ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಂಪಾದಕೀಯ
ಟಿ.ವಿ.ವಾಹಿನಿಗಳು ಅಗ್ಗದ ಕಾರ್ಯಕ್ರಮದ ಪ್ರಸಾರಕ್ಕೆ ಲಗ್ಗೆ ಹಾಕಿದ್ದು ಪ್ರಜ್ಞಾವಂತರನ್ನು ಟಿ.ವಿಯಿಂದ ದೂರ ಇರಿಸುವಂತೆ ಮಾಡಿದ್ದು ಸುಳ್ಳೇನಲ್ಲ. ಹಿಂದಿ, ಇಂಗ್ಲಿಷ್ ಚಾನೆಲ್ ಗಳನ್ನೇ ಯಥಾವತ್ತಾಗಿ ಕಾಪಿ ಮಾಡುತ್ತಾ ಬಂದಿರುವ ಕನ್ನಡದ ಘನಮಾನ್ಯ ವಾಹಿನಿಗಳು ಇದೀಗ ಈ ಕೀಳು ಮಟ್ಟದ ಪ್ರಚಾರ ತಂತ್ರವನ್ನು ವಾಹಿನಿಗಳ ಮೂಲಕ ಭಿತ್ತರಿಸತೊಡಗಿವೆ. ತನ್ಮೂಲಕ ತಮ್ಮ ಟಿ.ಆರ್.ಪಿ.ರೇಟಿಂಗ್ ನತ್ತ ವಕ್ರ ದೃಷ್ಟಿ ನೆಟ್ಟಿವೆ.ಹಿಂದೀ ಟಿ.ವಿ. ವಾಹಿನಿಗಳು, ಇಂಗ್ಲೀಷ್ ವಾಹಿನಿಗಳು ಸಾಕಷ್ಟು ಮನೋರಂಜನಾ ಕಾರ್ಯಕ್ರಮಗಳನ್ನು ಭಿತ್ತರಿಸಿ ತಮ್ಮ ರೇಟಿಂಗ್ ಏರಿಸಿಕೊಳ್ಳುತ್ತಿವೆ. ಅಲ್ಲಿ ಮನೋರಂಜನೆಯ ಹೆಸರಿನಲ್ಲಿ ಹೆಣ್ಣಿನ ಮಾನ ಹರಾಜಾಗುತ್ತಿರುವ ಸಂಗತಿಗಳೇ ಅತ್ಯಂತ ಹೆಚ್ಚು ಎಂಬುದು ಗಮನಾರ್ಹ ಸಂಗತಿ. ತನ್ಮೂಲಕ ಚಾನೆಲ್ ತನ್ನ ಜನಪ್ರಿಯತೆಯನ್ನು " ಹೆಚ್ಚಿಸಿಕೊಳ್ಳುವ"(!?)ಕುಟಿಲತಂತ್ರವನ್ನು ರೂಪಿಸುತ್ತಿರುವುದು ಕೆಟ್ಟ ಸಂಪ್ರದಾಯ.


ಹಿಂದೀ ಹಾಗೂ ಇಂಗ್ಲಿಷ್ ಚಾನೆಲ್ ಗಳ ವಿಷಯ ಹಾಗೇ ಇರಲಿ...ಕನ್ನಡದ ಮನೋರಂಜನಾ ಚಾನೆಲ್ ಗಳು, ಕೆಲವೊಂದು ಅದಕ್ಕೆ ಪೂರಕ ಸ್ಪಂದನ ನೀಡುವ ಸುದ್ದಿ ಚಾನೆಲ್ ಗಳು, ಹಾಗೂ ಒಟ್ಟಾರೆಯಾಗಿ ಮನೋರಂಜನೆ ಹಾಗೂ ಸುದ್ದಿ ಭಿತ್ತರಿಸುವ ಆಯ್ದ ಕನ್ನಡ ಚಾನೆಲ್ ಗಳಲ್ಲಿ ಇಂದು ಅತ್ಯಂತ ವೈಭವೀಕರಿಸುತ್ತಿರುವ " ರಿಯಾಲಿಟೀ ಶೋ " ಹೇಸಿಗೆ ಹುಟ್ಟಿಸುತ್ತಿರುವುದರಲ್ಲಿ ಎರಡು ಮಾತಿಲ್ಲ.ಕೆಲವೊಂದು ಹಾಡುಗಳ (ಅಪರೂಪಕ್ಕೆ)ರಿಯಾಲಿಟಿ ಶೋ ಕೊಂಚ ಪರವಾಗಿಲ್ಲ ಎನಿಸುತ್ತವೆ ಎಂಬುದು ಬಿಟ್ಟರೆ ಉಳಿದವುಗಳು ಮಾತ್ರ ಅತ್ಯಂತ ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿ ಬರೆಯುತ್ತಿವೆ.
