ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಇದು ದಿಡುಪೆ ಜಲಪಾತ

ಪಶ್ಚಿಮ ಘಟ್ಟದ ಸಹ್ಯಾದ್ರಿ ಪರ್ವತಾವಳಿಗಳು...ನಿಸರ್ಗಾರಾಧಕರು ಹಾಗೂ ಚಾರಣ ಪ್ರಿಯರಿಗೆ ಮುದ ನೀಡುವ ತಾಣಗಳು. ಸುಂದರ ಕರಾವಳಿ. ಪ್ರಕೃತಿ ರಮ್ಯ ವನಸಿರಿ. ತುಂಬಿ ಹರಿಯುವ ನದಿ, ಧುಮ್ಮಿಕ್ಕಿ ಹರಿಯುವ ಝರಿ... ಜಲಪಾತಗಳು. ಅಬ್ಬರಿಸುವ ಅರಬ್ಬಿ ಸಮುದ್ರ. ಬೆಟ್ಟ ಗುಡ್ಡ ಬಂಡೆ ಐತಿಹಾಸಿಕ ತಾಣಗಳು. ಹೀಗೆ ಪ್ರವಾಸಿಗರ ಆಕರ್ಷಣೆಯ ವಸ್ತು ವೈವಿಧ್ಯಗಳು ನೂರಾರು. ನಿಸರ್ಗ ನಿರ್ಮಿತ ಝರಿಗಳು ತಮ್ಮ ಹರಿಯುವ ಗತಿಯಲ್ಲಿ ಪ್ರಪಾತಗಳನ್ನು ಸೃಷ್ಟಿಸಿ ಜಲಪಾತಗಳಾಗಿ ಧುಮುಕಿ ನದಿಗಳಾಗಿ ಹರಿದು ಸಮುದ್ರ ಸೇರುತ್ತವೆ.ಬೆಟ್ಟ ಗುಡ್ಡ ದಟ್ಟಕಾಡು ಭಾರಿ ಬಂಡೆಗಳೆಡೆಯಲ್ಲಿ ಮೈದಳೆಯುವ ಜಲಪಾತಗಳು ನಿಸರ್ಗ ಪ್ರಿಯರನ್ನು ತನ್ನೆಡೆಗೆ ಆಕರ್ಷಿಸಿ ಅವರ ಮನೋಲ್ಲಾಸಕ್ಕೆ ಕಾರಣವಾಗುತ್ತಿವೆ. ಜಿಲ್ಲೆಯಲ್ಲಿ ಇಂತಹ ನೂರಾರು ಸಣ್ಣ ಪುಟ್ಟ ದೊಡ್ಡ ಜಲಪಾತಗಳು ಪ್ರವಾಸಿಗರ ತನು ಮನಗಳನ್ನು ಹಸನಾಗಿ ಉಲ್ಲಸಿತರನ್ನಾಗಿಸುತ್ತದೆ. ಎಲ್ಲೋ ಹುಟ್ಟಿ ಅಂಕು ಡೊಂಕಾಗಿ ಮುಂದುವರಿದು ಬಂಡೆಯಿಂದ ಪ್ರಪಾತಕ್ಕೆ ಧುಮುಕಿ ರಮ್ಯಾದ್ಭುತ ನೋಟ ಸೃಷ್ಟಿಸುತ್ತವೆ. ಕ್ಷಣ ಕ್ಷಣಕ್ಕೂ ವೈವಿಧ್ಯತೆಯಿಂದ ನೂರಾರು ಅಡಿಗಳಷ್ಟು ಪಾತಾಳಕ್ಕೆ ಧುಮ್ಮಿಕ್ಕುವ ನಿಸರ್ಗ ವೈಭವವನ್ನು ಕಣ್ಣಾರೆ ಕಂಡು ಆಸ್ವಾದಿಸಬೇಕು. ನೀರು ಧಾರೆಯಾಗಿ ಹರಿಯುವ ಆಹ್ಲಾದಕರ ಸಂತೋಷವನ್ನು ಕಣ್ತುಂಬ ನೋಡಿಯೇ ಅನುಭವಿಸಬೇಕು.

ಜಲಪಾತ ಸೃಷ್ಟಿಸಿದ ಅದ್ಭುತ ಸೌಂದರ್ಯಕ್ಕೆ ಮನದಣಿಯೆ ಸುಖಾನುಭವ ಸವಿಯಬೇಕು. ಮಳೆಗಾಲದ ದಿನಗಳಲ್ಲಿ ತನ್ನ ಸಹಜ ವೈಭವ. ಗಾಂಭೀರ್ಯದಿಂದ ನಿತ್ಯ ನಿರಂತರವಾಗಿ ಹರಿಯುವ ಜಲಪಾತದ ಸೊಬಗು. ಉರುಳುರುಳುವ ಬೆಳ್ನೊರೆಗಳ ಪ್ರವಾಹ ಪ್ರಕೃತಿ ಪ್ರಿಯರಿಗೆ ಕಾವ್ಯಾಸಕ್ತರಿಗೆ ಸ್ಪೂರ್ತಿಯ ಚಿಲುಮೆಯಾಗಿ ನವಕಾವ್ಯ ಸೃಷ್ಟಿ ಪ್ರೇರಣೆಯಾಗಬಲ್ಲುದು.

