ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:20 PM

ಅಸ್ಪೃಶ್ಯರು

Posted by ekanasu

ವೈದೇಹಿ ಕಾದಂಬರಿ
ಕಳೆದ ವಾರದಿಂದ
ಚಂದು ಈಗ ಹೊರಗೆ ಬರುತ್ತಾಳೆ.ಮೊದಲೇ ಬಾಯಿ ಹೋದ ಕೊಡಲಿ. ಕೇಳಬೇಕೇ? ಜಗಳ ಜೋರಾಗುತ್ತದೆ. ನೋಡಿ ನೋಡಿ ಪಾರ್ತಕ್ಕ ಒಂದು ಮಾತನ್ನು ಎಸೆದೇಬಿಟ್ಟರು. ಜಗಲಿ ಮೂಲೆಯಿಂದ ಕೆಲಸ ಮಾಡಿ ಹೆಕ್ಕಿ ತಿಂಬವಕ್ಕೇ ಇಷ್ಟು ಪಿತ್ಥ ಇದ್ದರೆ ನಮಗೆಷ್ಟಿರಬೇಕಾಯಿತು?. `ಇದೆಂಥಾ ಮಾತು!ಎದೆಗೆ ಹೋಗಿ ಬೆನ್ನಿಗೆ ಬರಬೇಕು ಅಂತಹ ಮಾತು!ನಂಗೆ ಬೇಡ ಈ ಕೆಲಸ. ನನ್ನ ಕೈಯಿಂದ ಆಗುವುದಿಲ್ಲ. ನಾಳೆಯಿಂದ ಬೇರೆ ಜನ ನೋಡಿಕೊಳ್ಳಿ.
`ಈಗಲೇ ನಡೆ. ನಮ್ಮ ಕೈಯಿಂದ ಆಗುವುದಿಲ್ಲ ಎಂದುಕೊಂಡೆಯಾ? ನೀನೇನು ಪುಗಸಟ್ಟೆ ಮಾಡುತ್ತಿಯ? ನಾವೇನು ಲೆಕ್ಕದ್ದು ಕೊಡುತ್ತೇವ? ಊಟ ತಿಂಡಿ ಎಲ್ಲ ಕೊಟ್ಟು ಇಷ್ಟು ಸಂಬಳ ನಿನಗೆ ಯಾರು ಕೊಡುತ್ತಾರೆ ನೋಡುವ'.
`ನಡೆದೆ. ಯಾವ ಮನೆಯೂ ಇಲ್ಲ ಅಂದುಕೊಂಡಿರಾ? ನಾನು ಮಾಡುವ ಕೆಲಸಕ್ಕೆ ದಮ್ಮಯ್ಯ ಹಾಕಿ ಕರೆದು ಸಂಬಳ ಕೊಡುವವರಿದ್ದಾರೆ'.


