ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಕ್ಷ್ಯಚಿತ್ರ...
ಪ್ರಪಂಚದ ರುದ್ರ ಮನೋಹರ ತಾಣಗಳಲ್ಲಿ ಹಿಮಾಲಯ ಪರ್ವತವೂ ಒಂದು. ಇದು ಪ್ರಾಕೃತಿಕವಾಗಿ ದೇಶಕ್ಕೆ ಸಿಕ್ಕ ವರದಾನ. ತನ್ನ ಒಡಲೊಳಗೆ ಸಾಕಷ್ಟು ವಿಸ್ಮಯಗಳನ್ನು ಅಡಗಿಸಿಟ್ಟುಕ್ಕೊಂಡಿರುವ ಈ ತಾಣದ ಪ್ರಾಕೃತಿಕ ಸೊಬಗನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಭಯಾನಕ ಕಣಿವೆಗಳು, ಹಚ್ಚ ಹಸುರು ಬಯಲುಗಾವಲುಗಳು, ರಂಗು-ರಂಗಿನ ಹೂವು-ಹಣ್ಣುಗಳಿಂದ ಕಂಗೊಳಿಸುವ ತೋಟಗಳು...ಹೀಗೆ ಹಿಮಾಲಯಕ್ಕೆ ಮಿಗಿಲಾದ ಸ್ವರ್ಗವೇ ಇಲ್ಲ ಎಂಬುವುದು ಅಕ್ಷರಶಃ ನಿಜ.ಹಿಮಾಲಯದ ಪ್ರಾಕೃತಿಕ ಸೌಂದರ್ಯಗಳನ್ನು ಹೆಚ್ಚಿಸುವಲ್ಲಿ ಅಲ್ಲಿನ ಆಪಲ್ ತೋಟಗಳ ಪಾತ್ರ ಮಹತ್ವದ್ದು.ಅದೊಂದು ಕಾಲದಲ್ಲಿ ಇಲ್ಲಿನ ಕುಲು ಜಿಲ್ಲೆ ಪ್ರಪಂಚದಲ್ಲೇ ಅಪಲ್ ಕೃಷಿಯ ಪ್ರಮುಖ ತಾಣವೆಂದು ಗುರುತಿಸಿಕೊಂಡಿತ್ತು. ಇಲ್ಲಿನ ಸೇಬು ಹಣ್ಣುಗಳಿಗೆ ಪ್ರಪಂಚದಾದ್ಯಂತ ಒಳ್ಳೆಯ ಮಾರುಕಟ್ಟೆಯಿತ್ತು. ನೇಪಾಳ ಹಾಗೂ ನೆರೆಯ ದೇಶಗಳಿಂದ ಸೇಬು ತೊಟಗಳಲ್ಲಿ ಕೆಲಸವನ್ನರಸುತ್ತ ಸಾವಿರಾರು ಸಂಖ್ಯೆಯಲ್ಲಿ ಜನರು ಇತ್ತಕಡೆ ವಲಸೆ ಬರುತ್ತಿದ್ದರು.


ಇಡೀ ಹಿಮಾಲಯದ ಅರ್ಥವ್ಯವಸ್ಥೆಯೇ " ಆಪಲ್ ಇಕಾನಮಿ" ಎಂದು ಕರೆಸಿಕೊಳ್ಳುವಷ್ಟರ ಮಟ್ಟಿಗೆ ಸೇಬು ಹಣ್ಣು ಇಲ್ಲಿನ ಜನರಿಗೆ ಆದಾಯವನ್ನು ತಂದುಕೊಡುತ್ತಿತ್ತು. ಅಷ್ಟರಮಟ್ಟಿಗೆ ಸೇಬು ಈ ಪ್ರದೇಶದಲ್ಲಿ ಪ್ರಾಧಾನ್ಯತೆಯನ್ನು ಪಡೆದಿತ್ತು. ಆದರೆ ಬದಲಾದ ಹವಮಾನದಿಂದಾಗಿ ಇಂದು ಹಿಮಾಲಯದಲ್ಲಿ ಸೇಬು ಕಣ್ಮರೆಯಾಗುತ್ತಿದೆ. ಬೆಳೆಗಾರರು ಒಪ್ಪೊತ್ತಿನ ಊಟಕ್ಕೂ ಇಲ್ಲದೆ ಕಂಗಾಲಾಗಿದ್ದಾರೆ. ಇದಕ್ಕೆ ಕಾರಣರಾರು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಸಣ್ಣ ಪ್ರಯತ್ನ "ದಿ ವೀಪಿಂಗ್ ಆಪಲ್ ಟ್ರೀ". ಜಾಗತಿಕ ತಾಪಮಾನದಿಂದ ನಾವು ಕಳೆದುಕೊಳ್ಳುತ್ತಿರುವುದೇನು? ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕ್ಕೊಳ್ಳುವ ಪ್ರಾಮಾಣಿಕ ಪ್ರಯತ್ನ ಈ ಸಾಕ್ಷ್ಯಚಿತ್ರದ್ದು .ವಿಜಯ್ ಎಸ್ ಜೋಧಾ ನಿರ್ದೇಶನದ ಈ ಸಾಕ್ಷ್ಯಚಿತ್ರವನ್ನು 2005ರಲ್ಲಿ ಬ್ರಿಟಷ್ ಕೌನ್ಸಿಲ್ ಪ್ರಾಯೋಜಿಸಿತ್ತು. 13 ನಿಮಿಷಗಳ ಈ ಚಿತ್ರ ಹಿಮಾಲಯ ಸಂಪೂರ್ಣ ಚಿತ್ರಣವನ್ನು ನೀಡುವುದರ ಜತೆಗೆ ಪ್ರಕೃತಿ ಹಾಗೂ ಮಾನವನ ನಡುವಿರುವ ಸೂಕ್ಷ್ಮ ಸಂಬಂಧವನ್ನು ವೀಕ್ಷಕನಿಗೆ ಮನದಟ್ಟು ಮಾಡುತ್ತದೆ. ಚಿತ್ರದ ಮೊದಲಿನಲ್ಲಿ ಮೈತುಂಬಿ ನಿಂತಿದ್ದ ಸೇಬು ಮರಗಳನ್ನು ಕಂಡ ವೀಕ್ಷಕನಿಗೆ ಚಿತ್ರದ ಕೊನೆಯಲ್ಲಿ ಕಂಗಾಲಾಗಿ ನಿಂತ ಬೋಳು ಸೇಬು ಮರಗಳನ್ನು ಕಂಡಾಗ ಈ ಬದಲಾವಣೆಗೆ ಪರೋಕ್ಷರಾಗಿ ತಾನೇ ಜವಾಬ್ಧಾರ ಎಂಬ ಪಾಪ ಪ್ರಜ್ಣೆ ಕಾಡದಿರುವುದಿಲ್ಲ.