ಬೆಳ್ತಂಗಡಿ ತಾಲೂಕಿನಲ್ಲಿ ಇಂತಹ ಹತ್ತಾರು ಝರಿಗಳಿವೆ. ಜಲಪಾತಗಳು ಮಳೆಗಾಲದಲ್ಲಿ ನೋಡುಗರ ಆಕರ್ಷಣೆಯ ಕೇಂದ್ರಗಳಾಗಿ ಜನ ಮನ ಸೂರೆಗೊಳ್ಳುತ್ತವೆ. ಬೆಟ್ಟ ಗುಡ್ಡಗಳ ಚಾರಣ. ಕಾಲ್ನಡಿಗೆಯ ಎಲ್ಲ ಪ್ರಯಾಸವನ್ನು ಮರೆಯಾಗಿಸುವ ದಿವ್ಯ ಶಕ್ತಿ ಜಲಪಾತದ ಸೃಷ್ಟಿ ವೈವಿಧ್ಯತೆಗಿದೆ. ಕುಗ್ರಾಮವೆಂದೇ ಗುರುತಿಸಲ್ಪಟ್ಟ ದಿಡುಪೆಯ ದಟ್ಟಗಾಡು. ವನ ಸಿರಿಯ ಮಧ್ಯೆ ಅಂತಹ ಒಂದು ಜಲಪಾತ ನೂರಾರು ಅಡಿ ಎತ್ತರದಿಂದ ಧುಮ್ಮಿಕ್ಕುವ ಸಹಜ ಸೌಂದರ್ಯ ಸೃಷ್ಟಿಯ ಅದ್ಭುತ ಲೀಲೆಯೇ ಸರಿ.

ವಿವಿಧ ಕೋನಗಳಲ್ಲಿ ಜಲಪಾತದ ವಯ್ಯಾರ ಲಾಸ್ಯ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಹರಿಯುವ ಜಲಧಾರೆಗೆ ತಲೆ ಮೈಯೊಡ್ಡಿ ಪನ್ನೀರ ಸಿಂಚನದಿಂದ ದಿನವಿಡೀ ನೆನೆದರೂ ಮೈ ಮನಗಳಿಗೆ ದಣಿವಾಗದು. ನಿಸರ್ಗ ಸೃಷ್ಟಿಸಿದ ಮಾಯಾಲೋಕ ಛಾಯಾಗ್ರಾಹಕರಿಗೆ ಕ್ಷಣ ಕ್ಷಣಕ್ಕೂ ಅದ್ಭುತ ದೃಶ್ಯ ರಾಶಿಯನ್ನೊದಗಿಸುತ್ತದೆ. ಎಲ್ಲ ಮಾನಸಿಕ, ದೈಹಿಕ ನೋವು ದಣಿವನ್ನು ಮರೆಸಿ ಸೃಷ್ಟಿ ವೈಚಿತ್ರ್ಯದ ಸ್ವರ್ಗ ಸುಖವನ್ನು ಸವಿದು ಆಸ್ವಾದಿಸುವ ಅಪೂರ್ವ ಸುಯೋಗ ಸೌಭಾಗ್ಯ ವರ್ಷವಿಡೀ ದೊರೆಯದು. ದಿಡುಪೆಯಿಂದ ಸುಮಾರು ನಾಲ್ಕು ಕಿಮೀ ದೂರದಲ್ಲಿ ಪಚ್ಚನೆ ಹಸುರಿನ ದಟ್ಟ ಕಾಡಿನಲ್ಲಿ ಪ್ರಕೃತಿಯ ಅಪೂರ್ವ ಸಿರಿಯಾಗಿ ಜಲಪಾತ ಪ್ರಕೃತಿ ಪ್ರಿಯರನ್ನು ಕೈ ಬೀಸಿ ಕರೆಯುತ್ತದೆ. ಆಸಕ್ತರು ದಿಡುಪೆ ಜಲಪಾತಕ್ಕೊಮ್ಮೆ ಬಂದು ಸೃಷ್ಟಿಯ ಸೊಬಗನ್ನು ಮನಸೇಚ್ಚ ಆಸ್ವಾದಿಸಿ ಉಲ್ಲಸಿತರಾಗಬಹುದು.

0 comments:

Post a Comment