ಸುದ್ದಿ, ಮನೋರಂಜನೆ, ಶಿಕ್ಷಣ ಈ ಮೂರನ್ನು ನೀಡಬೇಕಾದ ವಾಹಿನಿಗಳು ಇಂದು ಕೇವಲ ಮನೋರಂಜನೆಯ ಹೆಸರಿನಲ್ಲಿ ಸಂಪ್ರದಾಯ ಹಾಗೂ ಸಂಸ್ಕೃತಿಯ ಹರಣ ಮಾಡುತ್ತಿರುವುದು ಖೇದಕರ ಅಂಶ.


ಮಾಧ್ಯಮ ರಂಗ ಬದಲಾಗಿದೆ. ಮಾಧ್ಯಮ ರಂಗ ಇಂದು ಪತ್ರಿಕೋದ್ಯಮ ಎಂಬ ಹಣೆಪಟ್ಟಿ ಹೊತ್ತುಕೊಂಡು ಕೇವಲ ಹಣ ಮಾಡುವ ದಂಧೆಯಾಗುತ್ತಿರುವುದು ಒಂದೆಡೆಯಾದರೆ ತನ್ನ ಮೂಲಭೂತ ವಿಚಾರಗಳಿಗೇ ತಿಲಾಂಜಲಿ ನೀಡಿ ಕೇವಲ ಮನೋರಂಜನೆಯನ್ನೇ ತನ್ನ ಜನಪ್ರಿಯತೆಯ ಅಸ್ತ್ರವನ್ನಾಗಿಸಿಕೊಂಡು ; ತನ್ಮೂಲಕ ಚಾನೆಲ್ ರೇಟಿಂಗ್ ನತ್ತ ದೃಷ್ಠಿ ನೆಟ್ಟಿರುವುದನ್ನು ನೋಡಿದರೆ "ಪತ್ರಿಕಾ ಧರ್ಮ" ಇಂದು ಎತ್ತ ಸಾಗುತ್ತಿದೆ ಎಂಬ ಗಂಭೀರ ಚಿಂತನೆ ಮಾಡಲೇಬೇಕಾದ ಅನಿವಾರ್ಯತೆ ಕಂಡೊದಗುತ್ತದೆ.
ಕನ್ನಡ ಟಿ.ವಿ.ವಾಹಿನಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಸುವರ್ಣ ವಾಹಿನಿ ಭಿತ್ತರಿಸುತ್ತಿರುವ ಪ್ಯಾಟೆ ಹುಡುಗೀರ ಹಳ್ಳಿ ಲೈಫು ಕಾರ್ಯಕ್ರಮದಲ್ಲಿ ಹಳ್ಳಿ ಅಥವಾ ಗ್ರಾಮೀಣ ಜನತೆ ಸಂಪೂರ್ಣವಾಗಿ ಅನಕ್ಷರಸ್ಥರು ಅಥವಾ ಸಂಪ್ರದಾಯಹೀನರು, ಸಂಸ್ಕೃತಿ, ಸಂಸ್ಕಾರಗಳ ಗಂಧಗಾಳಿ ಹೊಂದಿದವರೇ ಅಲ್ಲ... ಎಂಬಂತೆ ಬಿಂಭಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ?
