ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಸ್ಪೆಷಲ್
ಇತ್ತೀಚಿಗಿನ ವರ್ಷಗಳಲ್ಲಿ ಟಿ.ವಿ. ಪರದೆಯನ್ನು ರಿಯಾಲಿಟಿ ಶೋಗಳು ಆಕ್ರಮಿಸಿವೆ. ರಾಮಾಯಣ, ಮಹಾಭಾರತದಂತಹ ಉತ್ತಮ ಮೌಲ್ಯಗಳುಳ್ಳ ಧಾರಾವಾಹಿಗಳು ಬರುತ್ತಿದ್ದ ಕಾಲವದು. ಮಕ್ಕಳು, ಹಿರಿಯರು ಎನ್ನುವ ಭೇದಭಾವವಿಲ್ಲದೆ ಎಲ್ಲರೂ ಕುತೂಹಲ, ಶ್ರದ್ಧೆ, ಸಂಭ್ರಮದಿಂದ ಅದನ್ನು ವೀಕ್ಷಿಸುತ್ತಿದ್ದರು. ಪುರಾಣಗಳಲ್ಲಿನ ಉತ್ತಮ ಮೌಲ್ಯಗಳನ್ನು ತಿಳಿಯಲು ಅದು ಸಹಕಾರಿಯಾಗುತ್ತಿತ್ತು. ಆದರೆ ಕ್ರಮೇಣ ಕಾಲ ಸರಿದಂತೆ ರಾಮಾಯಣ, ಮಹಾಭಾರತದಂತಹ ಪೌರಾಣಿಕ ಧಾರಾವಾಹಿಗಳ ಜಾಗವನ್ನು 'ಸಾಸ್-ಬಹೂ' ಫ್ಯಾಮಿಲಿ ಡ್ರಾಮಾಗಳು ಆಕ್ರಮಿಸಿಕೊಂಡವು. ಭಾರತೀಯ ಮಹಿಳೆಯರು ಹೆಚ್ಚು ಹೆಚ್ಚಾಗಿ 'ಸಾಸ್-ಬಹೂ' ಸೀರಿಯಲ್ಗಳ ಕಡೆಗೆ ತಮ್ಮ ಒಲವನ್ನು ವ್ಯಕ್ತಪಡಿಸಿದರು. ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋದಂತೆ ಈ ರಿಯಾಲಿಟಿ ಶೋಗಳ ಕಾಲ ಪ್ರಾರಂಭವಾಯಿತು.

'ಸಾಸ್-ಬಹೂ' ಫ್ಯಾಮಿಲಿ ಡ್ರಾಮಾ, ಕಾಲ್ಪನಿಕ ಥ್ರಿಲ್ಲರ್ಗಳನ್ನು ನೋಡಿ ಬೇಸತ್ತಿದ್ದ ಟಿ.ವಿ. ವೀಕ್ಷಕರಿಗೆ ವಾಸ್ತವ ಬದುಕಿನ ಒಳಗೊಂದು ಇಣುಕು ನೋಟವನ್ನು ಒದಗಿಸುವ ಕಸರತ್ತೇ ಈ ರಿಯಾಲಿಟಿ ಶೋಗಳು. ಈ ರಿಯಾಲಿಟಿ ಶೋಗಳು ಇತ್ತೀಚೆಗೆ ಜನಪ್ರಿಯವಾಗುತ್ತಿವೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇಂತಹ ಶೋಗಳು ಆರಂಭವಾಗಿ ಹಲವು ದಶಕಗಳೇ ಕಳೆದಿವೆ. ಇತ್ತೀಚಿಗಿನ ವರ್ಷಗಳಲ್ಲಿ ಇವು ಭಾರತಕ್ಕೂ ಲಗ್ಗೆ ಇಟ್ಟಿವೆ.

