ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:43 AM

ಅಸ್ಪೃಶ್ಯರು

Posted by ekanasu

ವೈದೇಹೀ ಕಾದಂಬರಿ

ಕಳೆದ ವಾರದಿಂದ...
ಮರುದಿನ ಬೆಳಗ್ಗೆ ಮಗುವಿಗೆ ಉಪ್ಪು, ಸಾಸಿವೆ , ಮೆಣಸು ಬಳಿದು ಹಾಕಿ ಕೆಂಡಕ್ಕೆಸೆದಾಗ ಛಟಛಟವೆಂದು ಶಬ್ಧವಾಗಿ ಸಾಸಿವೆ ಉಪ್ಪು ಒಲೆಯ ಹೊರಗೆಲ್ಲ ಹೊಟ್ಟಿದ್ದೇ ಮೆಣಸು ಸುಟ್ಟು ಮನೆಯಲ್ಲಿದ್ದವರಿಗೆಲ್ಲ ಕೆಮ್ಮು. `ಎಂತಹ ವಾಸನೆ! ಅಂತಿಂತಹ ದೃಷ್ಟಿ ಕಂತಿದ್ದಲ್ಲ!'
ರತ್ನನ ಬಾಣಂತನ ಸಾಗಿದೆ. ಮುಂಚಿನಂತಾಗಿದ್ದರೆ ಅವಳಿಗೆ ಪಾರ್ತಕ್ಕನೇ ಮೀಸುತ್ತಿದ್ದರು. ಆದರೆ ಈಗ ಅವರಿಗೆ ಆ ಉಮೇದು ಇಲ್ಲ ಎಂದು ಕೆಲಸದ ಚಂದುವನ್ನೇ ಗೊತ್ತು ಮಾಡಿದ್ದಾರೆ ಗೌರಮ್ಮ. ತಿಂಗಳಿಗೆ ಇಪ್ಪತ್ತು ರುಪಾಯಿ. ಮೂರು ತಿಂಗಳಾದ ಮೇಲೆ ಒಂದು ಹೊಸ ಸೀರೆ. ಮಗುವಿಗೆ ಮಾತ್ರ ಪಾರ್ತಕ್ಕನೇ ಮೀಸುತ್ತಾರೆ. ಕೆಂಪಿನೆಣ್ಣೆ ಮಾಡಿ ಇಟ್ಟುಕೊಂಡಿದ್ದಾರೆ.ಎಣ್ಣೆ ಹಚ್ಚುವಾಗ ಬೆಳಕು ಕಾಣುತ್ತಾ ಆಡುವ ಮಗು ಮೈಮೇಲೆ ಚೂರು ಬಿಸಿ ನೀರು ಬಿದ್ದದ್ದೇ ನಾಲ್ಕು ಮನೆಗೆ ಕೇಳುವಂತೆ ಅಳುತ್ತದೆ. ಪುಟ್ಟ ಶಾಮಿ, ಜಯ ಮತ್ತು ಶಿವ, ಸರೋಜ ಸಹ ಆಗ ಬಚ್ಚಲಿನಲ್ಲಿಯೇ. `ಆಯಿತು ಪುಟ್ಟಿ, ಮುಗಿಯಿತು... ವೋನಾತಪ್ಪ ಬಾಬುಗೇ?... ಮೀಸಿದವರಿಗೆ ಕಾಸಿ ಬರೆ ಹಾಕುವ' ಎಂದು ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಸಮಾಧಾನ ಹೇಳುವುದೇ. ಆದರೆ ಪುಟ್ಟಿ ಸ್ನಾನ ಮುಗಿಯುವವರೆಗೂ ಅಳು ನಿಲ್ಲಿಸುವುದಿಲ್ಲ.