ಇರಲಿ; ವಾಹಿನಿಗಳೇ ಇರಲಿ; ಅಥವಾ ಸಮಸ್ತ ಮಾಧ್ಯಮಗಳೇ ಇರಲಿ ಯಾವ ಸಂಸ್ಕೃತಿಯನ್ನೂ ಹೀಯಾಳಿಸುವುದು ಸರಿಯಲ್ಲ. ಸಂಸ್ಕೃತಿಯ ಸಾರವನ್ನು ಜನತೆಯೆದರು ತೋರಿಸಬಹುದು; ಅಥವಾ ವಾಸ್ತವವನ್ನು ಸಮರ್ಪಕವಾಗಿ ಜನತೆಯೆದುರು ಅನಾವರಣಗೊಳಿಸಬಹುದು. ಅದರಲ್ಲಿದ್ದ ಉತ್ತಮ ವಿಚಾರಗಳನ್ನು ಜನತೆಗೆ ತಿಳಿಸುವ ಕಾರ್ಯ ಮಾಡಬಹುದು. ಆದರೆ ಸುವರ್ಣ ವಾಹಿನಿಯ ಕಾರ್ಯಕ್ರಮದಲ್ಲಿ ಕೇವಲ ಹಳ್ಳಿ ಜನರು ; ಹಳ್ಳಿಯ ಜನತೆ ಸಂಸ್ಕಾರ ಹೀನರು ಎಂತಂತೆ ಬಿಂಭಿಸಿದ್ದು ತಪ್ಪು. ಬದುಕನ್ನು ತೋರಿಸುವಂತಹ ರೀತಿ ಸಹಜವಾಗಿಲ್ಲ. ಬದಲಾಗಿ ವೈಭವೀಕರಿಸಿ ; ವಿಕೃತಗೊಳಿಸಿ ತೋರಿಸಿದ್ದು ಮಾತ್ರ ಚಾನೆಲ್ ನ ಸಂಸ್ಕೃತಿ ಏನೆಂಬುದಕ್ಕೆ ಸ್ಪಷ್ಟ ನಿದರ್ಶನ.
ಪೇಟೆ ಮಂದಿ ಸಂಸ್ಕಾರವಂತರು, ಜ್ಞಾನವಂತರು ಹಳ್ಳಿಗರು ಕೇವಲ ಏನೂಗೊತ್ತಿಲ್ಲದ ಜ್ಞಾನಹೀನರೆಂಬಂತೆ ಬಿಂಭಿಸಿದ ವಾಹಿನಿಯ ಪ್ರವೃತ್ತಿ ನಿಜಕ್ಕೂ ಖಂಡನಾರ್ಹ.
ರಿಯಾಲಿಟೀ ಶೋಗಳಲ್ಲಿ ಪ್ರತಿಭೆಗಳ ಅನಾವರಣ ಆಗುವುದಕ್ಕಿಂತಲೂ ಹೆಚ್ಚಾಗಿ ಪ್ರತಿಭೆಗಳ ಮಾನಹರಣ ಆಗುತ್ತಿದೆ ಎಂಬುದರಲ್ಲಿ ಸಂದೇಹವಿಲ್ಲ.ರಿಯಾಲಿಟೀ ಶೋಗಳಲ್ಲಿ ಭಾಗವಹಿಸುವ ಪ್ರತಿಭೆಗಳನ್ನು ನಡೆಸಿಕೊಳ್ಳುವ ರೀತಿ ನಿಜಕ್ಕೂ ಬೇಸರತರಿಸುತ್ತದೆ. ಅನರ್ಹತೆಗೊಂಡ ಪ್ರತಿಭೆಗಳನ್ನು ಕಳುಹಿಸಿಕೊಡುವ ರೀತಿ, ಅದನ್ನೂ ವೈಭವೀಕರಿಸುವ ಚಾನಲ್ ಗಳ ವಿಘ್ನ ಸಂತೋಷಿ ಗುಣವನ್ನು ಪದಗಳಿಂದ ಬಣ್ಣಿಸಲು ಸಾಧ್ಯವೇ ಇಲ್ಲ. ಶೋ ನಲ್ಲಿ ಭಾಗವಹಿಸುವ ಹರೆಯದ ಹುಡುಗಿಯರ ಉಡುಗೆ , ತೊಡುಗೆಗಳ ರೀತಿ ಎಂತಹವರನ್ನೂ ಮುಜುಗರಕ್ಕೆ ಸಿಲುಕಿಸುತ್ತದೆ.