1960ರಲ್ಲಿ ಹಿಮಾಲಯದ ಬಜೌರಾದಿಂದ ಹಿಡಿದು ಮನಾಲಿಯವರೆಗೆ ಅದೆಷ್ಟೋ ಸಾವಿರ ಎಕರೆ ಪ್ರದೇಶವನ್ನು ಸರಕಾರ "ಆಪಲ್ ಬೆಲ್ಟ್" ಪ್ರದೇಶವೆಂದು ಗುರುತಿಸಿತ್ತು. ಇಲ್ಲಿನ ಸೇಬುಗಳು ಪಂಜಾಬ್ ಹಾಗೂ ದೆಹಲಿ ರಾಜ್ಯಗಳಲ್ಲಿ ಅತ್ಯಧಿಕ ಬೆಲೆಗೆ ಮಾರಾಟವಾಗುತ್ತಿದ್ದವು. ಇಲ್ಲಿನ ಆಪಲ್ ಇಕಾನಮಿಯನ್ನು ಗುರುತಿಸಿದ ಸರಕಾರ ಅಪಲ್ ಸಾಗಣೆಗೆ ಅನುಕೂಲವಾಗಲೆಂದು ಇಲ್ಲಿಂದ ದೇಶದ ಎಲ್ಲಾ ಪ್ರಮುಖ ನಗರಗಳಿಗೆ ರಸ್ತೆ ಸಂಪರ್ಕವನ್ನು ಕಲ್ಪಿಸಿತು. ಹಣ್ಣುಗಳ ಸಂರಕ್ಷಣೆಗೆ ಲಕ್ಷಗಟ್ಟಲೆ ವೆಚ್ಚದ ಸ್ಟೋರೇಜ್ಗಳನ್ನು ಕಲ್ಪಿಸಲಾಯಿತು. ಬದಲಾಗುತ್ತಿರುವ ಹವಾಮಾನದಿಂದಾಗಿ ನಂತರದ ದಿನಗಳಲ್ಲಿ ಆಪಲ್ ಬೆಳೆ ಕುಲುವಿನ ನೆರೆಯ ರಾಜ್ಯ ಲಾಹುಲ್ಗೂ ಪಸರಿಸಿತು. ಲಾಹುಲ್ ಸೇಬು ಬೆಳೆಯಲ್ಲಿ ಕುಲು ಜಿಲ್ಲೆಯನ್ನು ಹಿಂದಿಕ್ಕಿತ್ತು. ಈ ಎರಡೂ ಪ್ರದೇಶಗಳಲ್ಲೂ ಸೇಬು ಹಣ್ಣಿನ ಸೀಜನ್ ಮುಗಿದ ಬಳಿಕ ಮಿಶ್ರ ತಳಿಗಳನ್ನು ಬೆಳೆಯಲಾಯಿತು. ಇಂತಹ ಫಲವತ್ತಾದ ತಾಣಗಳು ಇಂದು ಬಂಜರಾಗುತ್ತಿವೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ಜಾಗತಿಕ ತಾಪಮಾನ.