ಕೇವಲ ಹಾಡು, ಕುಣಿತಕ್ಕೆ ಸೀಮಿತವಾಗಿದ್ದ ರಿಯಾಲಿಟಿ ಶೋಗಳು ಇಂದು ಪ್ರೀತಿ, ಮದುವೆ, ವಿಚ್ಛೇದನೆ ಹೀಗೆ ಬದುಕಿನ ಎಲ್ಲವನ್ನೂ ಟಿವಿ ಪರದೆಗೆ ತಂದಿವೆ. ಖಾಸಗಿ ವಿಚಾರಗಳನ್ನು ಟಿವಿ ಪರದೆಯ ಮೇಲೆ ತೋರಿಸಿ ವೀಕ್ಷಕರಿಗೆ ಮನರಂಜನೆಯನ್ನು ನೀಡುವ ಇಂತಹ ಶೋಗಳಿಗೆ ಏನೆನ್ನಬೇಕೋ ಗೊತ್ತಾಗುತ್ತಿಲ್ಲ. ಇಂದು ರಿಯಾಲಿಟಿ ಶೋಗಳು ಸಭ್ಯತೆಯ ಎಲ್ಲೆಯನ್ನು ಮೀರುತ್ತಿವೆ. ಸೂಕ್ಷ್ಮವಾಗಿ ಗಮನಿಸಬೇಕಾದರೆ ರಿಯಾಲಿಟಿ ಶೋಗಳು ನೈತಿಕತೆಯ ಅಧಃಪತನಕ್ಕೆ ಕಾರಣವಾಗುತ್ತಿದೆ. ಶೋಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಅನುಚಿತ, ಅಸಾಮಾನ್ಯ ವರ್ತನೆ, ಪ್ರತಿಸ್ಪರ್ಥಿ ಯೊಂದಿಗಿನ ಬೈಗುಳ , ಅಶ್ಲೀಲ ವರ್ತನೆ ಇವೆಲ್ಲಾ ನೋಡುಗರಲ್ಲೂ ಮುಜುಗರ ಉಂಟುಮಾಡುತ್ತಿದೆ. ಮಕ್ಕಳು ಹಾಗೂ ಯುವ ಸಮೂಹ ಇಂತಹವುಗಳನ್ನು ವೀಕ್ಷಿಸಿ ದಾರಿ ತಪ್ಪುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇತೀಚಿಗೆ ಬರುತ್ತಿರುವ ಕೆಲವು ರಿಯಾಲಿಟಿ ಶೋಗಳನ್ನು ಗಮನಿಸಿದರೆ ನೈತಿಕತೆಯ ಯಾವ ಮಾನದಂಡವೂ ಅವರಿಗೆ ಇದ್ದಂತಿಲ್ಲ. ಟಿ.ಆರ್.ಪಿ. ರೇಟಿಂಗ್ಗಾಗಿ ಚಾನೆಲ್ಗಳು ಯಾವ ಕೀಳು ಮಟ್ಟಕ್ಕೂ ಇಳಿಯುವ ಪರಿಸ್ಥಿತಿ ಈಗಿನದು. ವಿಪರ್ಯಾಸವೆಂದರೆ ನಮ್ಮ ಜನರೂ ಇದನ್ನೇ ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ.

ರಿಯಾಲಿಟಿ ಶೋಗಳು ನೋಡುಗರನ್ನು ಮೋಸಗೊಳಿಸುವ ಒಂದು ಟೆಕ್ನಿಕ್ ಅಷ್ಟೇ. ನೈಜವಾಗಿ ನಡೆಯುತ್ತಿರುವಂತೇ ನಮಗನ್ನಿಸಿದರೂ ಅಲ್ಲಿ ಪ್ರತಿಯೊಂದು ಸೀನ್ಗಾಗಿ ಸ್ಕ್ರಿಪ್ಟ್ ಮೊದಲೇತಯಾರಾಗಿರುತ್ತದೆ. ವಾಸ್ತವಕ್ಕೆ ಬಲು ದೂರವಾಗಿರುವ ಈ ಶೋಗಳಲ್ಲಿ ಅಭ್ಯರ್ಥಿಗಳನ್ನು ತೀರ್ಪುಗಾರರು ನಿಂದಿಸುವ ರೀತಿ ಕೆಲವೊಮ್ಮೆ ಅತಿಯೆನಿಸುತ್ತದೆ. ರಿಯಾಲಿಟಿ ಶೋಗಳಲ್ಲಿ ನಡೆಯುವುದು ಖಾಸಗಿ ಹುಳುಕುಗಳ ಬಯಲು ಪ್ರದರ್ಶನ. ಇಲ್ಲಿ ಮಾನಸಿಕ ವಿಕೃತಿಗಳು ಬೆಳಕು ಕಾಣುತ್ತದೆ. ಸುಸಂಸ್ಕೃತಿಯ ಸೋಗು ಕಳಚಿ ವಿಕೃತಿ ಹೊರಬೀಳುವುದು ಇಂತಹ ರಿಯಾಲಿಟಿ ಶೋಗಳಲ್ಲಿ.