ಮಗುವನ್ನು ಒಳಗೆ ತಂದು ತಲೆ ಒರೆಸಿ ಬೆಳ್ಳಗಿನ ಬಟ್ಟೆ ಕಟ್ಟಿ ಮೈ ಮುಖ ಕುತ್ತಿಗೆ ಕಂಕುಳು ಸಂದಿ ತೊಡೆ ಸಂದಿಗೆಲ್ಲ ಪೌಡರು ಹಾಕಿ `ಹೂಂ... ಈಗ ಪೇಟೆಗೆ ಹೋಗಬಹುದು ನಮ್ಮ ಅಮ್ಮು' - ಅನ್ನುತ್ತಲೋ, ಮತ್ತೊಂದು ತರಹವೋ ಹೇಳುತ್ತ ಕೊಂಗಾಟದಿಂದ ನಾಲ್ಕು ಮುತ್ತು ಕೊಡುತ್ತ`ತೊಡು ಕೊಟ್ಟಿದ್ದಿಯಲ್ಲ ಎಣ್ಣೆ ಹಚ್ಚುವ ಮುಂಚೆ?' - ಎಂದು ದಿನವೂ ಕೇಳುತ್ತಾ ಮಗುವನ್ನು ತೊಟ್ಟಿಲಲ್ಲಿ ಪಾರ್ತಕ್ಕ ಮಲಗಿಸುವವರೆಗೂ , ಹಿಂಬಾಲಿಸುತ್ತಿರುವ ಮಕ್ಕಳ ಬಾಯಿ ಕೆಂಗಾಟದಿಂದ ಕೊಟ್ಟೆ ಕೊಟ್ಟೆಯಾಗುತ್ತದೆ. ತೊಟ್ಟಿಲು ತಾಗುವುದರೊಳಗೆ ಬಿಸಿನೀರು ಮಿಂದು ಬಂದ ಆಯಾಸಕ್ಕೆ ಪುಟ್ಟಿಗೆ ಗಾಢನಿದ್ರೆ. ಆದರೂ ಶಾಲೆಗೆ ಹೋಗುವ ಮುಂಚೆ ಪುಟ್ಟ, ಜಯ, ಶಾಮಿಯರು ಅದರ ಹತ್ತಿರ ಬಂದು `ಶಾಲೆಗೆ ಹೋಗುತ್ತೇವೆ.ನಾವು ಬರುವುದರೊಳಗೆ ಎದ್ದಿರು ಮರೀ'- ಎಂದು ಮೆಲ್ಲಗೊಂದು ಮುತ್ತುಕೊಟ್ಟೇ ಹೋಗುತ್ತಾರೆ.
ಹೀಗೆ ಮಗು ಮಲಗಿದ ಮೇಲೆ ರತ್ನ ಸ್ನಾನಕ್ಕೆ ಹೊರಡುತ್ತಾಳೆ. `ಕೆಳಗಿನ ಕೋಣೆ'ಯಲ್ಲಿ ಕಾಲು ಮಣೆಯ ಮೇಲೆ ಕುಳಿತಿರುವ ರತ್ನನಿಗೆ ಚಂದು ಎಣ್ಣೆ ತಿಕ್ಕುತ್ತಾಳೆ, ಸೂ ಸೂ ಎಂದು ರಾಗವೆಳೆಯುತ್ತ. ಒಂದು ಗಂಟೆಯಾದರೂ ಬಾಗಿಲು ತೆಗೆಯುವುದಿಲ್ಲ. ಯಾರ ಯಾರ ಮನೆಯ ಕತೆಪುರಾಣ ಬಿಡಿಸಿ ಹೇಳುತ್ತಾ ಇದ್ದರೆ ರತ್ನ ಕೇಳುತ್ತ ಕುಳಿತು ಬಿಡುತ್ತಾಳೆ. ಒಮ್ಮೊಮ್ಮೆ ಹಾಗೆ ಕುಳಿತಂತೆಯೇ ಅವಳ ಎದೆಯಿಂದ ಹಾಲು ಚಿಮ್ಮುತ್ತದೆ. `ಅಗಣಿ !ತೊಟ್ಟಿಲೊಳಗೆ ಮಗು ಬಾಯಿ ಚಪ್ಪರಿಸುತ್ತಿರಬೇಕು. ಮಗುವಿಗೆ ತೊಡುವಾದರೆ ಹೀಗಾಗುತ್ತದೆ- ಎಂದು ಚಿಮ್ಮುವ ಹಾಲನ್ನು ತನ್ನ ಅಂಗೈಯಲ್ಲಿ ಹಿಡಿದು ಒರೆಸುತ್ತಾಳೆ ಚಂದು. ಅದು ನೆಲಕ್ಕೆ ಬೀಳಬಾರದು ಎಂಬ ಶಾಸ್ತ್ರ ಇದೆ.
