ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಪ್ರವಾಸೋದ್ಯಮ ನಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಚಿನ್ನದ ಗುರುತು. ಅದರಲ್ಲಿಯೂ ಯಲ್ಲಾಪುರ ತಾಲೂಕಿನಲ್ಲಂತೂ ಪ್ರವಾಸೋದ್ಯಮ ಕೇಂದ್ರಗಳಿಗೇನೂ ಕೊರತೆಯಿಲ್ಲ. ಎಲ್ಲರ ಪ್ರೀತಿಯ ಎಲ್ಲಾಪುರ ಜಲಪಾತಗಳ ತವರೂರು. ಜಗತ್ಪ್ರಸಿದ್ದ ಸಾತೋಡ್ಡಿ ಜಲಪಾತ, ಮಾಗೋಡ್ ಜಲಪಾತಗಳಿಗಷ್ಟೆ ಈ ಪ್ರದೇಶ ಸೀಮಿತವಾಗಿಲ್ಲ. ನಿಸರ್ಗದ ಮಡಲಿನಲ್ಲಿ ಸುಂದರ ರಮಣಿಯ ದೃಶ್ಯಕಾವ್ಯವನ್ನೆ ಬೆಸೆದು ವರ್ಷದ 12 ತಿಂಗಳುಗಳಲ್ಲಿ ನೀರನ್ನು ಚಿಮ್ಮಿಸುತ್ತಿರುವ ಅನೇಕ ಜಲಪಾತಗಳು ಇಲ್ಲಿವೆ. ಪ್ರಚಾರದಿಂದ ದೂರವೇ ಉಳಿದ ಸಸ್ಯಕಾಶಿಯಿಂದಲೆ ಸುತ್ತುವರೆಯಲ್ಪಟ್ಟ ಜಲಪಾತವೊಂದರ ಕಿರು ಪರಿಚಯ ನೀಡುವುದು ನಮ್ಮ ಉದ್ದೇಶ...ಯಲ್ಲಾಪುರದಿಂದ ಕಾರವಾರ ಮಾರ್ಗವಾಗಿ 16ಕಿ.ಮಿಗಳಷ್ಟು ದೂರ ಸಂಚರಿಸಿದಾಗ ಸಿಗುವ ಊರೆ ಶಿರಲೆ. ರಾಷ್ಟ್ರಿಯ ಹೆದ್ದಾರಿಯ ಪಕ್ಕದಲ್ಲಿಯೇ ಇದ್ದರು ಇದೊಂದು ಊರು ಎಂದು ಗೋಚರಿಸದಷ್ಟು ಕಾನನ.


ಇಡಗುಂದಿಯಿಂದ 4ಕಿ.ಮೀನಷ್ಟು ದೂರದ ಈ ಊರಿಗೆ ಪ್ರಕೃತಿ ಮಾತೆಯಿಂದ ದೊರಯಲ್ಪಟ್ಟ ಕಿರು ಕಾಣಿಕೆಯೆ ಶಿರಲೆ ಪಾಲ್ಸ್. ದಟ್ಟ ಕಾನನದ ನಡುವೆ ಪುಟ್ಟ ಜಲದಾರೆ. ಸುಮಾರು 160ಅಡಿಗಳೆಷ್ಟು ಎತ್ತರದಿಂದ ರಭಸವಾಗಿ ದುಮುಕುವ ಹಿನ್ನೀರ ಧಾರೆ. ವರ್ಷದ ಎಲ್ಲ ಮಾಸಗಳಲ್ಲಿಯೂ ನೀರು ತುಂಬಿ ತುಳುಕುತ್ತಿರುವ ಜಲಪಾತಗಳಲ್ಲಿ ಇದು ಒಂದು. ಅದರಲ್ಲಿಯೂ ಮಳೆಗಾಲದ ಆರಂಭದಲ್ಲಿ ಸೂರ್ಯನ ಹೊಂಗಿರಣಗಳ ನಡುವೆ ಕಂಗೊಳಿಸುವ ಕಾಮನಬಿಲ್ಲಿನ ಮಧ್ಯೆ ಧೋ.. ಎಂದು ಸಪ್ಪಳ ಮಾಡುತ್ತ ಧುಮುಕುವ ನೀರನ್ನು ವರ್ಣಿಸಲು ಅಸದಳ.


ನಂದೂಳ್ಳಿ ಸಮೀಪದ ಪುರಾತನ ಭೃಹ್ಮೇತಿ ಕೆರೆಯು ಈ ಜಲಪಾತದ ಉಗಮ ಸ್ಥಾನ. ಕುಂಕಿ, ಸಂಪೆಕೊಡ್ಲು ಮುಂತಾದ ಊರಿನ ಮಾರ್ಗವಾಗಿ ಬೆಟ್ಟ ಗುಡ್ಡಗಳನ್ನು ಬೆಸದು ಶಿರಲೆಯ ಅಡಿಕೆ ತೋಟದ ನಡುವೆ ಜಲಪಾತ ರೂಪುಗೊಂಡಿದೆಯಲ್ಲದೆ ಮುಂದೆ ಡಬ್ಗುಳಿ, ಮಾರ್ಗವಾಗಿ ಸಂಚರಿಸುವ ಈ ನೀರು ಗಂಗಾವಳಿ ನದಿಯಲ್ಲಿ ಐಕ್ಯವಾಗುವದು.
ಜಲಪಾತದ ಕೆಳಭಾಗದಲ್ಲಿ ಗುಹೆಯೊಂದು ಇದ್ದು ಸಾವಿರಾರು ಬಾವಲಿಗಳ ಆಶ್ರಯತಾಣವೂ ಹೌದು. ಪ್ರಚಾರದಲ್ಲಿ ಇತರೆ ಜಲಪಾತಗಳಿಗಿಂತ ಹಿಂದಿನ ಸಾಲಿನಲ್ಲಿಯೆ ಇದ್ದರೂ ಪ್ರತಿ ದಿನ ನೂರಾರು ಪ್ರವಾಸಿಗರಿಗೆ, ಪರಿಸರದ ಅಧ್ಯಯನಕಾರರಿಗೇನೂ ಕೊರತೆಯಿಲ್ಲ. ರಾ.ಹೆದ್ದಾರಿಯಿಂದ ಅರ್ಧ ಮೈಲಿನಷ್ಟು ದೂರ ಕಾಡಿನ ನಡುವೆ ಸಂಚರಿಸಿದ ಬಳಿಕ ಸುಂದರ ಅಡಿಕೆ ತೋಟದ ನಡುವೆ ತೊರೆ ತೊರೆಯಾಗಿ ಹರಿಯುವ ಜಲಪಾತದ ದರ್ಶನವಾಗುತ್ತದೆ. ಗೃಹ ಬಳಕೆಯಿಂದ ತೋಟದ ಸಸಿಗಳಿಗೆ ನೀರುಣಿಸುವವರೆಗೂ ಈ ಜಲವೇ ಶಾಶ್ವತ ಗಂಗೆಯಾಗಿ ಮಾರ್ಪಟಿದ್ದು ನೀರಿನ ಸಂರಕ್ಷಣೆಗಾಗಿ ಪ್ರವಾಸಿಗರನ್ನು ಜಾಗೃತಿಗೊಳಿಸುವ ಕಾರ್ಯವೂ ಬರದಿಂದ ಸಾಗಿದೆ.

ಅಚ್ಯುತಕುಮಾರ, ಯಲ್ಲಾಪುರ

2 comments:

Anonymous said...

very nice articles... photos also nice... Darshan..

[NENapu] said...

danyavadha

Post a Comment