ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ದೂರದ ಒಂದು ದೇಶವನ್ನು ಸುತ್ತುವುದು, ಯಾವುದೋ ಒಂದು ಕಾರ್ಯನಿಮಿತ್ತ ತೆರಳುವುದು, ಜೀವನದಲ್ಲಿ ಒಮ್ಮೆಯಾದರು ನೋಡಲೆಬೇಕೆಂಬ ಮಹಾದಾಸೆಯನ್ನು ಇಟ್ಟುಕೊಂಡು ವಿದೇಶಕ್ಕೆ ಹೋಗುವುದು. ಹೋದ ನಂತರ ಕಾಡುವ ಪರದೇಶ ಅಲ್ಲಿನ ನೆಲ-ಜಲದ ಬಗ್ಗೆ, ಸಂಸ್ಕೃತಿಯ ಕುರಿತು ಬರೆಯುವುದು.ಅಮೇರಿಕೆಯ ಹಾಲಿವುಡ್ ಬೆಳಕು ಇಲ್ಲಿಗೆ ಕಣ್ಣಿಗೆ ರಾಚಿದಂತೆ, ರೋಮಿನ ಬೀದಿಗಳಲ್ಲಿ ನಾವೇ ನಡೆದಂತೆ ಆಗುವ ಅನುಭವವನ್ನು ಹಲವು ಪ್ರವಾಸಿ ಕಥನಗಳು ಮೂಡಿಸಿದ್ದು ಆಗಿದೆ. ಆದರೆ ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮದೇ ಶೈಲಿಯ ಬರವಣಿಗೆಯ ಮೂಲಕ ಗುರುತಿಸಿಕೊಂಡಿರುವ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಪಾಠ ಮಾಡಿಕೊಂಡಿದ್ದ ನಿರಂಜನವಾನಳ್ಳಿಯವರಿಗೆ ತಮ್ಮ ಬದುಕಿನ ಅನೀರಿಕ್ಷಿತವಾದ ಒಂದು ತಿರುವಿನ ಮೂಲಕ ದೂರದ ತೈಲರಾಷ್ಟ್ರ ಒಮಾನ್ 2 ವರ್ಷ ಹೋಗಿ ನೆಲೆಸುವ ಒಂದು ಸುವರ್ಣ ಅವಕಾಶ ಲಭಿಸುತ್ತದೆ.
ಅನುಭವಗಳನ್ನು ಮನದಾಳಕ್ಕೆ ಇಳಿಸಿಕೊಂಡು ಅವುಗಳ ರಸಸ್ವಾಧದ ಜೊತೆಗೆ ಬದುಕ ಕಳೆವ ಲೇಖಕರು, ಸಂಸ್ಕೃತಿಯ ವೈರುಧ್ಯತೆ-ಸಂಸ್ಕೃತಿಯ ಪರಸ್ಪರತೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಪ್ರವಾಸಿ ಕಥನಕ್ಕಿಂತ ವಿಭಿನ್ನವಾಗಿ ನಿಲ್ಲುವ ಆವಾಸಿ ಕಥನವನ್ನು 'ಒಮಾನ್ ಎಂಬ ಒಗಟು' ಪುಸ್ತಿಕೆಯಲ್ಲಿ ಸ್ಪಷ್ಟವಾಗಿ ತೆರೆದಿಟ್ಟಿದ್ದಾರೆ.

ಒಮಾನ್ ಎಂಬ ಕನಸು-ನನಸು ಎಂಬ ಹೊಯ್ದಾಟದಲ್ಲಿ ತೆರೆದುಕೊಳ್ಳುವ ಪುಸ್ತಕ , ಅರೇಬಿಯನ್ ರಾಷ್ಟ್ರವೆಂದರೆ ಎಲ್ಲರ ಹಾಗೇ ನಾನು ಚಿನ್ನದ ಬಿಸ್ಕತ್,ಸಂಪತ್ತು ಎಂದು ತಿಳಿದಿದ್ದೆ ಎಂದು ಹೇಳುತ್ತಾ ಹೋಗುವ ಇವರ ಸರಳತೆ ಎಲ್ಲಾ ಬರಹದಲ್ಲಿಯು ಕಾಣಸಿಗುತ್ತದೆ. ಆವಾಸಿ ಭಾರತೀಯನೊಬ್ಬ ಸಲಾಲದಂತಹ ರೇವು ಪಟ್ಟಣದಲ್ಲಿ ಮನೆ ಬಾಡಿಗೆಗೆ ಪಡೆಯಲು ಪಡುವ ಫಜೀತಿ. ಇಂಗ್ಲೇಂಡಿನಲ್ಲಿ ಮಕ್ಕಳು ಗಲಾಟೆ ಮಾಡಿದರೆ ಸಲಾಲದಲ್ಲಿರುವ ಅಳಿಯನಿಗೆ ಪೋನ್ ಮಾಡುವ ಅತ್ತೆ. ಈ ಒಂದು ಪೋನ್ ಕಾಲನ್ನು ಮುಂದಿರಿಸಿಕೊಂಡು ಮ್ಯಾಕ್ಲೂಹಾನ್ನ 'ಜಗತ್ ಗ್ರಾಮ' ಪರಿಕಲ್ಪನೆಯನ್ನು ಮುಂದಿಡುವ ಲೇಖಕರ ಜಾಣ್ಮೆ!.

