ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

`ಇಳಿದು ಬಾ ತಾಯೆ ಇಳಿದು ಬಾ...
ಬಂಡೆಯ ಮೇಲಿಂದ ಧುಮುಕುತಾ..
ಬೆಳ್ನೊರೆಗಳ ಸೂಸುತ್ತಾ... ಕುಣಿದು ಬಾ ತಾಯೆ ಕುಣಿದು ಬಾ..
ಹೀಗೆ ಜಲರಾಶಿಯ ವರ್ಣನೆಯನ್ನು ಕವಿಗಳು ಹುಚ್ಚೆದ್ದು ವರ್ಣಿಸಿದ್ದಾರೆ... ಕಾವ್ಯ ಕಟ್ಟಿ ಹಾಡಿದ್ದಾರೆ. ಸಾಹಿತಿಗಳು ಸಾಹಿತ್ಯ ರಚನೆಗಳ ಮೂಲಕ ಭವ್ಯವಾಗಿ ಚಿತ್ರಿಸಿದ್ದಾರೆ.ಹರಿಯುವ ನೀರನ್ನು ತೋರಿಸಿದರೆ ಎಂಥಹವರೂ ಒಂದು ಕ್ಷಣ ಕಾಲ ಮೌನರಾಗುತ್ತಾರೆ. ಅದರ ಸೌಂದರ್ಯಕ್ಕೆ ಮಾರುಹೋಗುತ್ತಾರೆ. ಜಲಲ ಜಲರಾಶಿಗೆ ಮನ ಸೋಲದವರು ಬಹು ಕಡಿಮೆಯೆಂದೇ ಹೇಳಬಹುದಾಗಿದೆ.
ನೀರಿಗೆ ಅಂತಹ ಒಂದು ಅದ್ಭುತ ಶಕ್ತಿಯಿದೆ.
ಸೂರ್ಯ ನೆತ್ತಿಗೆ ಬಂದರೂ ಸೂರ್ಯ ರಶ್ಮಿ ಇನ್ನೂ ನೆಲತಲುಪದಷ್ಟು ದಟ್ಟವಾದ ಕಾಡಿನಲ್ಲಿ ಜುಳು ಜುಳು ಸದ್ದುಮಾಡುತ್ತಾ ಹರಿಯುವ ನೀರನ್ನು ಮೋಡಿ ಮಾಡುವ ಜಲರಾಶಿಯನ್ನು ನೋಡುವುದೇ ಒಂದು ಅಂದ.
ಎಲ್ಲೋ ಬೆಟ್ಟದಲ್ಲಿ ಹನಿ ಹನಿಯಾಗಿ ಜಿನುಗಿ ತದನಂತರ ನೀರ ಹನಿಗಳು ಒಂದೊಂದು ಸೇರಿ ಝರಿಯಾಗಿ ಅದು ಜುಳು ಜುಳು ಸದ್ದುಮಾಡುತ್ತಾ ನೆತ್ತಿಯ ಮೇಲಿಂದ ಧುಮುಕಿ ಮತ್ತೆ ವಯ್ಯಾರದಿಂದ ಮೈ ಬಳುಕಿಸಿ ಇಬ್ಬದಿಯ ತೋಯಿಸಿ ಝರಿಗಿಡಗಳ ಮೇಲೆಲ್ಲಾ ಸಣ್ಣ ಸಣ್ಣ ಹನಿಗಳ `ಸಿಂಚನ'ಮಾಡಿ ಹಿಗ್ಗುತ್ತಾ ಸಾಗುವುದನ್ನು ನೋಡುವುದೇ ಒಂದು ಚೆಂದ.
ಸ್ಪಟಿಕ ಶುದ್ಧ ಈ ನೀರು ತಣ್ಣನೆಯ ಅನುಭವ ನೀಡುವಾಗ ಭಾವಪುಳಕಿತರಾಗುವುದರಲ್ಲಿ ಯಾವೊಂದು ಸಂದೇಹವೂ ಇಲ್ಲ. ಈ ಪರಿಯಾಗಿ ಜಲರಾಶಿ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ತನ್ನತ್ತ ಸೆಳೆಯುತ್ತದೆ.