ಚಾನೆಲ್ ಗಳಲ್ಲಿ ಭಿತ್ತರಗೊಳ್ಳುವ ರಿಯಾಲಿಟೀ ಶೋಗಳಲ್ಲಿ ಭಾಗವಹಿಸುವ ಪ್ರತಿಭೆಗಳು ಮೊತ್ತ ಮೊದಲಾಗಿ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಕೇವಲ ಅಲ್ಪ ಸಮಯದಲ್ಲೇ ಅತ್ಯಂತ ಪ್ರಸಿದ್ಧಿ ಪಡೆಯುತ್ತೇನೆಂಬ ಮಹದಾಸೆಯಿಂದ ವಿವಿಧ ಟಾಸ್ಕ್ ಗಳಲ್ಲಿ ಭಾಗವಹಿಸುವ ಪ್ರತಿಭೆಗಳು ಟಿ.ವಿ ಪರದೆಯಲ್ಲಿ ತಮ್ಮ ಅವಸ್ಥೆಯನ್ನು ಕಂಡು ಮರುಕಪಡುವುದರಲ್ಲಿ ಸಂದೇಹವಿಲ್ಲ. ಟಾಸ್ಕ್ ಗಳಲ್ಲಿ ಶೋಗಳ ನಿರ್ದೇಶಕರು, ನಿರೂಪಕರು ಅಸಹ್ಯಕರ ರೀತಿಯಲ್ಲಿ ಹರೆಯದ ಯುವತಿಯರನ್ನು ನಡೆಸಿಕೊಳ್ಳುವ ರೀತಿ ನಿಜಕ್ಕೂ ಮುಜುಗರ ಹುಟ್ಟಿಸುತ್ತವೆ. ಪ್ರಜ್ಞಾವಂತ ಮರ್ಯಾದಸ್ಥ ಮನೆತನದ ಹುಡುಗಿಯರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅರ್ಧದಲ್ಲೇ ಬಿಟ್ಟು ಓಡಿಬಂದ ಎಷ್ಟೋ ಉದಾಹರಣೆಗಳೂ ನಮ್ಮೆದರು ಕಾಣಸಿಗುತ್ತವೆ.
ರಿಯಾಲಿಟಿ ಶೋಗಳಲ್ಲಿ ತಮ್ಮ ಮಕ್ಕಳು ಭಾಗವಹಿಸಿದರೆ ನಮ್ಮ ಸ್ಟೇಟಸ್ಸು ಏರುತ್ತೆ ಎಂಬ ಮೂಢ ಭ್ರಮೆ ಹೊಂದಿರುವ ಹೆತ್ತವರು ಈ ಬಗ್ಗೆ ಚಿಂತಿಸಬೇಕು. ವಿದೇಶೀ ಸಂಪ್ರದಾಯದ ಮೋಜಿನ ಮಂದ ಬೆಳಕಿಗೆ ಮಾರುಹೋಗಿ ಮಕ್ಕಳ ಮಾನ ಹರಾಜಾಗುವ ಇಂತಹ ಕಾರ್ಯಕ್ರಮಗಳತ್ತ ಮಕ್ಕಳ ಹೆತ್ತವರು ಧ್ವನಿಯೆತ್ತಬೇಕು.ಅಥವಾ ಇಂತಹ ಕಾರ್ಯಕ್ರಮಗಳಿಗೆ ತಮ್ಮ ಮಕ್ಕಳನ್ನು ಕಳುಹಿಸದೆ ಪ್ರತಿಭಟಿಸಬೇಕು. ಇದು ಹೀಗೇ ಮುಂದುವರಿದದ್ದೇ ಆದಲ್ಲಿ ಯುವತಿಯರ ಮಾನದೊಂದಿಗೆ ಚೆಲ್ಲಾಟವಾಡುತ್ತಾ ತಮ್ಮ ರೇಟಿಂಗ್ ಹೆಚ್ಚಿಸುವ ಟಿ.ವಿ.ಚಾನೆಲ್ ಹಾಗೂ ಚಾನೆಲ್ ಗಳ ಇಂತಹ ರಿಯಾಲಿಟಿ ಶೋಗಳು ಪ್ರತಿದಿನ ಹೆಚ್ಚುವುದರಲ್ಲಿ ಸಂದೇಹವಿಲ್ಲ.