ಸಲಾಲ ಪಾರ್ಕ್ ನಲ್ಲಿ ಜರುಗುವ ಕನ್ನಡ ಸಂಘದ ಪಿಕ್ನಿಕ್ ಕಾಮತ್ ಅವರ ಹಾಸ್ಯಭರಿತ ನಿರೂಪಣೆ ಲೇಖಕರು ಅಲ್ಲಿಯು ಹುಡುಕುವ ಸಮುದಾಯ ಪ್ರಜ್ನೆ ಅರ್ಥಪೂರ್ಣವಾಗಿಯೆ ಇದೆ. ಒಮಾನಿನ್ನಲ್ಲಿ ನೆನಪಾಗುವ ಮೈಸೂರು, ಇಂದಿನ ವಿದ್ಯಾರ್ಥಿಗಳ ಮನೋಭಾವ ಇವರ ಗುರು ಮನಸ್ಸನ್ನು ಕದಡಿದಂತೆ ಕಾಣುತ್ತದೆ. ಪಾಕಿಸ್ತಾನಿ ಹೇರ್ ಸಲೂನ್ ನಲ್ಲಿ ಇವರು ಪೇಚಿಗೆ ಸಿಲುಕುವುದು,ಕೊನೆಗೆ ನಾಲ್ಕು ರಿಯಾಲುಗಳು ಇವರ ಮರ್ಯಾದೆ ಕಾಪಡುವುದು.

ಮರುಭೂಮಿಯ ಮಳೆಯ ಹಬ್ಬಕ್ಕೆ ಕರೆಯಲು ಮರೆಯದ ಲೇಖಕರು, ಮರುಭೂಮಿಯಲ್ಲಾಗುವ ಮಳೆ-ಮಂಜಿನ ಖರೀಫ್ ಹಬ್ಬದ ಸವಿಯನ್ನು ಮೊಗೆ-ಮೊಗೆದು ಬಡಿಸಿದ್ದಾರೆ.ಕೇರಳಿಗರು ಹೆಚ್ಚಾಗಿ ಹೋಗುತ್ತಿರುವುದರಿಂದ ಒಮಾನಿರಿಗೆ ಆಗುತ್ತಿರುವ ಶ್ರಮದ ಸ್ಥಾನಪಲ್ಲಟ! ಅದನ್ನು ತಪ್ಪಿಸಲು 'ಒಮಾನೀಕರಣವನ್ನು ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ. ಸಲಾಲದಲ್ಲಿ ಶಾಖಹಾರಿ ತುತ್ತು ನೀಡುವ ಅನ್ನಪೂರ್ಣ ಹೋಟೆಲ್ ಜೊತೆಗೆ ಅದರ ಆದಿ ಮಧ್ಯವನ್ನೆಲ್ಲ ಚೆಂದವಾಗಿ ತಿಳಿಸಿಕೊಟ್ಟಿದ್ದಾರೆ. ಒಮಾನ್ ನಲ್ಲಿ ವಾಹನ ಪರವಾನಗಿ ಎಂತಹ ಸವಾಲು ಎಂಬುದು ಮೈ ಜುಂ ಎನ್ನಿಸುವಂತಿದೆ. ಆದರೂ ತಮ್ಮ ವಿಫಲ ಪ್ರಯತ್ನಗಳನ್ನು ಹೇಳಿಕೊಳ್ಳುವ ಇವರ ಪರಿ ನಿಜಕ್ಕೂ ನಗು ಅನುಕಂಪ ಎರಡನ್ನು ಒಟ್ಟಿಗೆ ಮೂಡಿಸುತ್ತದೆ.