ಚಂದು ಹೀಗೆ ಬಾಣಂತಿಗೆ ಎಣ್ಣೆ ಹಚ್ಚುತ್ತ ಗಂಟೆಗಟ್ಟಲೆ ಕುಳಿತರೆ ಬಚ್ಚಲೊಲೆ ಬೆಂಕಿ ಮುಂದೂಡುವವರು ಯಾರು ? ನೀರು ಕಾಯುವುದುಂಟೆ? ಉಗುರು ಬೆಚ್ಚ ನೀರನ್ನು ಬಾಣಂತಿ ಮಿಂದರೇನು ಬಿಟ್ಟರೇನು? ಗೌರಮ್ಮನ ಸಿಟ್ಟು ನೆತ್ತಿಗೇರುತ್ತದೆ. ಬಾಣಂತನದ ಕಾಟು ಆದರೆ ಮುಂದೆ, ಸಾಯುವವರೆಗೂ ಅನುಭವಿಸಬೇಕು; ಅಲ್ಲಿ ನೋವು ಇಲ್ಲಿ ನೋವು ಎಂತ. ಕಡೆಗೆ ರತ್ನನಿಗೂ ಎರಡು ಬೈಗಳೇ. ಹಿಂದೆ ಮುಂದೆ ಒಂದೂ ಇಲ್ಲದ ಪಟ್ಟಾಂಗ ಯಂತದು? `ಚಂದುವಿಗಂತೂ ತಿಳಿಯುವುದಿಲ್ಲ. ನಿಂಗೂ ತಿಳಿಯುವುದಿಲ್ಲವೇ?ಅಮ್ಮನಿಗಿನ್ನೂ ಇನ್ನೂ ಪ್ರಾಯ ಬರುತ್ತದೆಂತ ಮಾಡಿದೆಯ? ನನ್ನ ಬೆನ್ನು ಬಿದ್ದು ಹೋಗಿಯಾಯಿತು. ಒಳಗೆ ನೋಡಿಕೊಳ್ಳುವುದಾ, ಹೊರಗೆ ನೋಡಿಕೊಳ್ಳುವುದಾ ? ಹೀಗೆ ಆದರೆ ಹೊಗೆಯಿಂದ ಬಾಣಂತಿಯ ಕಣ್ಣು ಹೋದೀತು'.
ಚಂದುವಿಗೂ ಸಿಟ್ಟು ಬರುತ್ತದೆ. `ಹೊಗೆ ಯಂತದು ? ನನಗಿರುವುದು ಎರಡೇ ಕೈ . ಒಲೆ ಕಂಡವರು ಯಾರಾದರೂ ಬೆಂಕಿ ದೂಡಬಾರದ ?
`ಎರಡಲ್ಲದೆ ನಾಲ್ಕು ಕೈ ಇರಲಿಕ್ಕೆ ನೀನೇನು ಬ್ರಹ್ಮನ? ಮಾಡುವ ರೀತಿಯಲ್ಲಿ ಕೆಲಸ ಮಾಡಿದರೆ ಎರಡು ಯಾಕೆ ಒಂದೇ ಸಾಕು. ಇನ್ನೂ ಗಂಟಿಗೆ ಬಾಯಿರು ಹಾಕಿಲ್ಲ, ಹಟ್ಟಿ ಸೆಗಣಿ ತೆಗೆದಿಲ್ಲ. ಒಂದೇ ಒಂದು ಪಾತ್ರೆ ತೊಳೆದಿಲ್ಲ. ಎಣ್ಣೆ ಹಚ್ಚುತ್ತ ಊರ ಮೇಲಿನ ಸುದ್ದಿ ತೆಗೆದುಕೊಂಡು ಕುಳಿತರೆ ಇದೆಲ್ಲ ಆಗಿ ಬಿಡುತ್ತದ?'

- ವೈದೇಹಿ.

0 comments:

Post a Comment