ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:55 AM

ಅಸ್ಪೃಶ್ಯರು

Posted by ekanasu

ವೈದೇಹಿ ಕಾದಂಬರಿ
ಕಳೆದ ಸಂಚಿಕೆಯಿಂದ...
ಪಾರ್ತಕ್ಕ ಆ ಮನೆಯಲ್ಲಿ ಸೇರಿಕೊಂಡು ಮನೆ ಜನರಲ್ಲಿ ಒಂದಾಗಿರುವ ಜೀವ. ಭಾಸ್ಕರ ಹುಟ್ಟಿ ನಾಲ್ಕನೆಯ ವರುಷಕ್ಕೆ ಪಾರ್ತಕ್ಕನ ಗಂಡ ತೀರಿಕೊಂಡರು. ಅಂದಿನಿಂದ ಐದು ಮಾನಿಗೆ ಅಕ್ಕಿಯ ಆದಾಯದಲ್ಲಿ ಹೇಗೆ ಬದುಕಲಿ ಅಂತ ಯಾರ ಮುಂದೆ ಮುಖ ಸಣ್ಣದು ಮಾಡದೆ ಇದ್ದದ್ದರಲ್ಲಿಯೆ ಭಾಸ್ಕರನನ್ನು ಬೆಳೆಸಿದರು. ಭಾಸ್ಕರ ಓದಲ್ಲಿಕ್ಕೆಂದು ಊರು ಬಿಟ್ಟಾಗ ವಾಸುದೇವರಾಯರು ಪಾರ್ತಕ್ಕನನ್ನು ತಮ್ಮ ಮನೆಗೇ ಬಂದು ಇರಲು ಹೇಳಿಕೊಂಡರು. `ಭೂತದ ಹಾಗೆ ಒಬ್ಬರೇ ಕುಟು ಕುಟು ಬೇಯಿಸಿ ಉಣ್ಣುವುದೆಂತದು? ಬನ್ನಿ ನಮ್ಮ ಮನೆಗೆ. ಗೌರಿಗೂ ಇತ್ತೀಚೆಗೆ ಸಾಕಾಗುತ್ತದೆ. ಅವಳಿಗೊಂದು ಆಧಾರವೂ ಆದೀರಿ ನೀವು' - ಎಂದರು. ಮುಂಚಿನಿಂದಲೂ ಎರಡು ಎಲೆಯಡಿ ಜಾಸ್ತಿ ಹಾಕಬೇಕು ಎಂದರೆ ಅಡುಗೆಗೆ ಪಾರ್ತಕ್ಕ ಬೇಕು ಎಂಬ ಈ ಮನೆಗೆ ಈಗ ಮನೆ ಮಂದಿಯಲ್ಲಿ ಪಾರ್ತಕ್ಕನೂ ಒಬ್ಬರು ಎನ್ನುವಂತಾಯಿತು.


ಗೌರಮ್ಮನ ಕಡಕಡೆಯ ಬಾಣಂತಣಗಳು ನಡೆದದ್ದು ಪಾರ್ತಕ್ಕನ ಉಸ್ತುವಾರಿಯಲ್ಲಿಯೇ.ಪಾರ್ತಕ್ಕನ ಹಾಗೆ ಬಾಣಂತಿಗೆ ನರು ಹಾಕುವವರು ಯಾರು? ಎಣ್ಣೆ ತಿಕ್ಕುವವರು ಯಾರು?
ಇತ್ತೀಚೆಗೆ ಮಾತ್ರ ಅವರ ಜೀವನದಲ್ಲಿ ಸ್ವಾರಸ್ಯವಿಲ್ಲ. ಭಾಸ್ಕರನ ಮದುವೆಯಾದ ಲಾಗಾಯ್ತು ಹೀಗೆ.ಮದುವೆಯೇ ಬೇಡ ಎಂದು ಹೇಳುತ್ತಿದ್ದ ಭಾಸ್ಕರ. ಕಡೆಗೆ ನೋಡಿದರೆ ವರ್ಷ ನಲುವತ್ತು ಸಮೀಪಿಸುವಾಗ ಹೇಳದೆ ಕೇಳದೆ ಆದ. ಆ ಮದುವೆಯ ವಿಷಯ ಹೇಳಲು ಪಾರ್ತಕ್ಕನಿಗೆ ನಾಲಗೆ ಏಳುವುದಿಲ್ಲ. ಅವನು ಮದುವೆಯಾದ ಸುದ್ದಿ ಕೇಳಿದ್ದೇ `ವಾಸ್ತೇವ, ಇನ್ನು ನನಗೆ ಈ ಮನೆಯ ಋಣ ಹರಿಯಿತು. ಎಲ್ಲಿಯಾದರೂ ನಾನಿದ್ದು ಸಾಯುತ್ತೇನೆ. ನಿನ್ನ ಮನೆಯಲ್ಲಿದ್ದುಕೊಂಡು ನಾಳೆ ನಿನ್ನ ಮಕ್ಕಳ ಮದುವೆ ಮುಂಜಿಗೊಂದು ದೃಷ್ಟಿ ಬೊಟ್ಟು ಬೇಡ' - ಎಂದರೆ ವಾಸುದೇವರಾಯರು ಅವರನ್ನು ಹೋಗಲಿಕ್ಕೆ ಬಿಡಲಿಲ್ಲ.