ಒಂದು ರದ್ದಿ ಕಾಗದವನ್ನು ಗಂಭೀರವಾಗಿ ಪರಿಗಣಿಸುವ ಲೇಖಕರ ಮನಸ್ಥಿತಿ ಒಳ್ಳೆಯದೊ? ಅಥವಾ ಅತಿಯಾಯಿತು ಎನ್ನಬೇಕೋ ಅದು ಓದುಗರಿಗೆ ಬಿಟ್ಟಿದ್ದು . ಕೊಲ್ಲಿ ಕೆಲಸದಲ್ಲಿ ಕೂಡಿ ಕಳೆಯುವ ಹಣದಾಟದ ಮರ್ಮವನ್ನು ಕೂಡಿ ಕಳೆದು ಅಗತ್ಯವಾದ ಸಿದ್ಧ ಉತ್ತರವನ್ನೆ ನೀಡಿದ್ದಾರೆ. ವಿಸ್ಮಯನಗರಿ ದುಬೈನ ಸೌಂದರ್ಯ,ಅದರ ಹಿಂದಿನ ಕೆಲಸಗಾರರ ತ್ಯಾಗ ಮನತಟ್ಟುವಂತಿದೆ.ಡೆಸಾರ್ಟ್ ಸಫಾರಿ, ಒಂಟೆ ಸವಾರಿ. ಭೂರಿ ಭೋಜನ, ಬಂಗಾರದ ಅಂಗಡಿಗಳ ಸಾಲು-ಸಾಲು. ವಾಸ್ತವವನ್ನು ಮರೆಯಿಸುವ ದುಬೈ ಪ್ರವಾಸ, ಓದುಗನನ್ನು ಪಾಸ್ ಪೋರ್ಟ್ ವೀಸಾವಿಲ್ಲದೆ ದುಬೈಗೆ ಕರೆದುಕೊಂಡು ಹೋಗುತ್ತದೆ. ವಾಕಿಂಗ್ ನೆಪದಲ್ಲಿ ದೇವರಿಗೆ ಹೂ ಕೊಯ್ಯುವಲ್ಲಿ ಲೇಖಕರು ಜೀವನದಈ ಬದಲಾವಣೆ ಆಶ್ಚರ್ಯ ಎಂದಿದ್ದಾರೆ.

ಅಲ್ಲಿನ ಹುಡುಗಿಯರು ಕ್ಲಾಸಿನ್ನಲ್ಲಿ ಸಾಧಿಸುವ ಮೇಲುಗೈ, ಮದುವೆಯಲ್ಲಿ ಕ್ಯೂ ನಿಂತು ಒಮಾನೀಯರು ಕೊಡುವ ಉಡುಗೊರೆ, ಲಿಫ್ಟ್ ಕೆಟ್ಟರೆ ಎಂಬ ಭಯ ಅದರೊಂದಿಗೆ ನಂಬಿಕೆ ಮುಖ್ಯ ಎನಿಸುವುದು. ಒಮಾನನ ವಿಚಿತ್ರ ಶುಭಾಶಯ ಸಂಸ್ಕೃತಿ, ಅಬ್ಬಾ ಎನ್ನುವಂತಿದೆ. ನಮ್ಮಲ್ಲಿ ಕಾರು ಕೊಳ್ಳಬಲ್ಲರು ,ಆದರೆ ಪೆಟ್ರೊಲ್ ಖರೀದಿಸಲಾರರು, ಆದರೆ ಒಮಾನಿಯರು ಪೆಟ್ರೊಲ್ ತುಂಬಿಸಬಲ್ಲರು ಆದರೆ ಕಾರು ಕೊಳ್ಳಲಾರರು ಇದು ಸಂಪೂರ್ಣವಾಗಿ ಅಲ್ಲಿನ ಕಾರಿನೊಂದಿಗಿನ ಜೀವನವನ್ನು ತಿಳಿಸುತ್ತದೆ.ಉತ್ತರ ಕನ್ನಡದ ಕಂಬಳ ನೆನಪಿಸುವ 'ಒಂಟೆ ಓಟ ! ಭಯಾನಕವೆನಿಸುವ ಒಂಟೆವ್ ಸವಾರ ಮಕ್ಕಳ ಬದುಕು.