ಹಿಂದೆ ನಡೆದಾಡುವಾಗ ಮೊಣಕಾಲಿನವರೆಗೆ ಬೀಳುತ್ತಿದ್ದ ಹಿಮದಲ್ಲಿ ಆಪಲ್ ಮರ ಹುಲುಸಾಗಿ ಬೆಳೆದು ಹಣ್ಣುಗಳನ್ನು ಬಿಡುತ್ತಿತ್ತು. ನನ್ನ ತೋಟದಿಂದಲೇ ಐದಾರು ಟ್ರಕ್ಗಳಲ್ಲಿ ನಾನು ಅವನ್ನು ಮಾರುಕಟ್ಟೆಗೆ ಸಾಗಿಸುತ್ತಿದೆ. ಕಳೆದೆರಡು ವರುಷಗಳಿಂದ ಹಿಮವೇ ಬೀಳುತ್ತಿಲ್ಲ. ತೋಟದ ಸೇಬುಗಳು ಒಂದು ಟ್ರಕ್ನ್ನೂ ತುಂಬುತ್ತಿಲ್ಲ....ಎಂದು ಹತಾಶರಾಗಿ ಹೇಳುತ್ತಾರೆ ಇಲ್ಲಿನ ಸೇಬ ಬೆಳೆಗಾರ ಕೃಷ್ಣ ಮಹಂತ್. ಚಿತ್ರದುದ್ದಕ್ಕೂ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಹಲವಾರು ವೈಜ್ಣಾನಿಕ ಕಾರಣಗಳನ್ನು ನೀಡಿದ್ದರೂ ಅವೆಲ್ಲಕ್ಕೂ ಒಂದಲ್ಲ ಇನ್ನೊಂದು ರೀತಿಯಲ್ಲಿ ನಾವೇ ಹೊಣೆಗಾರರಾಗುತ್ತೇವೆ.


ಹತ್ತು ವರುಷಗಳ ಕೆಳಗೆ ಸೇಬು ತೋಟದಲ್ಲಿ ಪ್ಯಾಕರ್ ಕೆಲಸವನ್ನರಸಿ ನೇಪಾಳದಿಂದ ಇಲ್ಲಿಗೆ ಬಂದಿದ್ದೆ. ಆದಾಯವೂ ಚೆನ್ನಾಗಿತ್ತು. ಇಂದು ಕೆಲಸವಿಲ್ಲದ ಸ್ಥಿತಿ ಎದುರಾಗಿದೆ. ಏನು ಮಾಡೋದು ತೋಚುತ್ತಿಲ್ಲ ...ಎಂದು ನೇಪಾಳಿ ವಲಸೆಗಾರ ಖಡಕ್ ಬಹಾದ್ದೂರ್ ಕ್ಯಾಮರಾಕ್ಕೆ ಮುಖ ಮಾಡಿ ಹೇಳುತ್ತಿದ್ದರೆ ನೋಡುಗರಿಗೆ ಪ್ರಕೃತಿ ಮನುಷ್ಯನನ್ನು ಅದೆಷ್ಟು ಹತಾಶನನ್ನಾಗಿಸಬಹುದೆಂಬ ವಾಸ್ತವದ ಅರಿವಾಗುತ್ತದೆ. ಚಿತ್ರದುದ್ದಕ್ಕೂ ಕಾಣುವ ಬೋಳು ಸೇಬಿನ ಮರಗಳು ಮುಂದೆ ಎದುರಾಗುವ ವಿನಾಶದ ಸಂಕೇತದಂತೆ ಗೋಚರಿಸುತ್ತವೆ.

ತಾಂತ್ರಿಕವಾಗಿ ಚಿತ್ರದ ಗುಣಮಟ್ಟ ಸಾಮಾನ್ಯವಾಗಿದ್ದರೂ ಅದು ಚರ್ಚಿಸುವ ವಿಷಯ ಗಂಭೀರವಾದುದು. ಹೆಚ್ಚುತ್ತಿರುವ ಜಾಗತಿಕ ತಾಪಮಾನದ ಬಗ್ಗೆ ನಾವು ಇನ್ನೂ ನಿರ್ಲಕ್ಷ್ಯ ಭಾವ ತಾಳಿದರೆ ಸೇಬಿನ ತೋಟಗಳಂತೇ ಇಡೀ ಪ್ರಪಂಚವೇ ಬೋಳಾಗಿಬಿಡಬಹದು. ಪ್ರಕೃತಿಯ ಜತೆಗೆ ಕ್ರೂರವಾಗಿ ವರ್ತಿ ಸುವ ಮಾನವನ ಮನೋಭಾವ ಬದಲಾಗದೇ ಹೋದರೆ ಇಡೀ ವಿಶ್ವವೇ ಅದಕ್ಕೆ ಬೆಲೆತೆರಬೇಕಾಗಬಹುದು ಎಂಬ ಸಂದೇಶ ಈ ಸಾಕ್ಷ್ಯಚಿತ್ರದ್ದು.

- ಅಕ್ಷತಾ ಭಟ್. ಸಿ.ಎಚ್.
ವಿಭಾಗ ಮುಖ್ಯಸ್ಥರು, ಪತ್ರಿಕೋದ್ಯಮ ವಿಭಾಗ
ಗೋವಿಂದ ದಾಸ ಕಾಲೇಜು, ಸುರತ್ಕಲ್.

0 comments:

Post a Comment