ರಿಯಾಲಿಟಿ ಶೋಗಳ ಅಸಲಿ ಮುಖವನ್ನು ನೋಡಿದರೆ ನಿಜಕ್ಕೂ ಖೇದವಾಗುತ್ತದೆ. ಅಲ್ಲಿ ವಿಕೃತ ಮನಸ್ಸಿನ ಕಾಮದಾಟದ ವಾಸನೆ ಬಡಿಯುವುದರಲ್ಲಿ ಸಂದೇಹವಿಲ್ಲ. ನಿಜಕ್ಕೂ ಮರ್ಯಾದಸ್ಥ ಮನೆತನದ ಪ್ರತಿಯೊಬ್ಬ ಹೆತ್ತವರೂ ಈ ನಿಟ್ಟಿನಲ್ಲಿ ಜಾಗೃತರಾಗಬೇಕಾಗಿದೆ. ರಿಯಾಲಿಟಿ ಶೋಗಳ ಮೂಲಕ ತಮ್ಮ ಮಕ್ಕಳನ್ನು ಕ್ಷಿಪ್ರ ಪ್ರಸಿದ್ಧಿಯ ಬಲೆಗೆ ದೂಡದಂತೆ ತಡೆಯಬೇಕಾಗಿದೆ.
ಇಂದು ಮಾಧ್ಯಮಗಳ ಈ ರೀತಿಯ ಪ್ರವೃತ್ತಿಯ ಬಗ್ಗೆ ಧ್ವನಿ ಯೆತ್ತುವುದು ಎಚ್ಚರಿಸುವುದು ಅನಿವಾರ್ಯವಾಗಿದೆ. ಆ ಕಾರಣಕ್ಕಾಗಿ ಪ್ರಜ್ಞಾವಂತರನೇಕರ ಅಭಿಪ್ರಾಯಗಳೊಂದಿಗೆ "ರಿಯಾಲಿಟಿ ಶೋ ಅಸಲಿ ಮುಖ" ಎಂಬ ವಿಶೇಷ ಲೇಖನ ಮಾಲೆಯನ್ನು ಈ ವಾರದ ವಿಶೇಷವಾಗಿ ನೀಡುತ್ತಿದ್ದೇವೆ. ಓದುಗರು ಮುಕ್ತವಾಗಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ಕೆಟ್ಟ ಸಂಪ್ರದಾಯಕ್ಕೆ ತಿಲಾಂಜಲಿ ಹಾಕಬೇಕೆಂಬುದು ನಮ್ಮ ಉದ್ದೇಶ. ಸನಾತನ ಸಂಸ್ಕೃತಿ, ಭಾಷೆ, ಪರಂಪರೆಯನ್ನು ಬಿಂಭಿಸುವ, ನಾಡಿನ ಕೀರ್ತಿ ಹೆಚ್ಚಿಸುವ ಯಾವ ಕಾರ್ಯಕ್ರಮವೇ ಪ್ರಸಾರವಾಗಲಿ ಅದಕ್ಕೆ ಸಮಸ್ತ ಕನ್ನಡಿಗರೂ, ಭಾಷಾ ಪ್ರೇಮಿಗಳು ಸಜ್ಜನ ಸಮಾಜ ಬಾಂಧವರು ಬೆಂಬಲ ಸೂಚಿಸುತ್ತಾರೆ. ವಾಹಿನಿಗಳು ಇದರತ್ತ ಚಿಂತಿತರಾಗಬೇಕಾಗಿದೆ.

ಹರೀಶ್ ಕೆ.ಆದೂರು

0 comments:

Post a Comment