ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:21 PM

ಅಸ್ಪೃಶ್ಯರು

Posted by ekanasu

ವೈದೇಹೀ ಕಾದಂಬರಿ
ಕಳೆದ ವಾರದಿಂದ...

ರತ್ನ ಹನ್ನೊಂದನೆಯ ದಿನ ಶುದ್ಧವಾಗಿ ಬಂದಳು. ಅಂದು ಅವಳ ಹಾಸಿಗೆ ಹೊದಿಕೆ ಎಲ್ಲ ಬಿಸಿಲು ಕಂಡವು. ಕೋಣೆಯನ್ನು , ನೀರು ಹಾಕಿ ತೊಳೆದು ಮೂಲೆ ಮೂಲೆಗೂ ತೊಲೆಗೆ ಮಾಡಿಗೂ ಎಲ್ಲ ಪಂಚಗವ್ಯ ಸಿಮಿಸಿ ಅಂತೂ ಸೂತಕ ಕಳೆಯಿತು. `ರತ್ನಕ್ಕನಿಗೆ ನೆಲದಿಂದ ಮಂಚಕ್ಕೆ ಪ್ರಮೋಷನ್ ಆಯಿತು'. ಮಗುವಿಗೆ ಅಶುದ್ಧವಾದದ್ದೂ ಗೊತ್ತಿಲ್ಲ.ಶುದ್ಧವಾದದ್ದೂ, ಅಂಗಿ ಹಾಕಿದರೂ ಗೊತ್ತಿಲ್ಲ. ಹಾಕದಿದ್ದರೂ. ಅದಕ್ಕೆ ತಿಳಿದಿರುವುದು ಒಂದೇ. ಹಸಿವಾದಾಗ ಅಳುವುದು. ಬಾಯಿಗೆ ಹಾಲೋ, ದ್ರಾಕ್ಷಿ ಬತ್ತಿಯೋ, ಸಿಕ್ಕಿದರೆ ಚೀಪುತ್ತಿರುವುದು. ಚೀಪುತ್ತ ಚೀಪುತ್ತ ನಿದ್ರೆ ಹೋಗುವುದು. ನಿದ್ರೆಯಲ್ಲಿ ಒಮ್ಮೊಮ್ಮೆ ನಗುವುದಿದೆ. ಅದು `ದೇವರ ನಗು'. ಈಗೀಗ ಕಣ್ಣು ಬಿಟ್ಟುಕೊಂಡು ಸ್ವಲ್ಪ ಹೊತ್ತು ಬೆಳಕು ನೋಡಲೂ ಕಲಿತಿದೆ. ಬೆಳ್ಳುಳ್ಳಿ ಬೇಳೆಯಷ್ಟೇ ಸಣ್ಣ ಕಣ್ಣು.ರವಿ ಮಾಣಿ ಹುಟ್ಟಿದಾಗ ಹನ್ನೊಂದನೇ ದಿನಕ್ಕೇ ನಾಮಕರಣವಾಗಿತ್ತು. ರತ್ನನ ಗಂಡನ ಮನೆಯಿಂದ ತುಂಬ ಜನ ಬಂದಿದ್ದರು. ನಾಮಕರಣವೆಂದರೆ ಸಮಾವತಱನೆಯಷ್ಟು ಗಡದ್ದಾಗಿತ್ತು. ಈ ಸಲ ನಾಮಕರಣ ಬೇಡ. ಒಂದು ಸಲಕ್ಕೆ ಆಯಿತಲ್ಲ. ಇನ್ನು ಹೆಣ್ಣು ಮಕ್ಕಳಿಲ್ಲವೆ? ಇವಳಿಗೆ ಮಾಡಿದ ಹಾಗೆಯೇ ಮತ್ತೆ ಉಳಿದ ಮಕ್ಕಳಿಗೂ ಮಾಡದಿದ್ದರೆ ಪುಕಾರು ಆದೀತು ಎಂದು ವಾಸುದೇವ ರಾಯರೂ ಗೌರಮ್ಮನೂ ಪರಸ್ಪರ ಚರ್ಚಿಸುತ್ತಿರುವಾಗಲೇ ರತ್ನನ ಗಂಡನ ಕಾಗದ ಬಂತು, ರತ್ನನಿಗೆ.
ಅದರಲ್ಲಿ ತಾನು ಮಗುವಿಗೆ ಮೂರು ತಿಂಗಳಾಗುತ್ತಲೇ ಬರುತ್ತೇನೆಂತಲೂ ಬಂದಾಗ ನಾಮಕರಣ ಮಾಡಿಬಿಡಲೆಂದೂ ಬರೆದಿದ್ದ. ಆದುದರಿಂದ ಸಂಜೆ ಮಗುವನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರ ಮಾತ್ರ ಮಾಡಿದರು. ಬಂದವರಿಗೆಲ್ಲ ಕಾಫಿ, ತಿಂಡಿ. ಮಿಡ್ ಬಾಯಿ ಮತ್ತು ಮಡಿವಾಳ್ತಿಯನ್ನು ಕರೆದು ದುಡ್ಡು ಕಾಫಿ ತಿಂಡಿ ಎಲ್ಲ ಕೊಟ್ಟರು ಗೌರಮ್ಮ.