ಹಾಗೆಂದು ಎಲ್ಲಾ ರಿಯಾಲಿಟಿ ಶೋಗಳು ಕೆಟ್ಟವೆಂದು ಹೇಳಲು ಸಾರ್ಧಯವಿಲ್ಲ. ಸುನಿಧಿ ಚೌಹಾಣ್, ಶ್ರೇಯಾ ಘೋಷಾಲ್, ರಾಜುಶ್ರೀವಾಸ್ತವ್, ಅಭಿಜಿತ್ ಸಾವಂತ್ ಇವರೆಲ್ಲರೂ ರಿಯಾಲಿಟಿ ಶೋಗಳ ಕೂಸುಗಳು. ಸೋನಿ ಟಿ.ವಿ. ಯ 'ಇಂಡಿಯನ್ ಐಡಲ್' ; ಜೀ. ಟಿ.ವಿ. ಯ 'ಸರೆಗಾಮಾ' ಸಂಗೀತ ರಿಯಾಲಿಟಿ ಶೋಗಳಲ್ಲಿ ಗೆದ್ದ ಹಲವರು ಇಂದು ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ತಮ್ಮ ಕಲೆಯನ್ನು ಸಮಾಜಕ್ಕೆ ಪ್ರದರ್ಶಿಸಲು ಅವರಿಗೆ ರಿಯಾಲಿಟಿ ಶೋಗಳು ಬಹಳಷ್ಟು ಸಹಕರಿಸಿವೆ.

ಭಾರತದಲ್ಲಿ ಯಶಸ್ವೀ ರಿಯಾಲಿಟಿ ಶೋಗಳೆಂದು ಟಾಪ್ - 10 ಸ್ಥಾನ ಪಡೆದುಕೊಂಡ 'ಎಂ. ಟಿ.ವಿ. ರೋಡೀಸ್', 'ಸಚ್ ಕಾ ಸಾಮಾನ್', 'ರಾಖೀ ಕಾ ಸ್ವಯಂವರ್', 'ಬಿಗ್ ಬಾಸ್' ಇವೆಲ್ಲಾ ವಿವಾದಾಸ್ಪದ ಶೋಗಳು. ಖಾಸಗೀತನವನ್ನು ಹರಾಜಿಗಿಟ್ಟ ಇಂತಹ ಶೋಗಳನ್ನು ಭಾರತೀಯರಾಗಿ ನಾವು ಇಟಷ್ಟಪಟ್ಟೆವೆಂದರೆ ಆಶ್ಚರ್ಯವೆನಿಸುತ್ತದೆ...ಜತೆಗೆ ಸ್ವಲ್ಪ ಕಳವಳವೂ.....ಇವುಗಳನ್ನು ವೀಕ್ಷಿಸುವ ಮನಸ್ಸುಗಳು ಅದೆಷ್ಟು ವಿಕೃತತೆಯಿಂದ ಕೂಡಿರಬಹುದು?. ಭಾರತೀಯರಾಗಿ ನಾವೇ ನಮ್ಮ ಸಂಸ್ಖೃತಿಯನ್ನು ಪ್ರೀತಿಸದಿದ್ದರೆ, ಗೌರವಿಸದಿದರೆ ಅದು ಎಷ್ಟು ಕಾಲ ಉಳಿದೀತು?

- ಶ್ವೇತಾ

ದ್ವಿತೀಯ ಬಿ.ಎ, ಗೋವಿಂದ ದಾಸ ಕಾಲೇಜು, ಸುರತ್ಕಲ್.

0 comments:

Post a Comment