ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ವ್ಯಕ್ತಿತ್ವ ವಿಕಸನದ ಒಂದು ಕಿವಿಮಾತು

ಎಲ್ಲಾ ಸಮಯದಲ್ಲೂ ಎಲ್ಲರ ಭಾವನೆಗಳು ಒಂದೇ ರೀತಿಯಲ್ಲಿರಲು ಸಾಧ್ಯವಿಲ್ಲ. ಹಾಗೆ ಇರಲೇಬೇಕೆಂದು ಕಡ್ಡಾಯವೂ ಇಲ್ಲ. ಆದರೂ ಬೇರೆಯವರು ನಮ್ಮೊಂದಿಗೆ ಮಾತನಾಡಲು ಬಯಸಿದಾಗ ಅವರ ಭಾವನೆಗಳಿಗೆ ಬೆಲೆ ಕೊಟ್ಟು ಮಾತನಾಡಬೇಕು. ಇಲ್ಲಿ ಸಹನೆಯ ಪಾತ್ರ ಬಹಳ ಮುಖ್ಯ. ನಾವು ಬೇರಾವುದೋ ಗುಂಗಲ್ಲಿರಬಹುದು ಅಥವಾ ಮುಖ್ಯ ಕೆಲಸದಲ್ಲಿ ತೊಡಗಿರಬಹುದು. ಆ ಸಮಯದಲ್ಲಿ ಬೇರೆಯವರ ಭಾವನೆಗಳನ್ನು ಕೇಳಿಸಿಕೊಳ್ಳುವುದು ಅಥವಾ ಸ್ಪಂದಿಸುವುದು ನಮಗಿಷ್ಟವಿಲ್ಲದಿರಬಹುದು. ಆದರೂ ಸ್ವಲ್ಪ ಸಮಯ ತಗೆದು ಮನಸಾರೆ ಅವರ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಆಗ ನಮ್ಮೊಂದಿಗೆ ಮಾತನಾಡುವವರಿಗೆ ಸಂತೋಷವಾಗುತ್ತದೆ. ನಮ್ಮ ಭಾವನೆಗಳಿಗೆ ಬೆಲೆ ಸಿಗದೆ ಇದ್ದಾಗ ನಮಗೆ ಎಷ್ಟು ಬೇಸರ ಆಗುತ್ತದೆ ಅಲ್ಲವೇ...? ಪರರ ಮನಸ್ಸು ಸಹ ಹಾಗೆಯೇ. ಅವರ ಭಾವನೆಗಳಿಗೆ ಬೆಲೆ ಸಿಗದೆ ಇದ್ದಾಗ ಅವರಿಗೂ ಬೇಸರ ಆಗುತ್ತದೆ. ಯಾರಿಗೆ ಗೊತ್ತು ? ಆ ಬೇಸರ ಸ್ನೇಹ,ವಾತ್ಸಲ್ಯ,ಪ್ರೀತಿ ಕಳೆದುಕೊಳ್ಳುವಷ್ಟು ದೂರ ಬೆಳೆದುಬಿಡಬಹುದು. ಆಗ ನಷ್ಟ ಯಾರಿಗೆ..? ಕಣ್ಣಿಲ್ಲದವನು ಕುರುಡನಾದರೆ, ಸ್ನೇಹಿತರಿಲ್ಲದವನು ಅನಾಥನಂತೆ.