ಮಳೆಗಾಲದಲ್ಲಿ ಇವೆಲ್ಲಾ ಮೈದುಂಬಿ ಹರಿಯಲಾರಂಭಿಸುತ್ತವೆ. ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಾ ಅಂದ ಚೆಂದವನ್ನು ಹೆಚ್ಚಿಸುತ್ತಾ ವಯ್ಯಾರದಿಂದ ಸಾಗುತ್ತವೆ.
ಒಂದೊಮ್ಮೆ ಸೌಮ್ಯವಾಗಿ ಮತ್ತೆ ರೌದ್ರವಾಗಿ ನರ್ತಿಸಲಾರಂಭಿಸುತ್ತವೆ. ರುದ್ರ ರಮಣೀಯ ದೃಶ್ಯಗಳನ್ನು ನಿರ್ಮಾಣ ಮಾಡುತ್ತಾ ಕಣ್ಣಿಗೆ ಹಬ್ಬ ಉಣಬಡಿಸುತ್ತವೆ. ಹೀಗೆ ಸಾಗುವ ಈ ಜಲಲ ಜಲಧಾರೆ ಕೊನೆಗೆ ಸಾಗರ ಸೇರುತ್ತದೆ. ಈ ನಡುವೆ ಹಲವು ಸಂದರ್ಭಗಳಲ್ಲಿ ಇವು ತನ್ನ ಅಬ್ಬರಗಳನ್ನು ಏರಿಸಿ, ಸೌಮ್ಯ ಭಾವವನ್ನು ಪ್ರದರ್ಶಿಸಿ ಸಾಗುತ್ತಿರುತ್ತವೆ.
ಜಲಪಾತ ವೀಕ್ಷಣೆ ಒಂದು ರೋಚಕ ಅನುಭವ. ಆದರೆ ಇಂತಹ ಸೌಂದರ್ಯ ರಾಶಿಯನ್ನು ನೋಡುವ ಹೆಸರಿನಲ್ಲಿ `ಮೋಜಿನ ಮಂದ ಬೆಳಕಿನಲ್ಲಿ ಜಲಪಾತಗಳ ಐಸಿರಿ' ಎಂಬಂತಾಗುತ್ತಿದೆ. ಇದು ಆತಂಕದ ವಿಚಾರ.
ಜಲಪಾತಗಳ ವೀಕ್ಷಣೆಗೆ ತೆರಳುವವರು ಪ್ರಕೃತಿ ಸೌಂದರ್ಯಕ್ಕೆ ಮಾರಕವಾಗುತ್ತಿದ್ದಾರೆ. ಕುಡಿತ ಕುಣಿತಗಳ ಸದ್ದು ಸುಂದರ ಪ್ರಕೃತಿಯನ್ನು ಬೆಚ್ಚಿ ಬೀಳಿಸುವಂತಾಗುತ್ತಿದೆ. ಇಷ್ಟೇ ಅಲ್ಲದೆ ವಾಣಿಜ್ಯೋದ್ಯಮಿಗಳ ದೃಷ್ಠಿ ಇದೀಗ ಈ ಜಲಧಾರೆಗಳತ್ತ ಹೊರಳತೊಡಗಿದೆ. ಕಿರು ಜಲ ವಿದ್ಯುತ್ ಯೋಜನೆ ಸ್ಥಾಪನೆಯ ಭಯ ಈ ಜಲ ಧಾರೆಗಳಿಗೆ ತಟ್ಟಲಾರಂಭಿಸಿದೆ. ಹಲವೆಡೆಗಳಲ್ಲಿ ಕಿರು ಜಲವಿದ್ಯುತ್ ಸ್ಥಾವರಗಳ ಸ್ಥಾಪನೆಗಳಿಗಾಗಿ ಪ್ರಕೃತಿಯ ಗರ್ಭ ಬಗೆಯತೊಡಗಿದೆ. ಇವುಗಳಿಂದಾಗಿ ಸುಂದರ ಪ್ರಕೃತಿ ಇಂದು ತನ್ನ ಸೌಂದರ್ಯ ಕಳಕೊಳ್ಳುವ ಭೀತಿಯನ್ನೆದುರಿಸುತ್ತಿದೆ.

0 comments:

Post a Comment