ಕಾಫಿ ತಿಂಡಿ ಎಲ್ಲ ಮುಗಿಸಿ ತಾವು ತಿಂದ ತಟ್ಟೆಯನ್ನು ತಾವೇ ತೊಳೆದಿಟ್ಟು ಹೊರಟು ಹೋದರು ಅವರಿಬ್ಬರೂ. ಮಗುವಿಗೆ ಬಜೆ ಬೆಣ್ಣೆಯನ್ನು ಗೌರಮ್ಮನೇ ಹಾಕಿದರು. ಝಳ ಝಳವೆನ್ನುವ ಹಿತ್ತಾಳೆಯ ತೊಟ್ಟಿಲಿಗೆ ಪೂಜೆ ಮಾಡಿ ಕಾಯಿ ಒಡೆದ ಶಿವ. ಪುಟ್ಟ `ಓ , ಶಿವ ಭಟ್ಟರೇ, ತೀರ್ಥಕೊಡೀ' ಎಂದ. ಶಿವಭಟ್ಟರು ಬಿಡವವರೇ? ಅಷ್ಟೇ ರಾಗವಾಗಿ `ದಕ್ಷಿಣೆ ಬರಲೀ - ಎಂದರು'. ಪುಟ್ಟ ಥಟ್ಟನೆ `ದಕ್ಷಿಣೆ ಬೇಕಿದ್ದರೆ ದಕ್ಷಿಣ ದಿಕ್ಕಿಗೆ ಮುಖಮಾಡಿ' - ಎಂದ. ಎಲ್ಲರಿಗೂ ಈ ಮಾಣಿ ಇಷ್ಟು ಜೋರಾದದ್ದ ಎಂದು ನಗೆ. ಜೋರು ಎಲ್ಲ ಸಮ. ಬಾಯಿಗೆ ಬೆಟ್ಟು ಹಾಕುವುದನ್ನು ಇನ್ನೂ ಬಿಟ್ಟಿಲ್ಲವಲ್ಲ ಎಂದರು ಯಾರೋ. ಸರೋಜ `ಅವ ಬೆಟ್ಟು ಊಜಿದರೆ ಯಾರಿಗೇನು? ಅವನಿಗೆ ತಿಳಿಯುತ್ತದೆ ಊಜಬಾರದು ಅಂತ' - ಎಂದು ಪುಟ್ಟನನ್ನು ವಹಿಸಿಕೊಂಡಳು.
`ಮಣಿ, ಹಲ್ಲಿನ ನಿದಿ ಉಬ್ಬಾಗುತ್ತದೆ. ಮೇಲು ತುಟಿ ಡೊಂಕಾಗುತ್ತದೆ. ಆ ಮೇಲೆ ನಿಂಗೆ ಯಾವ ಹೆಣ್ಣೂ ಬರುವುದಿಲ್ಲ' - ಎಂದರು ಹೇಳಿದವರು.`ನಾ ಗಂಡಸನ್ನೇ ಮದುವೆಯಾಗುತ್ತೇನೆ' ಎಂದ ಪುಟ್ಟ. `ಚಂದದ ಹುಡುಗಿಯನ್ನು ಹಾರಿಸಿ ತಂದು ಮದುವೆಯಾಗುತ್ತೇನೆ ಎನ್ನುವುದು ಬಿಟ್ಟು ಅದೆಂತ ಮಾತು ಮಾಣಿ?' - ಎಂದರು ಪಾರ್ತಕ್ಕ.
`ಕಲ್ಲಪ್ಪ',`ಗುಂಡಪ್ಪ' ತೊಟ್ಟಿಲ ಮೇಲಿಂದ ಕೆಳಗೆ, ಕೆಳಗಿಂದ ಮೇಲೆ, ತೊಟ್ಟಿಲಿನ ಆಚೆ ಈಚೆ ಕುಳಿತು ಗೌರಮ್ಮನ ಮತ್ತು ರತ್ನನ ಮೂಲಕ ಮೂರು ಸುತ್ತು ಬಂದು ತೊಟ್ಟಿಲ ತಲೆದೆಸೆ ಮತ್ತು ಕಾಲ್ದೆಸೆಯಲ್ಲಿ ಮಲಗಿದ ಮೇಲೆ ಪುಟ್ಟಿಯೂ ಹಾಗೆಯೇ ಸುತ್ತು ಬಂತು.ತಲೆ ಚೆನ್ನಾಗಿ ಆಕಾರ ಆಗಬೇಕೆಂದು ತಲೆಯ ಆಚೆಗೊಂದು ಈಚೆಗೊಂದು ಬಟ್ಟೆಯ ಗಂಟು. ತಲೆ ಇಡುವಲ್ಲಿ ಬಟ್ಟೆಯದ್ದೇ ಇರಿಕೆ ಇಟ್ಟು ಅಣಿಯಾಗಿರುವ ತೊಟ್ಟಿಲಲ್ಲಿ ಹಾಯಾಗಿ ಮಲಗಿತು. ಐದು ಜನ ಮುತ್ತೈದೆಯರು ತೊಟ್ಟಿಲು ಬೀಸುತ್ತ ಹಾಡು ಹೇಳಿದರು.

(ಮುಂದುವರಿಯುವುದು...)
- ವೇದೇಹಿ.

0 comments:

Post a Comment