ಪರರ ಭಾವನೆಗಳಿಗೆ ಬೆಲೆ ಕೊಟ್ಟು, ಸಮಾನ ವಿಚಾರಗಳನ್ನು ಹಂಚಿಕೊಳ್ಳಿ. ಪರಸ್ಪರ ಒಬ್ಬರನ್ನೊಬ್ಬರನ್ನು ಅರ್ಥ ಮಾಡಿಕೊಳ್ಳಿ.
ಒಬ್ಬರನ್ನೊಬ್ಬರ ಕನಸುಗಳು ನನಸಾಗಲು ಅಥವಾ ಬೇರೆ ಯಾವುದೇ ರೀತಿಯ ಸಹಾಯ ಮಾಡಲು ಸಾಧ್ಯವಾದರೆ ಬಿಚ್ಚುಮನಸ್ಸಿನಿಂದ ಮಾಡಿ.
ಕಷ್ಟ-ಸುಖ ಹಂಚಿಕೊಳ್ಳಿ. ಆಗ ಪರಸ್ಪರ ಆತ್ಮೀಯತೆ, ಪ್ರೀತಿ, ನಂಬಿಕೆ ಬೆಳೆಯುತ್ತದೆ. ಮಕ್ಕಳ ಭಾವನೆಗಳಾಗಿರಬಹುದು, ಗಂಡ ಹೆಂಡತಿಯರ ಭಾವನೆಗಳಾಗಿರಬಹುದು, ಬಂಧು ಬಳಗದವರ ಭಾವನೆಗಳಾಗಿರಬುದು, ಸ್ನೇಹಿತರ ಭಾವನೆಗಳಾಗಿರಬಹುದು, ವಿದ್ಯಾರ್ಥಿಗಳ ಭಾವನೆಗಳಾಗಿರಬಹುದು,ಉಪನ್ಯಾಸಕರ ಭಾವನೆಗಳಾಗಿರಬಹುದು,ಅಧಿಕಾರಿಗಳ ಭಾವನೆಗಳಾಗಿರಬಹುದು,ಗುಮಾಸ್ತರ ಭಾವನೆಗಳಾಗಿರಬಹುದು, ಪ್ರಯಾಣಿಕರ ಭಾವನೆಗಳಾಗಿರಬಹುದು, ಒಟ್ಟಿನಲ್ಲಿ ಯಾರದೇ ಭಾವನೆಗಳಾಗಿರಲಿ...ಪ್ರತಿಯೊಬ್ಬರ ಭಾವನೆಗಳಿಗೆ ಬೆಲೆ ಕೊಡಿ. ಆಗ ವಾತ್ಸಲ್ಯ ಮತ್ತು ಸ್ನೇಹ ಬೆಳೆಯುತ್ತದೆ. ಇಂದು ನಾವು ಪರರ ಭಾವನೆಗಳಿಗೆ ಬೆಲೆ ಕೊಡದಿರುವುದೇ ಅನೇಕ ಅನಾಹುತಗಳಿಗೆ ಕಾರಣವಾಗುತ್ತಿರುವುದು. ಪರರ ಭಾವನೆಗಳಿಗೆ ಬೆಲೆ ಕೊಟ್ಟರೆ ನೂರಾರು ಜಗಳಗಳನ್ನು, ಅಪಾರ್ಥಗಳನ್ನು, ವಿಚ್ಛೇದನೆಗಳನ್ನು ತಡೆಯಬಹುದು.

ಭಾವನೆಗಳ ಹಟ್ಟೂರು ಮನಸ್ಸು. ಮನಸ್ಸು ಕನ್ನಡಿಗೆ ಸಮ. ಕನ್ನಡಿ ನಮ್ಮ ಹೊರಗಿನ ಪ್ರತಿಬಿಂಭ ತೋರಿಸಿದರೆ, ಮನಸ್ಸು ಒಳಗಿನ ಪ್ರತಿಬಿಂಭವನ್ನು ತೋರಿಸುತ್ತದೆ. ಮನಸ್ಸು ಮತ್ತು ಕನ್ನಡಿ ಇವೆರಡಕ್ಕೂ ಒಂದು ಸಾಮಾನ್ಯ ಸಮಾನತೆ ಇದೆ. ಅವೆರಡು ಒಡೆದು ಹೋದ ಮೇಲೆ ಪುನಃ ಜೋಡಿಸುವುದು ಕಷ್ಟ ಸಾಧ್ಯದ ಕೆಲಸ. ನಾವು ಮಾತನಾಡುವ ಮಾತುಗಳೇ ಮನಸು ಮುರಿಯಲು ಅಥವಾ ಸೇರಲು ಕಾರಣ. ಯಾವುದೇ ಸಂದರ್ಭದಲ್ಲಾಗಲೀ ಯಾವಾಗ, ಎಲ್ಲಿ, ಎಷ್ಟು, ಏನು ಮಾತನಾಡಬೇಕೋ, ಅದರ ಪರಿಣಾಮ ಮತ್ತು ದುಷ್ಪರಿಣಾಮಗಳನ್ನು ಯೋಚಿಸಿ ಅರಿತು ಮಾತನಾಡಬೇಕು. ಮಸೀದಿ ಮಂದಿರಗಳನ್ನು ನೂರು ಸಲ ಒಡೆದು ಪುನಃ ಕಟ್ಟಬಹುದು ಆದರೆ ಮನಸ್ಸು ಮುರಿದ ಮೇಲೆ ಅದನ್ನು ಕಟ್ಟಲು ಆಗುವುದಿಲ್ಲ. ಆದುದರಿಂದ ಬೇರೆಯವರ ಭಾವನೆಗಳನ್ನು ತಿಳಿದು ಮಾತನಾಡಿ. ಇಂದು ನೀವು ಪರರ ಭಾವನೆಗಳಿಗೆ ಬೆಲೆ ಕೊಟ್ಟರೆ, ನಾಳೆ ನಿಮ್ಮ ಭಾವನೆಗಳಿಗೂ ಬೆಲೆ ಸಿಗುತ್ತದೆ ಎನ್ನುವುದನ್ನು ಮರೆಯಬೇಡಿ.

- ಜಬೀವುಲ್ಲಾ ಖಾನ್

1 comments:

Anonymous said...

wow...................... what a beautiful topic really I realised many good things for your extrodinery article.a lot of thanks for you,keep it up then wish you all success in your assignment.

Post a Comment