ಸಲಾಲದಲ್ಲೊಂದು ಬಂಗಾಳಿ ಸಂತೆಯ ಬೆಡಗು,ಕಾಯಿಪಲ್ಲೆ, ಮೀನು ಮಾಂಸದ ವಾಸನೆ ಮೂಗಿಗೆ ಅಡರುವಂತೆ ಬರೆದಿದ್ದಾರೆ.ಹೀಗೆ ಭಾಷೆ, ಬೋಳು ಗುಡ್ಡದ ಹಣ್ಣಿನ ತೋಟ, ಎಲ್ಲವೂ ಸರಿ ! ಎಂದು ಬರೆಯಬೇಕಾದ ಅನೀವಾರ್ಯ ಪತ್ರಿಕೋದ್ಯಮ, ಒಮಾನಿ ಗಾದೆಗಳು, ಮಾರ್ಕ್ಸ್ ವಾದ ಹೀಗೆ ಪ್ರತಿಯೊಂದು ಚಿಕ್ಕ ವಿಷಯಕ್ಕು ಅವರ ದೊಡ್ಡದಾದ ಸ್ಪಂದನೆ, ಅದೇ ಬಹು ದೊಡ್ಡ ವಿಚಾರದ ಬಗ್ಗೆಯು ಅಂತದ್ದೆ ಆಳ ಚಿಂತನೆಯನ್ನು ಮಾಡಿ ಈ ಪುಸ್ತಕವನ್ನು ಒಂದು ಸಂಪೂರ್ಣ ಆವಾಸಿ ಕಥನವಾಗಿಸುವಲ್ಲಿ ಗೆದ್ದಿದ್ದಾರೆ.

ಸಲಾಲಕ್ಕೆ ಬೈ ಹೇಳುವ ಕೊನೆಯ ಲೇಖನದಲ್ಲಿ 'ಇದು ನಾನು ಸಲಾಲದಿಂದ ಬರೆಯುವ ಕೊನೆಯ ಅಂಕಣ ಎಂದಾಗ ಮನ ಹಿಂಡುತ್ತದೆ. ಆದರು ನಿರಂಜನವಾನಳ್ಳಿಯವರು ಕೊನೆಯಲ್ಲಿ ಬರೆದುಕೊಳ್ಳುವ ಒಂದುಸಾಲು "ಜೀವನದಲ್ಲಿ ಹಣ ಮುಖ್ಯ ಆದರೆ ಅದೊಂದೆ ಅಲ್ಲ ಹಣದಿಂದ ಕೊಂಡುಕೊಳ್ಳಲಾಗದ್ದು ಬದುಕಿನಲ್ಲಿ ಬಹಳವಿದೆ" ಎಂಬಲ್ಲಿ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಅನ್ನಿಸಿದರು ಕೂಡಾ, ಒಮಾನ್ ಎಂಬ ಪರದೇಶ ಈಗಾ ಖಂಡಿತವಾಗಿಯು ನಮ್ಮ ಮುಂದೆ ಧುತ್ತೆಂದು ಒಗಟಾಗಿ ನಿಲ್ಲುತ್ತದೆ. ಆ ಒಗಟ ಬಿಡಿಸಬೇಕೆನ್ನುವವರು, ಮತ್ತೊಂದು ಒಗಟ ಕಟ್ಟ ಬೇಕೆನ್ನುವವರು ಅಂದವಾಗಿ ಮೂಡಿಬಂದಿರು ಒಮಾನ್ ಎಂಬ ಒಗಟು ನಿಮ್ಮ ಕೈ ಸೇರಿದರೆ ಅದರ ಅಂದ ಮತ್ತು ಹೆಚ್ಚುತ್ತದೆ.


- ಉಷಾ ಜಿ.ಎಸ್
ಅಂತಿಮ ಪತ್ರಿಕೋದ್ಯಮ,ಮಾನಸ ಗಂಗೋತ್ರಿ
ಮೈಸೂರು.

1 comments:

ರಂಗನಾಥ said...

ಲೇಖನ ಚೆನ್ನಾಗಿದೆ. ಸದ್ಯ ನಾನು ಸಹ ಸಲಾಲ ಪಟ್ಟಣದಲ್ಲಿ ಉದ್ಯೋಗ ಮಾಡುತಿದ್ದೇನೆ, ಹಿಂದೆ ನಿರಂಜನ ವಾನಳ್ಳಿಯವರ ಲೇಖನವನ್ನು ಒಂದೆರಡು ಬಾರಿ ಪ್ರಜಾವಾಣಿಯಲ್ಲಿ ಓದಿದ್ದೆ. ನನ್ನ ಬ್ಲಾಗ್ ನಲ್ಲಿ ಸಹ ಸಲಾಲದಬಗ್ಗೆ ಕೆಲ ವಿವರ ಗಳನ್ನು ದಾಖಲಿಸಿದ್ದೇನೆ.
http://ranganatha-ps.blogspot.com/2010/11/blog-post_28.html
ಧನ್ಯವಾದಗಳು

Post a Comment