇರಲಿ... ಆ ಸ್ಥಾನಗಳನ್ನು ಅಲಂಕರಿಸುವ ಯಾವ ರಾಜಕಾರಣಿಗಳೇ ಇರಲಿ ಒಂದಷ್ಟು ತಮ್ಮ ತಮ್ಮ "ನಾಲಿಗೆ"ಯತ್ತ ಗಮನ ಹರಿಸಬೇಕಾಗಿದೆ.

- ವರ್ಷಾ

0 comments:

Post a Comment