`ನಮ್ಮ ಮಕ್ಕಳ ಹಣೆಯಲ್ಲಿ ಬರೆದಂತಾಗುತ್ತದೆ. ಅದೆಲ್ಲ ನೀವು ಹೇಳುವುದೆಂತದು? ನೀವು ಇರಿ. ಆದದ್ದು ಆಗುತ್ತದೆ. ಊರಿನವರ ಚಿಂತೆ ನನಗಿರಲಿ.'- ಎಂದರು.
ಆದರೆ ಗೌರಮ್ಮನಿಗೆ ಈಗ ಪಾರ್ತಕ್ಕನನ್ನು ಕಳಿಸಿದರೆ ಸಮ ಅಂತ ಅನಿಸಿತ್ತು. `ನಾಳೆ ಊರಿನವರು ಮಾತಿಗೆ ತಲೆ ಕೊಡುವವರು ಯಾರು? ಇದೊಂದು ಸಮಯ. ಕಳಿಸಿಬಿಡುವ. ಅವರಿಗೂ ಇಷ್ಠುರವಿಲ್ಲ.ನಮಗೂ'- ಎಂದರು ಗಂಡನೊಡನೆ, ಒಬ್ಬರೇ ಇದ್ದಾಗ. `ನೀನೊಳ್ಳೆ ಜನ. ಹೊಳೆದಾಟಿದ ಮೇಲೆ ದೋಣಿಯವ ಯಾಕೆ ಎಂಬ ಜಾತಿ.ಈಗ ಅವರನ್ನು ಕಳಿಸಿ ಕೊಟ್ಟರೆ ನನ್ನ್ನೊಬ್ಬ ಮನುಷ್ಯ ಅಂತ ಹೇಳಿಯಾರ?- ಎಂದು ಬಿಟ್ಟರು ವಾಸುದೇವರಾಯರು.
`ಅದೆಲ್ಲ ನನಗೂ ಗೊತ್ತುಂಟು. ನಾನಷ್ಟು ಮೂಢೆಯಲ್ಲ. ಆದರೆ ನಾಳೆ ಮಕ್ಕಳನ್ನೊಂದು ದಡ ಮುಟ್ಟಿಸುವ ಕೆಲಸ ಉಂಟಲ್ಲ. ಅದರ ಆಲೋಚನೆ ಉಂಟ ನಿಮಗೆ?'
`ಎಲ್ಲ ಆಲೋಚನೆ ಇರುವುದೂ ನಿನಗೊಬ್ಬಳಿಗೇ ಅನ್ನುವ ಹಾಗಿದೆ ನೀನು ಹೇಳುವುದನ್ನು ಕೇಳಿದರೆ.ಪಾರ್ತಕ್ಕ ಇರಲಿ ಅಂತ ನಾನು ಹೇಳಿದ ಮೇಲೆ ಮುಗಿಯಿತು. ಮತ್ತೆ ಅದರ ಬಗ್ಗೆ ಮಾತು ಬೇಡ.'
ಇನ್ನು ಗೌರಮ್ಮನಿಗೆ ಮಾತಾಡಲು ಚಡಿಯಿಲ್ಲ.ಪಾರ್ತಕ್ಕ ಬೇಡವೆಂತ ತಾನು ಹೇಳಿದನೆ ಅವರು ತನಗೆ ಮಾಡಿದ ಚಾಕರಿಯ ಋಣ ತಾನು ಈ ಜನ್ಮದಲ್ಲಿ ತೀರಿಸಿಯೇನು!ಆದರೆ ಮನುಷ್ಯನಾಗಿ ಹುಟ್ಟಿದ ಮೇಲೆ ಪಾಪ - ಪುಣ್ಯ ಅಂತ ಇದೆಯಲ್ಲ. ಅವರನ್ನು ಮನೆಯಲ್ಲಿಟ್ಟು ಕೊಂಡು ಭಾಸ್ಕರ ಮಾಡಿದ ಪಾಪದ ಹುಯಿಲಲ್ಲಿ ಅವನ ಅಬ್ಬೆ ಮಾತ್ರವಲ್ಲದೆ ತಾವೆಲ್ಲರೂ ಕೊಚ್ಚಿ ಹೋಗುವಂತಾಗಿಬಿಟ್ಟರೆ!ಋಣವನ್ನು ಬೇರೆ ಯಾವುದಾದರೂ ರೀತಿಯಲ್ಲಿ ತೀರಿಸುವ ಪ್ರಯತ್ನ ಮಾಡಬಹುದು.

ಮುಂದುವರಿಯುವುದು...
- ವೈದೇಹಿ.

0 comments:

Post a Comment