`ನಿನಗೆ ಮನೆಯುಂಟು, ನಮಗೆ ಜನವುಂಟು ಒಬ್ಬರಿಗೇಮಣೆ ಹಾಕಿದಷ್ಟೂ ಏರುವುದೇ'
ಚಂದು ನಿಂತು ಹೊರಟೇ ಬಿಟ್ಟಳು.ಬಚ್ಚಲಿನ ಬೆಂಕಿ ಹೊರಗೆ ಬಂದು ಪೂರ್ತಿ ಉರಿದು ಬೂದಿಯಾಗಿತ್ತು. ಎಣ್ಣೆ ಬಳಿದುಕೊಂಡ ರತ್ನ `ಅಮ್ಮ ಇದೆಂಥ ಕರ್ಮ!ನನಗಿಲ್ಲಿ ಕಣ್ಣುರಿಯುತ್ತಿದೆ, ನಾ ಮೀಯುತ್ತೇನೆ.'- ಎಂದು ಕೆಳಕೋಣೆಯಿಂದು ಕೂಗಿದಳು.
ಆಗ `ತಡಿಮಗ' - ಎಂದು ಪಾರ್ತಕ್ಕನೇ ಮತ್ತೆ ಬೆಂಕಿ ಎಬ್ಬಿಸಿದಳು. ನೀರು ಬಿಸಿಯಾಯಿತು. ಬೆನ್ನು ಬಗ್ಗಿಸಿಕೊಂಡು ಅವರೇ ನೀರು ಹಾಕಿದರು. ಸ್ನಾನ ಮುಗಿದು ಒಳಗೆ ಬಂದ ರತ್ನನಿಗೆ ಸೊಂಟದ ಸುತ್ತನ್ನು ಬಿಗಿದು ಕಟ್ಟಿ ಒಂದು ಲೋಟ ಬಿಸಿ ಹಾಲು ಕೊಟ್ಟು `ಕುಡಿದವಳೇ ಮುಚ್ಚಿಕೊಂಡು ಮಲಕೋ. ಮೈ ಬೆವರಲಿ.ಬಾಣಂತಿ ಮೈ ಬೆವರಿದಷ್ಟೂ ಒಳ್ಳೆಯದು' - ಎಂದು ಎಂದಿನಂತೆ ಇವತ್ತೂ ಹೇಳಿ ಗಾಳಿ ಬೆಳಕಿನ ಕುಡಿಕೂಡ ಅವಳನ್ನು ಸ್ಪರ್ಶಿಸದಂತೆ ಕಿಟಿಕಿ ಬಾಗಿಲು ಮುಚ್ಚಿದರು. ಇನ್ನು ಸ್ವಲ್ಪ ಹೊತ್ತಿನೊಳಗೆ ಮಗು ಎದ್ದೀತು. ಗಂಟೆ ಅಷ್ಟಾಗಿತ್ತು.
ಆಚೆಮನೆ ಕೆಲಸದ ವೆಂಕ ಬಂದು ಉಳಿದ ಕೆಲಸ ಮಾಡಿಕೊಟ್ಟಳು. ಹೊಸ ಕೆಲಸದವರು ಸಿಗುವವರೆಗೆ ಮಾಡಲು ಒಪ್ಪಿದಳು. ಎರಡು ದಿನ ಮನೆಯಲ್ಲಿ ಅಡಿಗೆಯನ್ನೇ ಮಾಡಲಿಲ್ಲ ವೆಂಕ. ಹೊಟ್ಟೆ ತುಂಬತಂಗಳನ್ನ, ಬಿಸಿಯನ್ನ, ಕಾಫಿ.`ಮೀನು ಪೇಟೆಯಲ್ಲಿ ಚಂದಕ್ಕ ಸಿಕ್ಕಿದಳು. ಎರಡು ದಿನಕ್ಕಾದರೆ ಹಾಗೇ ಎಂತ ಕುಯಿಂಕು ಮಾತಾಡಿದಳು' - ಎಂದು ವೆಂಕನೇ ಬಂದು ಗೌರಮ್ಮನ ಕಿವಿಗೆ ಹಾಕಿ ನಾಲ್ಕು ಹಪ್ಪಳ, ಒಂದಷ್ಟು ಸಾಂತಾಣಿ, ಒಂದು ಗೆರಟೆಯಲ್ಲಿ ಮಿಡಿ ಉಪ್ಪಿನಕಾಯಿ ಪಡೆದಳು.
`ಚಂದಕ್ಕನಿಗೆ ಮಂಡೆಯಿಲ್ಲ. ಇಂತ ಚಿನ್ನದಂತಹ ಮನೆ ಬಿಟ್ಟಳಲ್ಲ. ಯಾಕೆ ಬಿಟ್ಟೆ ಎಂತ ಆಗಲಿಕ್ಕೆ ಹೆಚ್ಚು ದಿನ ಹೋಗಲಿಕ್ಕಿಲ್ಲ'- ಎಂದಳು.
ಎರಡುದಿನ ಕಳೆದು ವೆಂಕನೇ ರುಕ್ಕು ಎಂಬ ಹೆಂಗಸನ್ನು ಕರೆದುಕೊಂಡು ಬಂದು ಕೆಲಸಕ್ಕೆ ಗೊತ್ತುಮಾಡಿದಳು. `ಹೇಳಿದ್ದು ಮಾಡಿಕೊಂಡು ಹೋಗು. ಎದುರುತ್ತರ ಕೊಡಬೇಡ.ಎದುರುತ್ತರ ಕೊಡಬೇಡ. ನಿನಗೆ ಯಾವುದಕ್ಕೂ ಅಮ್ಮ ಕಡಿಮೆ ಮಾಡುವುದಿಲ್ಲ' ಎಂದರು ಪಾರ್ತಕ್ಕ.

ಮುಂದುವರಿಯುವುದು...

- ವೈದೇಹಿ.

0 comments:

Post a Comment